ಕವಿತೆ ನನ್ನ ಬರೆಯುತ್ತದೆ.

ರಾತ್ರಿ ಹೊದ್ದ ಕತ್ತಲ ಕಂಬಳಿ ಕಿತ್ತೆಸೆದು ಹಗಲ ಬೆಳಕು ಕವಿತೆ ನಿತ್ಯ ನನ್ನ ಬರೆಯುತ್ತದೆ. ಮಟ,ಮಟ ಮಧ್ಯಾಹ್ನದ ಸುಡು,ಸುಡು ಬಿಸಿಲಝಳ ಕವಿತೆ ನನ್ನ ಬರೆಯುತ್ತದೆ. ಸಂಜೆ ರಕ್ತದೋಕುಳಿ ರಜಸ್ವಲೆ ರಾತ್ರಿ ಮುಜುಗರದಲ್ಲೂ ಬೆಚ್ಚಗಿನ ರಗ್ಗು ಕವಿತೆ ನನ್ನ ಬರೆಯುತ್ತದೆ. ಆಸೆಗಣ್ಣಿಂದ ಕಡಲ ನೋಡುತ್ತ ದಡದಲ್ಲಿ ನಾವಿಕನಿಲ್ಲದ ಪರದೇಶಿ ನಾವೆ ಕವಿತೆ ನನ್ನ ಬರೆಯುತ್ತದೆ. ಮಂದಬೆಳಕಿನ ಮಧುಶಾಲೆಯ ಮಂದ್ರ ಸ್ತಾಯಿಯಲ್ಲಿ ಖಾಲಿಯಾಗುವ ಕವಿತೆ ನನ್ನ ಬರೆಯುತ್ತದೆ. ಹೊಟ್ಟೆಯೊಳಗವಿತಿಟ್ಟ ಗುಟ್ಟುಗಳನ್ನೆಲ್ಲಾ ಬಟಾಬಯಲು ಮಾಡುವ ಸೂಲಗಿತ್ತಿ ಕವಿತೆ ನನ್ನ ಬರೆಯುತ್ತದೆ. ಅನಿರೀಕಿ಼ತ,ಅಗೋಚರ ತಿರುವುಗಳ ಹಾದಿ ಪ್ರಾರಬ್ಧಗಳ ಮೂಟೆ ತಲೆಯಮೇಲೆ ಕವಿತೆ ನನ್ನ ಬರೆಯುತ್ತದೆ. ಕವಿತೆಯಾಗದೇ ನಾ..ಇನ್ನೇನೋ..!!! --ಅಬ್ಳಿ,ಹೆಗಡೆ.
27 views0 comments