top of page

ಕವಿ [ಕವನ]


ಮನದುಂಬಿ ಹಾಡಿದೆನು

ನನ್ನ ತೋಟದ ಮೊಗ್ಗು

ಹಾಡು ಕೇಳುತ್ತ ಹೂವಾಯ್ತು ;

ನೀನು ಕವಿಯೆಂದು ಉಲಿಯುತ್ತ

ಕಾಡಿನ ಹಕ್ಕಿ ಆಕಾಶಕ್ಕೆ ನೆಗೆಯಿತು.

ಆದರೆ ನಾನು ಕವಿಯಾಗಲಿಲ್ಲ!

ಪತ್ರಿಕೆಗಳು ನನ್ನ ಕವನ ಮುದ್ರಿಸಲಿಲ್ಲ ;

ಜನ ಗುರುತಿಸಲಿಲ್ಲ.

ನಾನು ಗಡ್ಡ ಬಿಟ್ಟೆ ;

ತೋಳಿಗೆ ಜೋಳಿಗೆ ಏರಿಸಿದೆ.

ಜನ ನನ್ನ ಕವಿಯೆಂದರು.

ಪತ್ರಿಕೆಗಳ ವಿಶೇಷಾಂಕಗಳ

ಬಣ್ಣ ಬಣ್ಣದ ಪುಟಗಳಲ್ಲಿ

ನನ್ನ ಕವನಗಳು ಮೂಡಿದವು.

ನಾನು ಕವಿಯಾದೆ !

ಸಂಭ್ರಮಿಸಿದೆ !

ಯಾಕೋ

ನನ್ನ ತೋಟದ ಮೊಗ್ಗು

ಅರಳುವುದನ್ನು ಮರೆತು ಕೂತಿದೆ.

ಮರದ ಮೇಲೆ ಕೂತ ಕಾಡಿನ ಹಕ್ಕಿ

ಉಲಿಯದೇ ಮೌನವಾಂತಿದೆ.






- ಶ್ರೀಪಾದ ಹೆಗಡೆ, ಸಾಲಕೋ


42 views0 comments

©Alochane.com 

bottom of page