top of page

ಕಬೀರ ಕಂಡಂತೆ

ಅಂಟಿದ ಚಟ ಜಾಡ್ಯವಾಗಿ ಬದುಕ ಹಿಂಡೀತು..!!


ಲಗಿ ಲಗನ ಛೂಟೆ ನಹಿ, ಜೀಬ ಚೊಂಚ ಜರಿ ಜಾಯ|

ಮೀಠಾ ಕಹಾಂ ಅಂಗಾರಮೆ, ಜಾಹಿ ಚಕೋರ ಚಬಾಯ||ಡಂ


ಭಾವನಾ ಜೀವಿಯಾದ ಮನುಷ್ಯನನ್ನು ಕೆಲವು ಚಟಗಳು ಗೊತ್ತಿಲ್ಲದೆ ಅಂಟಿಕೊಂಡಿರುತ್ತವೆ. ಇವುಗಳಲ್ಲಿ ಬದುಕನ್ನೇ ಕೆಡಿಸುವ ಕೆಟ್ಟ ಚಟ ಮತ್ತು ವ್ಯಕ್ತಿತ್ವ ನಿರ್ಮಾಣ ಮಾಡುವ ಒಳ್ಳೆಯ ಚಟಗಳೂ ಒಳಗೊಂಡಿವೆ ಎಂದರೆ ಆಶ್ಚರ್ಯವಾಗದೇ ಇರದು. ಓದುವದು, ಬರೆಯುವದು, ಸಂಗೀತ, ನೃತ್ಯ, ಚಿತ್ರ ಬಿಡಿಸುವದು, ಕುದುರೆ ಸವಾರಿ, ಛಾಯಾಗ್ರಹಣ, ಪಕ್ಷಿ ವೀಕ್ಷಣೆ ಮುಂತಾದ ಚಟಗಳಿಗೆ ಹವ್ಯಾಸ ಎಂದೂ ಹೆಸರು‌. ಕಾರಣ ಇವುಗಳು ವ್ಯಕ್ತಿಯ ಮನೋವಿಕಸನಕ್ಕೆ, ಆತ್ಮವಿಶ್ವಾಸಕ್ಕೆ ಸಹಕಾರಿ -ಯಾಗಿ ನಿಂತು ಆತನ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕಾರ್ಯ ಮಾಡುತ್ತವೆ. ಆದರೆ ಮದ್ಯ ಸೇವನೆ, ತಂಬಾಕು ಸೇವನೆ, ಧೂಮ್ರಪಾನ, ಜೂಜು, ಸುಳ್ಳು ಹೇಳುವದು, ಆಲಸ್ಯ, ಅಂಧಶೃದ್ಧೆ, ಜಗಳಗಂಟತನ ಮುಂತಾದವುಗಳು ಘಾತಕ ವ್ಯಸನಗಳಾಗಿದ್ದು ಇವು ಅಧೋಗತಿಗೆ ಕಾರಣವಾಗುತ್ತವೆ‌.


ಹವ್ಯಾಸಗಳನ್ನು ಶೃದ್ಧಾಪೂರ್ವಕ ರೂಢಿಸಿಕೊಂಡು ಅವುಗಳಲ್ಲಿ ಸಾಧನೆ ಮಾಡಿದವರು ಸಮಾಜದಲ್ಲಿ ಗೌರವ, ಪ್ರತಿಷ್ಠೆ ಗಳಿಸುತ್ತಾರೆ‌ ಆದರೆ ವ್ಯಸನ ಗಳಲ್ಲಿ ಇಂಥ ಯಾವುದೇ ಸಾಧನೆಯ ಅಗತ್ಯ ಇರುವದಿಲ್ಲ. ಸಹವಾಸ ದೋಷ, ಮಾನಸಿಕ ಸ್ಥಿತಿ ಮುಂತಾದ ಕಾರಣಗಳಿಂದ ಜಾಡ್ಯದಂತೆ ಅಂಟಿಕೊಳ್ಳುವ ಚಟ -ಗಳನ್ನು ತೊರೆಯುವದು ಕಷ್ಟದ ಕೆಲಸ.

ಈ ಹಿನ್ನೆಲೆಯಲ್ಲಿ ಸಂತ ಕಬೀರರು,

"ಅಂಟಿದ ಚಟ ಬಿಡದು, ನಾಲಿಗೆ ಕೊಕ್ಕು ಸುಟ್ಟರೂ|

ಕೆಂಡದಲಿ ಸಿಹಿ ಸಿಗದು, ಚಕೋರ ಚಪ್ಪರಿಸಿದರೂ||

ಎಂದು ಹೇಳುತ್ತ ಅಂಟಿದ ಚಟ ಸುಲಭವಾಗಿ ಬಿಡದು ಎಂದು ಮಾರ್ಮಿಕವಾಗಿ ವಿವರಿಸಿದ್ದಾರೆ. ಚಕೋರ ಅಥವಾ ರತ್ನಪಕ್ಷಿ, ಬೆಂಕಿಯುಗುಳುವ ಕೆಂಡವನ್ನು ತಿನ್ನುತ್ತದೆಯಂತೆ! ಕೊಕ್ಕು ಸುಡುತ್ತಿದ್ದರೂ ಲೆಕ್ಕಿಸದೇ ಈ ಪಕ್ಷಿ ತನ್ನ ಚಟ ತೀರಿಸಿಕೊಳ್ಳುತ್ತದೆ! ಇದೇ ರೀತಿ ಜನರು, ಆರೋಗ್ಯ ಹಾಳಾದರೂ, ಧನ - ಸಂಪತ್ತು ಕಳೆದುಕೊಂಡರೂ ಕೆಟ್ಟ ಚಟ ಬಿಡುವದಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.


ಕೆಟ್ಟ ಚಟಗಳಿಗೆ ದಾಸರಾಗಿ ಬದುಕನಲ್ಲಿ ನರಕ ಅನುಭವಿಸುವದಕ್ಕಿಂತ ಸತತ ಸಾಧನೆ, ಪರಿಶ್ರಮ -ಗಳ ಮೂಲಕ ಹವ್ಯಾಸಗಳನ್ನು ಒಲಿಸಿಕೊಳ್ಳುವದೇ

ನಿಜವಾದ ಜೀವನ ಸಾರ್ಥಕ್ಯ.


ವ್ಯಸನದಿಂ ಚಕೋರ ಕೆಂಡ ಚಪ್ಪರಿಸುವಂತೆ

ವಾಸನೆಗೆ ದಾಸನಾಗಿ ನಾಶವಾದೀಯೆ ಮರುಳೆ|

ಆಸರೆಯಾದೀತು ಹವ್ಯಾಸ ಇಹ-ಪರಗಳೆರಡಕ್ಕು

ಹಸನಾದೀತು ಬಾಳು - ಶ್ರೀವೆಂಕಟ ||


ಶ್ರೀರಂಗ ಕಟ್ಟಿ ಯಲ್ಲಾಪುರ.

8 views0 comments

©Alochane.com 

bottom of page