top of page

ಕಬೀರ ಕಂಡಂತೆ

ಸೋತವನ ನಿಟ್ಟುಸಿರು ಮೂಲೋಕ ಸುಟ್ಟೀತು..!!


ದುರ್ಬಲ ಕೊ ನ ಸತಾಯಿಯೆ, ಜಾಕಿ ಮೋಟಿ ಹಾಯ್/

ಬಿನಾ ಜೀವಕಿ ಸಾಂಸಸೆ, ಲೋಹ ಭಸ್ಮ ಹೋ ಜಾಯ್/


ಈ ಪ್ರಕೃತಿಯಲ್ಲಿ ಅನೇಕ ಪ್ರಕಾರದ ಜೀವಿಗಳಿದ್ದು ಎಲ್ಲರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಜೀವಿಗಳ ಶಕ್ತಿಯಲ್ಲಿಯೂ ಸಹ ವ್ಯತ್ಯಾಸವಿದೆ. ಕೆಲವು ಜೀವಿಗಳು ಬಲಿಷ್ಠವಾಗಿದ್ದರೆ ಇನ್ನು ಕೆಲವು ದುರ್ಬಲವಾಗಿರುತ್ತವೆ. ಆದರೆ ಆಶ್ಚರ್ಯವೆಂದರೆ, ಪ್ರಕೃತಿಯೇ ದುರ್ಬಲರಿಗೆ ಆತ್ಮ ಸಂರಕ್ಷಣೆಯ ಉಪಾಯಗಳ ಜೊತೆಗೆ ಬಲವಂತರನ್ನೇ ಮಣಿಸುವ ಶಕ್ತಿಯನ್ನೂ ನೀಡಿದೆ. ಆನೆ ಬಲಿಷ್ಠ ಪ್ರಾಣಿ ಯಾದರೂ ಇರುವೆ ಕಚ್ಚಿದ ಕಾರಣದಿಂದ ಅದು ಕಸಿವಿಸಿಗೊಳ್ಳುತ್ತದೆ. ಕೆಲವು ಸಲ ಆನೆಸಾವನ್ನಪ್ಪಿದ ಪ್ರಸಂಗಗಳೂ ಇವೆ!! ಹಾಗಾಗಿ ಜೀವಿಗಳಲ್ಲಿ ಮೇಲು, ಕೀಳು ಎಂಬ ಭೇದವೆಣಿಸುವದು ತರವಲ್ಲ. ಹೋರಾಟದಲ್ಲಿ ದುರ್ಬಲ ಸೋತರೂ ಸಹ ಸೋತ ಜೀವಿಯ ಬಾಯಿಯಿಂದ ಹೊರಡುವ ಚೀತ್ಕಾರ ಅಥವಾ ಶಾಪ, ಸಬಲನನ್ನು ನಾಶ ಮಾಡದೇ ಇರದು. ಈ ವಿಚಾರದ ಹಿಂದಿನ ಮರ್ಮವನ್ನು ಅರ್ಥ ಮಾಡಿಕೊಂಡಾಗ ಬದುಕು ಸಹ್ಯವಾದೀತು, ಸುಂದರವಾದೀತು. ಸಹಜವಾಗಿ ಆಡಿದ ಸಾಮಾನ್ಯ ಮಾತುಗಳು ಎದುರಾಳಿಯ ಮೇಲೆ ಗಾಢ ಪರಿಣಾಮ ಬೀರಬಹುದಾದರೆ, ಸೋತ ವ್ಯಕ್ತಿ ಅಥವಾ ಪ್ರಾಣಿಯ ಬಾಯಿಯಿಂದ ಹೊರಡುವ ನೋವು, ನರಳಿಕೆಗಳು ಬಾಧಿಸದೇ ಇರಲು ಸಾಧ್ಯವೆ?


ಈ ಹಿನ್ನೆಲೆಯಲ್ಲಿ ಸಂತ ಕಬೀರರು,

ದುರ್ಬಲ ರನ್ನು ಸತಾಯಿಸದಿರಿ, ಶಾಪ ತಟ್ಟೀತು/

ಜೀವವಿಲ್ಲದ ಕುಲುಮೆಯದು, ಕಬ್ಬಿಣ ಸುಟ್ಟೀತು//

ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದಾರೆ. ತನ್ನಲ್ಲಿನ ಅಧಿಕಾರ, ಅಂತಸ್ತಿನ ಬಲದಿಂದ ದೀನರನ್ನು ಬಡ ಜನರನ್ನು ಹಿಂಸಿಸಿದರೆ ವಿನಾಶ ತಪ್ಪಿದ್ದಲ್ಲ. ಜೀವವೇ ಇಲ್ಲದ ಕಮ್ಮಾರನ ಕುಲುಮೆಯ ತಿದಿ ಗಾಳಿ ಹಾಕಿದಾಗ, ಕಬ್ಬಿಣದಂಥ ಬಲಿಷ್ಠ ಲೋಹವೂ ಸುಟ್ಟು ಭಸ್ಮವಾಗುತ್ತದೆ. ಹಾಗಿದ್ದಾಗ, ದುರ್ಬಲರ ನೋವಿನ ದನಿ, ಆಕ್ರಂದನಗಳು ಖಂಡಿತ ಶಾಪವಾಗಿ ಪರಿಣಮಿಸುತ್ತವೆ ಎನ್ನುತ್ತದೆ ಕಬೀರ ವಾಣಿ.


ಸಮಾಜದಲ್ಲಿ ಸಬಲ-ದುರ್ಬಲರ ನಡುವಿನ ಸಂಘರ್ಷ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಸೋತವರ,ನೊಂದವರ ಆಕ್ರೋಶ, ಆಕ್ರಂದನಗಳು ಸಬಲರ ಬದುಕನ್ನೇ ಸುಡಬಹುದು ಎಂದು ಸಂತರು ದಾರ್ಶನಿಕರು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಬಂದಿದ್ದಾರೆ. ಮನುಷ್ಯ ಈ ಸತ್ಯವನ್ನು ಅರಿತು ನಡೆದರೆ ನಾಗರಿಕ ಸಮಾಜಕ್ಕೆ ಅದು ಶ್ರೇಯಸ್ಕರವಾದೀತು.


ಪ್ರಬಲ ತಾನೆಂಬ ಅಟ್ಟಹಾಸದಿ ಮೆರೆಯುತ್ತ

ದುರ್ಬಲರ ಬದುಕಿಂಗೆ ಕಿಚ್ಚು ಹೊತ್ತಿಸಿದೊಡೆ/

ಸೋತವನ ನಿಟ್ಟುಸಿರು ಮೂಲೋಕ ಸುಟ್ಟೀತು

ಆರ್ತನಾದವೆ ಶಾಪ - ಶ್ರೀವೆಂಕಟ//


ಶ್ರೀರಂಗ ಕಟ್ಟಿ ಯಲ್ಲಾಪುರ.

3 views0 comments

©Alochane.com 

bottom of page