ಕೊಟ್ಟಿದ್ದು ಉಳಿದೀತು, ಕೂಡಿಟ್ಟಿದ್ದು ಕರಗೀತು..!
ದಾನ ದಿಯೆ ಧನ ನಾ ಘಟೆ, ನದಿ ನಾ ಘಟೆ ನೀರ/
ಅಪನಿ ಆಂಖೊ ದೇಖಲೆ, ಯೋ ಕ್ಯಾ ಕಹೆ ಕಬೀರ//
ಜಗತ್ತಿನ ಎಲ್ಲ ಧರ್ಮಗಳಲ್ಲಿ ಅದರಲ್ಲಿಯೂ ಮುಖ್ಯ -ವಾಗಿ ಭಾರತೀಯ ಸಂಸ್ಕೃತಿಯಲ್ಲಿ ದಾನದ ಮಹತ್ವವನ್ನು ವಿಸ್ತೃತವಾಗಿ ಹೇಳಲಾಗಿದೆ. ಮನುಷ್ಯ ಜನ್ಮ ಸಾರ್ಥಕವಾಗಿ ಮೋಕ್ಷ ಪ್ರಾಪ್ತಿಯಾಗಲು ದಾನ ಮಾಡುವದು ಅತ್ಯಂತ ಅಗತ್ಯ ಎಂಬುದನ್ನು ಶಾಸ್ತ್ರ -ಗಳು ಸಾರಿ ಸಾರಿ ಹೇಳಿವೆ. ಎಲ್ಲ ಧಾರ್ಮಿಕ ಕಾರ್ಯಗಳ ಕೊನೆಗೆ ದಾನ ಕೊಡುವ ಪ್ರಕ್ರಿಯೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದೆಲ್ಲದರ ಹೊರತಾಗಿ ಹಸಿದು ಬಂದ ಜೀವಿಗೆ ಹಿಡಿ ಅನ್ನವನಿಕ್ಕಿದರೆ ಅದುವೆ ನರಜನ್ಮ ಸಾರ್ಥಕತೆಗೆ ಸೋಪಾನವಾಗದೇ ಇದ್ದೀತೆ?
ದಾನಗಳಲ್ಲಿ ಧನದಾನ, ವಿದ್ಯಾದಾನ, ಅನ್ನದಾನ, ವಸ್ತ್ರದಾನ, ರಕ್ತದಾನ, ದೇಹದಾನ.. ಮುಂತಾದ ಅನೇಕ ಪ್ರಕಾರದ ದಾನಗಳಿವೆ. ಏನನ್ನಾದರೂ ಕೊಡುವಾಗ ಶುದ್ಧ ಮನಸ್ಸಿನಿಂದ ನೀಡಿದಾಗ ಮಾತ್ರ ಅದರ ಮೌಲ್ಯ ಹೆಚ್ಚಾದೀತು. ಕೆಲವರು ಸತ್ಪಾತ್ರ ದಾನಕ್ಕೆ ಹೆಚ್ಚು ಮಹತ್ವ ನೀಡುತ್ತ ಇದಕ್ಕಾಗಿ ದಾನಕ್ಕೆ ಅರ್ಹರಾದ ವ್ಯಕ್ತಿಗಳ ಹುಡುಕಾಟದಲ್ಲಿ ಇರುತ್ತಾರೆ. ಆದರೆ ಭಾರತೀಯ ಪರಂಪರೆಯಲ್ಲಿ ದಾನಶೂರ -ರೆಂದೇ ಖ್ಯಾತಿ ಪಡೆದ ಮಹಾರಥಿ ಕರ್ಣ, ಬಲಿ ಚಕ್ರವರ್ತಿ, ಸತ್ಯ ಹರಿಶ್ಚಂದ್ರ ಮುಂತಾದವರು ದಾನದ ಕಾರಣ ಅಥವಾ ಪಾತ್ರಾಪಾತ್ರ ವಿಚಾರ ಮಾಡದೇ ಯಾಚಕರು ಕೇಳಿದ್ದನ್ನು ಕೊಡುವ ಪ್ರತಿಜ್ಞೆ ಮಾಡಿದ್ದಲ್ಲದೆ ಅದರಂತೆ ನಡೆದುಕೊಂಡು ಅಜರಾಮರರಾಗಿ ಉಳಿದಿದ್ದಾರೆ! ಅವರಿಗೆ ದಾನ ಎನ್ನುವದು ಪವಿತ್ರ ಯಜ್ಞಕ್ಕೆ ಸಮವಾಗಿತ್ತು. ಯಾಚಕನ ಯೊಗ್ಯತೆ, ಅವನ ಅಗತ್ಯತೆ ಇತ್ಯಾದಿ ಗಳನ್ನು ಪರೀಕ್ಷಿಸಿ ಕೊಟ್ಟರೆ ದಾನ ಕ್ರಿಯೆ ಸಾರ್ಥಕ ವಾದೀತು ಎಂಬ ವಾದವೂ ಇದೆ. ದೇವರಿಗೆ ಹೆದರಿ ಅಥವಾ ಪಾಪ ವಿಮೋಚನೆಗಾಗಿ ಮಾಡಿದ ದಾನಕ್ಕೆ ಅರ್ಥವಿದೆಯೆ? ಯಾವುದೇ ಸ್ವಾರ್ಥವಿಲ್ಲದೇ ಮತ್ತು ಪ್ರತಿಫಲದ ಅಪೇಕ್ಷೆಯಿಲ್ಲದೇ ಮಾಡಿದ ದಾನ ಶ್ರೇಷ್ಠ ಎನಿಸೀತು!
ಸಮಾಜದ ಹಿತಕ್ಕಾಗಿ, ಧಾರ್ಮಿಕ ಉದ್ದೇಶಕ್ಕಾಗಿ, ಬೇರೊಂದು ಜೀವದ ಉಳಿವಿಗಾಗಿ, ದೀನ ದಲಿತರ ಉನ್ನತಿಗಾಗಿ ಮಾಡಿದ ದಾನ, ಖಂಡಿತ ದಾನಿಯ ಮನಸ್ಸಿಗೆ ಆನಂದ ನೀಡುತ್ತದೆ. ಸಮಾಜದಲ್ಲಿರುವ ಅನಾಥರು, ಅಂಗವಿಕಲರು, ಸೋತವರಿಗಾಗಿ ಮಾಡಿದ ದಾನ, ಅವರ ಬದುಕಿಗೆ ಊರುಗೋಲು ಆದೀತು. ಮೂಲತಃ ಸಂಘಜೀವಿಯಾದ ಮನುಷ್ಯ, ಸಮಾಜದ ಋಣ ತೀರಿಸಲು ನಮ್ಮ ಆದಾಯದಿಂದ ಕೆಲವು ಭಾಗವನ್ನಾದರೂ ದಾನ ಮಾಡುವ ಅಗತ್ಯ ವಿದೆ. ಹೀಗಾಗಿ ದಾನಕ್ರಿಯೆ ಎನ್ನುವದು ದಾನಿಯ ಶ್ರೇಷ್ಠತೆಯನ್ನು ತೋರಿಸದೇ ಅವನ ಕರ್ತವ್ಯ ಪ್ರಜ್ಞೆಯ ಪ್ರತಿಬಿಂಬವಾಗಿ ಕಾಣುವಂತಾಗಬೇಕು.
ಈ ಹಿನ್ನೆಲೆಯಲ್ಲಿ ಸಂತ ಕಬೀರರು,
"ದಾನದಿಂದ ಧನ ಕರಗದು, ನೀರು ಕುಡಿದರೆ ನದಿಯಾರದು/
ನೋಡು ಇದನು ಕಣ್ಣಾರೆ ಕಬೀರ,ಇನ್ನು ಬೇರೆ ಮಾತು ಬಾರದು//" ಎಂದು ಸ್ಪಷ್ಟ ಪಡಿಸಿದ್ದಾರೆ. "ಮರವಿದ್ದರೇನಯ್ಯ ನೆರಳಿಲ್ಲದನಕ? ಧನವಿದ್ದರೇನು ಕೊಡುವ ಮನವಿಲ್ಲದನಕ?" ಎಂಬ ಕವಿವಾಣಿ ಧನವಿದ್ದರೂ ದಾನ ಮಾಡದಿದ್ದರೆ ಅಂಥ ಸಂಪತ್ತು ನಾಯಿಯ ಮೊಲೆಯಲ್ಲಿನ ಹಾಲಿನಂತೆ ವ್ಯರ್ಥವಾದೀತು!
ಜ್ಞಾನ ದಾನ ಮಾಡಿದರೆ ಜ್ಞಾನ ವೃದ್ಧಿ ಯಾಗುತ್ತದೆ, ರಕ್ತದಾನ ಮಾಡಿದರೆ ಹೊಸ ರಕ್ತ ಬಂದು ಸೇರೀತು. ಹಾಗೆಯೇ ಧನದಾನ ಅನ್ನ ದಾನ ಮುಂತಾದವು ಗಳಿಂದ ಯಾರೂ ನಿರ್ಧನರಾಗಲು ಸಾಧ್ಯವಿಲ್ಲ.
ದಾನ ಪಡೆದವರ ಶುಭ ಹಾರೈಕೆಗಳು ನಮ್ಮ ಮತ್ತು ನಮ್ಮ ಕುಟುಂಬದ ಮೇಲೆ ಸದಾ ಇರುತ್ತವೆ!ಅಲ್ಲದೇ
ಸಮಾಜದ ಋಣ ತೀರಿಸಿದ ತೃಪ್ತಿ, ಸಂತೋಷಗಳು ನಮ್ಮಮಡಿಲಿಗೆ ಬೀಳುತ್ತವೆ! ಇದಲ್ಲವೆ ನರಜನ್ಮದ ಸಾರ್ಥಕತೆ..!!?
ಕೊಟ್ಟಿದ್ದು ಉಳಿದೀತು, ಕಟ್ಟಿಟ್ಟದ್ದು ಕರಗೀತು
ತೊಟ್ಟ ದೇಹದ ಗಡಿಗೆ ಎಂದಿಗೋ ಒಡೆದೀತು/
ಸಿರಿ ಸಂಪದ, ಭೊಗ-ಭಾಗ್ಯಗಳು ಅಸ್ಥಿರವೊ
ಪರಿಭ್ರಮಣೆ ವ್ಯರ್ಥ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ
Kommentarer