top of page

ಕಬೀರ ಕಂಡಂತೆ.. ೮೧

ಸಹನೆಯಿಲ್ಲದ ಬಾಳು ಹಾಳಾದೀತು..!


ಕಬೀರಾ ಧೀರಜ ಕೆ ಧರೆ, ಹಾಥಿ ಮನ ಭರ ಖಾಯ |

ಟೂಟ ಏಕಕೆ ಕಾರನೆ, ಸ್ವಾನ ಘರ ಘರ ಜಾಯ||

ಜೀವನದಲ್ಲಿ ಯಾವುದೇ ಕೆಲಸ ಮಾಡುವಾಗ ಶೃದ್ಧೆ ಮತ್ತು ತಾಳ್ಮೆಗಳಿದ್ದಲ್ಲಿ ಯಶಸ್ಸು ನಿಶ್ಚಿತ. ಮಾಡುವ ಕೆಲಸದಲ್ಲಿ ಶೃದ್ಧೆಯಿದ್ದಾಗ ಮನಸ್ಸು ಕಾಯಕ -ದೊಂದಿಗೆ ಸಂಲಗ್ನಗೊಂಡು ಉತ್ಕೃಷ್ಟ ಮಟ್ಟ ತಲುಪಲು ಸಾಧ್ಯ. ಅದೇ ರೀತಿ ಸೂಕ್ತ ಸಮಯಕ್ಕಾಗಿ, ಪರಿಣಾಮಕ್ಕಾಗಿ ಕಾದು ನೋಡುವ ಸಹನೆ ಇರದಿದ್ದರೆ ಮಾಡುವ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಬರಿಗೈಯಲ್ಲಿ ಮರಳಬೇಕಾದ ಪ್ರಸಂಗ ಎದುರಾದೀತು! ಹಾಗಾಗಿ ಬದುಕಿನಲ್ಲಿ ಶೃದ್ಧೆ, ತಾಳ್ಮೆ -ಗಳು ಖಂಡಿತ ಅಗತ್ಯ. ಇದರಿಂದ ಮಾನಸಿಕ ಶಾಂತಿ ಸಹಜವಾಗಿ ಲಭಿಸುವದರಿಂದ ಮಾಡುವ ಕಾಯಕ -ದಲ್ಲಿ ಹೆಚ್ಚಿನ ತಾದಾತ್ಮ್ಯತೆ ಪಡೆಯುವದು ಸಾಧ್ಯವಾದೀತು.

ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಬಿಡುವಿಲ್ಲದೆ ಮನುಷ್ಯ ಧಾಳಾಧಾಳಿಯ ಬದುಕು ಸಾಗಿಸುವದು ಅನಿವಾರ್ಯವಾಗಿಬಿಟ್ಟಿದೆ. ಇಲ್ಲಿ ತಾಳ್ಮೆಗೆ ಅವಕಾಶ ಕಡಿಮೆ ಎನ್ನುವಂತಾಗಿದ್ದು, ರೇಸ್ ಕುದುರೆಯಂತೆ ಓಡುವದೇ ಬದುಕಾಗಿಬಿಟ್ಟಿದೆ. ಆದರೂ ಯಾವುದೇ ಕಾರ್ಯ ಮಾಡಲು ಅದರದ್ದೇ ಆದ ಸಮಯವಂತೂ ಅಗತ್ಯ ಎನ್ನುವದರಲ್ಲಿ ಎರಡು ಮಾತಿಲ್ಲ.


ಈ ಹಿನ್ನೆಲೆಯಲ್ಲಿ ಸಂತ ಕಬೀರರು,

ಕಬೀರ, ತಾಳ್ಮೆಯಿಂದ ಇದ್ದು, ಆನೆ ಮನಃಪೂರ್ತಿ ತಿನ್ನುವದು|

ಸಹನೆಯಿಲ್ಲದ ಶ್ವಾನ, ತುಂಡು ರೊಟ್ಟಿಗೆ ಮನೆ ಮನೆ ಅಲೆಯುವದು||

ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ತಾಳ್ಮೆ ಮತ್ತು ಸಂಯಮದಿಂದಿರುವ ಆನೆ ಹೊಟ್ಟೆ ತುಂಬುವಷ್ಟು ಸಂತೋಷಪಟ್ಟರೆ, ಸಹನೆಯಿಲ್ಲದ ಶ್ವಾನ ಅಲ್ಲಿ, ಇಲ್ಲಿ ಅಕೆದಾಡಬೇಕಾದ ಸ್ಥಿತಿ ಬಂದೀತು ಎಂದು ಎಚ್ಚರಿಸಿದ್ದಾರೆ. ಹೆಚ್ಚೆಚ್ಚು ಸಂಪತ್ತು, ವೈಭವಗಳನ್ನು ಶೀಘ್ರದಲ್ಲಿ ಸಂಪಾದಿಸುವ ಹುಚ್ಚಿಗೆ ಬಿದ್ದ ಜನರು ಅನೇಕ ರೀತಿಯ ಕಸರತ್ತು ಮಾಡುತ್ತಾರೆ. ದುಡ್ಡಿನ ಬೆನ್ನು ಹತ್ತಿ ಓಡಾಡಿ, ಬಡಿದಾಡಿ ಸುಸ್ತಾಗುತ್ತಾರೆ. ಇನ್ನಿಲ್ಲದ ವಾಮಮಾರ್ಗಗಳನ್ನು ಹಿಡಿದು ಹೈರಾಣಾಗುತ್ತಾರೆ‌. ಆದರೆ ಆರೋಗ್ಯ, ಶಾಂತಿ, ಕೌಟುಂಬಿಕ ಸ್ವಾಸ್ಥ್ಯಗಳನ್ನು ಕಡೆಗಣಿಸಿ ಸಂಪಾದಿಸಿದ ಹಣಕ್ಕೆ ಬೆಲೆ ಎಲ್ಲಿದೆ..!!? ಮಾನಸಿಕ ಶಾಂತಿ,, ದೈಹಿಕ ಆರೋಗ್ಯ ಕಳೆದುಕೊಂಡು ಎಷ್ಟು ಸಂಪತ್ತು ಗಳಿಸಿದರೂ ಎಲ್ಲವೂ ವ್ಯರ್ಥ! ತಾಳ್ಮೆಯಿಲ್ಲದ ವ್ಯಕ್ತಿಯ ಬಾಳು ಅಂಡಲೆಯುವ ನಾಯಿಯಂತೆ ಆದರೆ ಅದಕ್ಕಿಂಅದಕ್ಕಿಂತ ದೊಡ್ಡ ದುರಂತ ಬೇರೇನಿದೆ? ಪರಿಶ್ರನ, ಶೃದ್ಧೆ, ಸಂಯಮದಿಂದ ಕಾರ್ಯ ಮಾಡುವ ವ್ಯಕ್ತಿಗೆ ಸಂತೋಷ, ಸಮಾಧಾನ ಸಿಗುವದರಲ್ಲಿ ಯಾವುದೇ ಸಂದೇಹವಿಲ್ಲ.


ಮುತ್ತಾಗು ನೀ ಕಾದು ಸ್ವಾತಿಯ ಮಳೆಹನಿಗೆ

ಮತ್ತಾನಾಗದಿರೆಂದಿಗೂ ಕ್ಷಣಿಕ ಸುಖದಾಸೆಗೆ|

ಚತುರತೆಯಿಂ ಮಥಿಸೆ ನವನೀತ ಕಂಡೀತು

ಚಿತ್ತದಲಿರಲಿ ಸಹನೆ - ಶ್ರೀವೆಂಕಟ ||


ಶ್ರೀರಂಗ ಕಟ್ಟಿ ಯಲ್ಲಾಪುರ.

3 views0 comments

©Alochane.com 

bottom of page