top of page

ಕಬೀರ ಕಂಡಂತೆ...೫೯ ತನು ಶುದ್ಧಿಗಿಂತ ಮನ ಶುದ್ಧಿ ಇರಬೇಕು‌...

ಮನ‌ ಮೈಲಾ ತನ ಉಜಾರಾ, ಬಗುಲಾ ಕಪಟಿ ಅಂಗ|

ತಾಸೊಂ ತೊ ಕವ್ವಾ ಭಲಾ, ತನ ಮನ ಏಕಹಿ ರಂಗ ||


ಕಣ್ಣಿಗೆ ಕಂಡಿದ್ದನ್ನು ಯಾವುದೇ ಪರಾಮರ್ಶೆಯಿಲ್ಲದೆ ಅದೇ ಸತ್ಯ ಎಂದು ನಂಬುವ ಜನರು ಈ ಜಗತ್ತಿನಲ್ಲಿ ಬಹಳ. ಹಿಂದಿನ ಕಾಲಕ್ಕಿಂತ ಈಗ ವಿದ್ಯಾವಂತರ, ಶಿಕ್ಷಣವಂತರ ಸಂಖ್ಯೆ ಹೆಚ್ಚಾಗಿದ್ದರೂ 'ಬೆಳ್ಳಗಿರುವದೆಲ್ಲ ಹಾಲು' ಎಂದು ನಂಬುವ ಮೂರ್ಖರಿಗೇನೂ ಕೊರತೆ ಇಲ್ಲ! ವಿಪರ್ಯಾಸವೆಂದರೆ ಈಗೀಗ ಇಂಥವರ ಸಂಖ್ಯೆ ಅಧಿಕವಾಗಿದ್ದು ದಿಗ್ಭ್ರಮೆ ಮೂಡಿಸುತ್ತದೆ. ಅಂಧಶೃದ್ಧೆ, ಮಾಟ, ಯಂತ್ರಗಳಲ್ಲಿ ನಂಬಿಕೆ ಇರಿಸುವ ಮುಗ್ಧರನ್ನು ದುರುಪಯೋಗಪಡಿಸಿಕೊಳ್ಳುವ ಢೋಂಗಿ ಬಾಬಾಗಳ ಆರ್ಭಟವೂ ಮಿತಿ ಮೀರಿದೆ.‌ ಕಪಟ ವೇಷಧಾರಿ ಪಾಖಂಡಿಗಳಿಂದಾಗಿ ಧರ್ಮದ ನೈಜ ತಿರುಳಿನ ಬಗ್ಗೆಯೇ ಜನರಲ್ಲಿ ಶೃದ್ಧೆ, ಪ್ರೀತಿಗಳು ಮಾಯವಾಗುತ್ತಿರುವದು ಆತಂಕದ ಸಂಗತಿ.


ಸಮಾಜವನ್ನು ದಿಶಾಹೀನವನ್ನಾಗಿ ಮಾಡುವ ಧೂರ್ತ, ಕಪಟ ವೆರಷಧಾರಿಗಳ ವಿರುದ್ಧ ಸಂತ ಕಬೀರರು ಸಮರವನ್ನೇ ಸಾರಿದ್ದಾರೆ.

"ಮನ ಅಶುದ್ಧ ತನು ಶುದ್ಧ, ಕಪಟತನವೆ ಎಲ್ಲೆಲ್ಲೂ

ಇವರಿಗಿಂತ‌ ಕಾಗೆ ಮೇಲು, ಬಣ್ಣವೊಂದೆ ತನುಮನ ದಲ್ಲೂ" ಎಂದು ಹೇಳುವ ಮೂಲಕ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ದುಷ್ಟರ ಅವಹೇಳನ ಮಾಡಿದ್ದಾರೆ.‌ ಇಂಥ ಬಾಬಾಗಳ ತನು, ವೇಷ ಸ್ವಚ್ಛ -ವಿರಬಹುದು. ಆದರೆ ಅವರ ಮನಸ್ಸು ಮಾತ್ರ ಅಶುದ್ಧವಾಗಿರುತ್ತದೆ. ಹೊರಗೊಂದು, ಒಳಗೊಂದು ಸ್ವಭಾವವಿರುವ ಇಂಥ ಕಪಟಿಗಳ ಬದಲು ತನು - ಮನದಲ್ಲಿ ಒಂದೆ ತೆರನಾಗಿರುವ ಕಾಗೆಯೇ ಲೇಸು ಎಂಬುದು ಕಬೀರರ ಕಟುವಾದ ಅಭಿಪ್ರಾಯ.‌ ಮನುಷ್ಯ ಹೊರಗಿನಿಂದ ಸ್ವಚ್ಛವಿದ್ದರೆ ಸಾಲದು, ಮನದೊಳಗೂ ಸ್ವಚ್ಛವಿರಬೇಕು ಎಂಬುದೇ ಅವರ ಕಳಕಳಿ.‌ಸಾಧುವಿನಂತೆ ಕಂಡರೂ ಅಂತರಂಗದಲ್ಲಿ ‌ದಾನವರಾಗಿರುವ ಜನರು ಮನುಕುಲಕ್ಕೇ ಕಂಟಕ ಪ್ರಾಯರು. ಇಂಥ ಗೋಮುಖ ವ್ಯಾಘ್ರಗಳಿಂದ ಸಮಾಜ ಸದಾ ಎಚ್ಚರದಿಂದಿರಬೇಕು.‌ ಮುಂದೆ ಸಿಹಿ ಮಾತನಾಡುತ್ತ ಒಳ್ಳೆಯವರ ಮುಖವಾಡ ಧರಿಸುವ ವ್ಯಕ್ತಿ ಗಳಿಗಿಂತ ಮನಸ್ಸಿನ ಭಾವನೆಗಳನ್ನು ನಿರ್ಭಿಡೆ

-ಯಿಂದ ಹೇಳುವವರು ಎಷ್ಟೋ ಮೇಲು!


ತನು ಶುದ್ಧಿಗಿಂತ ಮನದ ಶುದ್ಧಿಯಿರಬೇಕು

ಮನದ ಭಾವನೆ ಮುಕ್ತವಾಗಿ ತೆರೆದಿಡಬೇಕು

ಕಪಟ ಮನದವರು ಸಿಹಿ ಮಾತನಾಡುವರು

ಕಪ್ಪು ಕಾಗೆಗೂ ಕಡೆ - ಶ್ರೀವೆಂಕಟ


ಶ್ರೀರಂಗ ಕಟ್ಟಿ ಯಲ್ಲಾಪುರ

15 views0 comments

©Alochane.com 

bottom of page