top of page

ಕನ್ನಡದ ಅಭಿಮಾನ ಬಡಿದೆಬ್ಬಿಸಿದ ಶಾಂತಕವಿಗಳು ( ಸಕ್ಕರಿ ಬಾಳಾಚಾರ್ಯರು)

೧೯ ನೆಯ ಶತಮಾನದ ಆದಿಭಾಗ. ಧಾರವಾಡ ಬೆಳಗಾವಿಯಂತಹ ಅಚ್ಚಕನ್ನಡ ಪ್ರದೇಶಗಳಲ್ಲೂ ಮರಾಠಿ ಭಾಷೆಯ ದಟ್ಟ ಪ್ರಭಾವ. ಕನ್ನಡದ ಮೇಲೇ ದಬ್ಬಾಳಿಕೆ ನಡೆದಂತಹ ಸಂದರ್ಭ. ಆಗ ಕನ್ನಡಿಗರನ್ನು ಜಾಗೃತಗೊಳಿಸಿ ಕನ್ನಡದ ಅಭಿಮಾನ ತುಂಬಲು ಪ್ರಯತ್ನಿಸಿದ ವ್ಯಕ್ತಿ ಈ ಶಾಂತಕವಿಗಳು. " ಎಲ್ಲಿ ಕಂಡಲ್ಲಿ ಮರಾಠೀ ಭಾಷಾಮಯವಲ್ತೆ" ಎಂದು ಸಿಟ್ಟಿಗೆದ್ದು ಕನ್ನಡತನವನ್ನು ಬಡಿದೆಬ್ಬಿಸಲು ಸ್ವತ ಉತ್ತರ ಕರ್ನಾಟಕದ ಮೊಟ್ಟ ಮೊದಲ ವೃತ್ತಿ‌ನಾಟಕ ಕಂಪನಿಯನ್ನು ಸ್ಥಾಪಿಸಿ ತಾವೇ ಕನ್ನಡ ನಾಟಕಗಳನ್ನು ಬರೆದು ಆಡಿಸಿ, ಕನ್ನಡದ ಕೀರ್ತನೆಗಳನ್ನು ಬರೆದು ಹಾಡಿದ ಉಗ್ರ ಭಾಷಾಭಿಮಾನಿ ಸಕ್ಕರಿ ಬಾಳಾಚಾರ್ಯರ ಕಾವ್ಯನಾಮ " ಶಾಂತಕವಿ". ಆಧುನಿಕ ಕರ್ನಾಟಕದ ನಾಟಕ ಪಿತಾಮಹ.

೧೮೫೬ ರ ಜುಲೈ ೧೫ ರಂದು ಹಾವೇರಿ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಜನಿಸಿದ ಬಾಳಾಚಾರ್ಯರು ಮುಲ್ಕಿ ಪರೀಕ್ಷೆ ಪಾಸು‌ಮಾಡಿ ಶಿಕ್ಷಕರಾಗಿ ಹಾವೇರಿ, ಧಾರವಾಡ, ಗದಗ, ಹೊಂಬಳ, , ಅಗಡಿ , ಬೆಳಗಾವಿ‌ ಮೊದಲಾದೆಡೆ ಶಿಕ್ಷಕರಾಗಿ ಕೆಲಸ ಮಾಡುತ್ತಲೇ ಅಪಾರ ಕನ್ನಡದ ಕೆಲಸ ಮಾಡಿದರು. ೭೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಅದರಲ್ಲಿ ೨೮ ನಾಟಕಗಳು. ಅವರು ರಚಿಸಿದ " ರಕ್ಷಿಸು ಕರ್ನಾಟಕ ದೇವಿ" ಎಂಬ ಪದ್ಯ ಅಂದಿನ ಮುಂಬಯಿ ಕರ್ನಾಟಕದ ನಾಡಗೀತೆಯೆನಿಸಿತ್ತು.

ಬಾಳಾಚಾರ್ಯರ ತಂದೆ ಶ್ರೀನಿವಾಸಾಚಾರ್ಯರು ಸಂಸ್ಕೃತ ವಿದ್ವಾಂಸರಾಗಿದ್ದು ," ಶರ್ಕರಾ" ಎಂಬ ಸಂಸ್ಕೃತ ಟೀಕಾಗ್ರಂಥವನ್ನು ಬರೆದಿದ್ದರು. ಶರ್ಕರಾ ಎಂದರೆ ಸಕ್ಕರೆ. ಅದೇ ಅವರ ಮನೆತನಕ್ಕೆ ," ಸಕ್ಕರಿ ಆಚಾರ್ಯ" ರೆಂಬ ಹೆಸರು ಬರಲು ಕಾರಣ.

ಎಲ್ಲಿಕಂಡಲ್ಲಿ ಆಗ ಮರಾಠಿ ಭಾಷೆಯದೇ ಹಾವಳಿ. ನಾಟಕಗಳು, ಭಕ್ತಿಗೀತೆಗಳು, ಕೀರ್ತನೆಗಳು , ಭಾಷಣಗಳು ಎಲ್ಲ ಮರಾಠಿಯಲ್ಲೇ. ಇದನ್ನು ಕಂಡು ಸಿಡಿದೆದ್ದ ಶಾಂತಕವಿಗಳು ಕನ್ನಡದಲ್ಲೇ ಲಾವಣಿ, ಕೀರ್ತನೆಗಳನ್ನು ರಚಿಸಿ ಹಾಡುವುದು ಸೇರಿದಂತೆ ಕನ್ನಡಿಗರಲ್ಲಿ ಎಚ್ಚರ ತರಲು ೧೮೭೪ ರಲ್ಲಿ ತಾವೇ " ಶ್ರೀ ವೀರನಾರಾಯಣ ಪ್ರಸಾದಿಕ ಕೃತಪುರ ( ಗದಗ) ನಾಟಕ ಮಂಡಳಿ " ಎಂಬ ಹೆಸರಲ್ಲಿ‌ನಾಟಕ ಕಂಪನಿ ಸ್ಥಾಪಿಸಿ " ಉಷಾಹರಣ" ಮತ್ತಿತರ ನಾಟಕಗಳನ್ನು ಬರೆದು ರಂಗಕ್ಕೆ ತಂದರು. ಆಂಜನೇಯ ವಿಜಯ, ಕಾಳಿದಾಸ, ಚಂದ್ರಾವಳಿ, ಸುಧನ್ವ ವಧೆ, ಕೀಚಕ ವಧಾ, ಜರಾಸಂಧ ವಧಾ, ರಾವಣ ವಧಾ, ನಾರದ ಕುಚೇಷ್ಟಾ ಮೊದಲಾದವು ಅವರು ಬರೆದ ನಾಟಕಗಳು. ಅವರು ಎಷ್ಟೊಂದು ಹಟವಾದಿಗಳಿದ್ದರೆಂದರೆ ನಾಟಕ ರಿಹರ್ಸಲ್ ಸಲುವಾಗಿ ಶಾಲೆ ಬಿಟ್ಟ ನಂತರ ಗದಗದಿಂದ ಹೊಂಬಳಕ್ಕೆ ೯ ಕಿ. ಮೀ. ಎಮ್ಮೆಯ ಮೇಲೆ ಕುಳಿತು ಹೋಗಿಬರುತ್ತಿದ್ದರಂತೆ.

ಸಾಕಷ್ಟು ಕಾವ್ಯಕೃತಿಗಳನ್ನೂ ಅವರು ಬರೆದಿದ್ದಾರೆ. ಆನಂದ ಲಹರಿ, ಋತು ಸಂಹಾರ, ಪುಷ್ಪಬಾಣ ವಿಲಾಸ, ವಿದ್ಯಾರಣ್ಯ ಚರಿತ್ರ, ಮೇಘದೂತ, ರಘುವಂಶ, ಅಲಂಕಾರ ಶಾಸ್ತ್ರ, ಲಘು ಕವಿತಾ ಪದ್ಧತಿ, ಮೊದಲಾದವು ಅವರ ರಚನೆಗಳು.

ಹತ್ತು ವರ್ಷ ಅಗಡಿಯಲ್ಲಿದ್ದ ಅವರು ಶೇಷಾಚಲ ಗುರುಗಳ ಮತ್ತು ಶಿಶುನಾಳ ಶರೀಫರಂಥವರ ಸಂಪರ್ಕ ಪಡೆದವರಾಗಿದ್ದರು. ಅವರಿಗೆ ಕನ್ನಡಿಗರ ಅಭಿಮಾನಶೂನ್ಯತೆಯ ಬಗ್ಗೆ ಆಕ್ರೋಶವಿತ್ತು. ಅದನ್ನೇ ಅವರು ತಮ್ಮ ಕವನಗಳ ಮೂಲಕ ವ್ಯಕ್ತ ಪಡಿಸುತ್ತ-


"ಎಲ್ಲಿರುವದಭಿಮಾನ

ಕನ್ನಡಿಗರೇ ಪೇಳಿ,

ಸುಳ್ಳೆ ಬಡಬಡಿಸುವಿರಿ

ಸಭೆಗಳಲ್ಲಿ"

ಎಂದು ಕೇಳಿದವರು. ಅವರ ಪದ್ಯಶೈಲಿಯ ಒಂದು ಮಾದರಿ -


ರಕ್ಷಿಸು ಕರ್ನಾಟಕ ದೇವಿ

ಕದಂಬಾದಿ ಸಂಪೂಜಿತ ಚರಣೆ

ಗಂಗಾರಾಧಿತ ಪದನಖ ಸರಣೆ

ಚಾಲುಕ್ಯರುತ್ತಮ ಕಾಂಚೀಕಿರಣೆ

ರಾಷ್ಟ್ರಕೂಟ ಮಣಿ ಕಂಠಾಭರಣೆ.......

೧೯೨೦ ರ ಮಾರ್ಚ ಮೂರರಂದು ನಿಧನ ಹೊಂದಿದ ಶಾಂತಕವಿಗಳು ಕನ್ನಡಿಗರು ಯಾವತ್ತೂ ಸ್ಮರಿಸಬೇಕಾದ ಮಹಾನುಭಾವರು.


- ಎಲ್. ಎಸ್. ಶಾಸ್ತ್ರಿ
39 views0 comments

Comments


bottom of page