top of page

ಒಂದು ಮರದ ಮರಣದ ಕಥೆ

Updated: Aug 14, 2020


ನಾನು ಶಾಲೆಗೆ ಹೋಗುತ್ತಿದ್ದ ದಿನಗಳಿಂದ ಇಂದಿನವರೆಗೆ,

ಆ ದಾರಿಯಲ್ಲಿ ಸಾಗುವಾಗೆಲ್ಲ ಆ ಮರವನ್ನು

ತಬ್ಬಿಕೊಳ್ಳಲು ಯತ್ನಿಸಿ, ತೋಳಲ್ಲಿ ಬಂಧಿಸಲಾಗದೆ ಸೋತಿದ್ದೇನೆ.

ಮರದ ಬುಡದಿಂದ ತುದಿಯವರೆಗೊಮ್ಮೆ ನೋಡಿ,

ಒಂದೆರಡು ಸುತ್ತು ಸುತ್ತಿ, ನನ್ನಷ್ಟಕ್ಕೇ ನಕ್ಕಿದ್ದೇನೆ.

ಎಷ್ಟು ಹೊತ್ತು ಆ ನೆರಳಡಿ ನಿಂತರೂ ಬೇಸರವಾಗದೆ,

ಬೇಸರವಾಗದಿರುವುದಕ್ಕೆ ಬೆರಗಾಗಿ ಮುಂದೆ ಸಾಗಿದ್ದೇನೆ.

ಇವತ್ತೇಕೋ ಆ ಶಾಂತಿ ಪ್ರತೀಕದ ಸುತ್ತ

ಜನರ ಗಿಜಿಗಿಜಿಯನ್ನು ಕೇಳಿ,

ಮರ ಜಾಗ ಬದಲಿಸಿತೇ(!) ಎಂದು ದಿಗಿಲಾದೆ.

ಮರವ ಸಮೀಪಿಸುತ್ತಿದ್ದಂತೆ,

ಗಿಜಿಗಿಜಿಯೊಂದಿಗೆ ‘ಗರಗರ’ ಶಬ್ದವ ಕೇಳಿ ಕಿವಿ ಬಿಸಿಯಾಗುತ್ತಿದೆ,

ಹೃದಯ ಕೇಡನ್ನು ಸಂವೇದಿಸಿದಂತೆ ದಡಬಡ ಹೊಡೆದುಕೊಳ್ಳುತ್ತಿದೆ.

ಆ ಬೃಹದಾರದ ಒಂದೊಂದೇ ರೆಂಬೆ-ಕೊಂಬೆ ಹಸಿಹಸಿಯಾಗಿ

ತುಂಡು ತುಂಡಾಗಿ ಬೀಳುತ್ತಿರುವುದ ಕಂಡು,

ಕಣ್ಣು ಕುರುಡಾಗಲೆಂಬಂತೆ ಮನಸ್ಸು ಅಳುತ್ತಿದೆ,

ಅದರ ಮುನ್ಸೂಚನೆಯಂತೆ ರೆಪ್ಪೆ ನೆನೆಯುತ್ತಿದೆ.

ಮಂಜು ಮಂಜಾದ ಕಣ್ಣಿಗೆ,

ನೆಲಕ್ಕುರುಳಲಿರುವ ಮರದ ಸುತ್ತ ನಿಂತವರು

ಒಬ್ಬೊಬ್ಬರಾಗಿ ಉಸಿರುಗಟ್ಟಿ ಮರದ ಬುಡದಲ್ಲಿ

ಒರಗುತ್ತಿದ್ದಂತೆ ಭಾಸವಾಗಿ,

ವ್ಯಂಗ್ಯ ವಿಷಾದವೊಂದು ಕರೆಗಟ್ಟುತ್ತಿದೆ.

ಕಣ್ರೆಪ್ಪೆಗಳಡಿಯಿಂದ ನೋವಿನ ಗೋಲವೊಂದು ಉರುಳುತ್ತಿದೆ..








-ಗ್ರೀಷ್ಮಾ ಬಿ.ಎ

36 views0 comments

Comments


bottom of page