ಯಾಕೆ ಈ ಸಂಜೆಯ ಆಕಾಶ
ಒಬ್ಬರ ರಟ್ಟೆಯ ಸೊಕ್ಕಿಗೆ,
ಇನ್ನೊಬ್ಬರ ಬಧ್ಧ ವೈರಕ್ಕೆ,
ಮತ್ತೊಬ್ಬರ ಸ್ವಾರ್ಥಕ್ಕೆ, ದುರಾಸೆಗೆ,
ಮತ್ಯಾರದೋ ಧನ ದಾಹಕ್ಕೆ, ಭೂ ದಾಹಕ್ಕೆ,
ಧರ್ಮ ಸಂಸ್ಥಾಪನೆಯಾಸೆಗೆ, ಚಕ್ರಾಧಿಪತ್ಯದಾಸೆಗೆ,
ಕಾರಣವಲ್ಲದ ಕಾರಣಕ್ಕೆ,
ಬದುಕ ಗೆಲ್ಲಲು ಸೋತು,
ಅದಿಲ್ಲದಿರೆ, ಸಾವ ಗೆಲ್ಲಲು ಹೋರಾಡಿ,
ಆಹುತಿಯಾದ ಅಮಾಯಕರ,
ಎದೆಯಿಂದ ಹರಿದ ನೆತ್ತರಿನ ಓಕುಳಿಯಲಿ
ಆಗಸದ ನೀಲ ಅಂಗವಸ್ತ್ರವನು
ಅದ್ದದ್ದಿ ಹರಡಿದ ಹಾಗೆ,
ಎಲ್ಲವೂ ಬೆಂಕಿಯಲಿ ಹೊತ್ತಿ ಉರಿದು,
ಉಳಿದ ಬೂದಿಯಲಿ ಮುಚ್ಚಿದ ಕೆಂಡದ
ಮಂದ ಬೆಳಕಿನ ಹಾಗೆ,
ವಿಷಣ್ಣ ಭಾವವ ಸುರಿವ
ನೀರವ ಸ್ಮಶಾನ ಮೌನದ ಹಾಗೆ,
ಕಾಣಿಸುವುದೋ ನನಗೆ
Comments