top of page

ಒಳ ದನಿ

ಹಗಲು ರಾತ್ರಿ ಹುಟ್ಟಿಸುವ

ಸೂರ್ಯ ಚಂದ್ರರ ಬಗ್ಗೆ

ಬರೆಯವುದಕ್ಕಿಂತ

ಕಿಡಿ ಬೆಂಕಿ ಜ್ವಾಲಮುಖಿ

ಕಂಡಾಗಲೂ ಹೆಚ್ಚು ಬರೆಯುತ್ತೇನೆ

ನದಿ ಕಡಲು ಕೆರೆಯ ಮತ್ಸ್ಯ

ಕಂಡು ಮೈಮರೆತಿದ್ದಕ್ಕಿಂತ

ಸುನಾಮಿಯಂತ ರಭಸದ

ವಾಗ್ದಾಳಿಗೂ

ಬೆಚ್ಚಿ ಬಿದ್ದಿದ್ದೇನೆ.


ನವಿಲಕ್ಕಿ ಕುಣಿತ

ಕೋಗಿಲೆಯ ರಾಗಕ್ಕೆ

ಮನ ಸೋತಿದಕ್ಕಿಂತ

ಹಗಲು ವೇಷ ದಾಟುವಾಗ

ರಣಹದ್ದುಗಳು ಕಂಡಾಗಲೆಲ್ಲಾ

ದೃಷ್ಟಿ ನೆಟ್ಟಿರುತ್ತೇನೆ


ಅರಮನೆಯ ಹೂವುಗಿಂತ

ಕಾಡು ಹೂವು ಕಂಡರೆ

ತುಂಬಾ ಪ್ರೀತಿಸುತ್ತೇನೆ.

ಹೊಗಳುವರ ಮುಂದೆ

ಕೈ ಕಟ್ಟಿ ಇರೋದಕ್ಕಿಂತ

ಅಬಲೆಯ ಬೆನ್ನ ಮೇಲಿನ

ಕ್ರೂರ ಗೆರೆಗಳ

ಬೆರಳು ಹುಡುಕುತ್ತಿರುತ್ತೇನೆ


ಪ್ರೇಮ ವಿರಹ ನೀವೆದನೆಯ

ಸಾಲುಗಳಿಗಿಂತ ಓಣಿಯೊಳಗೆ

ಕಾಮಕ್ಕೆ ಮಣಿದ ಹಳೆ ಉಳಿಕೆ

ಕಂಡು ವಿಷಾದಿಸುತ್ತೇನೆ

ಕಾಣುವ ಬೆಳಕಿಗಿಂತ ಕಾಣದ ಕತ್ತಲೆಯ

ವೃತ್ತಾಂತ ಕುರಿತು ಚಿಂತಿಸುತ್ತೇನೆ


ಉತ್ತರ ಸಿಗದ ಪ್ರಶ್ನೆ ನಿಂತುಕೊಂಡಿದ್ದರೂ

ಶಾಂತಿ ದೀಪ ಹಚ್ಚಿ ಉದುದ್ದ ನಡೆಯವರ

ಹಿಂದೆ ಬರಿಗಾಲಿನಲ್ಲಿ ನಡೆಯುವುದಕ್ಕಿಂತ

ಹೊಸ ದಿಕ್ಕಿನತ್ತಾ ಸಾಗಲು ಬಯಸುತ್ತೇನೆ


ಗುಂಪು ನಂಬುವ ಕೆಲವು ವಿಷಕ್ಕಿಂತ

ನಮ್ಮ ಅರಿಕೆಯ ಒಂದು ಸತ್ಯಕ್ಕೆ

ನಿತ್ಯ ಹೋರಾಡುತ್ತೇನೆ

ಮತ್ತೆ ಮತ್ತೆ

ನನ್ನೊಳಗಿನ ಪ್ರಶ್ನೆಗೆ ಹೀಗೆ

ಉತ್ತರಿಸುತ್ತೇನೆ...



ಎಂ.ಜಿ.ತಿಲೋತ್ತಮೆ, ಭಟ್ಕಳ

75 views1 comment

1件のコメント


goudasatu
goudasatu
2021年1月18日

ತಿಳಿದು ಅಳವಡಿಸಿಕೊಳ್ಳಲು ಯೋಗ್ಯವಾದ ಅನುಭವದ ಸಾರ ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ..ಶುಭವಾಗಲಿ.👌👌💐💐💐

いいね!
bottom of page