top of page

ಒಡಲಿಂದ ಎದ್ದು ಬಂದ ಕಡಲಮೊರೆತದ ಪದಗಳು


ಸತ್ಯದ ದೀಪಗಳು

ಕವಿತೆಗಳು

ಡಾ. ಶ್ರೀಪಾದ ಶೆಟ್ಟಿ
ಉತ್ತರ ಕನ್ನಡದ ಕಡಲು , ಕಾಡು , ಜನರ ಮನಸ್ಸಿನಲ್ಲಿ ಬೆರೆತು - ಅರಿತ , ಡಾ. ಶ್ರೀಪಾದ ಶೆಟ್ಟಿಯವರು

ಅಧ್ಯಯನ, ಅಧ್ಯಾಪನ, ಸಾಹಿತ್ಯ, ಜಾನಪದ, ಭಾಷಣ, ಮಾತುಗಾರಿಕೆ, ಸಂಶೋಧನೆ ,ಕೃಷಿ ಹೀಗೆ ಎಲ್ಲವನ್ನೂ ತಮ್ಮ ಬದುಕಿನ ಭಾಗವಾಗಿಸಿಕೊಂಡವರು. " ಆಲೋಚನಾ ವೇದಿಕೆ " " ಆಲೋಚನಾ ವೆಬ್ ಪತ್ರಿಕೆ" ಗಳ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ತಮ್ಮ ಮಾತು ಮತ್ತು ಪ್ರೀತಿಯ ಒಡನಾಟದಿಂದ ನಾಡಿಗೇ ಚಿರ ಪರಿಚಿತರು . ಅಂಕೋಲಾ ಮತ್ತು ಹೊನ್ನಾವರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳ ಕನ್ನಡದ ದಾರಿಗೆ ದೀಪವಾದವರು. ಅಪಾರ ವಿದ್ಯಾರ್ಥಿ ಸೇನೆಯ " ಕಫ್ತಾನರು ". ದಿನಕರ ದೇಸಾಯಿ ಬದುಕು - ಬರಹ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಇವರಿಗೆ , ದಿನಕರರ ಬದುಕೇ ಇವರ ಬದುಕು ಮತ್ತು ಬರಹಕ್ಕೆ ಸ್ಪೂರ್ತಿ. ಕವಿತೆ, ಅಂಕಣ ಬರಹ, ವ್ಯಕ್ತಿ ಚಿತ್ರ, ವಿಮರ್ಶೆ,ಜೀವನ ಚರಿತ್ರೆ , ಪಿಎಚ್ಡಿ ಪ್ರಬಂಧ ಹೀಗೆ ಕನ್ನಡದ ವೈವಿದ್ಯಮಯ ಪ್ರಕಾರಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನಾಡಿಗೆ

ಕೊಟ್ಟ ಇವರರದು ಸದಾ ಅಕ್ಷರಗಳ ಒಡನಾಟ . " ಸತ್ಯದ ದೀಪಗಳು " ಇವರ ಆರನೆಯ ಕವನಸಂಕಲನ ಹೊನ್ನಾವರದ ಗೌತಮಿ ಪ್ರಕಾಶನ ಪ್ರಕಟಿಸಿದ ಈ ಹೊತ್ತಿಗೆಯ 66 ಪುಟಗಳಲ್ಲಿಯ 44 ಕವನಗಳು ಇವರ ಒಡಲಿಂದ ಎದ್ದು ಬಂದ ಕಡಲ ಮೊರೆತದ ಪದಗಳು.


ಕತ್ತು ಹಿಚುಕಿದ ಕೆಲವು ಜನಪರರು

ದೀನೋದ್ಧಾರದ ಸ್ವಯಂ ಘೋಷಿತ ಹರಿಕಾರರು

ಭಂಡತನದ ಬಂಡೆಗಳಡಿಗೆ ಸ್ಪೋಟ

ಸತ್ಯದ ಮಾತುಗಳು ಮೇಲೆದ್ದು ಬಂದು

ಸತ್ಯದ ದೀಪಗಳಾಗಿ ಬೆಳಗುತಿದೆ


ಎಂದು " ಸತ್ಯದ ದೀಪಗಳು " ಕವಿತೆಯಲ್ಲಿ ಸಮಯ ಸಾಧಕ ಭಂಡತನದ ಜನಗಳ ಕುರಿತು ಕವಿ ತಮ್ಮ

ಕವನದ ಸಾಲುಗಳಲಿ ಸತ್ಯದ ದೀಪದ ಬೆಳಕಿನಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವರು.ಮಾತು

ಮಾತಿಗೂ ತಾವು ದೀನ, ದಲಿತ , ಬಡವರಿಗಾಗಿಯೇ ಅವತರಿಸಿ ಬಂದವರೆಂದೂ ಭಂಡತನದ ಮಾತನಾಡಿ ಜನರಿಗೆ ಮರಳುಮಾಡುವರು.ಇವರೆಲ್ಲಾ ಸ್ವಯಂ ಘೋಷಿತ ಮಹಾನಾಯಕರು ; ಸಮಯ ಸಾಧಕರು. ಇಂಥವರ ಹಿಂದಿನ ಆಶ್ವಾಸನೆಗಳೆಲ್ಲಾ ಬಂಡೆಗಳಲಿ ಹೂತುಹೋಗಿ ವಿಲಿವಿಲನೆ ಒದ್ದಾಡುತಿದೆ.ಮತ್ತೇರಿಸುವ ಪ್ರಚಾರ , ಉಸಿರುಗಟ್ಟುವ ಉಪಚಾರಗಳ ನಡುವೆಯೇ ಬದುಕು ಸವೆಸುವ ಇವರು ಸತ್ಯದ ದೀಪದಂತೆ ಬೆಳಗ ಲೆತ್ನಿಸಿ ಅಸತ್ಯದ ದಾರಿಯಲಿ ನಡೆದು ಬದುಕಿನುದ್ದಕೂ

ಭಂಡತನದಿಂದಲೇ ಬಾಳುವರು .


ತಮ್ಮ ಜಿಲ್ಲೆಯ ಕುರಿತಾಗಿ " ಉತ್ತರ ಕನ್ನಡ ಜಿಲ್ಲೆ " ಎಂಬ ಕವಿತೆಯಲ್ಲಿ


ಹೆಸರಿನಲಿ ಬೇಳೆ ಬೇಯಿಸಿಕೊಂಬ ಜನಪ್ರತಿನಿಧಿಗಳು

ಗುಡಿಯ ಭಟ್ಟರು ಒಡೆಯ ಶೆಟ್ಟರು

ಸ್ವಾರ್ಥ ಲೋಲುಪರು

ಮುಕ್ರಿ ಹಳ್ಳೇರು ಆಗೇರು ಹಾಲಕ್ಕಿ ಕುಣಬಿಗಳೆಲ್ಲಾ

ಉಸಿರುಗಟ್ಟಿ ಬದುಕಿಹರು ಈದ್ದು ಸತ್ತಂತೆ

ಉತ್ತರ ಕನ್ನಡದಲಿ ನಿತ್ಯ ನೆರೆಯುತಿದೆ ಖದೀಮರ ಸಂತೆ

ಯಾರಿಗುಂಟು ಯಾರಿಗಿಲ್ಲ ಉದ್ಧಾರದ ಚಿಂತೆ

ಉತ್ತರ ಕನ್ನಡ ನೀನು ಯಾಕೆ ಸುಮ್ಮನೆ ಕುಂತೆ !


ಎಂದು ಉತ್ತರ ಕನ್ನಡದ ದುರ್ಗತಿಗೆ ಕಾರಣರಾದವರ

ಮೇಲೆ ಬೆಳಕು ಚೆಲ್ಲಿರುವರು.ತೆಂಗು- ಕೌಂಗಿನ ನಾಡಿದು;

ಕಡಲೊಡಲಿನ ಬೀಡಿದು; ಪ್ರಕೃತಿಯ ನೆಲೆ ವೀಡಿದು !

ಆದರೆ ಏನುಮಾಡುವದು ಅಸಮಾನತೆಯ ಆಗರವೇ

ಇಲ್ಲಿ ತುಂಬಿ ತುಳುಕುತಿದೆ. ಉತ್ತರ ಕುಮಾರರಿಂದ ಈ

ಜಿಲ್ಲೆ ಸೊರಗಿ ಹೋಗಿದೆ. ದಿನಕರ ದೇಸಾಯಿಯವರ

ಹೆಸರಿನಲಿ , ಅವರ ಆದರ್ಶದ ಕನಸು ನನಸಾಗಿಸುವ

ಮಾತಿನಲಿ ಇಂದಿನ ರಾಜಕಾರಣಿಗಳು ತಮ್ಮ ಬೇಳೆ

ಬೇಯಿಸಿಕೊಳ್ಳುವರು. ಕೆಲವೇ ಕೆಲಜನ ತಮ್ಮ

ಚಾಕಚಕ್ಯತೆಯಿಂದ ಪ್ರಕೃತಿ ಸಂಪತ್ತನ್ನು ಲೂಟಿಗೈದು

ಕೋಟಿ ಲಾಭದಿ ಮೆರೆವರು. ಎಲ್ಲರೂ ಸ್ವಾರ್ಥ ಲೋಲುಪರೇ !

ಈ ನೆಲದ ಜೀವ ನಾಡಿಗಳಾದ ಮುಕ್ರಿ,

ಹಳ್ಳೇರು, ಆಗೇರು, ಹಾಲಕ್ಕಿ ಕುಣಬಿಗಳು ಇದ್ದೂ ಸತ್ತಂತೆ ಉಸಿರುಗಟ್ಟಿ ಬದುಕುತಿಹರಿಲ್ಲಿ.

ಬಡವರ ಉದ್ಧಾರದ ಹೆಸರಿನಲಿ ಅನುದಿನವೂ ಖದೀಮ

ರದೇ ಸಂತೆ ಇಲ್ಲಿ ಎನ್ನುತ್ತಾ ಕವಿ ಕೊರಗಿ ಮರಗಿರುವರು.


ರಂಗಕರ್ಮಿ, ನಾಟಕರಾರ ಎಲ್.ಜಿ. ಶಿವಕುಮಾರ" ಸತ್ಯದ ದೀಪದ ಬೆಳಕಿನಲ್ಲಿ " ಎಂಬ ಮುನ್ನುಡಿ

ಬರೆಯುತ್ತಾ " ಇವರ ಕವಿತೆಗಳಲ್ಲಿ ಸಮಾನತೆಯ ಆಶಯ ಅದಕ್ಕಾಗಿ ತುಡಿವ ಮನಸ್ಸು ಕಾಣುತ್ತಿದೆ. ಆಕ್ರೋಶ, ಆಶಯಗಳ ನಡುವೆ ಕವಿಯ ಹೃದಯ ಎಲ್ಲೋ ನಿರಾಶವಾದದತ್ತ ಹೆಚ್ಚಾಗಿ ವಾಲುವುದನ್ನು ಕೆಲವು ಕವನದಲ್ಲಿ ಕಾಣಬಹುದು. ಕವಿ ತನ್ನ ಆಪ್ತರನ್ನು, ತನ್ನ ಮೆಚ್ಚಿನ ಕವಿಗಳನ್ನು ಸ್ಮರಿಸುತ್ತಾ.... ಕೆಲವೊಂದು ಗೊಂದಲಗಳನ್ನು ಸೃಷ್ಟಿಸಿ ಹಿಂಸೆಯ ನಾಡಾಗುತ್ತಿರುವ ಈ ಸಂದರ್ಭದಲ್ಲಿ ಬೋಧಿಸತ್ವನಾಗುವ ಅಹಿಂಸೆಯ ಹಾದಿಯತ್ತ ಹೊರಳುವುದನ್ನು ಕಂಡಾಗ ಎಲ್ಲೋ ಭರವಸೆಯ ಬೆಳಕನ್ನು ಅರಸುವುದನ್ನು ಈ ಕವನ ಸಂಕಲನದಲ್ಲಿ ಕಾಣಬಹುದು. ಶ್ರೀಪಾದ ಶೆಟ್ಟಿಯವರು

ಕೇವಲ ಕವನ ಬರೆಯುವ ಕವಿಯಾಗಿರದೇ, ಉತ್ತಮ ವಾಗ್ಮಿಯೂ ಹೌದು.ಭಾವಪೂರಿತ ವಿಚಾರಧಾರೆಯಿಂದ ಎಂತವರನ್ನು ಆಕರ್ಷಿಸುವ ವ್ಯಕ್ತಿತ್ವವುಳ್ಳವರು. ಹಾಗೆಯೇ ಸ್ನೇಹತೆಕ್ಕೆಯಲ್ಲಿ ಬಾಚಿಕೊಳ್ಳುವವರು " ಎಂದಿರುವರು.


ಮೊದಲ ಗುರುವು ನೀನು ನಿನಗೆ ವಂದನೆ

ಹೆಜ್ಜೆ ಗತಿಯ ಕಲಿಸಿ ಬೆಳೆಸಿದಾತೆ ನೀನೆ

ಅನ್ನ ನೀಡಿ ಬನ್ನ ಕಳೆದು ನನ್ನ ಪೊರೆದ ಮಾತೆ

ಹಮ್ಮು ಬಿಮ್ಮ ಬಳಿಗೆ ಬರಗೊಡದ ಜೀವದಾತೆ

ಜೇನಿನಂತೆ ಹರಿದೆ ನೀನು ನಿರ್ಮಲ ತರಂಗೆ

ತೌರ ತೊರೆದು ನಮ್ಮ ಮನೆಗೆ ಬಂದ ಪಾವನ ಗಂಗೆ


ಎನ್ನುತ್ತಾ " ಜೀವದಾತೆ " ಕವಿತೆಯಲ್ಲಿ ತನ್ನ ಮಾತೆಯ ಮನಸಾ ನೆನೆದಿರುವರು. ತಾಯಿಯ ತ್ಯಾಗ, ಮಮತೆ , ಪ್ರೀತಿ ಇನ್ನಾರಿಂದಲೂ ಭರಿಸಲಸಾದ್ಯ . ತಾಯಿಗೆ ತಾಯಿಯೇ ಸಾಠಿ. ಬಾಳಿನ ಹಾದಿಯಲಿ ಕಷ್ಟ ನಷ್ಟದ ಪರಿವೇ ಇಲ್ಲದೇ ಎಲ್ಲವೂ ಕರ್ತವ್ಯ ಎಂದೇ ಪರಿಗಣಿಸಿ ಬಂದದ್ದೆಲ್ಲವನೂ ಅನುಭವಿಸಿ ಕುಟುಂಬದ ಏಳ್ಗೆಗಾಗಿ ದುಡಿಯುವ ತಾಯಿ ಒಮ್ಮೊಮ್ಮೆ ಶೋಷಿತರ ಪ್ರತಿನಿಧಿ ಯಾಗುವಳು.ಹೊಗೆಯಿರದ ಹಗೆಯಿರದ ಸದಾ ನಗುವೇ ತುಂಬಿದತಾಯಿ ಒಳಗೊಳಗೇ ಬೆಂಕಿಯಂತೆ

ಬೇಯುತಿರುವದು ಯಾರ ಅರಿವಿಗೂ ಬರುವದಿಲ್ಲ.

ಎಲ್ಲರ ತಾಯಿಯೂ ಒಂದೇ ;

ಅವಳೇ ಬದುಕಿನ ಜೀವದಾತೆ.

ಮೊದಲ ಗುರುವಾದ ತಾಯಿಗೆ ವಂದಿಸುತ್ತಾ, ಅನ್ನ ನೀಡಿ , ಕಷ್ಟಗಳನ್ನೆಲ್ಲಾ ಕಳೆದು ನನ್ನನ್ನು ಪೊರೆದೆ ಎಂದು ಕವಿ ತಾಯಿಯ ನೆನೆದಿರುವರು.


" ಗೋಷ್ಠಿಗೊಂದು ಕವಿತೆ " ಯಲ್ಲಿ ಕವಿಗೋಷ್ಠಿಯ ಕವಿಯ ನೈಜ ಬದುಕಿನ ದುರಂತವನ್ನು ವರ್ಣಿಸುತ್ತಾ


ರಟ್ಟೆ ಮುರಿ ದುಡಿದರೂ ಹಸಿದ ಹೊಟ್ಟೆಗಳಿಗಿಲ್ಲ ಆಹಾರ

ಸಂಜೆ ದಣಿದು ಮನೆಗೆ ಬಂದಾಗ ಸಂಕಷ್ಟಗಳ ಗೋಷ್ಠಿ


ಎನ್ನುತ್ತಾ ಕವಿಯ ಅಂತರಂಗದ ಒಳ ಮರ್ಮವನ್ನು ವಿಷದೀಕರಿಸಿರುವರು.ನೀರು ಹರಿಯಲಿಲ್ಲ ಸುರಿದದ್ದು ಬೆವರು ಎನ್ನುತ್ತಾ ಬದುಕಿನ ಬೇಗುದಿಗಳಿಗೆ ಕಣ್ಣಾಗಿರುವರು . ವೇದಿಕೆಯಲ್ಲಿ ಹಾರ ತುರಾಯಿ, ಅಭಿನಂದನೆಗಳ ಸರಮಾಲೆಯ ಖುಷಿಯ ಕವಿಗೆ ಮನೆಗೆ ಬಂದೊಂಡನೆ ಯಕ್ಷಗಾನದ ರಾಜನಂತೆ ಎಲ್ಲವೂ ಅರಿವಾಗಿ , ಹೆಂಡತಿಯ ತಲೆಶೂಲೆ, ಅವ್ವನ ಕಫದ ರಕ್ತ, ಅಪ್ಪನ ಹಾಸಿಗೆಯ ಉಸಿರು , ಹಸಿವಿನ ವಿಷ ಘಳಿಗೆ.... ಹೀಗೆ ; ಅಲ್ಲಿಯ ಬರಹವೇ ಬೇರೆ ಇಲ್ಲಿಯ ಬದುಕೇ ಇನ್ನೊಂದು !


ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಜನಪರ ಮನಸ್ಸಿನ ಎಚ್.ಬಿ.ರವೀಂದ್ರ ಈ ಹೊತ್ತಿಗೆಯ ಬೆನ್ನುಡಿಯಲ್ಲಿ " ಡಾ. ಶ್ರೀಪಾದ ಶೆಟ್ಟರ ಈ ಸಂಕಲನದ ಬಹಳಷ್ಟು ಕವಿತೆಗಳು ಸತ್ಯದ ಸಾಕ್ಷಾತ್ಕಾರದ ಅನುಸಂಧಾನಕ್ಕೆ ಮುಖಾಮುಖಿಯಾಗಿ ಪ್ರತಿಕ್ರಿಯಿಸುವ ಪರಿಯೇ ಅಸೀಮವಾಗಿದೆ. ಆಧುನಿಕ ಜೀವನದ ಭಂಡತನಕ್ಕೆ ಕವಿ ಕನಲಿ ಭಂಗ ಹೊಂದಿದ್ದಾರೆ. ಆದರೆ ಆ ಅನುಭವದ ಅಭಿವ್ಯಕ್ತಿಯಲ್ಲಿ ಮಾತ್ರ ಕವಿ ಎಂದೂ ತಾಳ್ಮೆ ಕಳೆದುಕೊಳ್ಳದೇ ಸಹನೆಯನ್ನು ಕಾಯ್ದು

ಕೊಂಡಿರುವದು ಈ ಕವಿತೆಗಳ ಹೆಚ್ಚುಗಾರಿಕೆ. ಶ್ರೀಪಾದರ ಕವಿತೆಗಳು ಎಂದೂ ವೇಷ ಕಟ್ಟಲಾರವು. ಆದ್ದರಿಂದಲೇ ಇಲ್ಲಿಯ ಕವಿತೆಗಳು ಆಪ್ಯಾಯಮಾನವಾಗಿ ಮನಸ್ಸನ್ನು ಹಿಡಿದಿಡುತ್ತದೆ " ಎಂದಿರುವರು.


ಅಂಕೋಲೆಯಲ್ಲೊಬ್ಬ ಪುಣ್ಯಾತ್ಮ ದಿನಕರ ದೇಸಾಯಿ

ಯಾರಿಂದಲೂ ಆತ ಬಯಸಲಿಲ್ಲ ಶಾಲು ಶಹನಾಯಿ

ಕಾಡಿನಾ ಜಿಲ್ಲೆಯಲಿ ಅಕ್ಷರದ ದೇಗುಲಗಳ ಕಟ್ಟಿ

ನೀಡಿದನು ನಾಡಿನ ಲಕ್ಷಾಂತರ ಜನಕೆ ಜೀವನದ ರೊಟ್ಟಿ


ಎಂದು " ಹಾವಳಿ ಮಂಜ " ಕವಿತೆಯಲ್ಲಿ , ಉತ್ತರ ಕನ್ನಡದ ಶೈಕ್ಷಣಿಕ ರೂವಾರಿ , ಸಾಮಾಜಿಕ ಕಾರ್ಯಕರ್ತ, ಕವಿ , ಜನಪರ ಸಂಘಟಕ ಡಾ. ದಿನಕರ ದೇಸಾಯಿ ಅವರ ಕುರಿತು ಬರೆದು , ಹದ್ದು ಪಾರಿಗೂ ಹೆದರಲಿಲ್ಲ ಅಂಕೋಲೆಯ ಹುಂಜ ಎಂದು ವರ್ಣಿಸಿರುವರು. ಕಡಲು, ಕಾಡಿನಿಂದ ತುಂಬಿದ ಈ ಉತ್ತರ ಕನ್ನಡಕೆ ದಿನಕರರು ' ಕೆನರಾ ವೆಲ್ಫೇರ್ ಟ್ರಸ್ಟ್ ' ನ ಮುಖಾಂತರ ಶೈಕ್ಷಣಿಕ ಕ್ರಾಂತಿಯನ್ನೇ ಮೊಳಗಿಸಿದರು. ರಸ್ತೆಗಳಿಲ್ಲದ ಊರಿನಲ್ಲಿ ಹೈಸ್ಕೂಲ್ ಪ್ರಾರಂಭಿಸಿ ದೀನ, ದಲಿತ , ಕೂಲಿಕಾರ ಮಕ್ಕಳಲ್ಲೂ ಅಕ್ಷರದ ಬೀಜ ಬಿತ್ತಿದರು ; ಲಕ್ಷಾಂತರ ಜನಕೆ ಜೀವನದ ರೊಟ್ಟಿಯಾದರು.

ಆಳುವವರ ಒಣ ದರ್ಪವನು ಮುರಿದು , ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಗೆ ಕಣ್ಣಾದರು ಎನ್ನುತ್ತಾ ದಿನಕರರನ್ನು ಕವಿ ನೈಜತೆಯಲಿ ಮನ ತುಂಬಿರುವರು.


ಸಂಕಲನದ ಕವಿ ಡಾ. ಶ್ರೀಪಾದ ಶೆಟ್ಟರು " ನನ್ನ ನುಡಿ " ಎಂಬ ತಮ್ಮ ಮಾತಿನಲಿ " ಬದುಕು ನನಗೆ ತೋರಿದ, ನಾನು ನನ್ನ ಮಿತಿಯಲ್ಲಿ ಕಂಡ , ಹೀಗೆ ಕಾಣುತ್ತಿರುವಾಗ, ನನ್ನ ಕಲ್ಪನೆ, ಸೃಜನಶೀಲತೆಗೆ ದಕ್ಕಿದ ಸಂಗತಿಗಳನ್ನು ಇಲ್ಲಿ ನಿರೂಪಿಸಿದ್ದೇನೆ. ಇದನ್ನು ಓದಿ ನಿಮ್ಮ ಬಿಚ್ಚುಮನದ ಮಾತುಗಳನ್ನು ನನ್ನೊಂದಿಗೆ ಹಂಚಿಕೊಂಡರೆ ನಾನು ಕವಿತೆ ಬರೆದದ್ದು ಕಾಯಕವಾಗುತ್ತದೆ " ಎಂದಿರುವರು.


" ಪರಾಕು ಕವಿಯ ಸ್ವಗತ " ದಲ್ಲಿ


ಒಂದೊಂದೇ ಮೆಟ್ಟಿಲೇರಿ ನೀವು

ಆಕಾಶಕ್ಕೆ ಏಣಿ ಇಡುವಾಗ ಬೋಪರಾಕ್

ಎಂದು ನಾಲಿಗೆಯ ದುಡಿ ಮಿಡಿದಿದ್ದೇನೆ.....


ಎನ್ನುತ್ತಾ ,


ಕರುಣೆ ಇರಲಿ ಸ್ವಾಮಿ

ಕೇಕು ತಿನ್ನುವ ನೀವು ಎಸೆದು ಬಿಡಿ

ಬ್ರೆಡ್ಡಿನಾ ತುಂಡು


ಎನ್ನುವಲ್ಲಿ ದುಡಿಯುವ ದುಡಿಸಿಕೊಳ್ಳುವವರ ಮತ್ತು ಭಟ್ಟಂಗಿಗಳ ಬದುಕಿನ ಜೀವಂತ ಚಿತ್ರಣ ಮೂಡಿ ಬಂದಿದೆ. ಸೋಲು ಗೆಲುವಿನ ಮೆಟ್ಟಿಲು , ನೀವು ಬಡಬಗ್ಗರ ಅನ್ನದ ಬಟ್ಟಲು ಎಂಬ ಮುಖಸ್ತುತಿಯ ಹಿಂದೆ ಹೊಗಳು ಭಟ್ಟಂಗಿಗಳ ಆಲಾಪವಿದೆ .


ತಮಗೆ ವಿದ್ಯೆ ಕಲಿಸಿದ , ಜಗದಲಿ ಬದುಕಲು ಪಾಟ ಹೇಳಿಕೊಟ್ಟ ಗುರುಗಳಾದ ಪ್ರೊ. ಜಿ.ಎಸ್. ಅವಧಾನಿ ಯವರನ್ನು ನೆನೆಯುತ್ತಾ , ' ಕೊಡುವುದೇನು ಕೊಂಬುದೇನು ಒಲವು ಸ್ನೇಹ ಪ್ರೇಮ ' ಎಂಬ ನಂಬಿಕೆಯ ಡಾ. ಶ್ರೀಪಾದ ಶೆಟ್ಟಿ ಸರ್ ನನಗೆ ಮತ್ತು ನನ್ನಂತಹ ಎಷ್ಟೋ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರದ ಬೀಜ ಬಿತ್ತಿದ್ದು ಈಗ ಈ ಖುಷಿಗೆ ಸಾಕ್ಷಿಗೆ ಕಣ್ಣರಳಿಸಿ ನೋಡುವ ಸರ್ ಅವರ ಕವಿತೆಗಳಲ್ಲಿ ಬಡತನದ ,ಹಸಿವಿನ , ನೋವಿನ ಸ್ಪಂದನವಿದೆ. ಇವೆಲ್ಲವೂ ಸತ್ಯದ ದೀಪದ ಸಾಲುಗಳಾಗಿ ಮೇಲ್ನೋಟಕ್ಕೆ ಬೆಳಕಂತೆ ಕಂಡರೂ ಒಳಗೊಳಗೇ ಜ್ವಾಲೆಯ ಹೊಗೆ ಕಾರುತ್ತಲೇ

ಇರುತ್ತದೆ. ಅವರ ಜನಪರ ಮಾನವೀಯ ಧೋರಣೆಗೆ, ಮನುಷ್ಯ ಪ್ರೀತಿಗೆ ಶುಭಕೋರಿ ಅಭಿನಂದಿಸುವೆ.


ಪ್ರಕಾಶ ಕಡಮೆ

ಹುಬ್ಬಳ್ಳಿ.

82 views0 comments

Comments


bottom of page