top of page

ಉಧ್ವಸ್ತಗೊಂಡ ಧ್ಯಾನ   

ಸಾಮಾಜಿಕ ಜಾಲತಾಣಗಳ ಈ ದಿನಮಾನಗಳ ದೆಸೆಯಿಂದ ಸಾಹಿತ್ಯವು ಸಮೃದ್ಧ ಫಸಲಿನತ್ತ ಮುಖ ಮಾಡಿರುವಂತೆ ಕಾಣುತ್ತಿದೆ. ಬೆಳೆ ಹುಲುಸಾದಂತೆ ಕಳೆಯ ಪ್ರಮಾಣವೂ ಹೆಚ್ಚಾಗುತ್ತದೆ. ಇಲ್ಲಿಯೇ ಲಾಟರಿ ಇಲ್ಲಿಯೇ ಬಹುಮಾನ ಎಂಬಂತೆ - ಈ ಸಿದ್ಧ ಮಾಧ್ಯಮಗಳ ದೆಸೆಯಿಂದಾಗಿ ತಾನು ಬರೆದುದೆಲ್ಲವೂ ಸಾಹಿತ್ಯ ಎಂಬ ಭ್ರಮೆಗೆ ಒಳಗಾಗುವುದು ಮತ್ತು ಚರ್ಚೆ ಸಂವಾದಗಳಿಂದ ವಿಮುಖವಾಗಿ ತಮ್ಮದೇ ಭಟ್ಟಂಗಿ ಸಮೂಹಗಳನ್ನು ಕಟ್ಟಿಕೊಂಡು ಸ್ವಪ್ರತಿಷ್ಠೆ ಮೆರೆಯುವುದು ಆತಂಕಕಾರಿಯಾದ ವಿದ್ಯಮಾನವಾಗಿ ಪರಿಣಮಿಸುತ್ತಿದೆ. ಭಟ್ಟಂಗಿ ಸಮೂಹ ಹೆಚ್ಚಾದಷ್ಟೂ ವಿರೋಧಿಗಳ ಗುಂಪು ದೊಡ್ಡದಾಗುತ್ತ ಹೋಗುತ್ತದೆ! ದಿನ ಬೆಳಗಾಗುತ್ತಿದ್ದಂತೆ ಯಾರಿಗೂ ಯಶಸ್ಸು ಸಿಕ್ಕುವುದಿಲ್ಲ; ಖ್ಯಾತಿ ಬರುವುದಿಲ್ಲ. ಅದರ ಹಿಂದೆ ಅಪಾರ ಪರಿಶ್ರಮ - ಸಾಧನೆ ಇರಬೇಕಾಗುತ್ತದೆ. ಸಾಹಿತ್ಯ ಬರೆಯುವ ಮುನ್ನ ಹಿಂದಿನವರು ಬರೆದ ಒಳ್ಳೆಯ ಸಾಹಿತ್ಯ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಅಭಿವ್ಯಕ್ತಿ ವಿಧಾನಗಳನ್ನು ತಿಳಿದುಕೊಳ್ಳಬೇಕು. ಭಾಷೆಯ ಉಪಯೋಗ ತಿಳಿದಿರಬೇಕು. ಶಬ್ದಗಳ ಅರ್ಥ, ಅವುಗಳ ವಿವಿಧ ಛಾಯೆಗಳು, ಬಳಕೆ, ಅವುಗಳ ಭಾರ ವಜನು ಧ್ವನಿಗಳ ಬಗ್ಗೆ ಅಭ್ಯಸಿಸಬೇಕು. ಸಂಕ್ಷಿಪ್ತವಾಗಿ ಪರಿಣಾಮಕಾರಿಯಾಗಿ ಬರೆಯುತ್ತ ತನ್ನದೇ ಶೈಲಿಯನ್ನು ರೂಪಿಸಿಕೊಳ್ಳಬೇಕು. ಇದುವರೆಗೆ ಬೇರಾರೂ ಹೇಳಿದಂತಿರದೆ, ಸ್ವಂತ ಆಲೋಚನೆಗಳನ್ನು ವಿಶಿಷ್ಟವಾಗಿ ಹೇಳಬೇಕು. ವಸ್ತುವಿಷಯಗಳು, ಹೇಳುವ ಕ್ರಮ, ಭಾಷೆ ಹೊಸತನದಿಂದ ಕೂಡಿರಬೇಕು. ಅದರಲ್ಲಿ ಒಂದು ಪ್ರಭೆ, ನಾವೀನ್ಯ ಇರಬೇಕು. ಹಿಂದಿನವರು ಹೇಳಿದಂತೆಯೇ ಹೇಳುವುದಾದರೆ, ಹೊಸತೇನೂ ಇರದಿದ್ದರೆ, ಕಬ್ಬಿನ ಒಣ ಜಲ್ಲೆಯನ್ನು ಯಾರು ತಾನೇ ಜಗಿಯುತ್ತಾರೆ?  ಹಿಂದೆ ತಾವು ಬರೆದ ಸಾಹಿತ್ಯ ಕೃತಿ ಮುಂದೆ ಇರುತ್ತಿತ್ತು, ಸಾಹಿತಿ ಹಿಂದೆ ಇರುತ್ತಿದ್ದ. ಆದರೆ ಇವತ್ತು ಸಾಹಿತಿ ಮುಂದೆ, ಸಾಹಿತ್ಯ ಕೃತಿ ಹಿಂದೆ ಎಂಬಂತಾಗಿದೆ! ಅಂದರೆ ಕವಿ, ಸಾಹಿತಿಯಾದವನು ಸ್ವ ಜಾಹಿರಾತಿನಲ್ಲಿ ಕಾಲ ಕಳೆಯುವ ಸ್ಥಿತಿ ಬಂದಿದೆ! ಕವಿ-ಸಾಹಿತಿಗಳಾಗಬೇಕಾದರೆ ಕಾವ್ಯಸೂಕ್ಷ್ಮಗಳನ್ನು ಅಭ್ಯಸಿಸಬೇಕಾಗುತ್ತದೆ. ತೆರೆದ ಮನಸ್ಸಿನಿಂದ ವಿಚಾರ ವಿನಿಮಯ ಮಾಡುತ್ತ ಸಂವಾದ-ಚರ್ಚೆ ನಡೆಸಬೇಕಾಗುತ್ತದೆ. ಕಮ್ಮಟಗಳಲ್ಲಿ ಭಾಗವಹಿಸಬೇಕಾಗುತ್ತದೆ. ತನ್ನ ರಚನೆಗಳನ್ನು ಬೇರೆ ಉತ್ತಮ ರಚನೆಗಳೊಂದಿಗೆ ಹೋಲಿಸಿ ನೋಡಬೇಕಾಗುತ್ತದೆ. ತಿಳಿದವರ ಸಂಸರ್ಗ ಮಾಡಬೇಕಾಗುತ್ತದೆ. ಮಾರ್ಗದರ್ಶನ ತೆಗೆದುಕೊಳ್ಳಬೇಕಾಗುತ್ತದೆ. ತಾಳ್ಮೆ ಸಂಯಮ ಇರಬೇಕಾಗುತ್ತದೆ. ಒಳ್ಳೆಯ ಸಾಹಿತ್ಯ ಮಾತ್ರ ನಾಲ್ಕು ಕಾಲ ಉಳಿಯುವುದರಿಂದ ಸಾಹಿತ್ಯ ರಚನೆಯ ಕಡೆಗೆ ಗಮನ ಇರಬೇಕೇ ಹೊರತು ಬೇರೆ ತತ್ಕಾಲೀನ ಆಕರ್ಷಣೆಗಳತ್ತ ಅಲ್ಲ. ಕಾಲಿಕವಾದ ವ್ಯಾಮೋಹಗಳಿಗೆ ಬಲಿ ಬಿದ್ದು ಅವುಗಳ ಬೆನ್ನು ಹತ್ತಿದರೆ ಸಾಹಿತ್ಯ ಮುಳುಗುವುದು ನಿಶ್ಚಯ! ಅಲ್ಲದೆ ಅಪಹಾಸ್ಯಕ್ಕೂ ಈಡಾಗಬೇಕಾಗುತ್ತದೆ. ಏಕಾಗ್ರತೆಯನ್ನು - ಧ್ಯಾನವನ್ನು ಭಂಗಗೊಳಿಸುವ ಕೆಲಸಗಳಿಗೆ ಕೈಹಾಕಿದರೆ ಸಾಹಿತ್ಯವೂ ಹಾಳು; ಸಾಹಿತ್ಯಕ್ಷೇತ್ರವೂ ಹಾಳು. ಸಾಮಾಜಿಕ ಜಾಲತಾಣಗಳು ಒಂದು ಮಾಧ್ಯಮವಾಗಿ ಸಂವಹನಕ್ಕೆ (communication) ಕ್ಷಿಪ್ರ ವೇದಿಕೆಯನ್ನು ಒದಗಿಸಿ ಕೊಟ್ಟಿರುವುದು ನಿಜ; ಆದರೆ ಉಳಿದ ಸಂಗತಿಗಳಿಗೆ ಈ ಮಾಧ್ಯಮವನ್ನು ಬಳಸುವಾಗ ಎಚ್ಚರಿರಬೇಕು. ಪರಿಶ್ರಮ ಅಪೇಕ್ಷಿಸುವ – ಧ್ಯಾನದಿಂದ ಮೇಲೇರುತ್ತ ಹೋಗಬೇಕಾದ ಸಾಧನೆಯ ಹಾದಿಗಳಿಗೆ ಅವು ಅಷ್ಟೇ ಹಾನಿ ಉಂಟುಮಾಡುತ್ತಿರುವುದು ನಿಜ. ಸಾಹಿತ್ಯ ರಚನೆಗೆ ಬೇಕಾದ ಏಕಾಂತತೆ ಮತ್ತು ಧ್ಯಾನಸ್ಥಿತಿಯನ್ನು ಅವು ಭಂಗಗೊಳಿಸಿ ಉಧ್ವಸ್ತಗೊಳಿಸುತ್ತಿರುವುದು ನಿಜ. ಸದಾ ಲೋಕಾಂತವಾದರೆ ಏಕಾಂತ ಯಾವಾಗ? ಹಾಗೆಂದು ಮನಸ್ಸು ಮಾಡಿದರೆ ಇಲ್ಲಿ ತೊಡಗಿಕೊಂಡಿರುವವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಒಳ್ಳೆಯ ಬೆಳೆ ತೆಗೆಯಲು ಇದನ್ನೊಂದು ವೇದಿಕೆಯನ್ನಾಗಿ ಬಳಸಕೊಳ್ಳಲು ಸಾಧ್ಯ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳನ್ನು ಪರಿಚಯ ಮಾಡಿಸುವ, ಆಳವಿಮರ್ಶೆ ಮತ್ತು ತಾತ್ತ್ವಿಕ ಸಂಗತಿಗಳ ಚರ್ಚಾ ವೇದಿಕೆಯಾಗಿ ರೂಪಿಸಿ ತಾವು ಬೆಳೆಯುತ್ತ, ಕಿರಿಯರಿಗೆ ಮಾರ್ಗದರ್ಶನ ಮಾಡುವ ವೇದಿಕೆಗಳನ್ನಾಗಿ ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಕಾಲಕಾಲಕ್ಕೆ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಮ್ಮಟಗಳನ್ನು ನಡೆಸುವುದು ಮತ್ತು ತಿಳಿದವರಿಂದ ಮಾರ್ಗದರ್ಶನ ಪಡೆಯುವ ಕೆಲಸಗಳಿಗೆ ಕೈಹಾಕಿದರೆ ಒಳ್ಳೆಯ ಸಾಹಿತ್ಯ ನಿರ್ಮಾಣಕ್ಕೆ ಒಂದು ಜಗಲಿಯಾಗಿ ಒದಗಿ ಬರಬಹುದು. ಪ್ರತಿಯೊಂದಕ್ಕೂ ಮೆಚ್ಚುಗೆ ಪಡೆಯುವ ಅಪೇಕ್ಷೆ ಸಾಧುವಲ್ಲ. ಮೆಚ್ಚುಗೆ ಬಂದಾಗ ಉಬ್ಬದೆ, ವಿಮರ್ಶೆಗಳು ಬಂದಾಗ ಕುಗ್ಗದೆ ಅವನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವ ಇದ್ದರೆ ಬೆಳವಣಿಗೆ ಸಾಧ್ಯ. ಓದು ಪರಿಶ್ರಮಗಳಿಗೆ ಸಾಟಿಯಾದುದು ಬೇರಾವುದೂ ಇಲ್ಲ. ಸಾಹಿತ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ ಕವಿಗೆ ಶಬ್ದಕ್ಕೆ ಅಂಜುವ ಮನೋಭಾವ ಇರಬೇಕು. ಅಂದರೆ ಮಾತಾಡುವುದು ಬರೆಯುವುದು ಚಟ ಆಗಬಾರದು. ಪ್ರತಿಯೊಂದು ಮಾತಿನ ಹಿಂದೆ ಒಂದು ಅರ್ಥ ಉದ್ದೇಶ ಇರಬೇಕು. ಶಬ್ದಗಳನ್ನು ಎಚ್ಚರಿಕೆ ಹಾಗೂ ಸಂಯಮದಿಂದ ಬಳಸಬೇಕು. ಸಾಹಿತ್ಯ ಎಂಬುದು ಶಬ್ದಗಳ ಮೂಲಕ ಅನಾವರಣಗೊಳ್ಳಬೇಕಾದ ಒಂದು ಕಲೆ. ಅದರ ಒಳಗಡೆ-ಹೊರಗಡೆ - ಸಾಲುಗಳ ನಡುವೆ - ಅರ್ಥ, ನಾದ, ಅನುಭವ, ಸೌಂದರ್ಯ ಹೊಮ್ಮುತ್ತ ಇಡೀ ತಲೆಮಾರಿನ ಜೀವನ ಕಾಣುತ್ತಿರಬೇಕು. ಕಲೆ ಯಾವತ್ತೂ ವಾಚ್ಯವಾಗಿರುವುದಿಲ್ಲ. ಸೂಚ್ಯತೆ ಅದರ ಗುಣ. ಧ್ವನಿಪೂರ್ಣವಾಗಿದ್ದಷ್ಟು ಅರ್ಥಪೂರ್ಣವಾಗಿದ್ದಷ್ಟು ಅದರ ಬೆಲೆ ಮತ್ತು ಮೌಲ್ಯ ಹೆಚ್ಚು.      -ಡಾ. ವಸಂತಕುಮಾರ ಪೆರ್ಲ.29 views0 comments

Comments


bottom of page