ಡಾ. ಪೆರ್ಲರ ವಾರಾಂಕಣ: 17
*ವಸಂತೋಕ್ತಿ*
ಹಿಂದಿನ ಕಾಲದಲ್ಲಿ ಉಡುಗೆ ತೊಡುಗೆಗಳು ಸ್ಥಳೀಯ ಆಚಾರ ವಿಚಾರ ಸಂಸ್ಕೃತಿಗೆ ಅನುಗುಣವಾಗಿ ಇರುತ್ತಿದ್ದುದನ್ನು ನೋಡುತ್ತೇವೆ. ಕೇರಳದವರು ಯಾರು, ಕರ್ನಾಟಕದವರು ಯಾರು, ಪಂಜಾಬಿಗಳು ಯಾರು, ನೇಪಾಳಿಗರು ಯಾರು ಎಂಬುದನ್ನು ಅವರ ಉಡುಗೆ ತೊಡುಗೆ ನೋಡಿಯೇ ಹೇಳಬಹುದಾಗಿತ್ತು. ಅದು ಪ್ರಾದೇಶಿಕ ವೈಶಿಷ್ಟ್ಯ. ಅದನ್ನು ಉಡುಗೆ ಜಾನಪದ ಎಂದು ಹೇಳಬಹುದು.
ಇದರ ಇನ್ನೊಂದು ಭಾಗವಾಗಿ ಜಾತಿ ಮತ್ತು ವೃತ್ತಿ ಆಧಾರಿತವಾಗಿಯೂ ಉಡುಗೆಯ ಕ್ರಮ ಮತ್ತು ಶೈಲಿಯಲ್ಲಿ ವ್ಯತ್ಯಾಸಗಳು ಇರುತ್ತಿದ್ದವು. ಬ್ರಾಹ್ಮಣ ಉಡುವ ಉಡುಗೆ, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಉಡುವ ಉಡುಗೆಗಳಲ್ಲಿ ವ್ಯತ್ಯಾಸ ಇರುತ್ತಿತ್ತು. ಉದಾಹರಣೆಗೆ ಕಚ್ಚೆ ಹಾಕುವ ಕ್ರಮವೊಂದರಲ್ಲೇ ಎಷ್ಟೊಂದು ವೈವಿಧ್ಯ ವ್ಯತ್ಯಾಸ ಇರುತ್ತಿತ್ತು! ಆಯಾ ವೃತ್ತಿಗೆ ಅನುಗುಣವಾಗಿ ಜನಪದರಲ್ಲಿ ಉಡುಗೆ ನಿರ್ಧರಿತವಾಗುತ್ತಿತ್ತು.
ಹೀಗೆ ಪ್ರಾದೇಶಿಕ ವೈಶಿಷ್ಟ್ಯ ಮತ್ತು ವೃತ್ತಿವೈಶಿಷ್ಟ್ಯಗಳಿಂದಾಗಿ ಜನಪದರಲ್ಲಿ ಉಡುಗೆ ಸಂಪ್ರದಾಯ ವಿಭಿನ್ನವಾಗಿ – ವೈಶಿಷ್ಟ್ಯಪೂರ್ಣವಾಗಿ ಬೆಳೆದು ಬಂದುದನ್ನು ಕಾಣುತ್ತೇವೆ.
ಪ್ರಾದೇಶಿಕ ವೈಶಿಷ್ಟ್ಯದಲ್ಲಿ ಹವಾಮಾನವು ನಿರ್ಧಾರಕ ಅಂಶ ಮತ್ತು ವೃತ್ತಿವೈಶಿಷ್ಟ್ಯದಲ್ಲಿ ಸೌಲಭ್ಯವು ನಿರ್ಧಾರಕ ಅಂಶವಾಗಿತ್ತು. ಉಷ್ಣಪ್ರದೇಶದಲ್ಲಿ ಕಡಿಮೆ ಬಟ್ಟೆ ಉಡುತ್ತಿದ್ದರು ಮತ್ತು ಶೀತಪ್ರದೇಶದಲ್ಲಿ ದಪ್ಪನೆಯ ಹೆಚ್ಚು ಬಟ್ಟೆಗಳನ್ನು ಉಡುತ್ತಿದ್ದರು. ಉಷ್ಣಪ್ರದೇಶವಾದ, ದಕ್ಷಿಣ ಭಾರತದ ನಮ್ಮ ಜನಪದ ನಾಯಕ ಹನುಮಂತ ಕೇವಲ ಲಂಗೋಟಿ ತೊಟ್ಟು ಕಾಣಿಸಿಕೊಳ್ಳುವಲ್ಲಿ ಉಡುಗೆ ಜಾನಪದದ ಹೊಳವೊಂದನ್ನು ಕಾಣಬಹುದು.
ಜನಪದರ ಈ ವಿಭಿನ್ನ ವೈಶಿಷ್ಟ್ಯ ನಗರ ಜಾನಪದದಲ್ಲಿ ಬೇರೆಯೇ ಆಗಿದೆ. ಕೈಗಾರಿಕೀಕರಣ, ನಗರೀಕರಣ, ಆಧುನೀಕರಣಗಳ ಕಾರಣದಿಂದ ಪ್ರಾದೇಶಿಕ ವೈಶಿಷ್ಟ್ಯಗಳು ಕಣ್ಮರೆಯಾಗಿ ಉಡುಪಿನಲ್ಲಿ ಏಕರೂಪತೆ ಕಾಣಿಸಿಕೊಂಡಿದೆ. ಗಂಡಸರು ಪ್ಯಾಂಟ್ – ಶರ್ಟ್ ಮತ್ತು ಹೆಂಗಸರು ಚೂಡಿದಾರ ತೊಡುವುದು ಈಗ ಸಾಮಾನ್ಯ ಮತ್ತು ಸಾರ್ವತ್ರಿಕವಾಗಿದೆ. ಪಂಚೆ – ಶಾಲು ಮತ್ತು ಸೀರೆ - ರವಿಕೆ ಕೇವಲ ಸಾಂಪ್ರದಾಯಿಕ ಸಮಾರಂಭಗಳಿಗೆ ಸೀಮಿತಗೊಂಡಿದೆ. ಮನೆಯಲ್ಲಿ ದಿನನಿತ್ಯದ ಉಡುಗೆಯಾಗಿ
(casuals) ಗಂಡಸರು ಬರ್ಮುಡಾ ಚಡ್ಡಿ ಮತ್ತು ಸ್ತ್ರೀಯರು ನೈಟಿ - ಗವನು ಸುರಿದುಕೊಳ್ಳುವುದು ವ್ಯಾಪಕವಾಗಿ ಹಬ್ಬಿಬಿಟ್ಟಿದೆ.
ನಗರ ಜನಪದರಲ್ಲಿ ಈಗ ಜಾತಿ ಮತ್ತು ವೃತ್ತಿ ಉಡುಗೆಯ ವೈಶಿಷ್ಟ್ಯವಾಗಿ ಉಳಿದಿಲ್ಲ. ಆದರೆ ಕುತೂಹಲದ ಬೆಳವಣಿಗೆಯಾಗಿ ಸಮವಸ್ತ್ರ (uniform) ಕಾಣಿಸಿಕೊಂಡಿದೆ. ಸೈನಿಕರಿಗೆ, ಪೊಲೀಸರಿಗೆ, ಕಾರ್ಖಾನೆ ನೌಕರರಿಗೆ, ಶಾಲಾಮಕ್ಕಳಿಗೆ ಮತ್ತು ಇನ್ನೂ ಹಲವು ಕಡೆ ಸಮವಸ್ತ್ರ ಬಳಕೆಗೆ ಬಂದಿರುವುದು ಉಡುಗೆ ಜಾನಪದದಲ್ಲಿ ವಿಶೇಷ ಅಧ್ಯಯನಕ್ಕೆ ಅರ್ಹವಾದ ವಿಷಯ.
ಜನಪದರಲ್ಲಿ ಶೋಕಿಗೆ (fashion) ಅಷ್ಟೊಂದು ಪ್ರಾಮುಖ್ಯವಿರಲಿಲ್ಲ. ಅವರಿಗೆ ಮಾನ - ಮೈಮಂಡೆ ಮುಚ್ಚಿದರೆ ಸಾಕು. ಚಂದ ಕಟ್ಟಿಕೊಂಡು ಏನು ಮಾಡುವುದು ಎಂಬ ಧೋರಣೆ ಇತ್ತು. ಸೀರೆ, ಪಂಚೆ, ರಗ್ಗು, ಹೊದಿಕೆ, ಶಾಲು ಮೊದಲಾದ ಬಟ್ಟೆಗಳಲ್ಲಿ ಬಣ್ಣ ಹಾಗೂ ನೂಲಿನಲ್ಲಿ ವ್ಯತ್ಯಾಸ ಇರುತ್ತಿತ್ತೇ ಹೊರತು ಶೋಕಿ ಇರಲಿಲ್ಲ. ಕೈಮಗ್ಗದಲ್ಲಿ ಅಗತ್ಯಕ್ಕೆ ಬೇಕಾದಷ್ಟು ತಯಾರಿಸಿಕೊಳ್ಳುತ್ತಿದ್ದರು.
ಯಂತ್ರಗಳು ಆವಿಷ್ಕಾರವಾದ ಬಳಿಕ ವಸ್ತ್ರೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿ ಫ್ಯಾಶನ್ ಎಂಬ ಹೊಸ ದೃಷ್ಟಿಕೋನ ಹುಟ್ಟಿಕೊಂಡಿತು. ಸಂಚಾರ ಸಂಪರ್ಕದ ಆಧಿಕ್ಯ, ಮಾಧ್ಯಮಸ್ಫೋಟ ಮತ್ತು ಕೊಳುಕೊಡೆ ಹೆಚ್ಚಾದಂತೆ ಇವತ್ತು ಉಡುಗೆಯ ವಿಚಾರದಲ್ಲಿ ಇಡೀ ವಿಶ್ವವೇ ಒಂದು ಜನಪದ ಆಗಿರುವಂತೆ ತೋರುತ್ತದೆ. ಉದಾಹರಣೆಗೆ ಮಕ್ಕಳ ಸಮವಸ್ತ್ರದ ಜೊತೆಗೆ ಕಾಣಿಸಿಕೊಳ್ಳುವ ಶೂಸ್ ಶೀತಪ್ರದೇಶಕ್ಕೆ ಸಂಬಂಧಿಸಿದ್ದು. ಉಷ್ಣಪ್ರದೇಶದವರಾದ ನಾವು ಅದನ್ನು ಬಲವಂತವಾಗಿ ಮಕ್ಕಳಿಗೆ ತೊಡಿಸುವಂತಾಗಿದೆ!
ನಾನು ಚಿಕ್ಕವನಿದ್ದಾಗ ಹಳ್ಳಿಗಳಲ್ಲಿ ಕೂಲಿ ಕೆಲಸದ ಜನರು ಪಂಚೆ ಉಡುತ್ತಿದ್ದರು. ಈಗ ಅವರು ಬರ್ಮುಡಾ ಅಥವಾ ಪ್ಯಾಂಟ್ ತೊಟ್ಟುಕೊಂಡು ಕೆಲಸಕ್ಕೆ ಬರುವುದನ್ನು ಕಾಣುತ್ತಿದ್ದೇನೆ.
ಬಹುಶಃ ಇನ್ನೊಂದು ನೂರು ವರ್ಷಗಳ ಬಳಿಕ ಪ್ರಾದೇಶಿಕ ವೈಶಿಷ್ಟ್ಯಗಳೆಲ್ಲ ಕಣ್ಮರೆಯಾಗಿ ಉಡುಗೆಯ ವಿಚಾರದಲ್ಲಿ ಏಕರೂಪತೆ ಬರಬಹುದೆಂದು ತೋರುತ್ತದೆ. ಇವತ್ತಿನ ಬಹುಮಂದಿ ನವೋದಿತ ಮಹಿಳೆಯರಿಗೆ ಸೀರೆ ಉಡುವುದು ಹೇಗೆಂದು ಗೊತ್ತಿಲ್ಲ! ಪುರುಷರಿಗೆ ಪಂಚೆ ಸೊಂಟದಲ್ಲಿ ನಿಲ್ಲುವುದಿಲ್ಲ! ಮದುವೆ ಮುಂಜಿ ಮುಂತಾದ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸೀರೆ ಉಡಿಸಲು ಮತ್ತು ಪಂಚೆ ಸುತ್ತಿಸಲು ಮೇಕ್ – ಅಪ್ ಡಿಸೈನರ್ಸ್ ಎಂಬ ಹೊಸ ಉದ್ಯೋಗಸ್ಥರು ಹುಟ್ಟಿಕೊಂಡಿದ್ದಾರೆ!
ಉಡುಗೆ ಜಾನಪದದಲ್ಲಿ ಬಣ್ಣ ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ. ಬಣ್ಣದ ಬಗ್ಗೆ ಭಾರತೀಯರಲ್ಲಿರುವ ಚಿಂತನೆ ಅನ್ಯರಾಷ್ಟ್ರೀಯರಲ್ಲಿ ಕಡಿಮೆ. ಆಧುನಿಕ ನಗರ ಜಾನಪದದಲ್ಲಿ ಬಣ್ಣಹೊಂದಾಣಿಕೆ (matching) ಎಂಬ ಪರಿಕಲ್ಪನೆ ಬಂದಿರುವುದು ನಿಜವಾದರೂ, ಹಿಂದಿನ ಕಾಲದಲ್ಲಿ ಭಾರತೀಯರಲ್ಲಿದ್ದ ಧಾರ್ಮಿಕ ನಂಟು ಇತರ ದೇಶದವರಲ್ಲಿ ಇಲ್ಲ. ಭಾರತೀಯರಲ್ಲಿ ಬಿಳಿಯು ಶಾಂತಿ, ಕ್ಷಮತೆ, ಸ್ಥಿರತೆಯ ಸಂಕೇತವಾದರೆ ಕೇಸರಿ ತ್ಯಾಗ ಮತ್ತು ಅಧ್ಯಾತ್ಮದ ಸಂಕೇತ. ಬ್ರಾಹ್ಮಣರು ಶುಭ್ರತೆಯ ಸಂಕೇತವಾಗಿ ಬಿಳಿ ಉಡುಗೆಯನ್ನೇ ಧರಿಸುತ್ತಿದ್ದರು ಮತ್ತು ಸನ್ಯಾಸಿಗಳಿಗೆ ಕೇಸರಿ ಬಟ್ಟೆಗಳನ್ನು ವಿಧಿಸಲಾಗಿದೆ. ಕಪ್ಪು ಶನಿಯ ಸಂಕೇತ ಎಂಬ ಭಾವನೆ ಇತ್ತು.
ಮಾನ ಮುಚ್ಚುವುದಕ್ಕಾಗಿ ಉಡುಗೆ ಎಂಬುದು ಜಾನಪದ ನಂಬಿಕೆಯಾದರೆ, ಅದರೊಂದಿಗೆ ಸೌಂದರ್ಯಾತಿಶಯವೂ ಮುಖ್ಯ ಎಂಬುದು ನಗರ ಜಾನಪದದ ಚಿಂತನೆಯಾಗಿದೆ. ಸನ್ಯಾಸಿಗಳಿಗೆ ತಮ್ಮ ಲಂಗೋಟಿ ಶುಭ್ರವಾಗಿದ್ದರಷ್ಟೇ ಸಾಕು, ಅದರ ಸೌಂದರ್ಯದ ಬಗ್ಗೆ ಕಾಳಜಿ ಇರಲಿಲ್ಲ. ಆದರೆ ನಗರ ಜನಪದರಲ್ಲಿ ಒಳಉಡುಪುಗಳ ಸೌಂದರ್ಯ, ವಿನ್ಯಾಸ ಮತ್ತು ಗುಣಮಟ್ಟದ ಬಗೆಗೂ ಇರುವ ಅತೀವ ಎಚ್ಚರ ಮತ್ತು ಕಾಳಜಿ ಗಮನಿಸಿದರೆ ಅವರ ಸೌಂದರ್ಯಪ್ರಜ್ಞೆ ಗಮನಕ್ಕೆ ಬಾರದಿರದು. ಅದು ಫ್ಯಾಶನ್ ಮತ್ತು ಡಿಸೈನ್ ಲೋಕದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ! ಫ್ಯಾಶನ್ ಮತ್ತು ಡಿಸೈನ್ ಲೋಕದಲ್ಲಿ ಆ ಬಗ್ಗೆ ನಿರಂತರ ಸಂಶೋಧನೆ ಮತ್ತು ಪ್ರಯೋಗ ನಡೆಯುತ್ತ ಜಾಹಿರಾತುಗಳನ್ನು ನೀಡಿ ಜನರನ್ನು ಆಕರ್ಷಿಸಲಾಗುತ್ತದೆ ಎಂಬುದನ್ನು ಗಮನಿಸಿದರೆ ಆಧುನಿಕ ನಗರ ಜನಪದರ ಉಡುಪುಪ್ರಜ್ಞೆ ಹೇಗಿದೆ ಎಂಬುದು ಗೊತ್ತಾಗುತ್ತದಲ್ಲವೇ?
ಡಾ.ವಸಂತಕುಮಾರ ಪೆರ್ಲ
ನಮ್ಮ ನಡುವಿನ ಕವಿ,ದಣಿವರಿಯದ ಬರಹಗಾರ, ಚಿಂತಕ, ಮಾನವತಾವಾದಿ ಡಾ.ವಸಂತಕುಮಾರ ಪೆರ್ಲ ಅವರ ಅಂಕಣ 'ಉಡುಗೆ ಜಾನಪದ' ನಿಮ್ಮ ಓದಿಗಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments