top of page

ಇರುವುದೆಲ್ಲವ ಬಿಟ್ಟು …

ಅಕೌಂಟೆಂಟ್ ಸತ್ಯಮೂರ್ತಿ ಕಛೇರಿಯೊಳಗೆ ಕಾಲಿಟ್ಟಾಗ ಗೋಡೆಯ ಮೇಲಿನ ಗಡಿಯಾರ ಮಧ್ಯಾಹ್ನದ 12.00 ಗಂಟೆ ತೋರಿಸುತ್ತಿತ್ತು. ಸೀದಾ ಒಳಗೆ ಬಂದವ ಕೈಯಲ್ಲಿದ್ದ ಬ್ಯಾಗನ್ನು ತನ್ನ ಮೇಜಿನ ಮೇಲೆ ಎಸೆದ. ಅದೇ ವೇಗದಿಂದ ತಲೆಯ ಮೇಲಿದ್ದ ಹೆಲ್ಮೆಟ್ಟನ್ನು ತೆಗೆದು ಅದನ್ನೂ ಸಹ ಮೇಜಿನ ಮೇಲಿಟ್ಟ. ಹಾಗೆಯೇ, “ಎಲ್ಲಾ ಈ ಒಂದೂಮಗನ ಕಾಟದಿಂz ಲೇಟಾಯಿತು.” ಎಂದು ತನ್ನ ಮನದಾಳದಲ್ಲಿ ಅದುಮಿ ಹಿಡಿದ ಅಸಮಾಧಾನವನ್ನು ಹೊರಗೆಡುಹುತ್ತ ಟಾಯ್ಲೆಟ್‍ನತ್ತ ಓಡಿದ.


ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ಕಥಾನಾಯಕ ತನಗೆ ಸಿಟ್ಟು ಬಂದಾಗಲೆಲ್ಲ ಬೈಯುವದಕ್ಕೆ ಒಂದು ‘ವಿಶಿಷ್ಠ ಭಾಷೆ’ಯನ್ನು ಸೃಷ್ಟಿಸಿಕೊಂಡಿದ್ದು ಸದಾನಂದನಿಗೆ ನೆನಪಾಯಿತು. ‘ಬೋಳಿಮಗ’ ಎಂದು ಬೈಯುವದಕ್ಕೆ ಒಂದೂಮಗ, ‘ಸೂಳೆಮಗ’ ಎನ್ನುವದಕ್ಕೆ ಎರಡೂಮಗ, ‘ಹಲ್ಕಟ್ ನನ್ನಮಗ’ ಎಂದು ಬೈಯಲು ಮೂರೂಮಗ – ಎಂದು ಒಂದು ಹೊಸ ಕೋಡ್ ಲ್ಯಾಂಗವೇಜ್‍ನ್ನು ಸೃಷ್ಠಿಸಿಕೊಂಡಿದ್ದ. ಒಳಗೆ ಕುಳಿತ ಸಾಹೇಬನನ್ನು ಬೈಯಲು, ಸತ್ಯಮೂರ್ತಿ ಅದೇ ರೀತಿಯ ಸಾಂಕೇತಿಕ ಭಾಷೆಯನ್ನು ಬಳಸಿದ್ದನ್ನು ಕಂಡ ಸದಾನಂದನಿಗೆ ನಗು ತಡೆಯಲಾಗಲಿಲ್ಲ.


ಸತ್ಯಮೂರ್ತಿ ಕಛೇರಿಗೆ ತಡವಾಗಿ ಬರುವದು ಇದೇ ಮೊದಲಲ್ಲ. ವಾರದಲ್ಲಿ ಎರಡು ಮೂರು ಬಾರಿಯಾದರೂ ಸಾಹೇಬರ ಸೇವಾರ್ಥ ಕಛೇರಿಗೆ ತಡವಾಗಿ ಬರುವದು ಸಾಮಾನ್ಯವಾಗಿತ್ತು. ಹೊಸ ಸಾಹೇಬರು ಬಂದ ಮೇಲಂತೂ ಸತ್ಯಮೂರ್ತಿಗೆ ಕಛೇರಿ ಕೆಲಸಕ್ಕಿಂತ ಸಾಹೇಬರ ಮನೆಗೆಲಸವೇ ಹೆಚ್ಚಾಗಿತ್ತು. ಸಾಹೇಬರು ಈ ಊರಿಗೆ ವರ್ಗವಾಗಿ ಬಂದ ಮೇಲಂತೂ ಅವರಿಗೆ ಮನೆ ಹುಡುಕಿಕೊಟ್ಟಿದ್ದು, ಅವರ ಇಬ್ಬರು ಮಕ್ಕಳಿಗೆ ಸಿ.ಬಿ.ಎಸ್.ಸಿ.ಸ್ಕೂಲಿಗೆ ಆಡ್ಮಿಶನ್ ಮಾಡಿಸಿಕೊಟ್ಟಿದ್ದು, ಹೆಂಡತಿಗೆ ಸಂಗೀತ ಸ್ಕೂಲು ಗೊತ್ತು ಮಾಡಿಕೊಟ್ಟಿದ್ದು - ಮುಂತಾದ ಕೆಲಸಗಳನ್ನು ಅವನು ಶಿರಸಾವಹಿಸಿ ಮಾಡಿಕೊಟ್ಟಿದ್ದ. ಆದರೆ ಇಂದು ಸತ್ಯಮೂರ್ತಿ ತನ್ನ ಸ್ವಾಮಿಕಾರ್ಯದಲ್ಲಿ ಬೇಸರಗೊಂಡಿದ್ದೇಕೆಂಬುದು ಮಾತ್ರ ಸದಾನಂದನಿಗೆ ಹೊಳೆಯಲಿಲ್ಲ.


ಟಾಯ್ಲೆಟ್ ನಿಂದ ಹೊರಬರುವ ಹೊತ್ತಿಗೆ ಸತ್ಯಮೂರ್ತಿ ಸ್ವಲ್ಪಮಟ್ಟಿಗೆ ಶಾಂತನಾದಂತೆ ಕಂಡ. ಹಾಗೆಯೇ ಸದಾನಂದನ ಟೇಬಲ್‍ನ ಹತ್ತಿರವಿದ್ದ ಖುರ್ಚಿಯಲ್ಲಿ ಬಂದು ಕುಳಿತು ಟವೆಲ್ ನಿಂದ ಮುಖ ಒರೆಸಿಕೊಳ್ಳುತ್ತ ತಾನು ತಡವಾಗಿ ಬಂದುದಕ್ಕೆ ವಿವರಣೆ ನೀಡುವವನಂತೆ ಮಾತನಾಡಿದ.


ಅಂದು ಬೆಳಿಗ್ಗೆ ಸತ್ಯಮೂರ್ತಿ ಕಛೇರಿಗೆ ಹೊರಡುವ ಹೊತ್ತಿಗೆ ಸಾಹೇಬರಿಂದ ಪೋನು ಬಂದಿತ್ತು. ಅವರ ಪ್ರೀತಿಯ ಹೆಣ್ಣುನಾಯಿ ಎರಡು ದಿನದಿಂದ ಸರಿಯಾಗಿ ಆಹಾರ ಮುಟ್ಟುತ್ತಿರಲಿಲ್ಲವಂತೆ. ಅದಕ್ಕೆ ಇಂಜೆಕ್ಷನ್ ಹಾಕಿಸಿಕೊಂಡು ಬರುವಂತೆ ಸಾಹೇಬರು ಸತ್ಯಮೂರ್ತಿಗೆ ‘ಆದೇಶಿಸಿದ್ದರು’. ಅವರ ಆಣತಿಯಂತೆ ಸತ್ಯಮೂರ್ತಿ ಒಂದು ರಿಕ್ಷಾ ತೆಗೆದುಕೊಂಡು ನಾಯಿಯನ್ನು ಅದರಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಹೋಗಿ ಬಂದನಂತೆ. “ ಈ ಸಾಹೇಬ ಮಹಾನಾಲಾಯಕ ಇದ್ದಾನೆ: ಈತ ತನ್ನ ನಾಯಿಗೆ ಆರಾಮ ಇರದಿದ್ದರಷ್ಟೇ ಅಲ್ಲಾ ಅದಕ್ಕೆ ಬೆದೆ ಬಂದರೆ ಗಂಡು ನಾಯಿ ಹತ್ತಿರ ಕರೆದುಕೊಂಡು ಹೋಗಿ ತಂದು ಬಿಡು ಎಂದು ಹೇಳುವಷ್ಟು ಹಲ್ಕಟ್ ಇದ್ದಾನೆ ಎಂದು ತನ್ನ ‘ಸಂಸ್ಕøತ’ ಭಾಷೆಯಲ್ಲಿ ಬೈದ. ಆದರೆ ಸದಾನಂದನಿಗೆ ಇದೇನೂ ಹೊಸದೆಂದು ಅನಿಸಲೇ ಇಲ್ಲ. ಯಾಕೆಂದರೆ ಸಾಹೇಬರ ಎದುರು ಹಲ್ಲುಗಿಂಜುತ್ತಾ ಅವರ ಸರ್ವಸೇವೆಯನ್ನು ತನ್ನ ಹೆಗಲ ಮೇಲೆ ಆಹ್ವಾನಿಸಿಕೊಳ್ಳುವ ಈ ಭೂಪ ಅವರ ಬೆನ್ನುಹಿಂದೆ ಹಲ್ಕಾ ಭಾಷೆಯಲ್ಲಿ ಬೈಯುವದನ್ನು ಸದಾನಂದ ನೋಡುತ್ತಲೇ ಬಂದಿದ್ದ.


ಸತ್ಯಮೂರ್ತಿಯ ಜೊತೆಗೆ ಕಳೆದ ಐದಾರು ವರ್ಷಗಳಿಂದಲೂ ಸದಾನಂದ ಕೆಲಸಮಾಡುತ್ತ ಬಂದಿದ್ದ. ಆ ಕಛೇರಿಗೆ ಯಾವುದೇ ಸಾಹೇಬರು ಬರಲಿ ಅವರಿಗೆ ‘ಮಸ್ಕಾ’ ಹಚ್ಚುವ ಕೆಲಸವನ್ನು ಸತ್ಯಮೂರ್ತಿ ಅವಿಚ್ಛಿನ್‍ವಾಗಿ ನಡೆಸಿಕೊಂಡು ಬಂದಿದ್ದ. ಹೊಸದಾಗಿ ಬರುವ ಸಾಹೇಬರುಗಳ ದೌರ್ಬಲ್ಯ ಮತ್ತು ಶಕ್ತಿ ಇವೆರಡನ್ನು ಅಷ್ಟೇ ತ್ವರಿತವಾಗಿ ಗ್ರಹಿಸುವಂತಹ ತೀಕ್ಷಣಮತಿತ್ವ ಅವನಲ್ಲಿತ್ತು. ಹೀಗಿರುವ ಅವನು ಅದಕ್ಕೆ ತಕ್ಕಂತೆ ತನ್ನನ್ನು ರೂಢಿಸಿಕೊಳ್ಳುತ್ತಿದ್ದ. ಯಾವುದೇ ಜಾತಿ ಯಾ ನೀತಿಯ ಸಾಹೇಬರು ಬಂದರೂ ಸತ್ಯಮೂರ್ತಿಯನ್ನು ಕಡೆಗಣಿಸುತ್ತಿರಲಿಲ್ಲ. ಕಛೇರಿ ಯಾ ಕಛೇರಿಯೇತರ ಯಾವುದೇ ಕೆಲಸವಿರಲಿ ಸತ್ಯಮೂರ್ತಿಯಿಲ್ಲದೇ ಸುಸೂತ್ರವಾಗಿ ನಡೆಯುವದಿಲ್ಲವೆಂಬ ಭಾವನೆ ಸಾಹೇಬರುಗಳ ಮನದಾಳದಲ್ಲಿ ಸೃಷ್ಟಿಸುವ ಆತನ ಹಿಕಮತ್ತಿಗೆ ಯಾರಾದರೂ ತಲೆಬಾಗಲೇಬೇಕು.


ಕಛೇರಿಗೆ ಬರುವ ಸಾಹೇಬರುಗಳ ಸೇವಾ ವಿಚಾರದಲ್ಲಿ ಸತ್ಯಮೂರ್ತಿ ತ್ರಿಕರ್ಣಪೂರ್ವಕವಾಗಿ ನಿರ್ವಹಿಸುತ್ತಾನೆಂಬ ಭಾವ ಹುಟ್ಟುವ ಪರಿಯ ಹಿಂದೆ ಆತನ ಫಲಾಪೇಕ್ಷೆ ಕೆಲಸಮಾಡುತ್ತಿಲ್ಲವೆಂದು ನೀವು ಭಾವಿಸಬಾರದು. ಯಾಕೆಂದರೆ ದೇವರ ಸೇವೆ ಮಾಡುತ್ತ ಅದರ ಫಲವಾಗಿ ಪ್ರಸಾದ ಅಪೇಕ್ಷಿಸುವ ಭಕ್ತನಂತೆ ಸತ್ಯಮೂರ್ತಿ ಸಾಹೇಬರ ಸೇವೆಯಿಂದ ಸಾಕಷ್ಟು ಅನುಗ್ರಹಿತನಾಗಿದ್ದ. ಆ ಕಛೇರಿಯ ಬಿಲ್ ಸೆಕ್ಷನ್ ಕೆಲಸ ಮಾತ್ರ ಎಂದೂ ಅವನ ಕೈತಪ್ಪದಂತೆ ಸದಾ ಜಾಗರೂಕತೆ ವಹಿಸಿದ್ದ. ಅದಕ್ಕೆ ತಕ್ಕಂತೆ ಸಾಹೇಬರುಗಳು ಆಶೀರ್ವಾದ ಮಾಡುತ್ತಲೇ ಬಂದಿದ್ದರು. ಪ್ರತಿ ಬಿಲ್ ಪಾಸು ಮಾಡುವಾಗ ಬಿಲ್‍ನ ಮೊಬಲಗಿನ ಮೇಲೆ ಫರ್ಸೆಂಟೇಜ ಲೆಕ್ಕಹಾಕಿ ಅದಕ್ಕೆ ತಕ್ಕಂತೆ ಗುತ್ತಿಗೆದಾರರಿಂದ ವಸೂಲಿ ಮಾಡದೇ ಸತ್ಯಮೂರ್ತಿ ಎಂದೂ ಬಿಡುತ್ತಿರಲಿಲ್ಲ. ಕೆಲವು ಗುತ್ತಿಗೆದಾರರು ಇದಕ್ಕೆ ಅಸಮಾಧಾನ ತೋರಿ ದೂರು ಸಲ್ಲಿಸಿದರೂ ಸಾಹೇಬರ ಕೃಪಾಕಟಾಕ್ಷ ಹೊಂದಿರುವÀ ಸತ್ಯಮೂರ್ತಿಯನ್ನು ಅದು ತೃಣ ಮಾತ್ರವೂ ಅಲ್ಲಾಡಿಸಲು ಸಮರ್ಥವಾಗಲಿಲ್ಲ.


ಸಾಹೇಬರ ಸೇವಾ ಕೈಂಕರ್ಯದ ಫಲವಾಗಿ ಸತ್ಯಮೂರ್ತಿ ಬೆಂಗಳೂರಿನಂತಹ ಶಹರದಲ್ಲಿ ಎರಡು ಸೈಟು ಖರೀದಿಸುವ ಜೊತೆಗೆ ಒಂದು ಮನೆಯನ್ನೂ ಕಟ್ಟಿಸಿದ್ದ. ತನಗೆ ಒಂದು ಕಾರು ಮತ್ತು ಬೈಕು, ಮಕ್ಕಳಿಬ್ಬರಿಗೆ ಪ್ರತ್ಯೇಕವಾಗಿ ಎರಡು ಬೈಕು ಖರೀದಿಸಿದ್ದ. ಇಬ್ಬರು ಗಂಡು ಮಕ್ಕಳು ಪಿ.ಯೂ.ಸಿ.ಯನ್ನು ಮುಗಿಸಲಾಗದೇ ತಂದೆ ಕೊಡಿಸಿದ ಬೈಕುಗಳಲ್ಲಿ ಊರೆಲ್ಲಾ ಅಡ್ಡಾಡುತ್ತಿದ್ದರು. ಹೆಂಡತಿಯೂ ಅಷ್ಟೇ. ಮಹಿಳಾಮಂಡಳದ ಚಟುವಟಿಕೆಯ ನೆವದಲ್ಲಿ ಸಾಹೇಬರುಗಳ ಹೆಂಡಂದಿರೊಂದಿಗೆ ಅಡ್ಡಾಡುವದನ್ನು ಬಿಟ್ಟರೆ ಅವಳಲ್ಲಿ ಮನೆಯ ಕಡೆ ಲಕ್ಷವೇ ಇರಲಿಲ್ಲ. ಇದರ ಪರಿಣಾಮವಾಗಿ ತನ್ನ ಹೆಂಡತಿ-ಮಕ್ಕಳ ಬೇಕು-ಬೇಡಗಳನ್ನು ಪೂರೈಸುವ ಯಂತ್ರದಂತೆ ಸತ್ಯಮೂರ್ತಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಗೆ ಬಂದು ತಲುಪಿದ್ದ.


ಸತ್ಯಮೂರ್ತಿ ಸದಾನಂದನಿಗಿಂತಲೂ ಸುಮಾರು 10 ವರ್ಷಗಳಷ್ಟು ಕಿರಿಯ. ಆದರೆ ಆಂತರಿಕ ಇಲಾಖೆಯ ಪರೀಕ್ಷೆಯಲ್ಲಿ ಸಾಹೇಬರುಗಳ ಕೃಪಾಕಟಾಕ್ಷದ ಫಲವಾಗಿ ಸದಾನಂದನಿಗಿಂತಲೂ ಮೊದಲೇ ಈತ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದ. ಈತನು ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗುವಲ್ಲಿ ಇವನ ಹೆಂಡತಿಯ ಸಹಾಯವೂ ಇದೆಯೆಂದು ಕೆಲವರು ವ್ಯಂಗ್ಯವಾಡುತ್ತಿದ್ದರು. ಈತ ಪ್ರಥಮ ದರ್ಜೆಯ ಗುಮಾಸ್ತ ಹುದ್ದೆಯಿಂದ ಅಕೌಂಟೆಂಟ್ ಹುದ್ದೆಗೆ ಬಡ್ತಿ ಹೊಂದಿದರೂ ತನ್ನ ಮೂಲ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಸೇವೆ ಸಲ್ಲಿಸುತ್ತಾ ಬಂದಿದ್ದ!.


ಸತ್ಯಮೂರ್ತಿ ಹೊರನೊಟಕ್ಕೆ ವ್ಯವಹಾರಿಕನಂತೆ ಕಾಣುತ್ತಿದ್ದರೂ ಕೆಲವೊಮ್ಮೆ ವೇದಾಂತಿಯಂತೆ ಮಾತನಾಡುತ್ತಿದ್ದ. ಒಮ್ಮೆ ಸದಾನಂದನೊಂದಿಗೆ ಹೊಟೆಲಿನಲ್ಲಿ ಚಹಾ ಕುಡಿಯುತ್ತಿದ್ದಾಗ ಸತ್ಯಮೂರ್ತಿ ತನ್ನ ಹೃದಯದ ಒಳಗಿನ ಭಾವನೆಗಳನ್ನು ಬಿಚ್ಚಿಟ್ಟಿದ್ದ.


“ ಬಿಲ್ ಸೆಕ್ಷನ್ ನನಗೇ ಸಿಗಬೇಕೆಂದು ಈ ಕಛೇರಿಗೆ ಬಂದ ಸಾಹೇಬರುಗಳ ಮನೆಗೆಲಸವನ್ನೂ ನಾನು ಮಾಡ್ತಾ ಬಂದೆ. ಆ ಸೆಕ್ಷನ್ ಎಲ್ಲಾದರೂ ಕೈ ತಪ್ಪಿ ಹೋದೀತೆಂಬ ಭಯದಿಂದ ನನಗೆ ಎಷ್ಟೋ ದಿವಸ ನಿದ್ದೇನೆ ಬರತಾ ಇರಲಿಲ್ಲ. ಗುತ್ತಿಗೆದಾರರು ಕಡಿಮೆ ಕೊಟ್ಟರೆ ಅವರ ಮೇಲೆ ಸಿಟ್ಟು ಬಂದು ಬಿಡ್ತಿತ್ತು. ಅವರ ಬಿಲ್ ಗೆ ಕೊಕ್ಕೆ ಹಾಕ್ತ್ತಿದ್ದೆ. ಕೆಲವು ಸಲ ಜಗಳಾನೂ ಮಾಡ್ತಾ ಇದ್ದೆ. ಹಣದ ಮೇಲಿನ ಮೋಹ ನನ್ನಲ್ಲಿ ರಾಕ್ಷಸತ್ವವನ್ನೇ ಸೃಷ್ಟಿಸಿತ್ತು. ಹೀಗಿರುವಾಗ ನನಗೆ ಸಂಸಾರದಲ್ಲಿ ಸುಖ ಎಲ್ಲಿ?”. ಎಂದು ನುಡಿದು ಹಾಗೆಯೆ ಮುಂದುವರಿಸಿದ, “ನೋಡಿ ಸದಾನಂದ! ನಾನು ಲಂಚ ತಿಂದಿದ್ದೇನೆ; ಹಣ ಮಾಡಿದ್ದೇನೆ; ಬೆಂಗಳೂರಿನಲ್ಲಿ ಎರಡು ಸೈಟು ಕೊಂಡಿದ್ದೇನೆ; ಅದರಲ್ಲಿ ಒಂದು ಮನೆ ಕಟ್ಟಿದ್ದೇನೆ; ಕಾರು ಕೊಂಡಿದ್ದೇನೆ - ಎಲ್ಲಾ ಸರಿ, ಆದರೆ ಯಾವ ಸುಖಕ್ಕಾಗಿ ನಾನಿದನ್ನೆಲ್ಲಾ ಮಾಡಿದೆ -ಅಂತಾ ನನಗೇ ಅರ್ಥವಾಗ್ತಾ ಇಲ್ಲಾ. ಇಬ್ಬರು ಮಕ್ಕಳಿಗೂ ವಿದ್ಯೆ ಹತ್ತಲಿಲ್ಲ. ಇನ್ನು ಬುದ್ದೀನಾದರೂ ಬರಲಿ ಅಂತಾ ನೋಡಿದರೆ ನನಗೇ ಹೇಸಿಗೆ ಉಂಟಾಗ್ತಾ ಇದೆ. ಪೋಲಿಯಾಗಿ ಅಡ್ಡಾಡೋ ಅವರಿಂದ ನನ್ನ ಮಾನ-ಮರ್ಯಾದೆ ಎರಡೂ ಹರಾಜು ಆಗಿ ಹೋಗಿದೆ. ಇನ್ನು ಈಕೇನಾದರೂ ಅವರಿಗೆ ಬುದ್ದಿ ಹೇಳ್ತಾಳೆ ಅಂತಾ ನೋಡಿದರೆ ಅವಳೂ ಅವರಿಗೇ ಸಪೋರ್ಟ್. ಅದಕ್ಕೆ ನನಗೆ ಒಮ್ಮೊಮ್ಮೆ ಅನಿಸ್ತಾ ಇದೆ : ಇಷ್ಟೆಲ್ಲಾ ಸಂಪತ್ತು ಗಳಿಸಿದ ಮೇಲೂ ನನ್ನ ಬದುಕಿನಲ್ಲಿ ಏನು ಸುಖ ಇದೆÉ ಅಂತಾ. ಹಾಗಂತಾ ಈ ಕೂಪದಿಂದ ಹೊರಗೆ ಬರಲು ನನಗೆ ಸಾಧ್ಯವಿಲ್ಲದಷ್ಟು ದೂರ ನಾನು ಸಾಗಿದ್ದೇನೆ. ಮಹಾಭಾರತದ ದುರ್ಯೋದನ ಸ್ಥಿತಿ ನನ್ನದಾಗಿದೆ ಎಂದು ನನಗೆ ಅನಿಸ್ತಾ ಇದೆ.”


**********


ಸತ್ಯಮೂರ್ತಿಯ ಅಂತರಾಳದ ಮಾತಿನಿಂದ ಸದಾನಂದನ ಮನದ ಮೂಲೆಯಲ್ಲಿ ತನ್ನ ಗತ ಬದುಕಿನ ಸುಧೀರ್ಘ ಪಯಣದ ವಿವಿಧ ಘಟನೆಗಳು ಅನಾವರಣಗೊಂಡವು.


ತನ್ನ ಕಾಲೇಜು ದಿನಗಳಲ್ಲಿಯೇ ಸದಾನಂದ ವೈಚಾರಿಕ ಸಾಹಿತ್ಯವನ್ನು ಓದುತ್ತಿದ್ದ. ವರ್ಗ ಸಂಘರ್ಷ ಸಿದ್ಧಾಂತದಿಂದ ಆತ ಅಪಾರವಾಗಿ ಪ್ರಭಾವಿತನಾಗಿದ್ದ. ಅನ್ಯಾಯ, ಅಸಮಾನತೆಗಳನ್ನು ಕಂಡಾಗಲೆಲ್ಲಾ ಈತನ ರಕ್ತ ಬಿಸಿಯಾಗುತ್ತಿತ್ತು. ಶೋಷಿತರ ಪರವಾಗಿ ಧ್ವನಿ ಎತ್ತುವದಕ್ಕೆ ಮನಸ್ಸು ಸದಾ ವಾಲುತ್ತಿತ್ತು. ಅದಕ್ಕಾಗಿ ಸಿದ್ಧಾಂತವಾದಿಗಳ ಕೂಟಗಳಲ್ಲ್ಲಿ ಸದಾನಂದ ಸದಾ ಪಾಲ್ಗೊಳ್ಳುತ್ತಿದ್ದ.


ಕಾಲೇಜು ಮುಗಿಸಿದ ಸದಾನಂದ ಆ ಸರಕಾರಿ ಸಂಸ್ಥೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತನಾಗಿ ನೇಮಕಾತಿಗೊಂಡ. ಆ ಸರಕಾರಿ ಕಛೇರಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಲಂಚದ ವ್ಯವಹಾರ ಈತನಲ್ಲಿ ದಿನದಿಂದ ದಿನಕ್ಕೆ ರೇಜಿಗೆ ಹುಟ್ಟಿಸಿತು. ಆದರೆ ಸಂವಿಧಾನದತ್ತ ಹಕ್ಕೆನ್ನುವಂತೆ ಲಂಚದ ವ್ಯವಹಾರ ನಡೆಸುತ್ತಿದ್ದ ತನ್ನ ಸಹೋದ್ಯೋಗಿಗಳ ವಿರುದ್ಧ ಹೋರಾಟ ನಡೆಸುವುದು ಹೊಟ್ಟೆಪಾಡಿಗಾಗಿ ನೌಕರಿಗೆ ಬಂದ ತನ್ನಂತಹವನಿಗೆ ಸಾಧ್ಯವಿಲ್ಲವೆಂದನಿಸಿತು. ಆದರೆ ಈ ಲಂಚ ಪ್ರಪಂಚದಲ್ಲಿ ಸಿಲುಕಿಕೊಳ್ಳುವುದಂತೂ ತನ್ನ ಮನಸ್ಸಾಕ್ಷಿಗೆ ಒಪ್ಪದ ವಿಚಾರವೆಂಬುದು ಸಹ ಅವನ ಮನಸ್ಸಿಗೆ ಬಂತು. ಅದಕ್ಕಾಗಿ ಆತ ಒಂದು ನಿರ್ಧಾರಕ್ಕೆ ಬಂದ - ಬೇರೆಯವರು ಲಂಚವನ್ನು ತೆಗೆದುಕೊಳ್ಳಲಿ ಬಿಡಲಿ; ತಾನಂತೂ ಅದನ್ನು ಮುಟ್ಟಬಾರದು. ಇದೇ ‘ಗಾಂಧಿಗಿರಿ’ ಎಂದುಕೊಂಡ. ತನ್ನ ನಿಲುವನ್ನು ಸಹೋದ್ಯೋಗಿಗಳ ಮುಂದಿಟ್ಟಾಗ ಅವನ ಸಹೋದ್ಯೋಗಿಗಳು ಇವನ ಮಾತಿಗೆ ದೊಡ್ಡದಾಗಿ ನಕ್ಕುಬಿಟ್ಟರು. ಅಷ್ಟೇ ಅಲ್ಲಾ “ ಲಂಚ ಬೇಡ ಅಂಬೋ ನೀನೊಬ್ಬ ಹುಚ್ಚ ; ಇಂದಿನ ಕಾಲದಲ್ಲಿ ಲಂಚ ತೆಗೆದುಕೊಳ್ಳದೇ ಸರಕಾರಿ ಸಂಬಳದಲ್ಲಿ ಸಂಸಾರ ನಡೆಸುವುದು ಕಷ್ಟ. ಮನೆ ಬಾಡಿಗೆ, ಸ್ಕೂಲ್ ಫೀಸು, ಹಾಲು, ತರಕಾರಿ , ತಿರುಗಾಟ ಅಂತಾ ತಿಂಗಳ ಕೊನೆಯಲ್ಲಿ ಕೈಯೆಲ್ಲಾ ಖಾಲಿ. ಈ ತತ್ವ, ಸಿದ್ಧಾಂತ ಎಲ್ಲಾ ಬಿಟ್ಟು ನಮ್ಮ ಹಾಗೆ ಬದುಕವದನ್ನು ಮೊದಲು ಕಲಿ’ ಎಂದು ಉಪದೇಶಿಸಿದರು. ಆದರೆ ಸದಾನಂದನ ಮೇಲೆ ಇವರ ಮಾತು ಕಿಂಚಿತ್ತೂ ಪರಿಣಾಮ ಬೀರಲಿಲ್ಲ.


ಇಂದಲ್ಲಾ ನಾಳೆ ಸದಾನಂದ ಬದಲಾಗುತ್ತಾನೆಂದು ನಂಬಿದ್ದ ಆತನ ಸಹೋದ್ಯೋಗಿಗಳಿಗೆ ಈತ ಬದಲಾಗದೇ ಇದ್ದುದು ನಿರಾಶೆ ಉಂಟುಮಾಡಿತಲ್ಲದೇ ಅವರ ವ್ಯವಹಾರಕ್ಕೂ ಇರುಸು ಮುರುಸು ಮಾಡಿತು. ವ್ಯರ್ಥವಾಗಿ ಈತ ಹಣ ಕಳೆದುಕೊಳ್ಳುತ್ತಿದ್ದಾನೆಂದುಕೊಂಡ ಒಬ್ಬ ಸಹೋದ್ಯೋಗಿ ಇವನನ್ನು ಕರೆದು ಕೂರಿಸಿ ಕೊಂಡು ಗೀತೋಪದೇಶವನ್ನು ಮಾಡಿದ, “ನೋಡಿ ಸದಾನಂದ, ನಿಮ್ಮ ಸಿದ್ಧಾಂತ ಇದೆಯಲ್ಲ, ಅದನ್ನು ನಾನು ಖಂಡಿತ ಗೌರವಿಸುತ್ತೇನೆ. ಆದರೆ ನಮ್ಮ ಬದುಕು ಸ್ಥಿರ ಅಲ್ಲಾ; ಇಂದು ಇದ್ದ ಹಾಗೆ ನಮ್ಮ ಸ್ಥಿತಿ ನಾಳೆ ಇರುವದಿಲ್ಲ. ಬದುಕಿನ ತಾಪತ್ರಯಗಳಲ್ಲಿ ಬಂಧಿಯಾಗಿರುವ ನಾವು ಮುಂದೊಂದು ದಿನ ನಮ್ಮ ತತ್ವ - ಸಿದ್ಧಾಂತಗಳನ್ನು ಕೈಬಿಡಬೇಕಾದ ಅನಿವಾರ್ಯತೆ ನಿರ್ಮಾಣವಾದರೆ ಆಶ್ಚರ್ಯವೇನೂ ಇಲ್ಲ. ನಾವು ಸಂಕಷ್ಟದಲ್ಲಿ ಇದ್ದಾಗ ನಮಗೆ ಯಾರೂ ನೆರವು ನೀಡುವದಿಲ್ಲ. ಆಗ ಈ ಹಿಂದೆ ನಾವು ಲಂಚ ಮುಟ್ಟದೇ ಇದ್ದುದು ತಪ್ಪಾಯಿತೇನೋ ಎಂಬ ಪಶ್ಚಾತಾಪ ಭಾವನೆ ನಮ್ಮಲ್ಲಿ ಉಂಟಾಗಬಹುದು. ಅದಕ್ಕಾಗಿಯೇ ನನ್ನದೊಂದು ಸಲಹೆ : ನೀವು ನಿಮ್ಮ ಸಿದ್ಧಾಂತದಂತೆ ಯಾರ ಹತ್ತಿರವೂ ಲಂಚವನ್ನು ಕೇಳಬೇಡಿ. ಆದರೆ ಅವರು ಕೊಟ್ಟರೆ ತೆಗೆದುಕೊಂಡು ಡ್ರಾದಲ್ಲಿ ಹಾಕಿಕೊಳ್ಳಿ. ಹಾಗೆಯೇ ಮತ್ತೊಂದು ಕೆಲಸ ಮಾಡಿ . ಬ್ಯಾಂಕ್ನಲ್ಲಿ ಒಂದು ಉಳಿತಾಯ ಖಾತೆಯನ್ನು ಓಪನ್ ಮಾಡಿ. ಕಾಂಟ್ರೆಕ್ಟರ್ ಕೊಟ್ಟ ಹಣವನ್ನು ಆ ಖಾತೆಯಲ್ಲಿ ಸುಮ್ಮನೆ ಹಾಕುತ್ತಾ ಹೋಗಿ. ಮುಂದೆ ನೀವು ಮದುವೆ ಆಗ್ತೀರಿ; ಸಂಸಾರ ಬೆಳೆದಿರುತ್ತೆ, ಆ ಸಂದರ್ಭದಲ್ಲಿ ನಿಮ್ಮ ಮನಸ್ಸು ಬದಲಾದರೆ ಆ ಹಣವನ್ನು ಸಂಸಾರಕ್ಕೆ ಅವಶ್ಯಬಿದ್ದಾಗ ಬಳಸಿಕೊಳ್ಳಿ. ಒಮ್ಮೆ ನಿಮ್ಮ ಮನಸ್ಸು ಬದಲಾಗದೆ ಇದ್ದರೆ ಕೊನೆಗೊಂದು ದಿನ ಆ ಹಣವನ್ನು ಯಾವುದಾದರೂ ಬಡ ವಿದ್ಯಾರ್ಥಿಗಳ ಹಾಸ್ಟೇಲಿಗೆ ದಾನ ಮಾಡಿ. ಹೇಗಿದೆ ನನ್ನ ಸಲಹೆ?” ಎಂದು ನುಡಿದು ತಾನು ಮಹತ್ತರವಾದುದನ್ನು ಹೇಳುತ್ತಿದ್ದೇನೆ ಎಂಬಂತೆ ಮಾತಿನ ಕೊನೆಯಲ್ಲಿ ಪ್ರಶ್ನೆಯೊಂದನ್ನು ಸಿಲಿಕಿಸಿ ಸದಾನಂದನಿಂದ ಮೆಚ್ಚಗೆಯ ಪ್ರತಿಕ್ರಿಯೆಗಾಗಿ ಕಾದ. ಆದರೆ ಲಂಚವನ್ನು ಸ್ವೀಕರಿಸುವದೇ ಪಾಪದ ಕ್ರಿಯೆ; ಅದನ್ನು ತೆಗೆದುಕೊಂಡು ಬ್ಯಾಂಕಿಗೆ ಹಾಕುತ್ತಾ ಕೊನೆಗೊಂದು ದಿನ ಅದನ್ನು ತನ್ನದೆಂದು ದಾನ ಮಾಡುವದು ಅದರ ಪ್ರಕ್ರಿಯೆಯೆ – ಎಂದು ಸದಾನಂದ ತನ್ನಷ್ಟಕ್ಕೇ ಅಂದುಕೊಂಡ. ಆದರೆ ತನಗೆ ಉಪದೇಶ ಮಾಡಿದ ತನ್ನ ಸಹೋದ್ಯೋಗಿಗೆ “ವಾದ ಚೆನ್ನಾಗಿದೆ’ ಎಂದಷ್ಟೇ ಹೇಳಿ ನಕ್ಕುಬಿಟ್ಟ.


ಆದರೆ ಸದಾನಂದ ತನ್ನ ಇಲ್ಲಿಯವರೆಗಿನ ಇಪ್ಪತ್ತೈದು ವರುಷಗಳ ಸೇವೆಯಲ್ಲಿ ಎಂದೂ ಲಂಚ ಮುಟ್ಟಲಿಲ್ಲ. ಗುತ್ತಿಗೆದಾರರು ಲಂಚ ಕೊಡಲು ಬಂದಾಗ ಅದನ್ನು ತಿರಸ್ಕರಿಸಿದನಷ್ಟೇ ಅಲ್ಲಾ ರುಷುವತ್ತಿಗೆ ಅವಕಾಶವಿರದ ಕೆಲಸಗಳನ್ನು ತನಗೆ ಕೊಡಿ ಎಂದು ಸಾಹೇಬರುಗಳನ್ನು ದುಂಬಾಲು ಬೀಳುತ್ತಿದ್ದ. ಕಛೇರಿಯ ತುಂಬೆಲ್ಲ್ಲಾ ಐಟಂ ಸಾಂಗ್‍ನ ನರ್ತಕಿಯಂತೆ ಲಂಚವು ತನ್ನ ಅಂಗಚೇಷ್ಟೆಯೊಂದಿಗೆ ನರ್ತಿಸುತ್ತಿದ್ದರೂ ಸದಾನಂದನ ಟೇಬಲ್ ಮಾತ್ರ ಲಂಚ ಮುಕ್ತ ಪ್ರದೇಶವಾಗಿತ್ತು. ಇದು ಉಳಿದ ಉದ್ಯೋಗಿಗಳಿಗೆ ವ್ಯಕ್ತಪಡಿಸಲಾಗದ ಬೇಸರಕ್ಕೆÉ ಕಾರಣವಾಗಿತ್ತು. ಸಾಹೇಬರ ಕಿವಿ ಊದಿ ಸದಾನಂದನಿಗೆ ಬುದ್ಧಿವಾದ ಹೇಳಿಸುವ ಪ್ರಯತ್ನ ಅವರು ಮಾಡಿದರು. ಆದರೆ ಅದು ಪ್ರಯೋಜನವಾಗದೇ ಇದ್ದಾಗ ಸದಾನಂದನಿಗೆ ಮೇಲಿಂದ ಮೇಲೆ ಒಂದು ಕಛೇರಿಯಿಂದ ಇನ್ನೊಂದಕ್ಕೆ ದಂಡಯಾತ್ರೆ ಸಾಗುವ ಪರಿಪಾಟಲು ನಿರ್ಮಾಣವಾಯಿತು.


ಸದಾನಂದನ ಈ ಪ್ರವೃತ್ತಿ ಆಫೀಸನಲ್ಲಷ್ಟೇ ಅಲ್ಲಾ ಅವನ ಮನೆಯಲ್ಲಿಯೂ ಅಸಮಾಧಾನದ ಕಿಡಿಯನ್ನು ಹೊತ್ತಿಸಿತು. ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳಲ್ಲಿ ತನ್ನ ಹೆಂಡತಿ ಪಾಲ್ಗೊಂಡಾಗ ಅಲ್ಲಿ ಬೆಟ್ಟಿಯಾಗುತ್ತಿದ್ದ ಈತನ ಸಹೋದ್ಯೋಗಿಗಳ ಮಡದಿಯರು ತನ್ನ ಹೆಂಡತಿಯ ಮನೋಭೂಮಿಕೆಯಲ್ಲಿ ಹಲವು ಆಸೆಗಳ ಬೀಜ ಬಿತ್ತುತ್ತಿದ್ದುದು ಸದಾನಂದನ ಗಮನಕ್ಕೆ ಬರದೇ ಇರಲಿಲ್ಲ. ತನ್ನ ಸಿದ್ಧಾಂತವೇ ಸರ್ವಸ್ವವೆಂದು ಉಸಿರಾಡುತ್ತಿದ್ದ ಆತನಿಗೆ ಹೆಂಡತಿಯ ಆಸೆಗಳು ತನ್ನ ಮುಂದಿನ ಬದುಕಿನ ಅಪಾಯದ ಸೂಚನೆಗಳು ಎಂದು ಅನಿಸತೊಡಗಿತು. ಒಮ್ಮೆ ಹೆಂಡತಿಗೆ ಹೇಳಿಯೂ ಬಿಟ್ಟ, “ನೋಡು ನನಗೆ ಬರುವ ಸಂಬಳದಲ್ಲಿ ಸೈಟು, ಮನೆ, ಕಾರು ಮುಂತಾದವುಗಳೆಲ್ಲ ದೂರದ ನಕ್ಷತ್ರ. ನನ್ನ ಸಹೋದ್ಯೋಗಿಗಳು ಅವನ್ನೆಲ್ಲ ಹೊಂದಿದ್ದಾರೆಂದರೆ ಅದಕ್ಕೆ ಕಾರಣ ಅವರು ಎಂಜಲು ಕಾಸಿಗೆ ಕೈಯೊಡ್ಡುತ್ತ ಬಂದಿರುವದು. ನಾನು, ಅದೂ ಕೈ ಹಿಡಿದ ನಿನಗಿಂತ ನನ್ನ ಸಿದ್ಧಾಂತವನ್ನೇ ಪ್ರೀತಿಸುವ ನಾನು, ಅದನ್ನು ಕೈಬಿಡಬೇಕೆಂದು ಹೇಳುತ್ತಿದ್ದಿಯಾ ?”


ನಿಮ್ಮ ಸಿದ್ಧಾಂತ ನಿಮ್ಮ ವೈಯಕ್ತಿಕ ಬದುಕಿನ ನಂಬುಗೆಯ ವಿಚಾರ. ಆದರೆ ಅದನ್ನು ಇನ್ನೊಬ್ಬರ ಬದುಕಿನಲ್ಲಿ ಹೇರುವುದಾಗಲಿ ಅಥವಾ ಇನ್ನೊಬ್ಬರ ಬದುಕಿನಲ್ಲಿ ತನ್ನ ಸಿದ್ಧಾಂತದ ಮೂಲಕ ಹಸ್ತಕ್ಷೇಪ ಮಾಡುವುದಾಗಲಿ ಸರಿಯಲ್ಲವೆಂಬದು ಹೆಂಡತಿಯ ಸಮಜಾಯಿಶಿ. ಅದನ್ನು ಕೇಳಿದ ಸದಾನಂದನಿಗೆ ರಾಮಾಯಣದಲ್ಲಿ ಬರುವ ವಾಲ್ಮೀಕಿಯ ಪೂರ್ವಾಶ್ರಮದ ಸ್ಥಿತಿಯ ನೆನಪು ಬಂತು. ದರೋಡೆಕಾರನಾಗಿದ್ದ ವ್ಯಕ್ತಿ ದರೋಡೆ, ಸುಲಿಗೆಗಳಿಂದ ಗಳಿಸಿ ತಂದ ಸಂಪತ್ತನ್ನಷ್ಟೇ ಭೋಗಿಸಲು ಅವನ ಮನೆಯವರು ಸಿದ್ಧರಿರುತ್ತಾರೆ. ಆದರೆ ಅದರ ಬೆನ್ನಲ್ಲೇ ಹುದುಗಿಪ್ಪ ಪಾಪದ ಒಂದಂಶವನ್ನೂ ತಮ್ಮ ಹೆಗಲಿಗೆ ವರ್ಗಾಯಿಸಿಕೊಳ್ಳಲು ಕುಟುಂಬದವರು ಸಿದ್ಧರಿರುವದಿಲ್ಲ. ಅದೇ ರೀತಿ ತನ್ನ ತಾನು ನಂಬಿದ ಹೆಂಡತಿ ತನ್ನ ಸಿದ್ಧಾಂತವನ್ನು ಅಥವಾ ತಾನು ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ ಅದರಿಂದ ಬರುವ ಪಾಪದ ಫಲವನ್ನು - ಹೀಗೆ ಯಾವುದನ್ನೂ ಸ್ವೀಕರಿಸಲು ಸಿದ್ಧಳಿಲ್ಲವೆಂದರಿತಾಗ ನಿಜವಾಗಿಯೂ ಸದಾನಂದನಿಗೆ ಗೊಂದಲವುಂಟಾಯಿತು. ತನ್ನ ವೈಯಕ್ತಿಕ ಆಯ್ಕೆ ಮೀರಿ ಇವೆರಡರಲ್ಲಿ ತಾನು ಮನೆಯ ಯಜಮಾನನಾಗಿ ಏನು ಮಾಡಬೇಕೆಂಬುದು ಯಕ್ಷ ಪ್ರಶ್ನೆಯಾಗಿ ಅವನೆದುರು ನಿಂತಿತು.


ಸದಾನಂದನ ತತ್ವ - ಸಿದ್ಧಾಂತಗಳ ಅಶ್ವಮೇಧದ ಕುದುರೆ ಒಂದು ದಿನ ಬೆಂಗಳೂರಿಗೆ ಬಂದು ತಲುಪಿತು. ಇಲ್ಲಿಗೆ ಬಂದ ಮೇಲೆ ದೈನಂದಿನ ಬದುಕಿನ ಖರ್ಚು-ವೆಚ್ಚಗಳನ್ನು ನಿರ್ವಹಿಸಿಕೊಂಡು ಹೋಗುವದು ಕಷ್ಟದಾಯಕವಾಯಿತು. ಅದೇ ಹೊತ್ತಿನಲ್ಲಿ ಒಂದು ಸ್ವಂತ ಮನೆ ಮಾಡಬೇಕೆಂಬ ಅವನ ಹೆಂಡತಿಯ ಬಹು ದಿನಗಳ ಕನಸು ಚಿಗುರೊಡೆಯ ತೊಡಗಿತು. ಆದರೆ ಸಿದ್ಧಾಂತದ ‘ಗಾಂಧಾರಿಯ ಕಣ್ಣುಪಟ್ಟಿ’ ಕಟ್ಟಿಕೊಂಡ ತನ್ನ ಗಂಡನ ಮನವೊಲಿಸುವದು ಅಷ್ಟು ಸುಲಭವಲ್ಲವೆಂಬುದು ಅವಳಿಗೂ ಗೊತ್ತಿತ್ತು. ಆದರೆ ‘ಬಿಡದೆ ಸಾಧನೆ ಮಾಡು’ ಎಂಬ ನಿಯಮದಂತೆÉ ಬೆಂಗಳೂರಿಗೆ ಬಂದ ಮೇಲೂ ತನ್ನ ಪ್ರಯತ್ನಕ್ಕೆ ವಿರಾಮ ನೀಡುವದಕ್ಕೆ ಆಕೆ ಸಿದ್ಧಳಿರಲಿಲ್ಲ.


*****************


ಈ ಮಧ್ಯೆ ಅನಿರೀಕ್ಷಿತ ಘಟನೆಯೊಂದು ಕಛೇರಿಯ ಕೆಲಸಗಳ ಕಾರ್ಯನಿರ್ವಹಣೆಯಲ್ಲಿ ಜರುಗಿತು. ಕಳೆದ ಹಲವಾರು ವರ್ಷಗಳಿಂದ ‘ಬಿಲ್ ಸೆಕ್ಷನ್’ ನೋಡುತ್ತಿದ್ದ ಸತ್ಯಮೂರ್ತಿಯನ್ನು ಆ ಸೆಕ್ಷನ್‍ದಿಂದ ಬೇರೊಂದು ಸೆಕ್ಷನ್‍ಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಬಿಲ್ ಸೆಕ್ಷನ್ ಎಂದರೆ ಸತ್ಯಮೂರ್ತಿ ಎಂಬುದು ಬದಲಾಗುವ ಕಾಲ ನಿರ್ಮಾಣವಾಯಿತು. ಅವನ ಜಾಗಕ್ಕೆ ಸದಾನಂದನನ್ನು ನಿಯೋಜಿಸಲಾಗಿತ್ತು. ಆದರೆ ಈ ಬದಲಾವಣೆಯನ್ನು ಸತ್ಯಮೂರ್ತಿ ಖಂಡಿತ ವಿರೋಧಿಸುತ್ತಾನೆಂಬ ಬಹುಜನರ ನಿರೀಕ್ಷೆ ಸುಳ್ಳಾಯಿತು. ಈ ಬಾರಿ ಆತ ತನ್ನ ಕೆಲಸದ ಬದಲಾವಣೆಯ ವಿರುದ್ಧ ಧ್ವನಿಯೆತ್ತಲೇ ಇಲ್ಲ. ಇದಕ್ಕೆ ಜನ ಬೇರೆಯೊಂದು ಕಾರಣ ಹುಡುಕಿದರು. ತನ್ನ ಕೆಲಸ ಸದಾನಂದನಿಗೆ ಹೋಗಿದ್ದುದರಿಂದಲೇ ಆತ ಸುಮ್ಮನಿದ್ದಾನೆಂದು ಅವರು ನಿರ್ಧಾರಕ್ಕೆ ಬಂದರು.


ಸದಾನಂದ ಒಲ್ಲದ ಮನಸ್ಸಿನಿಂದಲೇ ಸತ್ಯಮೂರ್ತಿಯಿಂದ ಚಾರ್ಜ ವಹಿಸಿಕೊಂಡಿದ್ದ. ಈ ವಿಭಾಗಕ್ಕೆ ಬಂದ ಮೇಲೆ ಕೆಲಸದ ಒತ್ತಡಕ್ಕಿಂತ ಗುತ್ತಿಗೆದಾರರ ಒತ್ತಡ ಹೆಚ್ಚಾಯಿತು. ಮೇಲಿಂದ ಮೇಲೆ ಗುತ್ತಿಗೆದಾರರು ಈತನ ಟೇಬಲ್ಲಿಗೆ ಬರುವದು, ಬಂದವರು ತಮ್ಮ ಬಿಲ್‍ನ್ನು ಬೇಗ ಪಾವತಿಸುವಂತೆ ಆಗ್ರಹಿಸುವದು - ನಡೆಯುತ್ತಲೇ ಇತ್ತು. ಇದನ್ನೆಲ್ಲ ಸಹಿಸಿಕೊಂಡ ಸದಾನಂದನಿಗೆ ಅವರು ಲಂಚ ಕೊಡಲು ಬಂದಾಗ ಮಾತ್ರ ಮುಜುಗರವಾಗುತ್ತಿತ್ತು. ಆದರೆ ಗುತ್ತಿಗೆದಾರರ ಒತ್ತಾಯಕ್ಕೆ ಮಣಿಯದೇ ಹಣವನ್ನು ತಿರಸ್ಕರಿದ. ಅನಾಯಾಸವಾಗಿ ಮನೆಯ ಬಾಗಿಲಿಗೆ ಬಂದ ಲಕ್ಷ್ಮಿಯನ್ನು ತಿರಸ್ಕರಿಸುತ್ತಿದ್ದ ಸದಾನಂದನನ್ನು ವಿಚಿತ್ರ ಪ್ರಾಣಿಯೆಂದು ಗುತ್ತಿಗೆದಾರರು ಆಡಿಕೊಳ್ಳತೊಡಗಿದರು. ಅದನ್ನು ಕೇಳಿದಾಗಲೆಲ್ಲ ಸದಾನಂದನ ಮನಸ್ಸಿಗೆ ನೋವಾಗುತ್ತಿತ್ತು.


ಗುತ್ತಿಗೆದಾರರು ಹಣಕೊಡಲು ಬಂದರೂ ತಿರಸ್ಕರಿಸುತ್ತಿದ್ದಾನೆಂಬ ವಿಚಾರ ಕರ್ಣೋಪಕರ್ಣವಾಗಿ ಅವನ ಮಡದಿಯ ಕಿವಿಗೂ ತಲುಪಿತು. ಒಂದು ದಿನ ಸಮಯಾವಕಾಶ ನೋಡಿ ಆಕೆ ಗಂಡನನ್ನು ತರಾಟೆಗೆ ತೆಗೆದುಕೊಂಡಳು. ಮನೆಗೆ ಬಂದ ಲಕ್ಷ್ಮಿಯನ್ನು ಕಾಲಿನಿಂದ ಒದೆಯುವದು ಮೂರ್ಖತನದ ಪರಮಾವಧಿಯೆಂದು ಆಕ್ಷೇಪಿಸಿದಳು. ಹೆಂಡತಿಯ ಮಾತನ್ನು ಕೇಳಿ ಸದಾನಂದನಿಗೆ ಸಿಟ್ಟು ತಡೆಯಲಾಗಲಿಲ್ಲ. ಗಂಡ-ಹೆಂಡಿರ ಮಧ್ಯೆ ಮಾತಿಗೆ ಮಾತು ನಡೆದು ಮನೆಯೇ ಕುರುಕ್ಷೇತ್ರವಾಗಿ ಪರಿಣಮಿಸಿತು. ಕಾಲೇಜಿಗೆ ಹೋಗುವ ಮಗ ಪರಿಪರಿಯಾಗಿ ಬೇಡಿಕೊಂಡರೂ ಕದನವಿರಾಮ ಸಾಧ್ಯವಾಗಲಿಲ್ಲ. ರಾತ್ರಿ ಗಂಡ-ಹೆಂಡರಿಬ್ಬರೂ ಊಟ ಮಾಡದೇ ಬೇರೆ ಬೇರೆ ಕೋಣೆಯಲ್ಲಿ ಹಾಸಿಗೆ ಹಾಕಿಕೊಂಡು ಮಲಗಿದರು.


ಮರುದಿನ ಆದಿತ್ಯವಾರ. ಕಛೇರಿಗೆ ರಜೆಯಾಗಿದ್ದರಿಂದ ಸದಾನಂದ ತಡವಾಗಿ ಎದ್ದರೂ ಹೆಂಡತಿ ಇನ್ನೂ ಹಾಸಿಗೆಯಲ್ಲಿ ಮಲಗಿದ್ದಳು. ಭೂತ್‍ನಿಂದ ಹಾಲು ತಂದು ಫ್ರಿಜ್‍ನಲ್ಲಿಟ್ಟು ಹೆಂಡತಿಯನ್ನು ಎಬ್ಬಿಸಲು ನೋಡಿದ . ಅದರೆ ಜಗಳ ರಾತ್ರಿಯೇ ಮುಗಿದಿದ್ದರೂ ಅದರ ಹ್ಯಾಂಗೋವರ್ ಮಾತ್ರ ಅವಳ ಮುಖದಲ್ಲಿ ಎದ್ದುಕಾಣುತ್ತಿತ್ತು.


ಸದಾನಂದ ಸೀದಾ ಅಡಿಗೆ ಮನೆಗೆ ಹೋಗಿ ಚಹಾ ಮಾಡಿಕೊಂಡು ಬಂದು ಹಾಲಿನಲ್ಲಿ ಕುಳಿತು ದಿನದ ಪೇಪರನ್ನು ಕೈಗೆತ್ತಿಕೊಂಡ. ಅದರೆ ಕಣ್ಣು ಪೇಪರಿನ ಮೆಲಿದ್ದರೂ ಅವನ ಮನಸ್ಸು ಮಾತ್ರ ಬೇರೆತ್ತಲೋ ಲಂಗು ಲಗಾಮಿಲ್ಲದ ಕುದುರೆಯಂತೆ ಓಡುತ್ತಿತ್ತು.


ನಾನು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ತತ್ವದ ಬೆನ್ನೇರಿ ಅಜೇಯನಾಗಿ ಇಲ್ಲಿಯವರೆಗೆ ಬಂದಿದ್ದೇನೆ. ಆದರೆ ನನ್ನ ಬದುಕಿನ ಪೂರ್ತಿ ನಾನು ನಂಬಿದ ತತ್ವವನ್ನು ಕಛೇರಿಯ ನನ್ನ ಸಹೋದ್ಯೋಗಿಗಳಾಗಲಿ ಅಥವಾ ಮನೆಯಲ್ಲಿರುವ ನನ್ನ ಮಡದಿಯಾಗಲಿ ಎಂದೂ ಬೆಂಬಲಿಸಲಿಲ್ಲ. ಹೀಗಿರುವಾಗ ನಾನು ಯಾರ ಸಲುವಾಗಿ ನನ್ನ ತತ್ವ ಸಿದ್ಧಾಂಗಳನ್ನು ಹಿಡಿದು ಬದುಕಲಿ? ಸಂಸಾರದಲ್ಲಿ ಸಾಮರಸ್ಯದ ಹಳಿಯನ್ನೇ ತಪ್ಪಿಸ ಹೊರಟಿರುವ ನನ್ನ ಈ ಸಿದ್ಧಾಂತಮಯೀ ಬದುಕು ಅಹಂಕಾರದ ಅಮೂರ್ತರೂಪವೇ ?.


ಅವನ ಚಿಂತನೆಗೆ ಮುಂದೆ ದಾರಿ ಕಾಣದಂತಾಯಿತು. ಹೆಂಡತಿಯ ಮಾತು ಕಪ್ಪು ಕೋಟು ಧರಿಸಿದ ನ್ಯಾಯವಾದಿಯಂತೆ ಎದ್ದುನಿಂತು - ನಿಮಗೆ ಕಾಡಿ ಬೇಡಿ ಹಣ ಗಳಿಸಿ ಎಂದು ನಾನು ಹೇಳುತ್ತಿಲ್ಲ; ಆದರೆ ಅನಾಯಾಸವಾಗಿ ನಿಮ್ಮ ಬಳಿ ಬರುವ ಲಕ್ಷ್ಮಿಯನ್ನು ಧಿಕ್ಕರಿಸಬೇಡಿ – ಎಂದು ವಾದಿಸಿದಂತೆ ಸದಾನಂದನಿಗೆ ಅನಿಸಿತು.


ತನ್ನ ವರ್ಗ ಸಂಘರ್ಷದ ಹಳೆಯ ಮಿತ್ರರು ಬೆಂಗಳೂರಿನಲ್ಲಿ ಮನೆಯ ಮೇಲೆ ಮನೆಕಟ್ಟಿ ಬರುವ ಬಾಡಿಗೆಗೆ ಇನ್‍ಕಮ್ ಟ್ಯಾಕ್ಸ್ ತಪ್ಪಿಸುತ್ತಿರುವ ಜೀವಂತ ನಿದರ್ಶನ ನನ್ನೆದುರಿಗೆ ಇಲ್ಲವೇ?


ನಾನು ಉದ್ಯೋಗಕ್ಕೆ ಸೇರಿದ ಹೊಸತರಲ್ಲಿ ನನ್ನ ಸಹೋದ್ಯೋಗಿಯೊಬ್ಬ ಭೋಧಿಸಿದ ‘ಗೀತೋಪದೇಶ’ದ ಸಾರವೂ ಅದೆ ಅಲ್ಲವೇ ?


ಚಹಾಕಪ್ಪನ್ನು ಬೇಸಿನ್ನಲ್ಲಿಟ್ಟು ಹಾಗೆಯೇ ಬಚ್ಚಲಮನೆಗೆ ತೆರಳಿ ಸ್ನಾನ ಮಾಡಿ ಸನಿಹದ ಬ್ಯಾಂಕಿನತ್ತ ಹೊರಟ. ರವಿವಾರವೂ ಕಾರ್ಯನಿರ್ವಹಿಸುವ ಆ ಬ್ರಾಂಚಿನ ಮ್ಯಾನೇಜರ್ ಅವನ ಊರಿನವನೇ ಆಗಿದ್ದ. ಹೀಗಾಗಿ ಒಂದು ಎಸ್.ಬಿ.ಎಕೌಂಟ್ ತೆರೆಯುವುದು ಸುಲಭವಾದೀತು ಎಂದು ಭಾವಿಸಿ ಬ್ಯಾಂಕಿಗೆ ಹೋದ.


ಸದಾನಂದ ಅಲ್ಲಿಗೆ ತಲುಪುವ ಹೊತ್ತಿಗೆ ಗೇಟಿನಲ್ಲಿ ಸತ್ಯಮೂರ್ತಿ ಎದುರಾದ. ಅನಿರೀಕ್ಷಿತವಾಗಿ ಆತನನ್ನು ಕಂಡ ಸದಾನಂದನಿಗೆ ತನ್ನ ನಿರ್ಧಾರಕ್ಕೆ ಆನೆ ಬಲಬಂದಂತೆ ಅನಿಸಿತು. ಹುಮ್ಮಸ್ಸಿನಿಂದ ಆತನನ್ನು ಕರೆದುಕೊಂಡು ಪಕ್ಕದ ಹೊಟೆಲಿಗೆ ನುಗ್ಗಿದ. ಚಹಾಕ್ಕೆ ಆರ್ಡರ್ ಮಾಡಿ ತನ್ನ ಮನದಾಳದ ಇಂಗಿತವನ್ನು ಸತ್ಯಮೂರ್ತಿಯ ಎದುರು ಸಂಪೂರ್ಣವಾಗಿ ಬಿಚ್ಚಿಟ್ಟ. ಸದಾನಂದನ ಮಾತು ಕೇಳುತ್ತ ಹೋದಂತೆ ಸತ್ಯಮೂರ್ತಿಯ ವದನ ಮಾತ್ರ ಮ್ಲಾನಗೊಳ್ಳುತ್ತಿತ್ತು. ಇದ್ದಕಿದ್ದಂತೆ ಎದ್ದು ನಿಂತು ಆತ ಸದಾನಂದನ ಕೈಯನ್ನು ಗಟ್ಟಿಯಾಗಿ ಹಿಡಿದು, “ ಸರ್, ಬ್ಯಾಂಕ್ ಎಕೌಂಟ್ ತೆರೆಯಬೇಡಿ, ದಯವಿಟ್ಟು ನನ್ನ ಮಾತು ಕೇಳಿ” ಎಂದು ಅಂಗಲಾಚಿ ಬೇಡಿಕೊಂಡ.!


ಸದಾನಂದನ ಮನಸ್ಸಿಗೆ ತಾನು ಬದುಕಿನಲ್ಲಿ ಮತ್ತೊಮ್ಮೆ ಸೋತೆ ಅನಿಸಿತು !.


- ಶ್ರೀಪಾದ ಹೆಗಡೆ,ಸಾಲಕೋಡ


ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರುತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನುಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. ನಮ್ಮ ಪತ್ರಿಕೆಯ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ- ಸಂಪಾದಕ


75 views0 comments
bottom of page