ಸಾಹಿತ್ಯ ಮತ್ತು ಸಾಮಾಜಿಕತೆ
ಸಾಹಿತಿಯು ದಂತಗೋಪುರದಲ್ಲಿ ಕುಳಿತು ಸಾಹಿತ್ಯ ರಚಿಸಲು ಸಾಧ್ಯವಿಲ್ಲ. ಆತ ನೆಲಮಟ್ಟಕ್ಕೆ ಇಳಿದು ತನ್ನವರ ಕಣ್ಣೀರು ಒರೆಸಲು ಪ್ರಾಣಮಿತ್ರನಾಗಿ ತುಡಿಯಬೇಕೆಂಬುದರ ಬಗ್ಗೆ ಎರಡು ಮಾತು ಇರಲಾರದು. ಆತನ ರಚನೆಯು ಸಮಾಜಮುಖಿಯಾಗಿದ್ದು ಲೋಕದ ದೈನಂದಿನ ಅಗತ್ಯಗಳೊಂದಿಗೆ ಮತ್ತು ಸಮಸ್ಯೆಗಳೊಂದಿಗೆ ವ್ಯವಹರಿಸುತ್ತ ಲೋಗರ ಅಗತ್ಯಗಳಿಗೆ ಒದಗಿ ಬರಬೇಕು ಎಂಬುದೂ ನಿಜವೇ. ಆದರೆ ಅದರರ್ಥ ಸ್ವತಃ ಆತ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ನೇರವಾಗಿ ಯುದ್ಧರಂಗಕ್ಕಿಳಿಯಬೇಕೆಂದಲ್ಲ.
ಸಾಹಿತ್ಯವು ಒಂದು ಕಲಾ ಪ್ರಕಾರವಾಗಿರುವುದರಿಂದ ಸಾಹಿತಿಯ ಅಭಿವ್ಯಕ್ತಿಯು ಅಕ್ಷರದ ಮೂಲಕ ಕಲಾತ್ಮಕವಾಗಿ ಮೂಡಬೇಕಾದುದು ಅಗತ್ಯ. ಸಾಹಿತಿಯು ಅಕ್ಷರದೊಂದಿಗೆ ವ್ಯವಹರಿಸುವವನು. ನಾಲಗೆಯೊಂದಿಗೆ ಅಲ್ಲ. ’ನಾಲಗೆ’ ಇವತ್ತಿನ, ಪ್ರಸ್ತುತದ ಅಗತ್ಯಕ್ಕೆ ಬೇಕಾದುದು. ’ಅಕ್ಷರ’ ಇವತ್ತಿನ ಅಗತ್ಯದ ಜೊತೆಗೆ ನಾಳೆಯ ಅಗತ್ಯಕ್ಕೂ ಬೇಕಾದುದು. ಕೇವಲ ಇವತ್ತಿನ ಜಗಳಗಳಲ್ಲಿ ಮುಳುಗಿದರೆ ಸಾಹಿತ್ಯ ಬರೆಯುವುದು ಯಾವಾಗ?
’ನಾಲಗೆ ಸಾಮಾಜಿಕರ ಅಗತ್ಯಕ್ಕೆ ಅಥವಾ ರಾಜಕಾರಣಿಯ ಅಗತ್ಯಕ್ಕೆ ಬೇಕು. ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿ ಸೈನಿಕನಾಗಿರುವುದರಿಂದ ಆತನಿಗೆ ನಾಲಗೆ ತೀರ ಅಗತ್ಯ. ಸಾಹಿತಿಯ ಅಸ್ತ್ರ ಅಕ್ಷರ. ತನ್ನ ಪ್ರತಿಭೆ ಸಾಮರ್ಥ್ಯಗಳನ್ನು ಸಾಹಿತಿ ಅಕ್ಷರದ ಮೂಲಕ ಕಲಾತ್ಮಕ ಅಭಿವ್ಯಕ್ತಿಯಲ್ಲಿ ತೋರಿಸಬೇಕಲ್ಲದೆ ರಾಜಕಾರಣಿಯ ಹಾಗೆ ನಾಲಗೆಯ ಮೂಲಕ ತೋರಿಸ ಹೊರಟರೆ ಆತ ಸಾಹಿತಿ ಹೇಗಾದಾನು? ಸಾಹಿತಿ ರಾಜಕಾರಣಿಯಾದರೆ ನಿಜವಾದ ರಾಜಕಾರಣಿ ಏನು ಮಾಡಬೇಕು? ಸಾಹಿತಿ ಮಾತಾಡುವುದಲ್ಲ, ಬರೆಯಬೇಕು!
ಸಮಾಜದ ಎಲ್ಲ ಭಾರವನ್ನೂ ತಾನೇ ಹೊತ್ತಿದ್ದೇನೆಂದು ಎಲ್ಲದರಲ್ಲೂ ಮೂಗು ತೂರಿಸುವ ಸಾಹಿತಿಗಳ ಅತಿಯಾದ ವಾಚ್ಯತೆಯೇ ಅವರ ಸ್ಥಾನಗೌರವವನ್ನು ಕಡಿಮೆ ಮಾಡುತ್ತಿರುವ ಅಂಶ ಎಂದು ತೋರುತ್ತದೆ. ಸಮಾಜದ ಪ್ರತಿಯೊಂದು ವಿಚಾರದ ಬಗ್ಗೆ ಪಾಂಡಿತ್ಯ ಹೊಂದಿರಲು ಯಾರಿಗೂ ಸಾಧ್ಯವಿಲ್ಲ. ಆದರೆ ಇವತ್ತು ಲೇಖಕ – ಸಾಹಿತಿಯಾದವನು ಈ ಭೂಮಿಯಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆ ತಾನೇ ಎಲ್ಲವನ್ನೂ ತಿಳಿದವನು ಎಂಬಂತೆ ಮಾತಾಡುತ್ತಾನೆ!
ಸಾಹಿತಿ ಸಾಹಿತ್ಯ ಬರೆಯುವುದು ಬಿಟ್ಟು ಸಾಮಾಜಿಕ ಹೋರಾಟಗಾರನಾಗಿ ಪರಿವರ್ತಿತನಾಗಿರುವುದು ಇವತ್ತಿನ ಚೋದ್ಯ. ಸಾಮಾಜಿಕ ಮಾಧ್ಯಮಗಳನ್ನು ನೋಡಿದರೆ ಇದು ಅತ್ಯಂತ ಢಾಳಾಗಿ ಕಣ್ಣಿಗೆ ರಾಚುತ್ತದೆ. ಎಲ್ಲ ವಿಷಯಗಳ ಕುರಿತು ಕುಳಿತಲ್ಲಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವ್ಯಾಖ್ಯಾನವನ್ನು ಪಾಂಡಿತ್ಯವನ್ನು ವಿಮರ್ಶೆಗಳನ್ನು ಬರೆಯುವುದನ್ನು ನೋಡಿದರೆ ಲೇಖಕರ-ಸಾಹಿತಿಗಳ ಈ ಅತೀ ವಾಚ್ಯತೆ ಅವರನ್ನು ಹಾಸ್ಯಾಸ್ಪದ ಸ್ಥಿತಿಗೆ ತಂದು ನಿಲ್ಲಿಸಿದಂತೆ ಕಾಣುತ್ತದೆ. ಸಾಹಿತ್ಯ ಬರೆಯುವುದನ್ನು ಬಿಟ್ಟು ಜಗಳವಾಡುತ್ತ ಕುಳಿತುಬಿಟ್ಟರೆ ಓದುಗರಿಗೆ ಏನನ್ನು ಕೊಟ್ಟಂತಾಯಿತು?
ಇವತ್ತು ನಮ್ಮ ಸಾಹಿತ್ಯಲೋಕ ಅತಿಯಾದ ಮಾತಿನಿಂದ ನರಳಿ ತೀರಾ ವಾಚ್ಯತೆಯ ಕಡೆಗೆ ಸಾಗಿರುವಂತೆ ತೋರುತ್ತದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಸಮಾಜ ಮತ್ತು ಸಾಮಾಜಿಕ ಮಾಧ್ಯಮ ಎಲ್ಲೆಡೆಯೂ ನಕಾರಾತ್ಮಕ ಶಕ್ತಿಗಳದೇ ವಿಜೃಂಭಣೆ ನಡೆಯುತ್ತಿರುವಂತೆ ಕಾಣುತ್ತಿದೆ! ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸುವ ಯಾರೇ ಆದರೂ ಶಾಂತಿಯಿಂದ ನೆಮ್ಮದಿಯಿಂದ ಹೊರಬರಲು ಸಾಧ್ಯವಿಲ್ಲ ಎಂಬಂತಾಗಿದೆ. ಇಷ್ಟೊಂದು ನಕಾರಾತ್ಮಕ ಪ್ರಭಾವವನ್ನು ಸಾಮಾಜಿಕ ಮಾಧ್ಯಮವು ಸಮಾಜಕ್ಕೆ ಚುಚ್ಚುವುದಾದರೆ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಚಿಂತೆ ಮೂಡದಿರದು.
ಸಾಮಾಜಿಕ ಮಾಧ್ಯಮ ಎಂಬುದು ಒಂದು ಸಂತೆಯಿದ್ದಂತೆ. ಸಂತೆಯಲ್ಲಿ ಯಾರ ಜತೆಗೋ ಏನೇನೋ ವಿಚಾರಗಳನ್ನು ಮಾತಾಡುವ ಅಗತ್ಯವಿಲ್ಲ; ಸಂತೆಯಿಡೀ ಅನಾವಶ್ಯಕ ಸುತ್ತಾಡುವ ಅಗತ್ಯವೂ ಇಲ್ಲ. ನಮಗೆ ಬೇಕಾದ್ದನ್ನು ಕೊಂಡು ತಕ್ಷಣ ನಿರ್ಗಮಿಸಿ ಬಿಡಬೇಕು. ಇಲ್ಲವಾದರೆ ಬೇಡದ ವಿಚಾರಗಳಿಗೆ ಬಿದ್ದು ಸಂತೆಯಲ್ಲಿ ಕಳೆದು ಹೋಗುವ ಸಾಧ್ಯತೆಯೇ ಅಧಿಕ! .
- ಡಾ. ವಸಂತಕುಮಾರ ಪೆರ್ಲ
Comments