If a change of glasses improve our eyesight. A change of thoughts improve our life.- what's app msg
ನಮ್ಮ ವಿಚಾರ ಧಾರೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಸುಧಾರಿಸಿಕೊಳ್ಳ ಬಹುದು. ಕೆಲವೊಮ್ಮೆ ನಾವು ಯತಾಸ್ಥಿತಿ ವಾದಕ್ಕೆ ಕಟ್ಟು ಬಿದ್ದು ಅಜ್ಜ ನೆಟ್ಟ ಆಲದ ಮರ ಸತ್ತು ಹೋಗಿದ್ದರು ಅದು ಇದ್ದ ತಾವಿಗೆ ನೀರೆರೆದು ಖುಷಿ ಪಡುವ ಮನಸ್ಥಿತಿಗೆ ಕಟ್ಟು
ಬಿದ್ದಿರುವುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ.' ನಿಲೆ ಕೊಳಚೆ ಹರಿಯೆ ಪಾವನದ ಗಂಗೆ' ಎಂಬ ಕುವೆಂಪು ವಾಣಿ ಇಲ್ಲಿ ಉಲ್ಲೇಖನಾರ್ಹ.ಬದಲಾವಣೆ ನಮ್ಮೊಳಗೆ,ನಮ್ಮ ಹೊರಗೆ,ನಮ್ಮ ಸುತ್ತಮುತ್ತ ನಡೆಯುತ್ತಲೆ ಇರುತ್ತದೆ.ಕೆಲವು ನಮಗೆ ಸ್ಪಷ್ಟವಾಗಿ ಕಂಡರೆ ಮತ್ತೆ ಕೆಲವು ನಮಗೆ ಗೋಚರಿಸುವುದಿಲ್ಲ.ಅದನ್ನು ಗಮನಿಸುವ ಆಸಕ್ತಿಯು ನಮಗೆ ಇರುವುದಿಲ್ಲ.
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನ ಸಭೆಯ ಚುನಾವಣೆ ಬಹಳ ಜನ ನಿರೀಕ್ಷಿಸದೆ ಇದ್ದ ಬದಲಾವಣೆಯನ್ನು ತಂದಿದೆ. ಇದರ ಬಗ್ಗೆ ಮಾತನಾಡುವುದು ಕೆಲವರಿಗೆ ಇಷ್ಟವಿಲ್ಲ. ಆದರೆ ಹಲವರಿಗೆ ಅದು ಇಷ್ಟ. ರಾಜಕಾರಣದ ಒಂದು ಭಾಗವೆ ಆಗಿರುವ ನಾವು ನೀವು ಅದರ ಬಗ್ಗೆ ಸ್ಪಂದಿಸ ಬೇಕಾದ ಅಗತ್ಯವಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಅದರ ಅಮೃತ ಮಹೋತ್ಸವದ ಆಚರಣೆಯು ಮುಗಿದು ಹೋಗಿದೆ.
' ನನ್ನದು ಈ ದೇಶ ನನ್ನದು ಈ ನಾಡು
ಎನ್ನದ ಮಾನವನೆದೆ ಸುಡುಗಾಡು'
ಎಂಬ ಕುವೆಂಪು ವಾಣಿಯನ್ನು ಕೇಳದ ನಮ್ಮ ಬಹುಪಾಲು ರಾಜಕಾರಣಿಗಳು ' ಬೀಸುವ ಗುಂಡಿಗೆ ಮುಕ್ಕಿದ್ದೆ ಲಾಭ' ಎಂಬ ಗಾದೆಯಂತೆ ಕಳೆದ ಐವತ್ತು ವರ್ಷಗಳಿಂದ ಸ್ವಂತ ಜೀರ್ಣೋದ್ಧಾರದ ಕೆಲಸದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾರೆ. ಇದರಿಂದ ನಮ್ಮ ದೇಶ ಮತ್ತು ನಾಡಿನ ಸ್ಥಿತಿ ದುರ್ಗತಿಯಾಗಿದೆ. ದೇಶವನ್ನು ಸುಸ್ಥಿತಿಗೆ ತರಲು ಇಚ್ಛಾಶಕ್ತಿಯುಳ್ಳ ಜನ ನಾಯಕರು,ಸುಶಿಕ್ಷಿತರು,ಪ್ರಜ್ಞಾವಂತರು ಅನ್ಯಾಯವನ್ನು ಕಂಡು ವಸ್ತ್ರಾಪಹರಣದ ಪಾಂಡವರಂತೆ ಕೈಕಟ್ಟಿ ಕುಳಿತುಕೊಳ್ಳದೆ ಆ ಬಗ್ಗೆ ಜನ ಜಾಗ್ರತಿಯನ್ನುಂಟು ಮಾಡುವ ಕೆಲಸವನ್ನು ತಮ್ಮ ಬರವಣಿಗೆ,ರಂಗ ಪ್ರಯೋಗ,ವಿಧಾಯಕ ಪತ್ರಿಕೋದ್ಯಮ, ಪ್ರತಿಭಟನೆ,ಚಳುವಳಿಗಳ ಮೂಲಕ 'ಸರ್ವರಿಗು ಸಮ ಪಾಲು ಸರ್ವರಿಗು ಸಮ ಬಾಳು' ಎಂಬ ಮನಸ್ಥಿತಿಯನ್ನು ರೂಢಿಸ ಬೇಕು. ಆಗ ಜನರಿಂದ ಆಯ್ಕೆಯಾದ ಸರ್ಕಾರವು ತನ್ನ ಕಾರ್ಯ ಸೂಚಿಯನ್ನು ಸಿದ್ಧ ಪಡಿಸಿಕೊಂಡು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ. ಜನಪರವಾದ ಕೆಲಸ ಮಾಡಿದ ಸರ್ಕಾರ ಬದುಕುತ್ತದೆ.ಕೆಲವು ಜನಪರವಾದ ಕೆಲಸ ಮಾಡಿದ ಸರ್ಕಾರ ಉರುಳುತ್ತದೆ. ಇತಿಹಾಸದಲ್ಲಿ ಇದಕ್ಕೆ ಬಹಳಷ್ಟು ಉದಾಹರಣೆ ಸಿಗುತ್ತದೆ. ಈ ಸಲದ ಚುನಾವಣೆಯಲ್ಲಿ ತಮ್ಮ ಪ್ರಜ್ಞಾವಂತಿಕೆಯನ್ನು ಮೆರೆದ ಮತದಾರಪ್ರಭುಗಳು ಬದಲಾವಣೆಗೆ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದೆ.
ಅಧಿಕಾರಕ್ಕಿಂತ ಜನಸಾಮಾನ್ಯರ ಸುಸ್ಥಿರ ಅಭಿವೃದ್ಧಿಯ ಕಡೆ ಆಳುವವರು ಗಮನ ಕೊಡಬೇಕು.
ಬರ ಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಎಂಬ ಮಾತಿಗೆ ಎಡೆ ಮಾಡಿ ಕೊಡ ಬಾರದು.
ಈ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಹಾರ ಶಾಲುಗಳ ಬದಲಾಗಿ ಪುಸ್ತಕಗಳನ್ನು ಮಾತ್ರ ಸ್ವೀಕರಿಸುವ,ತಾನು ಸಂಚರಿಸುವ ಕಡೆ ಝೀರೊ ಟ್ರಾಫಿಕ್ ಬೇಡ ಎನ್ನುವ ಹೇಳಿಕೆಯ ಮೂಲಕ ಜನ ನಾಯಕರಾದ ಸಿದ್ದರಾಮಯ್ಯನವರು ತಮ್ಮ ಸ್ಥಾನ ಮತ್ತು ಮಾನಕ್ಕೆ ಘನತೆ ತಂದು ಕೊಟ್ಟಿದ್ದಾರೆ.ಇದೆ ಬಗೆಯ ಹಲವು ಜನಪರವಾದ ನಿರ್ಧಾರಗಳನ್ನು ಎಲ್ಲ ಸಚಿವರು, ಶಾಸಕರು ,ಅಧಿಕಾರಿಗಳು ಕೈಗೊಳ್ಳಲಿ. ಇದು ಆಲೋಚನೆಯ ಆಶಯ. ಹೊಸ ಸರ್ಕಾರಕ್ಕೆ ಶುಭಾಶಯ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments