top of page

ಆಲೋಚನೀಯ

ಬಡತನ ಅಸಂತೋಷ ಉಂಟು ಮಾಡುವುದಿಲ್ಲ,ಅವನತಿಗೊಳಿಸುತ್ತದೆ. - ಜಾರ್ಜ್ ಬರ್ನಾರ್ಡ್ ಷಾ.


ಬಡತನದ ಬಗ್ಗೆ ಜನರೆಲ್ಲ ಅಹುದು ಅಹುದೆಂದು ತಲೆದೂಗುವ ಹಾಗೆ  ಭಾಷಣ ಮಾಡಬಹುದು,ಪ್ರಬಂಧ ಬರೆದು ಪ್ರಥಮ ಬಹುಮಾನ ಪಡೆಯ ಬಹುದು,ಕತೆ,ಕವನ,ಕಾದಂಬರಿ ಬರೆದು ಪ್ರಶಸ್ತಿ,ಬಹುಮಾನ ಪಡೆದು ಸನ್ಮಾನಿತರಾಗ ಬಹುದು.ವಿಧಾನ ಸಭೆ,ಲೋಕ ಸಭೆಗಳಲ್ಲಿ ಅಂಕಿ ಸಂಖ್ಯೆಗಳೊಂದಿಗೆ ದಿನಗಟ್ಟಲೆ ವಾದ ಪ್ರತಿವಾದ ಮಾಡ ಬಹುದು,ಸಭಾ ತ್ಯಾಗ,ಸದನ ಮುಂದೂಡುವಿಕೆ ಎಲ್ಲ ವಿಷಯಕ್ಕು ಬಡತನ ಬಂಡವಾಳವಾಗ ಬಲ್ಲುದು. ಆದರೆ ಅದನ್ನೆ ಬದುಕುವ ಬಡವನಿಗೆ ಈ ಬಗ್ಗೆ ಅರಿವಾಗಲಿ,ಪರಿವೆಯಾಗಲಿ ಇರುವುದಿಲ್ಲ.ಬಡವ ಬಡವನಾದಷ್ಟುಬಂಡವಾಳ ಶಾಹಿಗಳು ಬಲಾಢ್ಯರಾಗಿತ್ತಾರೆ.ಗರೀಬಿ ಹಟಾವೊ ಘೋಷಣೆ,ಬಡವರ ಸಬಲೀಕರಣ,ಬಡವರ ಉದ್ದಾರದ ಅಭಿವೃದ್ಧಿ ಯೋಜನೆಗಳು ಎಲ್ಲವು ಮದ್ಯವರ್ತಿಗಳನ್ನು, ಅಧಿಕಾರಶಾಹಿಗಳನ್ನು, ರಾಜಕಾರಣಿಗಳನ್ನು,ಗುತ್ತಿಗೆದಾರರನ್ನು ಬೆಳೆಸಲಿಕ್ಕಾಗಿಯೆ ರೂಪುಗೊಂಡಂತಿರುತ್ತವೆ.ಕಾಗದದಲ್ಲಿ ರೂಪುಗೊಂಡ ಬಡವರುದ್ಧಾರದ ನೂರಾರು ಯೋಜನೆಗಳು ಕಾಗದ ಪತ್ರದಲ್ಲಿಯೆ ಮುಗಿದು ಹೋಗಿರುತ್ತದೆ.ಫಲಾನುಭವಿಗಳಿಗೆ ಅದು ಗಮನಕ್ಕೆ ಬರುವುದೆ ಇಲ್ಲ.ಬಂದರೂ ಅವರ ಕಿಸೆಗೆ ಒಂದಿಷ್ಟು ಚಿಲ್ಲರೆ ಕಾಸು ತುರುಕಿ ಅವರ ಬಾಯಿ ಮುಚ್ಚಿಸುವ ಪುಢಾರಿಗಳು ಎಲ್ಲೆಡೆ ಇದ್ದಾರೆ.


  ಬಡವರ ಉದ್ಧಾರದ ಹೆಸರಿನಲ್ಲಿ ಹೊಸ ಭೂ ಸುಧಾರಣೆ ಕಾನೂನು ಸುಗ್ರಿವಾಜ್ಞೆಯ ಮೂಲಕ ಸದ್ಯ ಜಾರಿಗೊಳ್ಳಲಿದೆ.ಉದ್ಯಮಿಗಳಿಗೆ ಹಿತವಾಗುವಂತೆ ಕಾರ್ಮಿಕ ಕಾನೂನು ಸದ್ಯ ರೂಪುಗೊಳ್ಳಲಿದೆ

  ೧೯೭೪ ರಲ್ಲಿ ಜಾರಿಗೆ ಬಂದ ಊಳುವವನೆ ಹೊಲದೊಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣೆ ಕಾನೂನು ಲಕ್ಷಾಂತರ ಜನರ ಬಾಳಿಗೆ ಹೊಸ ಬೆಳಕನ್ನು ನೀಡಿದೆ.ಅದಕ್ಕೂ ಪೂರ್ವದ ರೈತರ ಸಂಕಷ್ಟವನ್ನು ಶ್ರುತ ಪಡಿಸುವ ಕೊರಡ್ಕಲ್ ಶ್ರೀನಿವಾಸರ " ದನಿಯರ ಸತ್ಯನಾರಾಯಣ" ಕತೆಯನ್ನು ಪ್ರಜ್ಞಾವಂತರು ಈ ಸಂದರ್ಭದಲ್ಲಿ ಓದಲೇ ಬೇಕು. ಬದಲಾದ ಕಾನೂನು ಧನಾಢ್ಯರೆಲ್ಲ ಭೂ ಮಾಲಿಕರಾಗಲು ಹಸಿರು ನಿಶಾನೆ ತೋರಿದೆ.ಭಾರತ ಮತ್ತು ಜಗತ್ತಿನ ಯಾವುದೆ ಶ್ರೀಮಂತ ಭೂ ಮಾಲಿಕನಾಗಬಲ್ಲ.


  ಬಡವರ ಉದ್ದಾರಕ್ಕಾಗಿಯೆ ನಾವು ಜನ್ಮ ತಾಳಿ ಬಂದವರೆಂದು ಮೊಸಳೆ ಕಣ್ಣೀರು ಸುರಿಸುವ ಖದೀಮರು ಗರೀಬಿ ಹಟಾವೊ ಬದಲು ಗರೀಬರನ್ನು ಓಡಿಸುವ ಹುನ್ನಾರ ನಡೆಸಿದಂತಿದೆ.

ಬಡವರು ಒಗ್ಗಟ್ಟಾಗಿ ಹೋರಾಟ ಮಾಡುವುದು ಸದ್ಯಕ್ಕೆ ಸಾಧ್ಯವಾಗದ ಕೆಲಸವೆ ಸರಿ.ಬಡತನ ಅವರನ್ನು ಪಶುವಿಗಿಂತ ಕೀಳಾಗಿ ಮಾಡಿದೆ. ಅವರ ಮತವೊಂದಿದ್ದರೆ ನಮ್ಮ ಗೆಲುವು ಶತ ಸಿದ್ಧ ಎಂದು ನಂಬಿ ನಾಟಕವಾಡಿದ ಆಳುವ ವರ್ಗ, ಜಮೀನ್ದಾರಿಗಳು ರೈತ ಮತ್ತೆ ಊರಿಗೆ ತಿರುಗಿ ಬರದಂತೆ  ಶತಾಯು ಗತಾಯು ಪ್ರಯತ್ನ ಮಾಡುತ್ತಲೆ ಇದ್ದಾರೆ.ಈ ಕಪಟ ನಾಟಕಕ್ಕೆ ತೆರೆ ಬೀಳುವುದು ಎಂದು!!!


     ಮರ್ಯಾದೆ ಬಿಟ್ಟು  ಹಣ ಸಂಪಾದನೆ ಮಾಡು ಆ ಮೇಲೆ  ಮರ್ಯಾದೆ ತಾನೆ ತಾನಾಗಿ ಬರುತ್ತದೆ.ಎಂಬ ಸಿದ್ಧಾಂತಿಗಳ  ಬಳಗ ಅಸ್ಥಿತ್ವದಲ್ಲಿದೆ."ಬಿಳಿಯರಾದೊಡೇಂ ಕರಿಯರಾದೊಡೇಂ ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ" ಕವಿ ಕುವೆಂಪು ಕಾವ್ಯ ವಾಣಿ ಸತ್ಯವಾಗಿಯೆ ಇದೆ.ಕಾರ್ಪೋರೇಟ ಜಗತ್ತು ಬೆಳೆಯುತ್ತಲೆ ಇದೆ.ಭೂಮಿ ತಾಯಿಯ ಚೊಚ್ಚಿಲ ಮಗನನ್ನು ಕಂಡು " ಮುಗಿಲೆಂಬುದು ಕಿಸಿದಿತು ಹಲ್ಲು,ಬೆಳೆದ ಬೆಳೆಯುು ಮಿಡಿಚಿಯ ಮೇವು" ಬೇಂದ್ರೆಯವರ ಕವಿತೆಯ ಸಾಲುಗಳಿವು.

         ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತರು ಅನಿಸಿಕೊಂಡವರೆಲ್ಲ ವಸ್ತ್ರಾಪಹರಣದ ಪಾಂಡವರಂತೆ ತಲೆ ತಗ್ಗಿಸಿ,ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಗೆ ಪರಿಹಾರವೇನು?


     ಡಾ.ಶ್ರೀಪಾದ ಶೆಟ್ಟಿ.

66 views1 comment
bottom of page