top of page

ಆಲೋಚನೀಯ ೧೦


[ನಮ್ಮ ಪತ್ರಿಕೆಯ ಸಂಪಾದಕರಾದ ಶ್ರೀ ಶ್ರೀಪಾದ ಶೆಟ್ಟಿಯವರು ಈಗ ತಾನೇ ಸಿದ್ಧಪಡಿಸಿ ಕಳಿಸಿದ ತಮ್ಮ ಕಾಲಿಕ ಸಂಪಾದಕೀಯ ಲೇಖನ ಆಲೋಚನೀಯ -10 ನ್ನು ತಮ್ಮ ಮುಂದಿಡಲು ಅಪಾರ ಸಂತಸವೆನಿಸುತ್ತದೆ - ಶ್ರೀಪಾದ ಹೆಗಡೆ, ಸಹ ಸಂಪಾದಕ ]



ಕಾಲಪ್ರವಾಹದಲ್ಲಿ ನಾವು ತೇಲುತ್ತಾ ಹೋಗುತ್ತಿದ್ದೇವೆ. ಇದು ಅನಿವಾರ್ಯವೂ ಹೌದು. ಕಾಲದ ಮಹಿಮೆಯನ್ನು ಬಣ್ಣಿಸಲು ಸಾಧ್ಯವಿಲ್ಲ. ಕಾಲ ಎಂದರೆ ಟೈಮ್ ಎಂದು, ಯಮ ಎಂಬ ಅರ್ಥವು ಇದೆ


" ಏಕೆ ಕುಣಿವೆ ತೂಕ ತಪ್ಪಿ ಕಾಲ ಭೈರವ ನಾಕ ಹೋಗಿ ನರಕವಾಯ್ತು ಸಾಕು ಮಾಡು ನಿನ್ನ ವೈರವ" ಎಂಬ ಪದ್ಯವನ್ನು ಶಾಲೆಯಲ್ಲಿ ಓದಿದ ನೆನಪು. ಕಾಲದ ಗತಿಯನ್ನು ಮನುಷ್ಯ ಮಾತ್ರರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಮನುಷ್ಯ ಸಾವನ್ನಪ್ಪಿದಾಗಲು ಅವರು ಕಾಲವಾದರು ಎಂಬ ಪದವನ್ನು ಬಳಸುತ್ತೇವೆ. ಬದುಕಿದಷ್ಟು ಕಾಲ ಇನ್ನೊಬ್ಬರ ಮನವನ್ನು ನೋಯಿಸದೆ, ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಸಹಾಯ ಅದೂ ಆಗದಿದ್ದರೆ ಒಂದು ಸ್ವಾಂತ್ವನದ ಮಾತನ್ನಾಡಿ ಅವರ ದುಗುಡವನ್ನು ಕಳೆಯಲು ಶ್ರಮಿಸ ಬೇಕು.


        ಮಹಾಕವಿ ರಾಘವಾಂಕ "ಹರನೆಂಬುದೆ ಸತ್ಯ ಸತ್ಯವೆಂಬುದೆ ಹರನು"ಎಂದು ಹೇಳಿದ. ಹರಿಶ್ಚಂದ್ರನನ್ನು ಸತ್ಯದ ಪ್ರತಿಮೂರ್ತಿಯನ್ನಾಗಿ ಅಥವಾ ಸತ್ಯದ ವಸ್ತು ಪ್ರತಿರೂಪವನ್ನಾಗಿ ಸೃಷ್ಟಿಸಿದ. ವಚನ ಯುಗ ಮುಗಿದ ಕೂಡಲೆ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ  ಹರಿಹರ ರಾಘವಾಂಕರು ವಚನ ಕಾಲದ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಕಂಡಿರಿಸಿದರು. ಅವರು ಕುರ್ತಕೋಟಿ ಅವರು ಅಂದಂತೆ ನಡುಗನ್ನಡ ಸಾಹಿತ್ಯದ ಬಲರಾಮ ಶ್ರೀ ಕೃಷ್ಣರು.

"ಹರನಂ ಪೊಗಳ್ವ ನಾಲಗೆಯೊಳ್ ಅನ್ಯ ದೈವಂಗಳಂ ಭವಿಗಳಂ ಪೊಗಳ್ದೆನಾದೊಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ" ಎಂದು ಹರಿಹರ ಪ್ರತಿಜ್ಞೆ ಮಾಡಿದ.


  ಕವಿ ರಾಘವಾಂಕ" ಅತಿ ಹುಸಿವ ಯತಿ ಹೊಲೆಯ ಹುಸಿಯದಿಹ ಹೊಲೆಯನುನ್ನತ ಯತಿವರನು" ಎಂದು ಹರಿಶ್ಚಂದ್ರ ಕಾವ್ಯದಲ್ಲಿ ಹೇಳಿದ.ಆದರೆ ಹುಸಿಯನ್ನೆ ಬಿತ್ತಿ ಬೆಳೆಯುವ ನಮ್ಮ ಯತಿ ಪುಂಗವರನೇಕರು ಸುಳ್ಳುಗಳ ದಲಿತೋದ್ಧಾರ ಮಾಡಿ  ಭಕ್ತಿಯಿಂದ ಕಾಲಿಗೆರಗಲು ಬಂದ ಹೆಣ್ಣನ್ನು ಏಕಾಂತದಲ್ಲಿ ಭೋಗಿಸುವ ಹುನ್ನಾರ ನಡೆಸಿ ಯಶಸ್ವಿಯಾಗಿದ್ದಾರೆ. ಇಂಥವರನ್ನು ಶರಣ ಜೇಡರ ದಾಸೀಮಯ್ಯ ಮಠದೊಳಗಣ ಬೆಕ್ಕು ಎಂದು ಕರೆದ.


      ಸತ್ಯಕ್ಕೆ ಸಾವಿಲ್ಲ. ಸುಳ್ಳಿಗೆ ಸುಖವಿಲ್ಲ ಎಂಬ ಗಾದೆಯಿದೆ.ಇದನ್ನು ನಮ್ಮ ಗುರುಗಳಾದ ದಿ.ಎಂ.ಎಂ.ಹೆಗಡೆ ಅವರು ಸತ್ಯ ಹೇಳಿದವ ಸತ್ತು ಬಿದ್ದ ಸುಳ್ಳು ಹೇಳಿದವ ಸುಖ ಕಂಡ ಎಂದು ಬದಲಿಸಿ ಹೇಳಿದ್ದು ಈ ಕಾಲದ ಸತ್ಯವಾಗಿದೆ."ಸತ್ಯಂ ವದ ಧರ್ಮಂ ಚರ" ಎಂಬ ಮಾತು ರೂಢಿಯಲ್ಲಿದೆ. ಧರ್ಮ,ಅರ್ಥ,ಕಾಮ,ಮೋಕ್ಷಗಳೆಂಬ ಚತುರ್ವಿಧ ಫಲ ಪುರುಷಾರ್ಥಗಳನ್ನು ಧರ್ಮಾರ್ಥವಾಗಿ ಕಾಮ,ಮೋಕ್ಷ ಸಂಪಾದಿಸುವ ಶತಾಯ ಗತಾಯ ಪ್ರಯತ್ನ ನಡೆದಿದೆ.


   ಇದೆಲ್ಲವನ್ನು ಕಾಲದ ತೆರೆ ಅಳಿಸಿ ಹಾಕುತ್ತಲೆ ಇರುತ್ತದೆ.ಆದ್ದರಿಂದ ನಾವು ಸತ್ಯವಂತರಾಗಿ ಧರ್ಮಪರರಾಗಿ ಅಂತಸ್ಸಾಕ್ಷಿಯ ದಮನ ಮಾಡಿಕೊಳ್ಳದೆ.ಲೋಕ ಹಿತ ಚಿಂತನೆಯಲ್ಲಿ ನಮ್ಮ ಕಾಲವನ್ನು ಕಳೆಯೋಣ. ನಮ್ಮ ಆಲೋಚನೆ.ಕಾಂ ಬಳಗದ ಲೇಖಕರು,ಓದುಗರು ಸಂಪಾದಕದ್ವಯರಾಗಿರುವ ಶ್ರೀಪಾದರನ್ನು (ಶ್ರೀಪಾದಂಗಳವರಲ್ಲ!)ಸದಾಕಾಲ ಪ್ರೀತಿಯಿಂದ ಬೆಂಬಲಿಸುತ್ತೀರಿ ಎಂದು ನಂಬಿಕೊಂಡವರು ನಾವು. ಬರಹಗಾರರು ಉತ್ಸಾಹದಿಂದ ತಮ್ಮ ಲೇಖನಗಳನ್ನು ಕಳಿಸುತ್ತಿದ್ದಾರೆ. ಅವರೂ ಬೆಳೆದು ಈ ನಾಡನ್ನು ದೇಶವನ್ನು ವ್ಯಾಪಿಸಲಿ ಎಂಬ ಆಶಯ ನಮ್ಮದು. ಈ ಪತ್ರಿಕೆಯ ನಡೆಯನ್ನು ನೀವೆಲ್ಲರೂ ಒಂದಾಗಿ ರೂಪಿಸುತ್ತೀರಿ ಎಂಬುದು ನಮ್ಮ ನಂಬಿಗೆ.


                     ಡಾ.ಶ್ರೀಪಾದ ಶೆಟ್ಟಿ.

ಸಂಪಾದಕರು, ಆಲೋಚನೆ


71 views0 comments

©Alochane.com 

bottom of page