top of page

ಆದಾಯ ಕರ ವಿಚಾರ


ಆದಾಯ ಕರ ಅಥವಾ ವರಮಾನ ತೆರಿಗೆ ಎನ್ನುವುದು ಸರಕಾರ ತನ್ನ ನಾಗರಿಕರ ಮೇಲೆ ಹೇರುವ ಹೊರೆ ಎಂಬ ತಪ್ಪು ಕಲ್ಪನೆ ಕೆಲವರ ಮನದಾಳದಲ್ಲಿ ಹೇಗೋ ನುಸಳಿಕೊಂಡಿದೆ. ವಾಸ್ತವಿಕವಾಗಿ ಆದಾಯಕರ ಎನ್ನುವುದು ಹೊರೆಯಲ್ಲ. ಅದು ದೇಶದ ಏಳಿಗೆಗಾಗಿ ನಾಗರಿಕರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಸರಕಾರಕ್ಕೆ ನೀಡಿ ತನ್ಮೂಲಕ ಸಾಮಾಜಿಕ ಅಭಿವೃದ್ದಿಗೆ ಕರಜೋಡಿಸಬೇಕಾದ ಕರ್ತವ್ಯ ಎಂದರೆ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಆದಾಯ ಕರದ ಸ್ವರೂಪ ಮತ್ತು ಅದರ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡಾಗ  ಆದಾಯಕರ ಎನ್ನುವುದು ಕಿರಿಕಿರಿಯೆಂದನಿಸದೆ ನಮ್ಮ ಬದುಕಿಗೆ ಸಹಕಾರಿ ಎಂಬ ಭಾವ ಮೂಡಬಲ್ಲದು. ಆದಾಯ ಕರದ ಕುರಿತು ಸ್ಥೂಲ ಮಾಹಿತಿಯನ್ನು ಕ್ರೋಢೀಕರಿಸಿ ಪ್ರಸ್ತುತ ಪಡಿಸುವುದೇ ಈ ಲೇಖನ ಮಾಲೆಯ  ಉದ್ದೇಶ.


1. ಆರ್ಥಿಕ ವರ್ಷ ಮತ್ತು ಕರ ನಿರ್ಧಾರಣಾ ವರ್ಷ : ಈ ಎರಡು ತಾಂತ್ರಿಕ ಶಬ್ದಗಳು ಆದಾಯ ಕರ ಕಾನೂನಿನಲ್ಲಿ ಅತ್ಯಂತ ಮಹತ್ವದ ಅಂಶಗಳಾಗಿವೆ. ಆದಾಯ ಸೃಷ್ಟಿಯಾದ ವರ್ಷವನ್ನು ಆರ್ಥಿಕ ವರ್ಷವೆಂತಲೂ ಅದರ ಮೇಲೆ ಕರ ನಿರ್ಧಾರವಾಗುವ ವರ್ಷವನ್ನು ನಿರ್ಧಾರಣಾ ವರ್ಷವೆಂತಲೂ ಪರಿಗಣಿಸಲಾಗುತ್ತದೆ. ಆರ್ಥಿಕ ವರ್ಷವು ಎಪ್ರಿಲ್ ಒಂದರಿಂದ ಮಾರ್ಚ 31 ರ ವರೆಗಿನ 12 ತಿಂಗಳ ಅವಧಿಯದಾದರೆ ಆ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಕರ ನಿರ್ಧಾರಣಾ ವರ್ಷವು ತದನಂತರದ ಎಪ್ರಿಲ್ 1 ರಿಂದ ಮಾರ್ಚ 31 ರ ವರೆಗಿನ 12 ತಿಂಗಳ ಅವಧಿಯದಾಗಿದೆ.


2. ಆದಾಯ ಕರ ಲೆಕ್ಕವನ್ನು ಸಲ್ಲಿಸುವ ಕೊನೆಯ ದಿನಾಂಕ: ಆದಾಯಕರ ಲೆಕ್ಕವನ್ನು ಆರ್ಥಿಕ ವರ್ಷದ ನಂತರದ ನಿರ್ಧಾರಣಾ ವರ್ಷದ ಜುಲೈ 31 ರ ಒಳಗೆ  ಇ-ಫೈಲಿಂಗ್ ಮೂಲಕ ಸಲ್ಲಿಸಬೇಕು. ಒಮ್ಮೆ ಸದರಿ ದಿನಾಂಕದ ಒಳಗೆ ಲೆಕ್ಕಪತ್ರ ಸಲ್ಲಿಸಲು ಸಾಧ್ಯವಾಗದೇ ಇದ್ದರೆ ಮುಂದಿನ ಮಾರ್ಚ 31 ರ ಒಳಗೆ ಅದನ್ನು ಸಲ್ಲಿಸಬಹುದಾಗಿದೆ. ಆದರೆ ಈ ವಿಳಂಬಕ್ಕೆ ದಂಡ ಪಾವತಿಸಬೇಕಾಗುತ್ತದೆ. ಕರೋನಾ ನಿಮಿತ್ತ ಈ ವರ್ಷ ಇ-ಫೈಲಿಂಗ್ ದಿನಾಂಕವನ್ನು 30-11-2020 ಕ್ಕೆ ವಿಸ್ತರಿಸಲಾಗಿದೆ.


3. ಆದಾಯ ಕರದ ದರ ಮಾರ್ಗಸೂಚಿ: ಪ್ರಸ್ತುತ ನಿರ್ಧಾರಣ ವರ್ಷಕ್ಕೆ [2020-21] ಸಂಬಂಧಿಸಿದಂತೆ ವೈಯಕ್ತಿಕ ಆದಾಯ ಕರದ  ವಿವಿಧ ಹಂತಗಳು ಮತ್ತು ದರಗಳು ಇಂತಿವೆ.


ಅ. 60 ವರ್ಷದ ಒಳಗಿನವರಿಗೆ :

  1. ರೂ.2.50 ಲಕ್ಷದ ದ ಒಳಗಿನ ಆದಾಯಕ್ಕೆ ಕರ ವಿನಾಯತಿ

  2. ರೂ.2.50 ಲಕ್ಷದಿಂದ ರೂ.5.00 ಲಕ್ಷದ ವರೆಗಿನ ಆದಾಯಕ್ಕೆ 5%

  3. ರೂ. 5.00 ಲಕ್ಷದಿಂದ ರೂ. 10.00 ಲಕ್ಷದ ವರೆಗಿನ ಆದಾಯಕ್ಕೆ 20%

  4. ರೂ. 10.00 ಲಕ್ಷಕ್ಕೂ ಹೆಚ್ಚಿನ ಆದಾಯ 30%

ಬ. 60 ವರ್ಷದಿಂದ 80 ವರ್ಷದ ಒಳಗಿನ ವರಿಗೆ [ ಸೀನಿಯರ್ ಸಿಟಿಜನ್] :

1 ರೂ.3.00 ಲಕ್ಷದ  ದ ಒಳಗಿನ ಆದಾಯಕ್ಕೆ ಕರ ವಿನಾಯತಿ

2 ರೂ.3.00 ಲಕ್ಷದಿಂದ ರೂ.5.00 ಲಕ್ಷದ ವರೆಗಿನ ಆದಾಯಕ್ಕೆ 5%

3 ರೂ. 5.00 ಲಕ್ಷದಿಂದ ರೂ. 10.00 ಲಕ್ಷದ  ವರೆಗಿನ ಆದಾಯಕ್ಕೆ 20%

4 ರೂ. 10.00 ಲಕ್ಷಕ್ಕೂ ಹೆಚ್ಚಿನ ಆದಾಯ 30%


ಕ. 80 ವರ್ಷ ಮೀರಿದವರಿಗೆ [ ಸೂಪರ್ ಸೀನಿಯರ್ ಸಿಟಿಜನ್] :

1 ರೂ.5.00 ಲಕ್ಷದ  ದ ಒಳಗಿನ ಆದಾಯಕ್ಕೆ ಕರ ವಿನಾಯತಿ

2 ರೂ. 5.00 ಲಕ್ಷದಿಂದ ರೂ. 10.00 ಲಕ್ಷದ  ವರೆಗಿನ ಆದಾಯಕ್ಕೆ 20%

3 ರೂ. 10.00 ಲಕ್ಷಕ್ಕೂ ಹೆಚ್ಚಿನ ಆದಾಯ 30%

4. ಮೇಲ್ತೆರಿಗೆ [ಸರ್ಚಾರ್ಜ] :

ಅ. 50.00 ಲಕ್ಷಕ್ಕೂ ಮೀರಿದ ಆದಾಯಕ್ಕೆ 10% ಸರ್ಚಾರ್ಜ ವಿಧಿಸಲಾಗಿದೆ.

ಬ. 1.00 ಕೋಟಿಗೂ ಮೀರಿದ ಆದಾಯಕ್ಕೆ 15% ಸರ್ಚಾರ್ಜ ವಿಧಿಸಲಾಗಿದೆ.


5. ಶೈಕ್ಷಣಿಕ ಮತ್ತು ಆರೋಗ್ಯ ಸೆಸ್ :  ನಿರ್ಧರಿಸಿದ ಆದಾಯ ಕರ  ಮತ್ತು ಸರ್ಚಾರ್ಜ ಇದ್ದರೆ  ಅವೆರಡರ ಮೊತ್ತದೆ ಮೇಲೆ 4%  ಶೈಕ್ಷಣಿಕ ಮತ್ತು ಆರೋಗ್ಯ ಸೆಸ್ ಎಂದು ಆಕರಿಸಲಾಗುತ್ತದೆ.


 6. ಸೆಕ್ಷನ್ 87 ಎ : ಆದಾಯ ಕರ ಕಾನೂನಿನ ಅನ್ವಯ ಲಭ್ಯವಾಗುವ ಎಲ್ಲ ವಿನಾಯತಿ ಮತ್ತು ಉಳಿತಾಯಗಳನ್ನು ಕಳೆದ ನಂತರದ ಆದಾಯವು ರೂ.5.00 ಲಕ್ಷಕ್ಕಿಂತ  ಕಡಿಮೆ ಇದ್ದರೆ ಸೆಕ್ಷನ್ 87 ಎ ಅಡಿಯಲ್ಲಿ  ಕರ ವಿನಾಯಿತಿ ಇದೆ.  ಈ ಹಿನ್ನೆಲೆಯಲ್ಲಿ ರೂ.7.00 ಲಕ್ಷದ ಒಳಗಿನ ಆದಾಯ ಇರುವವರು  ಸೆಕ್ಷನ್ 80 ಸಿ ಯ ಅಡಿಯಲ್ಲಿ 1.50 ಲಕ್ಷ ಉಳಿತಾಯ ಮಾಡಿದರೆ ಸೆಕ್ಷನ್ 87 ಎ ಅಡಿಯಲ್ಲಿ ಕರ ವಿನಾಯಿತಿ ಪಡೆಯಬಹುದಾಗಿದೆ.


7. ಸಾಮಾನ್ಯ ಕಡಿತ [ ಸ್ಟ್ಯಾಂಡರ್ಡ ಡಿಡಕ್ಷನ್] ; ಪ್ರಸ್ತುತ ಸಾಲಿನಲ್ಲಿ ರೂ 50000/- ವನ್ನು ಸ್ಟ್ಯಾಂಡರ್ಡ ಡಿಡಕ್ಷನ್ ಎಂದು ನಿಡಿದ್ದು ಇದು ಎಲ್ಲ ವೈಯಕ್ತಿಕ ತೆರಿಗೆ ದಾರರಿಗೆ ಅನ್ವಯಿಸುತ್ತದೆ.


8. ತೆರಿಗೆ ಕಡಿತ: ಸಂಬಳ, ಬ್ಯಾಂಕ್ ಬಡ್ಡಿ ಮತ್ತು ವೃತ್ತೀಯ ಕಾರ್ಯ [ಪ್ರೊಫೆಶನಲ್] ನಿರ್ವಹಿಸುವವರಿಗೆ ಅವರ ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ ಮಾಡಲಾಗುತ್ತದೆ. ಆದರೂ ಕೆಲವೊಮ್ಮೆ  ಒಟ್ಟೂ ಆದಾಯವನ್ನು ಲೆಕ್ಕ ಹಾಕಿದಾಗ ಒಂದೊಮ್ಮೆ ಕಡಿತವಾದ ತೆರಿಗೆಯು ಪಾವತಿಸಬೇಕಾದ ತೆರಿಗೆಗಿಂತ ಕಡಿಮೆ ಆದರೆ ಉಳಿದ ತೆರಿಗೆಯನ್ನು ಇ-ಫೈಲಿಂಗ್ ಮಾಡುವ ಹೊತ್ತಿಗೆ ಭರ್ತಿಮಾಡಬೇಕು. ಪಾವತಿಸಬೇಕಾದ ತೆರಿಗೆಯ ಮೊತ್ತವು ರೂ.10000/- ಕ್ಕಿಂತ  ಕಡಿಮೆ ಇದ್ದರೆ ಇ- ಫೈಲಿಂಗ್ ಮಾಡುವ ಹೊತ್ತಿಗೆ ಬಾಕಿ ತೆರಿಗೆಯನ್ನು ಯಾವುದೇ ದಂಡವಿಲ್ಲದೆ ಪಾವತಿಸಬಹುದು. ಒಂದುವೇಳೆ ಪಾವತಿಸಬೇಕಾದ ತೆರಿಗೆ ಬಾಕಿಯೂ ರೂ.10000/- ಕ್ಕಿಂತ ಹೆಚ್ಚಿದ್ದರೆ ಮುಂಗಡ ತೆರಿಗೆ ಪಾವತಿಸಬೇಕು. ಇಲ್ಲವೆ ದಂಡದೊಂದಿಗೆ ಈ ಫೈಲಿಂಗ್ ಸಮಯದಲ್ಲಿ ಬಾಕಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಪಾವತಿ ಅನ್ವಯವಾಗುವುದಿಲ್ಲ. ಅವರು ಇ- ಫೈಲಿಂಗ್ ಸಮಯದಲ್ಲಿ ಬಾಕಿ ತೆರಿಗೆಯನ್ನು ಯಾವುದೇ ದಂಡವಿಲ್ಲದೆ ಪಾವತಿಸಬಹುದಾಗಿದೆ.


9. ಮುಂಗಡ  ತೆರಿಗೆ ಪಾವತಿ:  60 ವರ್ಷದೊಳಗಿನ ತೆರಿಗೆದಾರರು  ಈ ಕೆಳಗೆ ನಮೂದಿಸಿದ ರೀತಿಯಲ್ಲಿ ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸದರಿ ತೆರಿಗೆದಾರರು ತಾವು ಪಾವತಿಸಬೇಕಾದ  ಒಟ್ಟೂ ಮುಂಗಡ ತೆರಿಗೆಯನ್ನು  ಲೆಕ್ಕ ಹಾಕಿ  ಅದನ್ನು  ಕೆಳಗಿನಂತೆ ನಾಲ್ಕು ಕಂತುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ.

1        ಜೂನ್ 15 ರ ಒಳಗೆ – 1 ನೇ ಕಂತು

ಒಟ್ಟೂ ಮುಂಗಡ ತೆರಿಗೆಯ    15%

2 ಸೆಪ್ಟೆಂಬರ್‍, 15 ರ ಒಳಗೆ -2 ನೇ ಕಂತು

ಒಟ್ಟೂ ಮುಂಗಡ ತೆರಿಗೆಯ    45 %

3 ಡಿಸೆಂಬರ್, 15 ರ ಒಳಗೆ – 3 ನೇ ಕಂತು

ಒಟ್ಟೂ ಮುಂಗಡ ತೆರಿಗೆಯ    75%

4 ಮಾರ್ಚ 15 ರ ಒಳಗೆ – 4 ನೇ ಕಂತು

ಒಟ್ಟೂ ಮುಂಗಡ ತೆರಿಗೆಯ    100%

10 ತೆರಿಗೆ ಪಾವತಿಸುವುದು ಹೇಗೆ: ತೆರಿಗೆಯನ್ನು ಪಾವತಿಸಲು ಮೂರು ವಿಧಾನಗಳು ಲಭ್ಯ. ಮೊದಲನೇಯದು  ಆದಾಯ ತೆರಿಗೆ ಚಲನ್ -280 ಯನ್ನು ವೆಬ್ ಸೈಟ್ನಿಂದ ಡೌನಲೋಡ ಮಾಡಿಕೊಂಡು ಅದನ್ನು ಭರ್ತಿ ಮಾಡಿ ಚೆಕ್ ಮೂಲಕ ಬ್ಯಾಂಕಿನಲ್ಲಿ  ತೆರಿಗೆ ತುಂಬಬಹುದು. ಎರಡನೆಯದು ಇ-ಫೈಲಿಂಗ್ ವೆಬ್‍ಸೈಟಿನಲ್ಲಿ  ಇ -ಪೇಮೆಂಟ್ ಆಫ್‍ ಟ್ಯಾಕ್ಷ  ಮೂಲಕ  ಚಲನ್ -280 ಯನ್ನು ಭರ್ತಿಗೊಳಿಸಿ  ನಿಮ್ಮ ಡೆಬಿಟ್ ಕಾರ್ಡ ಮೂಲಕವೂ ಪಾವತಿಸಬಹುದಾಗಿದೆ. ಮೂರನೆಯದಾಗಿ ಡೆಬಿಟ್ ಕಾರ್ಡ ಬದಲು ನೆಟ್ ಬ್ಯಾಂಕಿಂಗ್ ಮೂಲಕವೂ ತೆರಿಗೆ ಪಾವತಿಸಬಹುದಾಗಿದೆ.


ಆನ್ ಲೈನ್‍ ಮೂಲಕ ತೆರಿಗೆ ತುಂಬುವಾಗ ಇ-ಪೇಮೆಂಟ್  ಆಫ್ ಟ್ಯಾಕ್ಷ ‍ಫಾರ್ ಟಿನ್  ಅಡಿಯಲ್ಲಿ  ಲಭ್ಯವಿರುವ ಚಲನ್ ನಂ.280  ಯಲ್ಲಿ ಭರ್ತಿ ಮಾಡಬೇಕು. ಚಲನ್ ತುಂಬುವಾಗ ಸರಿಯಾದ ಪಾನ್ ನಂಬರ್ ಮತ್ತು ಸರಿಯಾದ ಎಸೆಸ್‍ಮೆಂಟ್ ವರ್ಷ ಮತ್ತು ಉಳಿದ ವಿವರಗಳನ್ನು ಸರಿಯಾಗಿ ನಮೂದಿಸಬೇಕು.ತದನಂತರ ಬ್ಯಾಂಕ್ ಡೆಬಿಟ್ ಕಾರ್ಡ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು. ಪಾವತಿಯು ದೃಢೀಕರಣಗೊಂಡ ಮೇಲೆ ಚಲನ್ ನನ್ನು ಡೌನ್‍ಲೋಡ್‍ ಮಾಡಿಕೊಂಡು ಬಿ.ಎಸ್.ಆರ್ ಕೋಡ, ದಿನಾಂಕ, ಚಲನ್ ನಂಬರ್‍ ಮತ್ತು ಮೊತ್ತವನ್ನು  ಇನ್‍ಕಮ್‍ ಟ್ಯಾಕ್ಷ ಫಾರ್ಮನಲ್ಲಿ ಭರ್ತಿಗೊಳಿಸಬೇಕು.

1. ಚಲನ್ ನಂ-280

2. ಟ್ಯಾಕ್ಷ ಅಪ್ಲಿಕೇಬಲ್ ನಂ.21

3. ಟೈಪ್‍ ಆಫ್ ಪೇಮೆಂಟ್ –ಮುಂಗಡ ತೆರಿಗೆ ಆದರೆ -100  ಎಂದು ನಮೂದಿಸಿ

                        ಸೆಲ್ಪ್ ಅಸೆಸ್ಸಮೆಂಟ್ ಟ್ಯಾಕ್ಷ ಆದರೆ -300  ಎಂದು ನಮೂದಿಸಿ

                        ರೆಗ್ಯೂಲರ್ ಅಸೆಸ್ಸಮೆಂಟ್ ಆದರೆ -400 ಎಂದು ನಮೂದಿಸಿ

4. ಪಾನ್ ನಂಬರ್‍

5. ಅಸೆಸ್ಸಮೆಂಟ್‍ ವರ್ಷ

ಈ ಎಲ್ಲ ಮಾಹಿತಿಗಳನ್ನು ತಪ್ಪಿಲ್ಲದೆ ಭರ್ತಿಗೊಳಿಸಿ ತೆರಿಗೆ ಪಾವತಿಸಬೇಕು ಮತ್ತು ಇ-ಫೈಲಿಂಗ್ ಮಾಡುವಾಗ ಚಲನ್ ದ ವಿವರಗಳನ್ನು ಇನ್‍ಕಮ್‍ ಟ್ಯಾಕ್ಷ ಫಾರ್ಮ ನಲ್ಲಿ ಸರಿಯಾಗಿ ನಮೂದಿಸಬೇಕು. ಆಗ ಮಾತ್ರ ನಿಮ್ಮ ಮನೆಯ ಬಾಗಿಲಿಗೆ ಅಥವಾ ನಿಮ್ಮ ಮೇಲ್‍ಗೆ ಆದಾಯಕರ ಇಲಾಖೆಯಿಂದ ನೋಟೀಸು ಬರುವುದನ್ನು ತಪ್ಪಿಸಲು ಸಾಧ್ಯ.

                            [ ಮುಂದುವರಿಯುವುದು]



-ಶ್ರೀಪಾದ ಹೆಗಡೆ, ಸಾಲಕೋಡ


ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರುತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನುಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. ನಮ್ಮ ಪತ್ರಿಕೆಯ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ- ಸಂಪಾದಕ

Comments


©Alochane.com 

bottom of page