top of page

ಆತ್ಮಚೈತನ್ಯದ ಕೇಂದ್ರಗಳು

ಕೆಲಸ ಮಾಡದೆ ಔದಾಸೀನ್ಯ ಮತ್ತು ಜಾಡ್ಯವನ್ನು ಮೈಗಂಟಿಸಿಕೊಂಡಿರುವ ಹಾಗೂ ಬದುಕಿನ ಬಗ್ಗೆ ನಿರಾಸಕ್ತಿ ಬೆಳೆಸಿಕೊಂಡಿರುವ ಒಂದು ಕುಟುಂಬವಿದೆ ಎಂದು ಊಹಿಸಿಕೊಳ್ಳಿ. ದುಡಿಮೆ ಮಾಡದೆ ತೋಟ ಗದ್ದೆ ಹಡಿಲುಬಿದ್ದು ಹಾಳಾಗಿದೆ. ಮನೆ ಕುಸಿದು ಬೀಳಲು ಸಿದ್ಧವಾಗಿದೆ. ಬಡತನ ಹಾಸಿ ಹೊದ್ದು ಮಲಗಿದೆ. ಮನೆಯೊಳಗೆ ರಜ ತುಂಬಿ ಮನೆಯೊಡೆಯನಿದ್ದಾನೊ ಇಲ್ಲವೊ ಎಂದು ಕೇಳುವ ಪರಿಸ್ಥಿತಿ ಇದೆ ಎಂದು ಭಾವಿಸಿಕೊಳ್ಳಿ. ಅಂತಹ ಕಡೆಗೆ ಹೋಗಿ ಬಂದರೆ ಎರಡು ದಿನ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸಿ ಜೀವವನ್ನು ಹಿಂಡಿ ಹಿಪ್ಪೆ ಮಾಡದೆ ಬಿಡದು. ಬೇಸರದಿಂದಲೂ ದುಃಖದಿಂದಲೂ ನಿಮ್ಮಲ್ಲಿರುವ ಕ್ರತುಶಕ್ತಿಯೆಲ್ಲ ಸೋರಿ ಮತ್ತೆ ಜೀವಚೈತನ್ಯ ತುಂಬಿಕೊಳ್ಳಲು ಒಂದು ವಾರವೇ ಬೇಕಾಗುತ್ತದೆ!


ತುಂಬ ಕಾರಣಿಕವುಳ್ಳ ಒಂದು ದೇವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ. ಆ ದೇವಸ್ಥಾನ ಶಿಲ್ಪ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಮಂತ್ರಘೋಷ ಮೊಳಗುತ್ತಿರುತ್ತದೆ, ಅಲಂಕಾರ ಆಗಿದೆ. ಪೂಜೆ ನಡೆಯುತ್ತಿರುತ್ತದೆ, ಘಂಟಾಮಣಿಯ ನಾದ ಕಿವಿದುಂಬುತ್ತಿದೆ. ಆರತಿ ಬೆಳಗುತ್ತಿದೆ. ಕರ್ಪೂರ ಧೂಪಕಡ್ಡಿಯ ಘಮಲು. ಕಣ್ತುಂಬುವ ದೇವಬಿಂಬ. ಅಜ್ಜ ಅಜ್ಜಿ ಅಪ್ಪ ಅಮ್ಮ ಮಕ್ಕಳು ಪುಟಾಣಿಗಳು ಓಡಾಡಿಕೊಂಡು ದೇವರಿಗೆ ಕೈಮುಗಿದು ಪ್ರಸಾದ ಸ್ವೀಕರಿಸುತ್ತಿರುವ ದೃಶ್ಯ. ಹತ್ತಿರದಲ್ಲೇ ಕಲ್ಯಾಣಿ. ಸೋಪಾನ ಮೆಟ್ಟಲಿಳಿದರೆ ಹರಿವ ನದಿ, ಸುತ್ತೆಲ್ಲ ರಮಣೀಯ ಹಸುರು. ನಿಮ್ಮ ಚಿಂತೆ ದುಗುಡ ದುಃಖ ಹತಾಶೆ ಬೇಸರಗಳೆಲ್ಲ ನೀಗಿ ಸಂತೋಷದಾಯಿಯಾಗಿ ಸಕಾರಾತ್ಮಕ ಚೈತನ್ಯದಿಂದ ಜೀವ ಪುಟಿಯುವ ಅನುಭವ ಆಗದಿರದು. ಇಂತಹ ಮಂಗಲಕರವೂ ಚಿತ್ತಾಪಹಾರಿಯೂ ಆದ ನೋಟ ಇನ್ನೆಲ್ಲಿ ಕಾಣಸಿಗಬೇಕು?


ಒಂದು ದೇವಸ್ಥಾನದ ಮಹತ್ವ ಏನೆಂಬುದು ನಿಮಗೀಗ ತಿಳಿಯಿತು. ದೇವರು ಎಂದರೆ ಚೈತನ್ಯದಾಯಿ; ದೇವಸ್ಥಾನ ಎಂದರೆ ಅಸೀಮವಾದ ಸಕಾರಾತ್ಮಕ ಶಕ್ತಿಯನ್ನು ಉದ್ದೀಪಿಸುವ ಶಕ್ತಿಸ್ರೋತ. ನಮ್ಮ ದೇಹದ ಅನಾರೋಗ್ಯವನ್ನು ನಿವಾರಿಸುವ ಆಸ್ಪತ್ರೆಗಳು ಹೇಗೆ ಭೌತಿಕವಾದ ಮಂದಿರಗಳೋ ಹಾಗೆ ದೇವಸ್ಥಾನಗಳು ನಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಆಧ್ಯಾತ್ಮಿಕ ಮಂದಿರಗಳು.


ಸ್ವಾಸ್ಥ್ಯವೆಂದರೆ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ; ಶೇ. ೫೦ ಭಾಗ ದೇಹಕ್ಕೆ ಮತ್ತು ಉಳಿದ ಶೇ. ೫೦ ಭಾಗ ಮನಸ್ಸಿಗೆ ಸಂಬಂಧಿಸಿದ್ದು. ಎರಡೂ ಸರಿ ಇದ್ದಾಗ ಮಾತ್ರ ಆತ ಆರೋಗ್ಯವಂತ ಮನುಷ್ಯ. ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಆತ ರೋಗಿಯೇ; ದೇವಾಲಯಗಳು, ಪ್ರಾರ್ಥನಾ ಮಂದಿರಗಳು, ಧ್ಯಾನಮಂದಿರಗಳು ನಮ್ಮ ಮನಸ್ಸನ್ನು ತೃಪ್ತಿ ಸಂತೋಷ ಸಮಾಧಾನ ಸ್ಥಿತಿಯಲ್ಲಿಡುವ ಉದ್ದೇಶದಿಂದ ರಚನೆಯಾಗಿವೆ. ಅವು ಚಿತ್ತಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ ಮಂದಿರಗಳು.


ದೇವಸ್ಥಾನವನ್ನು ವಿಶಾಲವಾಗಿ, ಶಿಲ್ಪಕಲೆಯ ಬೀಡಾಗಿ, ಸುಂದರವಾಗಿ, ಶಾಸ್ತ್ರೀಯವಾಗಿ ಕಟ್ಟಲಾಗುತ್ತದೆ. ಹಣ ಚಿನ್ನ ವಜ್ರ ವೈಢೂರ್ಯ ಮೊದಲಾದ ಸಂಪತ್ತು ದೇವರಿಗೇಕೆಂದು ಕೆಲವು ಜನರು ಪ್ರಶ್ನಿಸಬಹುದು; ಆದರೆ ಅದು ಇಡೀ ನಾಡ ಜನರಿಗೆ ಸಕಾರಾತ್ಮಕ ಶಕ್ತಿಯನ್ನು (positive energy) ಚಿರಕಾಲವೂ ನೀಡುವ ತಾಣಗಳಾಗಿರುತ್ತವೆ. ದೇವಸ್ಥಾನಗಳು ಆ ರೀತಿ ಕಣ್ಣು ತುಂಬಲೇ ಬೇಕು. ಯಾಕೆಂದರೆ ಅವು ಒಂದು ಉತ್ತುಂಗ ಆದರ್ಶದ ಕಲ್ಪನೆ. ಇಲ್ಲದಿದ್ದರೆ ನಾನು ಮೊದಲು ಮನೆಯೊಂದರ ಉದಾಹರಣೆ ಕೊಟ್ಟ ಹಾಗೆ, ನಕಾರಾತ್ಮಕ ಶಕ್ತಿಯನ್ನು (negative energy) ತುಂಬಿಕೊಳ್ಳುವ ತಾಣವಾಗಿ ವ್ಯಕ್ತಿತ್ವವನ್ನೇ ಹಿಂಡಿ ಹಾಕಬಹುದು. ಮನೋವಾಕ್ಕಾಯಗಳನ್ನು (ಮನಸ್ಸು, ಮಾತು, ಶರೀರ) ಪ್ರಭಾವಿಸಿ ಭವಕ್ಕೂ ದಿವಕ್ಕೂ ಸೇತುವಾಗಿರುವ ದೇವಸ್ಥಾನ ಸಮುಚ್ಚಯಗಳು ಭವ್ಯವೂ ದಿವ್ಯವೂ ಆಗಿರಬೇಕಾದದ್ದು ಅನಿವಾರ್ಯವಾಗಿದೆ.


ನಮಗೆ ಆರೋಗ್ಯ ಬೇಕು, ದೀರ್ಘಾಯುಷ್ಯ ಬೇಕು, ಕೌಟುಂಬಿಕ ಸೌಖ್ಯ ಬೇಕು, ಅಭಿವೃದ್ಧಿ ಬೇಕು, ಸಂಪತ್ಸಮೃದ್ಧಿ ಬೇಕು ಎಂದಾದರೆ ಅದರ ತುರೀಯತಮ ಆದರ್ಶವೊಂದು ದೇವಸ್ಥಾನ ರೂಪದಲ್ಲಿ ನಮ್ಮ ಮುಂದೆ ಇರಬೇಕು. ಅಂತಹ ಒಂದು ಕಲ್ಪನೆ ಕಣ್ಣ ಮುಂದೆ ಇರದಿದ್ದರೆ (ಅಂದರೆ ಒಂದು goal set ಮಾಡಿಕೊಳ್ಳದಿದ್ದರೆ, ಒಂದು ಮಾದರಿ – model- ಇರದಿದ್ದರೆ) ಬೇಡಿಕೊಳ್ಳುವುದು ಏನನ್ನು?


ದೇವಸ್ಥಾನದ ಶಿಖರದಿಂದ (ಗೋಪುರಕಲಶ) ಸುತ್ತುಪೌಳಿಯ ಆಯದ ಹೊರಮೈಗೆ ಯಾವುದೇ ಮೂಲೆಯಿಂದ ಸರಳರೇಖೆಯೊಂದನ್ನು ಎಳೆದರೆ ಅದು ಶಾಸ್ತ್ರಬದ್ಧವಾದ ಒಂದು ತ್ರಿಕೋನವಾಗುತ್ತದೆ. ಅಧ್ಯಾತ್ಮದಲ್ಲಿ ತ್ರಿಕೋನಕ್ಕೆ ಮಹತ್ವದ ಸ್ಥಾನವಿದೆ. ಶ್ರೀಚಕ್ರದಲ್ಲಿ ಇರುವುದೆಲ್ಲವೂ ತ್ರಿಕೋನ ಸಮೂಹವೇ ಆಗಿದೆ. ತ್ರಿಕೋನದ ಒಳಗೆ – ಗರ್ಭಗುಡಿ ಮತ್ತು ಸುತ್ತಲ ಪೌಳಿಯಲ್ಲಿ ಅದ್ವಿತೀಯವಾದ ಶಕ್ತಿಕೇಂದ್ರವೊಂದು ನಿರ್ಮಾಣವಾಗುತ್ತದೆ. ಪೌಳಿಯಲ್ಲಿ ಧ್ಯಾನಸ್ಥಿತಿಯಲ್ಲಿ ನಿಂತರೆ ಮತ್ತು ಏಕಾತ್ಮಭಾವದಿಂದ ಓಡಾಡಿದರೆ ನಮ್ಮಲ್ಲಿ ಪಂಚಭೂತಾತ್ಮಕವಾದ (ನೆಲ ಜಲ ಅಗ್ನಿ ವಾಯು ಆಕಾಶ) ಚೈತನ್ಯಶಕ್ತಿ ಬಹಳ ಸುಲಭವಾಗಿ ಉದ್ದೀಪಸಲ್ಪಡುತ್ತದೆ. ಘಂಟಾನಾದವು ಸದಾ ಜಾಗೃತಸ್ಥಿತಿಯಲ್ಲಿರಲು ನೆರವಾಗುತ್ತದೆ. ಕಣ್ಣುಗಳು ಮಂಗಲಕರವಾದುದನ್ನು ನೋಡುತ್ತಿರುತ್ತದೆ. ಮೂಗಿಗೆ ಗಂಧ ಪುಷ್ಪಗಳ ಸುವಾಸನೆ ಅಡರುತ್ತದೆ. ಇಂದ್ರಿಯಗಳು ಉದ್ವಿಗ್ನತೆಯನ್ನು ಬಿಟ್ಟು ಶಾಂತತೆಯಲ್ಲಿ ನೆಲೆಯಾಗುತ್ತವೆ.


ದೇವಸ್ಥಾನಗಳು ಪ್ರತಿಯೊಂದು ಊರಿಗೂ ಅಗತ್ಯ. ಊರ ದೇವಸ್ಥಾನದ ಕಲ್ಪನೆ ನಮ್ಮಲ್ಲಿ ಹಿಂದಿನಿಂದಲೂ ಇದೆ. ಊರ ದೇವಸ್ಥಾನ, ಸೀಮೆ ದೇವಸ್ಥಾನ ಮತ್ತು ಉದ್ಭವಮೂರ್ತಿಗಳಿರುವ (ಪ್ರಾಕೃತಿಕವಾಗಿಯೇ ಶಕ್ತಿಕೇಂದ್ರಗಳೆಂದು ಗುರುತಿಸಲ್ಪಟ್ಟಿರುವ) ಕಾರಣಿಕದ ದೇವಸ್ಥಾನಗಳೆಂದು ನಮ್ಮಲ್ಲಿ ಹಿಂದಿನಿಂದಲೂ ಗುರುತಿಸಲ್ಪಟ್ಟ ದೇವಸ್ಥಾನಗಳಿವೆ. ದೇವಸ್ಥಾನಗಳು ಬಡವಾಗಬಾರದು. ಅದು ಶ್ರೀಮಂತವಾಗಿದ್ದಷ್ಟು ನಾವು ಶ್ರೀಮಂತರಾಗಿದ್ದೇವೆ ಎಂದು ಅರ್ಥ. ದೇವಸ್ಥಾನ ಬಡವಾಗಿ ಜೀರ್ಣವಾಗುವುದೆಂದರೆ ನಾವು ದುರ್ಬಲರಾಗಿ ಶಕ್ತಿಕುಂದಿ ಬಡತನ ದಾರಿದ್ರ್ಯಗಳಿಂದ ಅಳಿವಿನತ್ತ ಸಾಗುತ್ತಿದ್ದೇವೆಂದು ಅರ್ಥ.


ನಮ್ಮ ಮನೋಬಲ ವೃದ್ಧಿಯಾದಷ್ಟು ನಮ್ಮ ಉತ್ಕರ್ಷ; ಆತ್ಮಚೈತನ್ಯದಿಂದ ನಳನಳಿಸುತ್ತ ನಾವು ವಿಕಾಸ ಆಗಬೇಕಾದರೆ ಆಯಾ ಊರಿನಲ್ಲಿ ದೇವಸ್ಥಾನ ಸರ್ವಶಕ್ತಿದಾಯಿಯಾಗಿ ಕಂಗೊಳಿಸುತ್ತಿರಬೇಕು.


-ಡಾ. ವಸಂತಕುಮಾರ ಪೆರ್ಲ.

18 views0 comments

©Alochane.com 

bottom of page