ಪ್ರಸಿದ್ಧ ಸಿನಿಮಾತಾರೆ
ಸುಸೈಡ್ ಮಾಡಿಕೊಂಡ!
ಕೋಟ್ಯಾಧಿಪತಿಯ ಕುವರನೊಬ್ಬ
ಹ್ಯಾಂಗ್ ಮಾಡಿಕೊಂಡ!!
ಅಪ್ರತಿಮ ಕಲಾವಿದನೊಬ್ಬ
ತನ್ನನ್ನೇ ತಾ ಕೊಂದುಕೊಂಡ!!!
ಇವರಿಗೆಲ್ಲಾ ಏನಾಗಿತ್ತು ?
ಸಾವಿನ ಮನೆಯ ಕದ
ಅವರಾಗಿಯೇ ತಟ್ಟಿದ್ಯಾಕೆ?
ಲೌಕಿಕವಾಗಿ ಇವರ್ಯಾರಿಗೂ
ಯಾವ ಕೊರತೆಯೂ ಇರಲಿಲ್ಲ!?
ಹಣವಿದೆ, ಪೊಪ್ಯುಲಾರಿಟಿ ಇದೆ,
ಏನೆಲ್ಲವಿದೆ, ಆದರೆ.......?
ಏನಿರಬೇಕಿತ್ತೊ, ಅದೇ ಇರಲಿಲ್ಲ!
ಅವರ್ಯಾರೂ ಅಪ್ರಬುದ್ಧ ಎಳಸುಗಳೇನಲ್ಲ;
ಆದರೂ......ಹೀಗೇಕಾಯ್ತು?
ಬಾಳಿನ ಅಂತ್ಯವನ್ನು ತಾವೇ ಆಹ್ವಾನಿಸಿದ್ದೇಕೆ?
ಬದುಕೇಕೆ ಇಂಥವರಿಗೂ
ಇಷ್ಟು ಬೇಗ, ಸಾಕಾಗಿ ಹೋಯ್ತು?
ಹಣವೊಂದೇ ಎಲ್ಲ
ಎಂದು, ಅಂದುಕೊಳ್ಳುವವರಿಗೆಲ್ಲ
ಪಾಠವಾಗಬೇಕಿತ್ತೆ ಇವರು!
ಅಂಗವಿಕಲರೆಂದು ಕರೆಸಿಕೊಳ್ಳುವರ್ಯಾರೂ
ಏಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ?
ಅವರೆಂದೂ ಅಂಗವಿಕಲರಲ್ಲ;
ಬಲಹೀನತೆಯ ವೈಕಲ್ಯ
ಮೀರಿನಿಂತವರಿವರು;
ಆತ್ಮವಿಶ್ವಾಸದ ಊರುಗೋಲ
ಬಳಸುವವರಿವರು
ಸತ್ತವರಿಗೆ ಮನೋವೈಕಲ್ಯ
ಎಲ್ಲವನ್ನೂ ಎದುರಿಸುವ
ಇವರದು ಮನೋಸ್ಥೈರ್ಯ
ಅದು ವೈಕಲ್ಯವಲ್ಲ
ಬಾಳನೆದುರಿಸಿ ಛಲದಿ ಪಡೆವಕೈವಲ್ಯ!
-ಹೊನ್ನಪ್ಪಯ್ಯ ಗುನಗಾ ಹೊನ್ನಾವರ
Comments