top of page

😀ಸಾಮ್ಯವಾದದ ನೆಲದಲ್ಲಿ ಅರಳಿದ ಹಾಸ್ಯಚಟಾಕಿಗಳು🤣

ಕಮ್ಯುನಿಸಂ ಅರ್ಥಾತ್ ಸಾಮ್ಯವಾದ ಹಾಗೂ ಹಾಸ್ಯ – ಇವೆರಡೂ ಶಬ್ದಗಳು ಪರಸ್ಪರ ವಿರುದ್ಧ ಪದಗಳೆನ್ನುವ ಮಟ್ಟಿಗೆ ಅವುಗಳ ಮಧ್ಯೆ ಅಸಂಗತತೆಯು ಮನೆ ಮಾಡಿದೆ. ಎಲ್ಲಿ ಸಾಮ್ಯವಾದವು ಪ್ರಭುತ್ವ ನಡೆಸುತ್ತದೆಯೋ ಅಲ್ಲಿ ಸ್ವಾತಂತ್ರ್ಯಕ್ಕೆ ಠಾವಿರುವದಿಲ್ಲ. ಸ್ವಾತಂತ್ರ್ಯವಿಲ್ಲದ ಜಾಗದಲ್ಲಿ ವೈಚಾರಿಕತೆಯು ಬೆಳೆಯಲು ಸಾಧ್ಯವಿಲ್ಲ. ವೈಚಾರಿಕತೆಯು ನೆಲೆಗೊಳ್ಳದೆ ಹಾಸ್ಯದ ಹೂವು ಅರಳುವುದು ಸಾಧ್ಯವಿಲ್ಲ. ಹೀಗಾಗಿ ಸಾಮ್ಯವಾದ ಮತ್ತು ಹಾಸ್ಯವನ್ನು ಒಟ್ಟಿಗೆ ಕಲ್ಪಿಸುವುದು ಅತಾರ್ಕಿಕವೆಂಬುದು ಸಾಮಾನ್ಯ ಪ್ರತೀತಿ. ಆದರೆ ಸಾಮ್ಯವಾದ ಮತ್ತು ಹಾಸ್ಯದ ನಡುವೆ ಒಂದು ವಿಚಿತ್ರ ಋಣಾತ್ಮಕ ಸಂಬಂಧ ಇದೆಯೆಂಬುದು ಅತಿ ಕುತೂಹಲಕರ ವಿಚಾರ. 1917 ರ ಕ್ರಾಂತಿಯ ತರುವಾಯ ಸ್ಥಾಪಿತವಾದ ಕಮ್ಯುನಿಸಂನ ಸರ್ವಾಧಿಕಾರಿ ಆಡಳಿತದ ವಿರುದ್ಧ ಸೆಡ್ಡು ಹೊಡೆಯಲು ಸಾಧ್ಯವಾಗದೆ ಹಾಗೆಂದು ಸುಮ್ಮನೆಯೂ ಇರಲಾರದೆ ಒಂದು ರೀತಿ ಶೀತಲ ಸಮರದ ಮಧ್ಯೆ ಹಾಸ್ಯಚಟಾಕಿಗಳು ತಂತಾನೆ ಜನ್ಮತಾಳಿದವು. ಕಮ್ಯುನಿಸಂನ ಧೈತ್ಯರೂಪಿ ಆಡಳಿತ ಕ್ರಮಕ್ಕೆ ಪ್ರತಿರೋಧಶಕ್ತಿಯಾಗಿ ಅಲ್ಲಲ್ಲಿ ಹಾಸ್ಯಚಟಾಕಿಗಳು ಜನ್ಮತಾಳಿದವಲ್ಲದೆ ಅವು ಪರೋಕ್ಷವಾಗಿ ಕಮ್ಯುನಿಸಂ ಆಡಳಿತಕ್ಕೊಂದು ಸುರಕ್ಷತಾ ಕವಾಟದಂತೆ ಕಾರ್ಯನಿರ್ವಹಿಸತೊಡಗಿದ್ದು ವಿರೋಧಾಭಾಸವಾದರೂ ಅಷ್ಟೇ ಸತ್ಯ. ಕಮ್ಯುನಿಸಂ ವ್ಯವಸ್ಥೆ ಹಾಸ್ಯವನ್ನು ಉತ್ಪಾಧಿಸುವ ಒಂದು ಯಂತ್ರವಾಗಿದೆಯೆಂದರೆ ತಪ್ಪಾಗಲಾರದು. ಅದರ ಆರ್ಥಿಕ ಧೋರಣೆಗಳು ಮತ್ತು ಧಮನಕಾರಿ ನೀತಿಗಳು ಹಾಸ್ಯ ಸನ್ನಿವೇಶಗಳಿಗೆ ಸಹಜವಾಗಿಯೇ ಎಡೆಮಾಡಿಕೊಡುತ್ತವೆ. ಅದಕ್ಕಾಗಿಯೇ ಫ್ಯಾಸಿಸಂ ಮತ್ತು ನಾಝಿ ಆಢಳಿತದಲ್ಲಿ ಇರುವದಕ್ಕಿಂತ ಅಪಾರ ಪ್ರಮಾಣದ ಹಾಸ್ಯಚಟಾಕಿಗಳು ಸಾಮ್ಯವಾದಿ ಸಾಮ್ರಾಜ್ಯದಲ್ಲಿ ದೊರಕುತ್ತವೆ. ಅಲ್ಲಿ ಆಳಿಸಿಕೊಳ್ಳುವವರಷ್ಟೇ ಅಲ್ಲಾ ಆಳ್ವಿಕೆ ನಡೆಸುವವರೂ ಸಹ ಆಗೀಗ ಹಾರಿಸಿದ ಹಾಸ್ಯಚಟಾಕಿಗಳ ದೊಡ್ಡ ಸಂಗ್ರಹವೇ ಇಂದು ಅಂತರಜಾಲ ಹಾಗೂ ಹಲವಾರು ಹೊತ್ತಿಗೆಗಳಲ್ಲಿ ಕಾಣಸಿಗುತ್ತವೆ. ಅಂತವುಗಳಲ್ಲಿ ದೊರಕಿದ ಕೆಲವು ಹಾಸ್ಯಚಟಾಕಿಗಳನ್ನು ಆರಿಸಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ. ಸರಕಾರದ ಟೀಕೆಗಾಗಿ ಹುಟ್ಟಿದ ಹಾಸ್ಯಕತೆಗಳು: ರಶಿಯಾವು ಕಮ್ಯುನಿಸಂನ ತೆಕ್ಕೆಯಲ್ಲಿದ್ದಾಗ ಸಾಧನೆ ಗೈದದ್ದು ಎರಡು ಕ್ಷೇತ್ರಗಳಲ್ಲಿ. ಒಂದು ಉಕ್ಕಿನ ಉತ್ಪಾದನೆಯಲ್ಲಿ ಮತ್ತೊಂದು ಗಗನ ಯಾನದಲ್ಲಿ. ಆದರೆ ಇವೆರಡರಿಂದಲೂ ರಶಿಯಾದ ಸಾಮಾನ್ಯ ಜನತೆಯ ಬದುಕಿಗೆ ಮಾತ್ರ ಕಿಂಚಿತ್ತೂ ಪ್ರಯೋಜನವಾಗಲಿಲ್ಲವೆಂಬ ಖೇದ ಅಲ್ಲಿಯ ಜನರದ್ದಾಗಿತ್ತು. ಅದಕ್ಕಾಗಿ ಅವರು ತಮ್ಮ ವಿರೋಧವನ್ನು ಹಾಸ್ಯಕತೆಗಳ ಮೂಲಕ ಆಗೀಗ ವ್ಯಕ್ತಮಾಡುತ್ತಿದ್ದರು. ಯಾಕೆಂದರೆ ಅಂದು ರಶಿಯಾದಲ್ಲಿ ಸರಕಾರವನ್ನು ಟೀಕಿಸುವದಕ್ಕೆ ಇದ್ದ ಒಂದೇ ಒಂದು ಮಾರ್ಗ ವ್ಯಂಗ್ಯ ಕತೆಗಳನ್ನು ಹೇಳುವುದು. ಪ್ರಸಿದ್ಧ ಗಗನ ಯಾತ್ರಿ ಯೂರಿ ಗ್ಯಾಗರಿನ್ ತನ್ನ ಗಗನ ಯಾನವನ್ನು ಯಶಸ್ವ್ವಿಯಾಗಿ ಮುಗಿಸಿ ತಿರುಗಿ ಬಂದ ಮೇಲೆ ಇಡಿ ಜಗತ್ತೇ ಸಂತಸಗೊಂಡಿತ್ತು. ಅವನನ್ನು ಸಂದರ್ಶಿಸಲು ಒಬ್ಬ ವಿದೇಶಿ ಪತ್ರಕರ್ತ ಗ್ಯಾಗರಿನ್ ಮನೆಗೆ ಹೋದ. ಆದರೆ ಗ್ಯಾಗರಿನ್ ಮನೆಯಲ್ಲಿರಲಿಲ್ಲ. ಅವನ ಪುಟ್ಟ ಮಗಳು ಬಾಗಿಲ ತೆರೆದಾಗ ಈತ ನುಡಿದ, “ ನಿನ್ನ ತಂದೆಯವರನ್ನು ನಾನು ನೋಡಬೇಕು”. ಆಗ ಹುಡುಗಿ ನುಡಿದಳು, “ ಇಲ್ಲ, ಆತ ಗಗನ ಯಾನಕ್ಕೆ ಹೋಗಿದ್ದಾನೆ”. “ಸರಿ ಅವರು ಎಷ್ಟು ಹೊತ್ತಿಗೆ ವಾಪಾಸು ಬರುತ್ತಾರೆ.?” ಆಗ ಹುಡುಗಿ ನುಡಿದಳು, “ನಾಲ್ಕು ತಾಸುಗಳ ತರುವಾಯ”. “ ಇರಲಿ ನಾನೆ ಕಾಯುತ್ತೇನೆ. ನಿನ್ನ ತಾಯಿಯ ಹತ್ತಿರ ನಾನು ಮಾತನಾಡಬಹುದೆ?”. ಹುಡುಗಿ ತಟ್ಟನೆ ನುಡಿದಳು, “ಇಲ್ಲ, ಅವಳು ಬ್ರೆಡ್ಡು ತರಲು ಬೇಕರಿಗೆ ಹೋಗಿದ್ದಾಳೆ.” ಆಗ ಪತ್ರಕರ್ತ ಕೇಳಿದ, “ಅವಳು ಎಷ್ಟು ಹೊತ್ತಿಗೆ ವಾಪಾಸು ಬರುತ್ತಾಳೆ?”. ಅದಕ್ಕೆ ಪುಟ್ಟ ಹುಡುಗಿ, “ಎಂಟು ತಾಸು ಆಗಬಹುದು. ಯಾಕೆಂದರೆ ಅವಳು ಬ್ರೆಡ್ಡಿಗಾಗಿ ಕ್ಯೂ ದಲ್ಲಿ ನಿಂತಿದ್ದಾಳೆ.” ಗಗನ ಯಾನಕ್ಕೆ ಹೋದ ವ್ಯಕ್ತಿ ನಾಲ್ಕು ತಾಸುಗಳಲ್ಲಿ ವಾಪಾಸಾಗುವದಾದರೆ ಬ್ರೆಡ್ ತರುವದಕ್ಕೆ ಹೋದವಳಿಗೆ ತಿರುಗಿ ಬರಲು ಎಂಟು ತಾಸುಗಳು ಬೇಕು. ಇದು ಎಂತ ವಿಪರ್ಯಾಸ!. ಬಹುಷಃ ಕಮ್ಯುನಿಸಂ ಆಡಳಿತದಲ್ಲಿ ಜನರ ದಿನನಿತ್ಯದ ಪಾಡನ್ನು ಇದಕ್ಕೂ ಚೆನ್ನಾಗಿ ವರ್ಣಿಸಲೂ ಸಾಧ್ಯವಿಲ್ಲವೇನೋ? ಕಮ್ಯುನಿಸಮ್ ಮತ್ತು ಕ್ಯೂ ಒಂದಕ್ಕೊಂದು ಅವಿನಾಭಾವಿ: ಕಮ್ಯುನಿಸ್ಟ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳು ಸತ್ತರೂ ಅವರನ್ನು ಬಿಡದ ಕ್ಯೂ ಎಂಬ ದುರವಸ್ಥೆಯ ಕುರಿತು ಇರುವ ಇನ್ನೊಂದು ವ್ಯಂಗ್ಯಕತೆ ಇನ್ನೂ ಅದ್ಭುತವಾಗಿದೆ. ಒಬ್ಬ ಮನುಷ್ಯ ಸತ್ತು ನರಕಕ್ಕೆ ಹೋಗುತ್ತಾನೆ. ಅಲ್ಲಿ ಅವನು ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿತ್ತು – ಒಂದು ಬಂಡವಾಳಶಾಹಿ ನರಕ; ಇನ್ನೊಂದು ಸಾಮ್ಯವಾದಿ ನರಕ. ಆಗ ಆತ ಎರಡೂ ನರಕಗಳ ಕುರಿತು ತುಲನಾತ್ಮಕವಾಗಿ ಅಭ್ಯಸಿಸಿ ಒಂದನ್ನು ಆಯ್ಕೆ ಮಾಡಲು ನಿರ್ಧರಿಸಿ ಮೊದಲು ಬಂಡವಾಳಶಾಹಿ ನರಕದ ಬಾಗಿಲಿನ ಎದುರು ಬಂದು ನಿಲ್ಲುತ್ತಾನೆ. ಅಲ್ಲಿ ರೆನಾಲ್ಡ್ ರೆಗನ್‍ನನ್ನು ಹೋಲುವ ವ್ಯಕ್ತಿಯೊಬ್ಬ ನಿಂತಿದ್ದ. ಈತ ಬಂಡವಾಳಶಾಹಿ ನರಕದ ಕುರಿತು ವಿಚಾರಿಸಿದಾಗ ಆತ ಹೇಳಿದ, “ ಬಂಡವಾಳಶಾಹಿ ನರಕದಲ್ಲಿ ನಿನ್ನನ್ನು ಜೀವಂತವಾಗಿ ಸುಡುತ್ತಾರೆ. ನಂತರ ಎಣ್ಣೆಯಲ್ಲಿ ಹಾಕಿ ಬೇಯಿಸುತ್ತಾರೆ. ಆನಂತರ ನಿನ್ನನ್ನು ಹರಿತವಾದ ಚಾಕುವಿನಿಂದ ಚಿಕ್ಕ ಚಿಕ್ಕ ತುಂಡಾಗಿ ಕತ್ತರಿಸುತ್ತಾರೆ.” “ಅಯ್ಯೋ, ಭಯಾನಕವಾಗಿದೆ!” ಎಂದು ನುಡಿದ ಈತ ಸಾಮ್ಯವಾದದ ನರಕದ ಬಗ್ಗೆ ವಿಚಾರಿಸಲು ಇನ್ನೊಂದ ಬಾಗಿಲಿಗೆ ಹೋದ. ಅಲ್ಲಿ ಕಾರ್ಲಮಾರ್ಕ್ಸನ ಹೋಲುವ ವ್ಯಕ್ತಿಯೊಬ್ಬ ನಿಂತಿದ್ದ. ಈತ ಅವನನ್ನು ವಿಚಾರಿಸಿದಾಗ ಆತ ನುಡಿದ, “ಕಮ್ಯುನಿಷ್ಟಶಾಹಿ ನರಕದಲ್ಲಿ ನಿನ್ನನ್ನು ಜೀವಂತವಾಗಿ ಸುಡುತ್ತಾರೆ. ನಂತರ ಎಣ್ಣೆಯಲ್ಲಿ ಹಾಕಿ ಬೇಯಿಸುತ್ತಾರೆ. ಆನಂತರ ನಿನ್ನನ್ನು ಹರಿತವಾದ ಚಾಕುವಿನಿಂದ ಚಿಕ್ಕ ಚಿಕ್ಕ ತುಂಡಾಗಿ ಕತ್ತರಿಸುತ್ತಾರೆ.” “ಅಯ್ಯೋ, ಇದು ಸಹ ಬಂಡವಾಳಶಾಹಿ ನರಕದಂತೆಯೆ ಇದೆ.” ಎಂದು ತನಗೇ ಹೇಳಿಕೊಂಡ. ಆದರೆ ಈತನಿಗೆ ಕಮ್ಯುನಿಷ್ಟಶಾಹಿ ನರಕದ ಎದುರು ಯಾಕೆ ಅಷ್ಟು ಉದ್ದದ ಕ್ಯೂ ಇದೆ ಎಂಬುದು ಮಾತ್ರ ಅರ್ಥವಾಗಲಿಲ್ಲ. ಅದಕ್ಕೆ ಈತ ಮಾರ್ಕ್ಸನನ್ನು ಹೋಲುವ ವ್ಯಕ್ತಿಯನ್ನು ವಿಚಾರಿಸುತ್ತಾನೆ. ಅದಕ್ಕೆ ಆತ “ನೋಡು ಕಾಮ್ರೇಡ್, ಕಮ್ಯುನಿಷ್ಟ್ಟ ನರಕದಲ್ಲಿ ಕೆಲವು ಬಾರಿ ಎಣ್ಣೆಯ ಕೊರತೆ ಇರುತ್ತದೆ. ಇನ್ನು ಕೆಲವುಬಾರಿ ಚಾಕುಗಳೆ ಇರುವದಿಲ್ಲ. ಇನ್ನು ಕೆಲವು ಬಾರಿ ಬಿಸಿ ನೀರು ಸಹ ಇರುವದಿಲ್ಲ.!” ಮಾಸ್ಕೋ ನಗರದ ಒಬ್ಬ ಗ್ರಹಿಣಿ ತನ್ನ ಸ್ನೇಹಿತಳಿಗೆ ಹೇಳುತ್ತಾಳೆ, “ಅಲ್ಲಾ ಕಣೆ, ನಾಳೆ ಬಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತದಂತೆ”. ಅದಕ್ಕೆ ಅವಳ ಸ್ನೇಹಿತಳು ಏನು ಹೇಳುತ್ತಾಳೆ ಗೊತ್ತೆ? – “ ಒಳ್ಳೆಯದಾಯಿತು ಬಿಡು. ಅದಕ್ಕಾದರೂ ನಾನು ಕ್ಯೂ ನಿಲ್ಲಬೇಕಾಗಿಲ್ಲವಲ್ಲ!.” ಕಮ್ಯುನಿಷ್ಟ್ಟ ಸರಕಾರದ ಅಡಿಯಲ್ಲಿ ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಕ್ಯೂ ಎಂಬುದು ಸರ್ವೇಸಾಮಾನ್ಯ. ಅಂತಹ ಕಮ್ಯುನಿಷ್ಟ್ಟ ಬದುಕಿನ ಬಗ್ಗೆ ಇರುವ ಮತ್ತೊಂದು ಜೋಕು ತುಂಬಾ ಅರ್ಥಪೂರ್ಣವಾಗಿದೆ. ಅಲ್ಲಿ ಕುಡಿಯುವದಕ್ಕಷ್ಟೇ ಅಲ್ಲಾ, ಕೊಲ್ಲಬೇಕೆಂದರೂ ಅದಕ್ಕೂ ಕ್ಯೂ ಇರುತ್ತದೆ!. ಒಂದು ಬಾರಿ ಒಬ್ಬ ಮಾಸ್ಕೋದಲ್ಲಿ ವೋಡ್ಕಾ ಅಂಗಡಿಯ ಎದುರು ಕ್ಯೂದಲ್ಲಿ ನಿಂತಿದ್ದ. ನಿಂತು ನಿಂತು ಸುಸ್ತಾದ ಆತ ತನ್ನ ಮಿತ್ರನಿಗೆ, “ ಇದು ಶತಃ ಸಿದ್ಧ. ನಾನು ಈಗಲೇ ಹೋಗಿ ಗೊರ್ಬೋಚೇವ್‍ನನ್ನು ಕೊಂದು ಬರುತ್ತೇನೆ” ಎಂದು ನುಡಿದು ಕ್ಯೂ ಬಿಟ್ಟು ನಡೆದ. ಎರಡು ತಾಸುಗಳ ನಂತರ ಆತ ವಾಪಾಸು ಬಂದ. ಆಗ ಮಿತ್ರ ಈತನನ್ನು ಕೇಳಿದ, “ ನೀನು ಹೋದ ಕೆಲಸ ಮುಗಿಸಿ ಬಂದೆಯಾ?”. ಅದಕ್ಕೆ ಈತ, “ಇಲ್ಲ” ಎಂದು ನುಡಿದು ಹಾಗೆಯೇ ಮುಂದುವರಿದು ಹೇಳಿದ, “ಅಲ್ಲಿ ಇದಕ್ಕೂ ದೊಡ್ಡ ಕ್ಯೂ ಇತ್ತು.!” ಈ ಜೋಕ್‍ನ್ನು ಹೇಳಿದವನು ಸ್ವತಃ ಗೊರ್ಬೋಚೇವ್ ಎಂಬ ಮಾತಿದೆ. ಅಂದರೆ ಕಮ್ಯುನಿಷ್ಟ್ಟ ನಾಯಕರು ಜೋಕುಗಳಿಗೆ ಬಲಿಯಾಗುವುದಷ್ಟೇ ಅಲ್ಲಾ ಅದನ್ನು ತಮ್ಮ ಮೇಲೆ ಆರೋಪಿಸಿಕೊಂಡು ನಗುತ್ತಿದ್ದರಂತೆ. ಗೊರ್ಬೋಚೇವ್ ಹೇಳುತ್ತಿದ್ದನಂತೆ- ಈ ರಾಜಕೀಯ ಜೋಕುಗಳು ನಮ್ಮ ಮುಕ್ತಿಯ ಮಾರ್ಗಗಳು! – ಎಂದು. ಅದಕ್ಕೆಂದೆ ಹಾಸ್ಯಕತೆಗಳು ಕಮ್ಯುನಿಸಂನ ಜೊತೆ ಜೊತೆಯಲ್ಲಿ ಬೆಳೆದು ಅದಕ್ಕೆ ಪ್ರತಿರೋಧಶಕ್ತಿಯಾಗಿ ನಿಂತಿದ್ದು ಅಷ್ಟೇ ಸತ್ಯ. ಅಮೇರಿಕಾದ್ದಾದರೆ ಕ್ಷುಲ್ಲಕ ವಸ್ತುವೂ ಕೆಲಸ ಮಾಡುತ್ತದೆ! ಕಮ್ಯುನಿಸಂ ಆಡಳಿತದ ರಶಿಯಾದಲ್ಲಿ ಉತ್ಪಾದಿತವಾಗುತ್ತಿದ್ದ ಉಪಭೋಗಿ ವಸ್ತುಗಳ ಗುಣಮಟ್ಟವಂತೂ ತೀರ ಕಳಪೆಯದಾಗಿತ್ತು. ಈ ಕುರಿತು ಅಧ್ಯಕ್ಷ ನಿಕಿಟೇವ್ ಕ್ರುಶ್ಚೇವ್ ತನ್ನ ಜೀವನದ ಒಂದು ಪ್ರಸಂಗವನ್ನು ಜೋಕ್ ರೂಪದಲ್ಲಿ ಹೇಳುತ್ತಿದ್ದ. ಒಮ್ಮೆ ರಶಿಯಾದ ಹೆಣ್ಣುಮಗಳೊಬ್ಬಳು ಅಧ್ಯಕ್ಷ ಕ್ರುಶ್ಚೇವ್‍ನಲ್ಲಿಗೆ ಹೋಗಿ ಆಟೋಗ್ರಾಫ್ ಮುಂದೊಡ್ಡಿ ತನ್ನ ಬಾಲ್ ಪೆನ್ನನ್ನು ನೀಡುತ್ತ ಸಹಿ ಮಾಡುವಂತೆ ಭಿನ್ನವಿಸಿಕೊಳ್ಳುತ್ತಾಳೆ. ಅಧ್ಯಕ್ಷ ಕ್ರುಶ್ಚೇವ್ ಸಹಿಮಾಡಲು ತೊಡಗಿದಾಗ ಎಷ್ಟೇ ಪ್ರಯತ್ನಿಸಿದರೂ ಅದು ಬರೆಯುವದಿಲ್ಲ. ಅವಳನ್ನು ಒಮ್ಮೆ ನೋಡಿ ಹಾಗೆಯೇ ಆ ಪೆನ್ನನ್ನು ಅವಳಿಗೆ ಹಿಂತಿರುಗಿಸಿ ತನ್ನ ಕಿಸೆಯಿಂದ ಪೆನ್ನು ತೆಗೆದು ಬರೆಯತೊಡಗಿದಾಗ ಅದು ಸುಗಮವಾಗಿ ಬರೆಯತೊಡಗಿತಂತೆ. ಆ ಅಟೋಗ್ರಾಫಿನಲ್ಲಿ ಅವನು ಬರೆದದ್ದು ಏನು ಗೊತ್ತೆ? “ಇದು ಅಮೇರಿಕಾದಾಗಿರುವದರಿಂದ ಇಂಥಹ ಕ್ಷುಲ್ಲಕ ವಸ್ತುಗಳು ಸಹ ಕೆಲಸ ಮಾಡುತ್ತದೆ.” ಬಹುಷಃ ಕಮ್ಯುನಿಷ್ಟ್ಟ ರಶಿಯಾದ ವಸ್ತುಗಳ ಗುಣಮಟ್ಟದ ಬಗ್ಗೆ ಇದಕ್ಕೂ ಉತ್ತಮ ಭಾಷ್ಯವೊಂದನ್ನು ಬರೆಯುವುದು ಸಾಧ್ಯವಿಲ್ಲವೇನೋ!. ಸ್ವಾತಂತ್ರ್ಯ ಹರಣ: ಕಮ್ಯುನಿಸಂ ಸ್ವಾತಂತ್ರ್ಯ ವಿರೋಧಿ. ಸಮಾನತೆಯ ಹೆಸರಿನಡಿಯಲ್ಲಿ ಅದು ಸ್ವಾತಂತ್ರ್ಯದ ಹರಣ ನಡೆಸುತ್ತದೆ. ಸ್ವಂತ ಭೂಮಿ, ಸ್ವಂತ ಮನೆ, ಸ್ವಯಂ ಉದ್ಯೋಗ - ಅಷ್ಟೇ ಏಕೆ ಸ್ವಂತ ವಿಚಾರಗಳನ್ನು ಸಹ ವಕ್ತಪಡಿಸುವುದು ಅಸಾಧ್ಯದ ಮಾತು. ಅಭಿಪ್ರಾಯ ಸ್ವಾತಂತ್ರ್ಯದ ಕುರಿತು ಧ್ವನಿಸುವ ಒಂದು ವಿಡಂಬನೆ ಇಲ್ಲಿದೆ. ಇದು ಕಮ್ಯುನಿಷ್ಟ ಆಡಳಿತದ ಹಂಗೇರಿಯ ನಾಯಕ ಮೆಟ್ಯಾಸ್ ರಾಕೋಸಿಯ ಕುರಿತಾದ ಒಂದು ಹಾಸ್ಯ ಚಟಾಕಿ. ಇದು ವಾಕ್ ಸ್ವಾತಂತ್ರ್ಯದ ಕುರಿತಾಗಿದ್ದು ತುಂಬ ರೊಚಕವಾಗಿದೆ. ಇಬ್ಬರು ಗೆಳೆಯರು ರಸ್ತೆಯಲ್ಲಿ ಹೊರಟಿದ್ದರು. ಒಬ್ಬನು ಇನ್ನೊಬ್ಬನನ್ನು ಕೇಳಿದ, “ರಾಕೋಸಿಯ ಬಗ್ಗೆ ನಿನ್ನ ಅನಿಸಿಕೆಯೇನು?”. ಅದಕ್ಕೆ ಇನ್ನೊಬ್ಬ, “ನಾನು ಇಲ್ಲಿ ಹೇಳಲಾರೆ.” ಎಂದು ಹೇಳಿ ತನ್ನನ್ನು ಅನುಸರಿಸು ಎಂದು ನುಡಿದ. ಅವರಿಬ್ಬರೂ ಸ್ವಲ್ಪ ದೂರಕ್ಕೆ ಹೋದ ಮೇಲೆ ಮೊದಲನೆಯವನಿಗೆ ಕುತೂಹಲ ತಡೆಯಲಾಗದೆ ಮತ್ತೆ ಕೇಳಿದ, “ ರಾಕೋಸಿಯ ಬಗ್ಗೆ ನಿನ್ನ ಅಭಿಪ್ರಾಯವೇನು?.” “ಇಲ್ಲ. ಇಲ್ಲಿಯೂ ಹೇಳಲಾರೆ.” ಮುಂದೆ ಸ್ವಲ್ಪ ದೂರ ನಡೆದು ವಸತಿಗೃಹಗಳ ಸಮುಚ್ಛಯದ ಹತ್ತಿರ ಹೋದಾಗ ಪುನಃ ಕೇಳಿದ. ಆಗಲೂ ಎರಡನೆಯವ ಹೇಳಿದ, “ಇಲ್ಲ. ಇಲ್ಲಿಯೂ ಹೇಳಲಾರೆ. ಇದೂ ಸಹ ಸುರಕ್ಷಿತ ಜಾಗವಲ್ಲ.” ಮುಂದೆ ಹಾಗೆಯೇ ಇಬ್ಬರೂ ನಿರ್ವಸಿತ ಜಾಗಕ್ಕೆ ಬಂದಾಗ ಮೊದಲನೆಯವ “ದಯವಿಟ್ಟು ಈಗಲಾದರೂ ಹೇಳು.” ಎಂದು ವಿನಂತಿಸಿಕೊಂಡ. ಆಗ ಎರಡನೆಯವನು ಒಮ್ಮೆ ಸುತ್ತಲೂ ಕಣ್ಣು ಹಾಯಿಸಿ ನುಡಿದ, “ವಾಸ್ತವಿಕವಾಗಿ ನಾನು ಅವನನ್ನು ಮೆಚ್ಚುತ್ತೇನೆ!.” ಹೆಸರಿಗೆ ಪ್ರಜಾಪ್ರಭುತ್ವ – ಆಯ್ಕೆ ಮಾತ್ರ ಇಲ್ಲ! ಕಮ್ಯುನಿಷ್ಟ್ಟ ಮಾದರಿಯ ‘ಪ್ರಜಾಪ್ರಭುತ್ವ’ ದ ಕುರಿತು ಇರುವ ಒಂದು ಜೋಕು. ‘ಪ್ರಜಾಪ್ರಭುತ್ವ’ದ ಹೆಸರಿನಲ್ಲಿ ಕಮ್ಯುನಿಷ್ಟ್‍ರು ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವನ್ನೇ ಹೇಗೆ ಕಿತ್ತಿಕೊಳ್ಳುತ್ತಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. “ರಶಿಯಾದ ಮೊದಲ ಚುನಾವಣೆ ಎಂದು ಜರುಗಿತು?.” ಎಂಬುದು ಒಂದು ಪ್ರಶ್ನೆ. ಅದಕ್ಕೆ ಉತ್ತರ, “ದೇವರು ಆಡಮ್‍ನ ಎದುರು ಈವ್‍ನನ್ನು ನಿಲ್ಲಿಸಿ - ಹೋಗು, ನಿನ್ನ ಹೆಂಡತಿಯನ್ನು ಆಯ್ಕೆ ಮಾಡು.”ಎಂದು ಹೇಳಿದಾಗ. ಒಂದು ದಿನ ರಶಿಯಾದ ಅಧ್ಯಕ್ಷ ಬ್ರೆಜ್ನೇವ್ ಕಾರಿನಲ್ಲಿ ಪಯಣಿಸುತ್ತಿದ್ದಾಗ ಒಬ್ಬಾತ ಒಂದು ಕಲ್ಲಂಗಡಿ ಹಣ್ಣನ್ನು ಹೆಗಲ ಮೇಲಿಟ್ಟು ಹೋಗುತ್ತಿದ್ದುದನ್ನು ನೋಡಿದ. ಕಾರು ನಿಲ್ಲಿಸಿದ ಬ್ರೆಜ್ನೇವ್ ಅವನ ಹತ್ತಿರ, “ ನಾನು ಹಣ ಕೊಡುತ್ತೇನೆ ನನಗೆ ಆ ಹಣ್ಣನ್ನು ಕೊಡು” ಎಂದ. ಆಗ ಆತ, “ಖಂಡಿತ ಕೊಡುತ್ತೇನೆ. ನಿಮಗೆ ಬೇಕಾದುದನ್ನು ಆರಿಸಿಕೊಳ್ಳಿ.” ಆಗ ಬ್ರೆಜ್ನೇವ್ ಆಶ್ಚರ್ಯದಿಂದ ಕೇಳಿದ, “ ಕೇವಲ ಒಂದೇ ಹಣ್ಣು ಇದೆ. ನಾನು ಹೇಗೆ ಆಯ್ಕೆ ಮಾಡಲಿ.” ಅದಕ್ಕೆ ಆತ ನುಡಿದ, “ ನಾವು ನಿಮ್ಮನ್ನು ಆಯ್ಕೆ ಮಾಡಿದ ರೀತಿಯಲ್ಲಿ!.” ಕಾಲ್ಪನಿಕ ರೇಡಿಯೊ ಸಂವಾದ : ಒಂದು ಕಾಲ್ಪನಿಕ ರೇಡಿಯೋ ಸಂವಾದ ರಶಿಯಾದ ಒಳಗೆ ಮತ್ತು ಹೊರಗೆ ಬಹು ಜನಪ್ರಿಯವಾಗಿದೆ. ಸ್ವಾತಂತ್ರ್ಯ ಎಂಬ ಶಬ್ದ ಎಷ್ಟು ವಿಪರೀತಾರ್ಥಕ್ಕೆ ಒಳಗಾಗಿದೆ ಎಂಬುದು ವಿನೋದಪೂರ್ಣವಾಗಿದೆ. ಪ್ರಶ್ನೆ : ಅಮೇರಿಕಾದಲ್ಲಿಯಂತೆ ರಶಿಯಾದಲ್ಲಿಯೂ ವಾಕ್ ಸ್ವಾತಂತ್ರ್ಯ ಇದೆಯೆಂಬುದು ಸರಿಯೇ? ಉತ್ತರ : ತಾತ್ವಿಕವಾಗಿ ಹೌದು. ಅಮೇರಿಕಾದಲ್ಲಿ ನೀವು ವಾಷಿಂಗ್ ಟೌನ್ ಡಿ.ಸಿ.ಯಲ್ಲಿರುವ ಶ್ವೇತಭವನದ ಎದುರು ನಿಂತು, “ರೇಗನ್‍ನಿಗೆ ಧಿಕ್ಕಾರ!” ಎಂದು ಕೂಗಿದರೆ, ನಿಮಗೆ ಶಿಕ್ಷೆ ಆಗಲಾರದು. ಅದೇ ರೀತಿ ರಶಿಯಾದಲ್ಲಿಯೂ ಸಹ ಮಾಸ್ಕೋದ ಕೆಂಪು ವೃತ್ತದ ಎದುರು ನಿಂತು ನೀವು, “ರೇಗನ್‍ನಿಗೆ ಧಿಕ್ಕಾರ!” ಎಂದು ಕೂಗಿದರೆ, ನಿಮಗೆ ಶಿಕ್ಷೆ ಆಗಲಾರದು!. ಪ್ರಶ್ನೆ : ಅಮೇರಿಕಾ ಮತ್ತು ರಶಿಯಾ ದೇಶಗಳ ಸಂವಿಧಾನಗಳ ನಡುವೆ ಇರುವ ವ್ಯತ್ಯಾಸ ಏನು? ಇವರೆಡೂ ವಾಕ್ ಸ್ವಾತಂತ್ರ್ಯವನ್ನು ನೀಡುತ್ತವೆಯೇ? ಉತ್ತರ : ಹೌದು!. ಆದರೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನವು ಮಾತು ಮುಗಿದ ಮೇಲೂ ಸಹ ಸ್ವಾತಂತ್ರ್ಯವನ್ನು ನೀಡುತ್ತದೆ!. ಪ್ರಶ್ನೆ : ರಶಿಯಾದಲ್ಲಿ ಕೆಲಸಕ್ಕೆ ಸಮನಾದ ವೇತನ ನೀಡುವದಿಲ್ಲವೆಂಬುದು ಸರಿಯೆ? ಉತ್ತರ : ಸುಳ್ಳು. ಅವು ಪರಸ್ಪರ ಸರಿಸಮವಾಗಿದೆ. ಸರಕಾರ ವೇತನ ಕೊಡುವಂತೆ ನಟಿಸುತ್ತದೆ. ಕೆಲಸಗಾರರು ಕೆಲಸಮಾಡುವಂತೆ ನಟಿಸುತ್ತಾರೆ. ಧ್ವನಿ ಎತ್ತಿದರೆ ಜೈಲುವಾಸ : ಜೈಲಿನಲ್ಲಿ ಇಬ್ಬರು ಕೈದಿಗಳು ತಮ್ಮ ಅನುಭವ ಹಂಚಿಕೊಂಡರು. ಒಬ್ಬ ಕೇಳಿದ, “ನಿನ್ನನ್ನು ಯಾಕೆ ಬಂಧಿಸಿದ್ದಾರೆ?. ಅದು ರಾಜಕೀಯ ಅಥವಾ ಸಾಮಾನ್ಯ ಅಪರಾಧವೇ?”. ಮತ್ತೊಬ್ಬ ಹೇಳಿದ, “ಅದು ರಾಜಕೀಯ ಅಪರಾಧ!. ನಾನೊಬ್ಬ ಕೊಳಾಯಿ ದುರಸ್ತಿಗಾರ. ಅವರು ನನಗೆ ಜಿಲ್ಲಾ ಸಮಿತಿಯ ಕಛೇರಿಗೆ ಬರ ಹೇಳಿದರು. ನಾನು ಅಲ್ಲಿಗೆ ಹೋದಾಗ ಅವರು ಚರಂಡಿ ಪೈಪನ್ನು ದುರಸ್ತಿ ಮಾಡಲು ಹೇಳಿದರು. ಲೈನ್ ಪರಿಶೀಲಿಸಿದ ನಾನು ಇಡಿ ವ್ಯವಸ್ಥೆ ಹಾಳಾಗಿದೆ. ಅದನ್ನು ಬದಲಾಯಿಸಬೇಕು- ಎಂದೆ. ಅದಕ್ಕೆ ಅವರು ನನಗೆ ಏಳು ವರ್ಷಗಳ ಶಿಕ್ಷೆ ನೀಡಿದ್ದಾರೆ!.” ಮೂವರು ಜೈಲಿನಲ್ಲಿ ಕುಳಿತು ತಾವು ಹೇಗೆ ಜೈಲು ಪಾಲಾದೆವೆಂಬುದರ ಕುರಿತು ಮಾತನಾಡುತ್ತಿದ್ದರು. ಮೊದಲನೆಯವನು ಹೇಳಿದ ನಾನು ಕಾರ್ಲ ರೆಡಾಕ್‍ನ ವಿರುದ್ಧ ದ್ವನಿ ಎತ್ತಿದ್ದೆ. ಎರಡನೆಯವನು ಹೇಳಿದ ನಾನು ರೆಡಾಕ್‍ನ ಪರವಾಗಿ ಮಾತನಾಡಿದೆ. ನಂತರ ಅವರು ತಮ್ಮ ಹಿಂಬದಿಯಲ್ಲಿ ಸುಮ್ಮನೆ ಕುಳಿತವನತ್ತ ತಿರುಗಿ ಕೇಳಿದರು - ನೀನೇಕೆ ಜೈಲಿಗೆ ಬಂದೆ ಎಂದು. ಅದಕ್ಕೆ ಆತ ನುಡಿದ, “ನಾನೇ ಕಾರ್ಲ ರೆಡಾಕ್ !”. ಮೂವರು ಕಾರ್ಮಿಕರು ಬಂಧಿತರಾದರು. ತಮ್ಮ ಬಂಧನದ ಕುರಿತು ಅವರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು. ಮೊದಲನೆಯವನು ಹೇಳಿದ, “ನಾನು ಹತ್ತು ನಿಮಿಷ ತಡವಾಗಿ ಬಂದುದಕ್ಕೆ ವಿದ್ರೋಹದ ಆರೋಪ ಹೊರಿಸಲಾಯಿತು.” ಎರಡನೆಯವನು ಹೇಳಿದ, “ನಾನು ಹತ್ತು ನಿಮಿಷ ಮುಂಚಿತವಾಗಿ ಕೆಲಸಕ್ಕೆ ಬಂದುದಕ್ಕೆ ನನ್ನ ಮೇಲೆ ಗೂಡಚರ್ಯೆ ಆಪಾದನೆ ಮಾಡಲಾಯಿತು.” ಮೂರನೆಯವ ಹೇಳಿದ, “ ನಾನು ಸದಾ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿದ್ದುದಕ್ಕೆ ಪಾಶ್ಚಾತ್ಯ ಗಡಿಯಾರ ಧರಿಸುತ್ತೀಯೆಂದು ನನ್ನನ್ನು ಶಿಕ್ಷಿಸಲಾಯಿತು.!” ಕಮ್ಯುನಿಸಂ ಆಡಳಿತದಲ್ಲಿ ದುಸ್ತರ ಬದುಕು : ಕಮ್ಯುನಿಷ್ಟ್ಟ ದೇಶಗಳಲ್ಲಿ ಎಲ್ಲರೂ ಸಮಾನರು –ಎಂದು ಹೇಳಲಾಗುತ್ತಿದೆಯೆ ವಿನಃ ವಾಸ್ತವಿಕ ಸತ್ಯವೆ ಬೇರೆ. ಅಲ್ಲಿ ಸಮಾನತೆಯ ಹೆಸರಿನಲ್ಲಿ ಎರಡು ವರ್ಗಗಳು ರೂಪತಾಳುತ್ತವೆ. ಒಂದು ಸಮಾನರ ಗುಂಪು; ಇನ್ನೊಂದು ಹೆಚ್ಚು ಸಮಾನರ ಗುಂಪು. ಈ ಸಂಬಂಧÀಲ್ಲಿ ಹಲವು ಹಾಸ್ಯ ಚಟಾಕಿಗಳು ಹುಟ್ಟಿಕೊಂಡಿವೆ. ರಶಿಯಾದ ಪ್ರದೇಶವೊಂದರಲ್ಲಿ ಬರ ಉಂಟಾದಾಗ ರೈತರ ಗುಂಪೊಂದು ಲೆನಿನ್‍ನ್ನನ್ನು ಭೇಟಿ ಮಾಡಿ “ನಮ್ಮ ಭಾಗದಲ್ಲಿ ಬರಗಾಲ ವಿಪರೀತವಾಗಿದ್ದು ನಾವು ಕುದುರೆಯ ಹಾಗೆ ಹುಲ್ಲನ್ನು ತಿನ್ನುತ್ತಿದ್ದೇವೆ; ಮುಂದೊಂದು ದಿನ ನಾವು ಕುದುರೆಯಂತೆ ಹೇಷಾರವ ಮಾಡಬೇಕಾದೀತು.” ಎಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಆಗ ಚಹಾದಲ್ಲಿ ಜೇನು ತುಪ್ಪ ಹಾಕಿಕೊಂಡು ಸವಿಯಿತ್ತಿದ್ದ ಲೆನಿನ್ ಹೇಳಿದ, “ನಾವಿಲ್ಲಿ ಚಹಾದಲ್ಲಿ ಜೇನುತುಪ್ಪ ಹಾಕಿಕೊಂಡು ಕುಡಿಯುತ್ತೇವೆ. ಹಾಗೆಂದು ನಾವೇನೂ ಜೇನುನೊಣದಂತೆ ಝೇಂಕಾರ ಮಾಡುವದಿಲ್ಲ. ನೀವೇನೂ ಚಿಂತಿಸಬೇಡಿ.” ಕಮ್ಯುನಿಸಂ ಹೆಸರಿನಲ್ಲಿ ಅಸಮಾನತೆ, ಬಡತನ, ಹಸಿವು ಮುಂತಾದ ಸಾಮಾಜಿಕ ನೋವುಗಳು ಕಮ್ಯುನಿಷ್ಟ್ಟ ನಾಡಿನಲ್ಲಿ ಹೇಗಿವೆ- ಎಂಬುದನ್ನು ಒಂದು ವಿಡಂಬನೆ ಸ್ವಲ್ಪ ಕ್ರೂರವಾಗಿಯಾದರೂ ಕಟು ಸತ್ಯವನ್ನೇ ಅರುಹುತ್ತದೆ. ರೋಮೆನಿಯಾದ ಕಾರ್ಮಿಕನೊಬ್ಬ ಮನೆಗೆ ಬಂದಾಗ ಅವನ ಹೆಂಡತಿ ಪಕ್ಕದ ಮನೆಯವನೊಡನೆ ಹಾಸಿಗೆಯಲ್ಲಿ ಇರುವದನ್ನು ನೋಡಿ ತಲೆಕೆಟ್ಟು ಕಿರುಚಾಡುತ್ತಾನೆ, “ ಏ ಹುಚ್ಚಿ!, ಹಾಸಿಗೆಯಲ್ಲಿ ಅವನೊಡನೆ ಏನು ಮಾಡುತ್ತಿದ್ದಿ?”. ನಗ್ನಾವಸ್ಥೆಯಲ್ಲಿದ್ದ ಹೆಂಡತಿ ಹಾಸಿಗೆಯಿಂದ ಜಿಗಿದೆದ್ದು ಮಾಡು ಹರಿಯುವಂತೆ ಕೂಗಾಡಿದಳು, “ ಕುಡಿಯಲು ಬೀರ್ ಇಲ್ಲ, ಅಂಗಡಿಯಲ್ಲಿ ಕಾಫಿಯಿಲ್ಲ; ಏನೂ ಸಿಗುತ್ತಿಲ್ಲ; ಇಂತಹ ದುಸ್ಥಿತಿಯಲ್ಲಿ ಅವನಿಗೆ ನಾನು ಬೇರೆ ಏನು ತಾನೆ ಆತಿಥ್ಯ ನೀಡಲಿ!.” ಪೂರ್ವ ಜರ್ಮನಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಕಮ್ಯುನಿಸಂನ ಹಿರಿಮೆಯ ಬಗ್ಗೆ ಶಿಕ್ಷಕಿಯೊಬ್ಬಳು ನಕಾಶೆಯೊಂದನ್ನು ತೋರಿಸುತ್ತಾ ಪಾಠ ಹೇಳಿಕೊಡುತ್ತಿದ್ದಳು. “ ಮಕ್ಕಳೇ, ಇದು ಪೂರ್ವ ಜರ್ಮನಿ. ಕಡುಕೆಂಪು ಬಣ್ಣದಲ್ಲಿರುವುದು ನಮ್ಮ ದೊಡ್ಡ ಮಿತ್ರ ರಶಿಯಾ; ಇವುಗಳ ಸನಿಹ ಇರುವುದೆಲ್ಲ ಸೋವಿಯತ್ ರಶಿಯಾದ ಸಂಗಡಿಗ ದೇಶಗಳು ಇವೆಲ್ಲ ಕಮ್ಯುನಿಷ್ಟ್ ರಾಷ್ಟ್ರಗಳು. ಇನ್ನು ನೀಲಿ ಬಣ್ಣದ ಪ್ರದೇಶವೇ ಸಾಮ್ರಾಜ್ಯಶಾಹಿ ಅಮೇರಿಕಾ ಸಂಯುಕ್ತ ಸಂಸ್ಥಾನ. ಅದು ನಮ್ಮ ವೈರಿ. ಈ ಕೆಳಗಡೆ ಇರುವುದು ಆಫ್ರಿಕಾ. ಅಲ್ಲಿ ಕ್ರೂರ ಜನರು ವಾಸಿಸುತ್ತಾರೆ. ಅವರು ಒಬ್ಬರೊನ್ನೊಬ್ಬರು ಕೊಲ್ಲುತ್ತಾರೆ. ಏಲ್ಲರಿಗೂ ಅರ್ಥವಾಯಿತಾ? ಏನಾದರೂ ಪ್ರಶ್ನೆಗಳಿವೆಯೇ?” ವಿದ್ಯಾರ್ಥಿ-1 : ಆ ಕ್ರೂರ ಜನರಿಗೆ ಯಾವುದಾದರೂ ಕಮ್ಯುನಿಷ್ಟ್ಟ ಪಕ್ಷ ಇದೆಯೆ? ಶಿಕ್ಷಕಿ : ಇಲ್ಲ. ವಿದ್ಯಾರ್ಥಿ-2 : ಆ ಕ್ರೂರ ಜನರಿಗೆ ಯಾವುದೇ ಕಮ್ಯುನಿಷ್ಟ್ಟ ಕಾರ್ಮಿಕ ಸಂಘಟನೆ ಇಲ್ಲವೆ ? ಶಿಕ್ಷಕಿ : ಇಲ್ಲ. ವಿದ್ಯಾರ್ಥಿ- 3 : ಆ ಕ್ರೂರ ಜನರಿಗೆ ಕಮ್ಯುನಿಸಮ್ ಬಗ್ಗೆ ಗೊತ್ತಿಲ್ಲವೆ? ಶಿಕ್ಷಕಿ : ಇಲ್ಲ. ಅಲ್ಲಿ ಕಮ್ಯುನಿಸಂ ಇರಲಿಲ್ಲ. ವಿದ್ಯಾರ್ಥಿ- 4 : ಹಾಗಿದ್ದರೆ ಅವರು ಹೇಗೆ ಅಷ್ಟು ಕ್ರೂರಿಗಳಾದರು? ಕಮ್ಯುನಿಸಂ ಪರವಾದ ಪ್ರಚಾರಕ್ಕೂ ಅದರ ಒಳಗಿನ ಸತ್ಯಕ್ಕೂ ಇರುವ ಅಂತರದ ಕುರಿತಾದ ವಿಡಂಬನೆಗಳು ಹಲವು. ಅವುಗಳಲ್ಲಿ ಕೆಲವನ್ನು ನೋಡಬಹುದು. ಒಬ್ಬ ಸತ್ತು ಸ್ವರ್ಗಕ್ಕೆ ಹೋದ. ಸ್ವಲ್ಪ ಸಮಯದ ನಂತರ ಈತನಿಗೆ ಸ್ವರ್ಗವೇ ಬೇಜಾರು ಅನಿಸಿತು. ಅದಕ್ಕಾಗಿ ಈತ ನರಕಕ್ಕೆ ವೀಕ್ಷಕನಾಗಿ ಹೋಗಿ ಬರಲು ಅನುಮತಿ ಕೋರಿದ. ಅದಕ್ಕೆ ದೇವರು ಅನುಮತಿಸಿದ. ನರಕದಲ್ಲಿ ಜನರು ಇಸ್ಪೀಟ್ ಆಡುವುದು, ಮಧ್ಯ ಸೇವಿಸುವುದು, ಪ್ರೀತಿ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಈತ ನೋಡಿದ. ಈತನಿಗೆ ನರಕವೇ ಉತ್ತಮವೆಂದು ಅನಿಸಿತು. ಅದಕ್ಕಾಗಿ ಸ್ವರ್ಗಕ್ಕೆ ವಾಪಾಸು ಬಂದವನು ತನಗೆ ನರಕಕ್ಕೆ ವರ್ಗಾಯಿಸುವಂತೆ ದೇವರಲ್ಲಿ ಕೋರಿದ. ಈತನ ಕೋರಿಕೆಯನ್ನು ಮನ್ನಿಸಿದ ದೇವರು ಅವನನ್ನು ನರಕಕ್ಕೆ ತಳ್ಳಿದ. ಈತ ನರಕದ ಬಾಗಿಲಿಗೆ ಬಂದಾಗ ಪಿಶಾಚಿಯು ಅವನನ್ನು ಹಿಡಿದು ಬಿಸಿಯಾದ ಡಾಂಬರದ ಪಿಪಾಯಿಯೊಳಗೆ ತಳ್ಳಿದ. ತಕ್ಷಣ ಈತ ಕೂಗಿಕೊಂಡ, “ನಿಲ್ಲಿಸಿ, ನಾನು ಈ ಹಿಂದೆ ಇಲ್ಲಿಗೆ ವೀಕ್ಷಕನಾಗಿ ಬಂದಾಗ ಇಲ್ಲಿ ಜನರು ವೋಡ್ಕಾ ಸೇವಿಸುತ್ತಿದ್ದರು, ಇಸ್ಪೀಟ್ ಆಡುತ್ತಿದ್ದರು, ಪ್ರೀತಿ ಮಾಡುತ್ತಿದ್ದರು. ಆದರೆ ಈಗ ನೋಡಿದರೆ ನೀವು ನನ್ನನ್ನು ಬಿಸಿ ಡಾಂಬರಕ್ಕೆ ತಳ್ಳುತ್ತಿದ್ದೀರಿ”. ಆಗ ನರಕದ ಪಿಶಾಚಿ ಹೇಳಿತು, “ನೋಡು ನೀನು ನೋಡಿದ್ದು ಕೇವಲ ಪ್ರದರ್ಶನಕ್ಕಾಗಿ ಇಟ್ಟ ಸ್ಥಳದ ನೋಟ. ಆದರೆ ಈಗ ನೀನು ನಿಜವಾದ ನರಕವಾಸಿಗಳ ವಾಸಸ್ಥಾನಕ್ಕೆ ಬಂದಿರುವಿ. ಬಾಯಿ ಮುಚ್ಚಿ ಅನುಭವಿಸು”. ಮತ್ತೊಂದು ಹಾಸ್ಯ ಚಟಾಕಿ ಸಾಮಾನ್ಯ ರಶಿಯನ್ನರ ಬದುಕು ಎಂತಹ ಸ್ಥಿತಿಯಲ್ಲಿದೆಯೆಂಬುದನ್ನು ಅತ್ಯಂತ ಅರ್ಥಪೂರ್ಣ ಧ್ವನಿಯಲ್ಲಿ ಹೇಳುತ್ತದೆ. ಸೋವಿಯಟ್ ಕ್ಲಾಸ್‍ರೂಮ್‍ನಲ್ಲಿ ಶಿಕ್ಷಕಿಯೊಬ್ಬಳು ಲೆನಿನ್‍ನ ಹಿರಿಮೆಯನ್ನು ವರ್ಣಿಸುತ್ತಾ ಮಕ್ಕಳನ್ನು ಕೇಳುತ್ತಾಳೆ - ನಿಮ್ಮಲ್ಲಿ ಎಷ್ಟು ಜನರ ಮನೆಯ ಗೋಡೆಯ ಮೇಲೆ ಲೆನಿನ್‍ನ ಭಾವಚಿತ್ರವಿದೆ?. ಅದಕ್ಕೆ ಒಬ್ಬನನ್ನು ಬಿಟ್ಟು ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಯ ಗೋಡೆಯ ಮೇಲೆ ಲೆನಿನ್‍ನ ಪೋಟೋ ಇದೆಯೆಂದು ಉತ್ತರಿಸುತ್ತಾರೆ. ಆಗ ಶಿಕ್ಷಕಿ ಆ ಹುಡುಗನಲ್ಲಿ ನಿನ್ನ ಮನೆಯಲ್ಲಿ ಲೆನಿನ್‍ನ ಪೋಟೋ ಏಕಿಲ್ಲವೆಂದು ವಿಚಾರಿಸದಾಗ ಆತ ಏನು ಹೇಳಿದ ಗೊತ್ತೆ? ಅವನ ಕುಟುಂಬದವರು ರೂಮಿನ ಮಧ್ಯಭಾಗದಲ್ಲಿ ಮಲಗುತ್ತಾರಂತೆ!. ಇನ್ನೊಂದು ಹಾಸ್ಯ ಚಟಾಕಿ ತನ್ನ ಮೊನಚು ವಿಡಂಬನೆಯ ಮೂಲಕ ನಮ್ಮೆಲ್ಲರ ಗಮನ ಸೆಳೆಯುತ್ತದೆ. ಒಬ್ಬ ಬ್ರಿಟೀಷ್, ಒಬ್ಬ ಪ್ರೆಂಚ್, ಮತ್ತು ಒಬ್ಬ ರಶಿಯನ್ ಈ ಮೂವರು ಒಂದೆಡೆ ಸೇರಿ ಆಡಂ ಮತ್ತು ಈವ್ ಇವರ ಪೋಟೊವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಬ್ರಿಟನ್ ವ್ಯಕ್ತಿ ಹೇಳಿದ, “ಅವರ ಶಾಂತರೂಪ ಮತ್ತು ಗಾಂಭೀರ್ಯತೆ ನೋಡಿದರೆ ಅವರು ಬ್ರಿಟೀಷರೆಂಬುದರಲ್ಲಿ ಸಂಶಯವೆ ಇಲ್ಲ.” ಅದಕ್ಕೆ ಪ್ರೆಂಚ್ ನುಡಿದ, “ ಹುಚ್ಚುಮಾತು!, ಅವರು ಸುಂದರವಾಗಿರುವದರಿಂದ ಪ್ರೆಂಚ್ ಎಂಬುದರಲ್ಲಿ ಎರಡು ಮಾತಿಲ್ಲ.” ಕೊನೆಯಲ್ಲಿ ರಶಿಯಾದವನು ನುಡಿದ, “ ಅವರಿಗೆ ಬಟ್ಟೆಗಳಿಲ್ಲ; ಆಸರೆ ಇಲ್ಲ; ಕೇವಲ ಒಂದು ಸೇಬು ಹಣ್ಣು ಬಿಟ್ಟು ಅವರಿಗೆ ತಿನ್ನುವದಕ್ಕೆ ಬೇರೆ ಏನೂ ಇಲ್ಲ. ಮತ್ತು ಇದೇ ಸ್ವರ್ಗವೆಂದು ಅವರು ನಂಬಿದಂತಿದೆ. ಹೀಗೆಲ್ಲ ಇರುವಾಗ ಅವರು ಖಂಡಿತ ರಶಿಯನ್ನರು!.” ನರಕದಿಂದ ಸ್ವರ್ಗದತ್ತ ವಲಸೆ : ಸ್ಟಾಲಿನ್ ಮರಣಗೊಂಡ. ನಂತರ ಆತ ನಿರೀಕ್ಷೆಯಂತೆ ನರಕ ಸೇರಿದ. ಒಂದು ದಿನ ಸ್ವರ್ಗದ ಬಾಗಿಲನಲ್ಲಿ ಇದ್ದಕಿದ್ದಂತೆ ದೊಡ್ಡ ಶಬ್ದವುಂಟಾಗಿ ದೇವತೆಗಳು ಎಚ್ಚೆತ್ತರು. ಸೇಂಟ್ ಪೀಟರ್ ಬಾಗಿಲು ತೆರೆದಾಗ ದೆವ್ವಗಳು ಹತಾಷೆಯಿಂದ ಕಿರಿಚುತ್ತಿದ್ದವು. ಸೇಂಟ್ ಪೀಟರ್ : ನಿಮಗೇನು ತೊಂದರೆಯಾಗಿದೆ?. ಇಲ್ಲಿ ನೀವೇನು ಮಾಡುತ್ತಿದ್ದೀರಿ.? ದೆವ್ವಗಳು : ನಾವು ನರಕದಿಂದ ವಲಸೆಗೊಂಡ ಮೊದಲ ತಂಡದವರು. ರಾಜಕೀಯವಾಗಿ ದೇಶಬ್ರಷ್ಟರಾಗಿದ್ದು ನಾವು ಸ್ವರ್ಗದಲ್ಲಿ ಆಸರೆ ಕೇಳುತ್ತಿದ್ದೇವೆ. ಸ್ಟಾಲಿನ್ ಅಲ್ಲಿ ವಾಸಮಾಡತೊಡಗಿದಂತೆ ಇಡೀ ನರಕಕ್ಕೇ ಹುಚ್ಚು ಹಿಡಿದಂತಾಗಿದೆ!. ದಂಗೆ ಮತ್ತು ಕ್ರಾಂತಿ : ರಶಿಯನ್ ನಾಗರಿಕನೊಬ್ಬ ಮಾಸ್ಕೊದ ಕೆಂಪುವೃತ್ತದಲ್ಲಿ ಕರಪತ್ರ ಎಸೆಯುವ ಮೂಲಕ ಕಮ್ಯುನಿಷ್ಟ್ಟ ಆಡಳಿತವನ್ನು ಪ್ರತಿಭಟಿಸುತ್ತಾನೆ. ಕೆ.ಜಿ.ಬಿ. ಅವನನ್ನು ಬಂಧಿಸಿ ಅವನು ಎಸೆದ ಕರಪತ್ರವನ್ನು ಪರಿಶೀಲಿಸಿದಾಗ ಅದು ಬಿಳೆ ಕಾಗದವಾಗಿದೆಯೆಂಬುದು ಗಮನಕ್ಕೆ ಬರುತ್ತದೆ. ಯಾಕೆ ಖಾಲಿ ಕಾಗದವನ್ನು ಎಸೆದೆ - ಎಂದು ಬಂಧಿತನನ್ನು ಕೇಳಿದಾಗ ಆತ ಹೇಳುತ್ತಾನೆ, “ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಹೀಗಿರುವಾಗ ನಾನೇಕೆ ಅದರಲ್ಲಿ ಬರೆಯಲಿ?.” ಹೀಗೆ ಕಮ್ಯುನಿಷ್ಟ್ಟ ವಿರುದ್ಧದ ಎಲ್ಲ್ಲಾ ಹೋರಾಟಗಳು ಅದರ ಧೈತ್ಯ ಶಕ್ತಿಯ ಎದುರು ನಿರರ್ಥಕವಾಗುತ್ತದೆಂಬುದು ಈ ಖಾಲಿ ಕಾಗದ ಎಸೆಯುವ ಪ್ರತಿಭಟನೆ ಒಂದು ಸಂಕೇತವಾಗುತ್ತದೆ. ಮತ್ತೊಂದು ವಿಡಂಬನೆ ಅಂತರಂಗದ ನೋವನ್ನು ವ್ಯಕ್ತಪಡಿಸಲು ಸೋಲುವ ಪರಿ ಅನನ್ಯವಾಗಿದೆ. ಒಂದು ದಿನ ಸ್ಟಾಲಿನ್ ತನ್ನ ದೇಶದ ಕಾರ್ಮಿಕರಿಗೆ ಏನು ಬೇಕೆಂಬುದನ್ನು ತಿಳಿಯಲು ಮಾರುವೇಷ ತೊಟ್ಟು ಒಂದು ಸಿನೇಮಾ ಮಂದಿರಕ್ಕೆ ಬರುತ್ತಾನೆ. ಅಲ್ಲಿ ಸಿನೇಮಾ ಮುಗಿದ ನಂತರ ರಶಿಯಾದ ರಾಷ್ಟ್ರಗೀತೆ ಬಿತ್ತರವಾಗುತ್ತದೆ. ಪರದೆಯ ಮೇಲೆ ಸ್ಟಾಲಿನ್‍ನ ಭವ್ಯ ಚಿತ್ರ ಮೂಡುತ್ತದೆ. ಸಿನೇಮಾ ಮಂದಿರದಲ್ಲಿದ್ದ ಎಲ್ಲರೂ ಎದ್ದು ನಿಲ್ಲುತ್ತಾರೆ. ಆದರೆ ಸ್ಟಾಲಿನ್ ಮಾತ್ರ ಹಾಗೆಯೆ ಕುಳಿತಿದ್ದ. ಅದನ್ನು ಕಂಡ ಅವನ ಹಿಂದೆ ನಿಂತವನು ಸ್ಟಾಲಿನ್‍ನ ಹತ್ತಿರ ಬಾಗಿ ಅವನ ಕಿವಿಯಲ್ಲಿ ಉಸುರಿದ, “ಕೇಳು ಕಾಮ್ರೆಡ್, ನಮಗೂ ನಿನ್ನ ಹಾಗೆಯೆ ಅನಿಸುತ್ತದೆ. ಆದರೆ ದಯವಿಟ್ಟು ನಂಬು – ನೀನು ಎದ್ದು ನಿಲ್ಲುವುದು ಬಹಳ ಸುರಕ್ಷಿತ!”. ಇದು ಕೆವಲ ಸಿನೇಮಾ ಮಂದಿರದಲ್ಲಿದ್ದ ಆ ಕಾರ್ಮಿಕನ ಮಾತಷ್ಟೇ ಅಲ್ಲಾ ಇಡೀ ರಶಿಯಾದ ಸಾಮಾನ್ಯ ಕಾರ್ಮಿಕನ ಅಂತರಂಗದ ಧ್ವನಿಯಾಗಿತ್ತು. ಆದರೆ ಅದನ್ನು ಅರ್ಥಮಾಡಿಕೊಳ್ಳುವಷ್ಟು ಕಮ್ಯುನಿಷ್ಟ ನಾಯಕರು ಎಂದೂ ಹೃದಯವಂತರಾಗಿರಲಿಲ್ಲ. ಇಂತಹ ನೂರಾರು ಹಾಸ್ಯಚಟಾಕಿಗಳು ಸಾಮ್ಯವಾದದ ಆಡಳಿತದ ಆರ್ಥಿಕ ಧೋರಣೆ, ಧಮನಕಾರಿ ನೀತಿಗಳ ವಿರುದ್ಧ ಬೀದಿ ಬೀದಿಗಳಲ್ಲಿ ಅನಾಮಿಕವಾಗಿ ಜನರ ಬಾಯಲ್ಲಿ ಹುಟ್ಟುತ್ತ ಹೊಸ ಹೊಸ ರೂಪ ತಳೆಯುತ್ತ ಸಾಗಿ ಬಂದವುಗಳಾಗಿವೆ. ಒಂದು ಅರ್ಥದಲ್ಲಿ ಇವುಗಳನ್ನು ಕಮ್ಯುನಿಸಂ ನೆಲದ ಜಾನಪದವೆಂದರೆ ತಪ್ಪಾಗಲಾರದು. ಇಂದು ಕಮ್ಯುನಿಸಂ ಆಪ್ರಸ್ತುತಗೊಂಡಿದೆ. ಆದರೆ ಕಮ್ಯುನಿಷ್ಟ ಸರ್ವಾಧಿಕಾರದ ಧೋರಣೆಗಳ ಸ್ವಯಂ ವೈರುದ್ಧ್ಯಗಳು ಹುಟ್ಟು ಹಾಕಿದ ನೂರಾರು ಹಾಸ್ಯಚಟಾಕಿಗಳು ಮಾತ್ರ ಇಂದಿಗೂ ಜೀವಂತವಾಗಿ ಉಳಿದಿವೆ. ಅವುಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಲೆಂದೇ ಇಂದು ಅಂತರಜಾಲದಲ್ಲಿ ಸಂಗ್ರಹಿಸಿಡಲಾಗಿದೆ. ಅದರ ಸಂಗ್ರಹಕ್ಕೆಂದು ಒಂದು ಅಂತರಜಾಲವನ್ನು ಸಹ ಸೃಷ್ಟಿಸಿ ವಿವಿಧ ರಾಷ್ಟ್ರಗಳಿಂದ ಜನಪ್ರಿಯ ಹಾಸ್ಯಚಟಾಕಿಗಳನ್ನು ಕಲೆಹಾಕಲಾಗಿದೆ. ಅಷ್ಟೇ ಅಲ್ಲಾ ಅಂತಹ ಹಾಸ್ಯಗಳನ್ನು ಅವುಗಳ ವಿಷಯಾನುಸಾರ ವರ್ಗೀಕರಿಸಿ ಸಂಗ್ರಹಿಸಿರುವುದಂತೂ ವಿಶಿಷ್ಠವಾಗಿದೆ. ಭವಿಷ್ಯದಲ್ಲಿ ಮುಂದಿನ ಜನಾಂಗ ಅವುಗಳನ್ನು ಉತ್ತಮ ಹಾಸ್ಯ ಸಾಹಿತ್ಯವೆಂದು ಓದಿ ಮನಸಾರೆ ನಕ್ಕರೆ ಆಶ್ಚರ್ಯವೇನೂ ಇಲ್ಲ. =000= ಶ್ರೀಪಾದ ಹೆಗಡೆ, ಸಾಲಕೋಡ

😀ಸಾಮ್ಯವಾದದ ನೆಲದಲ್ಲಿ ಅರಳಿದ ಹಾಸ್ಯಚಟಾಕಿಗಳು🤣
bottom of page