top of page

“ನೆಲ-ಮುಗಿಲು”

ಇಂದಿನ ವಿಜಯಕರ್ನಾಟಕ ದಿನಪತ್ರಿಕೆಯ “ನೆಲ-ಮುಗಿಲು” ಅಂಕಣ. ಸಂಪಾದಕ ಶ್ರೀ ಹರಿಪ್ರಕಾಶ ಕೋಣೆಮನೆಯವರಿಗೆ ಧನ್ಯವಾದಗಳು ಭಾಗ II: ಓಂಕಾರದೈತವಾದ ಶಿವನ ಸಾಕ್ಷಾತ್ಕರಿಸಿಕೊಳ್ಳುವ ಸಾಧನ "ಅಯಮಾತ್ಮಾ ಬ್ರಹ್ಮ" ಜಗತ್ತೆಲ್ಲ ಯಾರಲ್ಲಿ ಲಯವಾಗುತ್ತದೆಯೋ ಅವನೇ ಜಗತ್ಕಾರಣ :- ನಾರಾಯಣ ಯಾಜಿ ಅಯಮಾತ್ಮಾ ಬ್ರಹ್ಮ, ಸೋSಯಮಾತ್ಮಾ ಚತುಷ್ಪಾತ್ (ಈ ಆತ್ಮನು ಬ್ರಹ್ಮ. ಈ ಆತ್ಮನು ನಾಲ್ಕು ಪಾದಗಳುಳ್ಳವನು – ಮಾಂಡುಕ್ಯೋಪನಿಷತ್ತು -2) ಇಲ್ಲಿ ಆತ್ಮವೆನ್ನುವದು ನಾನು ಎನ್ನುವದು ಶಿಷ್ಯನಿಗೆ ಅರ್ಥವಾಗಿದೆ. ಈ ಆತ್ಮನೇ ಬ್ರಹ್ಮವಾಗಿರುವದು ಎನ್ನುವದು ಅವನಿಗೆ ತಿಳಿದುಕೊಳ್ಳಬೇಕಾಗಿದೆ. ಯಾವುದನ್ನಾದರೂ ತಿಳಿದುಕೊಳ್ಳಬೇಕೆಂದರೆ ಅದನ್ನು ಅಳೆಯಲು ಮಾನವೊಂದು ಬೇಕಾಗಿದೆ. ಅದನ್ನೇ ಪ್ರಮೇಯವೆನ್ನುತ್ತಾರೆ. ಬ್ರಹ್ಮವೆನ್ನುವದು ಪ್ರಮೇಯಕ್ಕೆ ಸಿಕ್ಕದ ವಸ್ತು, ಇದನ್ನು ತಿಳಿಯಲು ಇರುವ ಪ್ರಮೇಯ ಯಾವುದು ಎನ್ನುವದೇ ಇಲ್ಲಿನ ಜಿಜ್ಞಾಸೆ. ಅನಂತವನ್ನು (Infinite) ಅನಂತವೆಂದು ಅರಿತುಕೊಳ್ಳಲು ಸಾಂತದ ಮೊರೆಹೋಗಲೇ ಬೇಕು. ಲಕ್ಷಾಂತರ ಮೈಲುಗಳ ದೂರದಲ್ಲಿರುವ ನಕ್ಷತ್ರಗಳನ್ನು ಅಳೆಯುವದು ನಮ್ಮ ಕೈಮೊಳದಷ್ಟಿರುವ ಇಂಚುಪಟ್ಟಿಯಿಂದಲೇ. ಅಳೆದಾದಮೇಲೂ ಯಾವದು ಅಳೆತೆಗೆ ನಿಲುಕದೋ ಅದನ್ನು ಅನಂತವೆನ್ನುತ್ತಾರೆ. ಹೊರಗಡೆ ಕಾಣುವ ಪ್ರಪಂಚ ದೃಗ್ ಗೋಚರವಾಗುವಂತಹದ್ದು. ಅದು ಬ್ರಹ್ಮ ಎಂದು ಮೊದಲೇ ಹೇಳಿಯಾಗಿದೆ. ಹೊರಗಿನ ಪ್ರಪಂಚ ನಮ್ಮ ಇಂದ್ರಿಯಗಳಿಗೆ ಗೋಚರವಾಗಿರುವಂತಹದ್ದು. ಈ ದೃಶ್ಯಪ್ರಪಂಚ ನಮಗೆ ಕಾಣಿಸುವದು ನಮ್ಮ ಇಂದ್ರಿಯಗಳ ಕಾರಣದಿಂದ. ಶಬ್ದ, ಸ್ಪರ್ಶ, ರೂಪ, ರಸ ಗಂಧವನ್ನು ನಾವು ಅನುಭವಿಸುತ್ತೇವೆ. ಈ ಇಂದ್ರಿಯಗಳ ಸಮಗ್ರವೇ ನಮ್ಮ ಬಾಹ್ಯರೂಪ. ನಾನು ಎನ್ನುವದಿಲ್ಲದಿದ್ದರೆ ನಮ್ಮ ಸುತ್ತಮುತ್ತಲಿನ ಯಾರೂ ಇರುವ ಅನುಭವ ನಮಗೆ ಬರಲಾರದು. ನಾನು, ನನ್ನಿಂದಾಗಿ ನನ್ನ ಕುಟುಂಬ, ನನ್ನ ಊರು ಹೀಗೆ ಇವೆಲ್ಲವೂ ದೃಶ್ಯಪ್ರಪಂಚಗಳು. ನಾನು ಎನ್ನುವದನ್ನು ಯಾರು ಎಂದು ತಿಳಿಯುವವರೆಗೆ ನಾವು ಅಜ್ಞಾನದಲ್ಲಿ ಇರುತ್ತೇವೆ. ನಾನು ಎನ್ನುವದು ಈ ಬ್ರಹ್ಮದ ಅಂಶವೇ ಆಗಿದೆ ಎಂದು ತಿಳಿಯುವವರೆಗೆ ಸಾಂತ ಪ್ರಪಂಚದಲ್ಲಿ ನಾವು ವಿಹರಿಸಿರುತ್ತೇವೆ. ಸಾಗರದ ಅಲೆ ಸಾಗರದ ಭಾಗವೇ. ಅದು ನೀರಿನಿಂದ ಎದ್ದಾಗ ಅದನ್ನು ಅಲೆ ಎಂದು ಗುರುತಿಸುತ್ತೇವೆ. ಅದೇ ನೀರು ಸಾಗರದ ಆಳದಲ್ಲಿ ಶಾಂತವಾಗಿ ಇರುತ್ತದೆ. ಅಲ್ಲಿ ಚಲನೆಯಿಲ್ಲ. ಅಲೆ, ಹಿಮಗಡ್ಡೆ ಎಲ್ಲವೂ ಸಾಗರದಲ್ಲಿ ಮಿಳಿತವಾಗಿರುತ್ತದೆ. ಆಗ ಆಲ್ಲಿ ಇರುವದು ಸಾಗರವೆನ್ನುವ ಅದ್ವೈತ ಮಾತ್ರ. ಅದನ್ನು ನಾವು ಇಂದ್ರಿಯಗಳ ಮೂಲಕ ಅನುಭವಕ್ಕೆ ತಂದುಕೊಳ್ಳುವದನ್ನು ತಿಳಿಸುವದೇ ಮುಂದಿನ ಮಾತಾದ “ಸೋSಯಮಾತ್ಮಾ ಚತುಷ್ಪಾತ್” ಈ ಆತ್ಮನನ್ನು ಅವನ ನಾಲ್ಕು ಪಾದಗಳಿಂದ ತಿಳಿದುಕೊಳ್ಳಬಹುದಂತೆ. ಅದನ್ನು ತಿಳಿಯುವದು ಹೇಗೆನ್ನುವದನ್ನು ಗುರು ವಿವರಿಸುತ್ತಾ ಹೋಗುತ್ತಾನೆ. ಇಲ್ಲಿ ಪಾದಗಳೆಂದರೆ ಗೋವಿಗಿರುವಂತಹ ನಾಲ್ಕು ಕಾಲುಗಳ ಪಾದಗಳಲ್ಲ. ಅವು ಕಾರ್ಷಾಪಣದಂತೆ ಎನ್ನುವದನ್ನು ಭಾಷ್ಯದಲ್ಲಿ ವಿವರಿಸುತ್ತಾರೆ. ಚಿನ್ನದ ಒಂದು ನಾಣ್ಯಕ್ಕೆ ಕಾರ್ಷಾಪಣನ್ನುತ್ತಿದ್ದರು. ಅದು ಜನಸಾಮಾನ್ಯರಿಗೆ ಸಿಗದಷ್ಟು ಬೆಲೆಯುಳ್ಳವದಾಗಿತ್ತು. ಅದನ್ನು ವ್ಯವಹಾರಕ್ಕಾಗಿ ನಾಲ್ಕುಪಾವಲಿಗಳಿಗೆ ಒಂದು ಕಾರ್ಷಾಪಣವೆಂದು ವಿಭಜನೆ ಮಾಡಿದ್ದರು. ಇದನ್ನು ವ್ಯವಹಾರಕ್ಕಾಗಿ ಮಾಡಿಕೊಂಡ ವಿಭಜನೆ. ಪಾದವೆನ್ನುವದಕ್ಕೆ “ಪದ್ಯತೇ ಅನೇನ ಪಾದಃ” ಸಾಧನನದಿಂದ ಪರಮಾತ್ಮಸ್ವರೂಪನಾದ ಆತ್ಮನನ್ನು ಅರ್ಥೈಸಿಕೊಳ್ಳಲು ಇರುವ ಸಾಧನವನ್ನು ಪಾದವೆನ್ನಲಾಗಿದೆ. ಜೀವಿಗಳೆಲ್ಲ ಎಚ್ಚರ ಕನಸು ಮತ್ತು ಸುಷುಪ್ತಿಯೆನ್ನುವ ಮೂರು ಅವಸ್ಥೆಗಳನ್ನು ಹೊಂದುತ್ತೇವೆ. ಈ ಮೂರು ನಮ್ಮ ಅನುಭವಕ್ಕೆ ಪ್ರತಿನಿತ್ಯಬರುವಂತಹದ್ದು. ಈ ಮೂರು ಪರಮಾರ್ಥಾತ್ಮನ ಒಂದೊಂದು ಪಾದವಾಗಿರುತ್ತದೆ. ಆತ್ಮನ ಬ್ರಹ್ಮಸ್ವರೂಪವು ಈ ಮೂರನ್ನು ದಾಟಿದ ಅತ್ಯಂತ ವಿಲಕ್ಷಣವಾಗಿರುವ ನಾಲ್ಕನೇ ಪಾದವಾಗಿರುತ್ತವೆ. ಈ ಮೂರು ಆ ನಾಲ್ಕನೆಯ ಭಾಗವನ್ನು ತಿಳಿಯುವ ಸಾಧನ. ನಾಲ್ಕನೆಯದನ್ನು ಅರಿತಮೇಲೆ ಅದಕ್ಕಿಂತ ತಿಳಿಯುವದು ಬೇರೆಯಾವುದೂ ಇರುವದಿಲ್ಲ. ಪೂರ್ಣವನ್ನು ನಾಲ್ಕಾಗಿ ವಿಭಜನೆಮಾಡಿ ಆ ನಾಲ್ಕೂ ಅರಿತಾದಮೇಲೆ ಅದು ಪೂರ್ಣವಾಗಿರುತ್ತದೆ; ನಂತರ ಅಲ್ಲಿ ಅರಿಯಲು ಬೇರೆಯಾವ ವಸ್ತುವೂ ಇರುವದಿಲ್ಲ. ಜಾಗ್ರತ, ಸ್ವಪ್ನ, ಸುಷುಪ್ತಿಯನ್ನು ಮೊದಲು ಒಂದೊಂದಾಗಿ ಅರಿತು ಮುಂದಿನದರಲ್ಲಿ ಅದನ್ನು ಪ್ರವಿಲಯ (ಅಡಕ) ಮಾಡುವದರಿಂದ ತುರೀಯನಾದ ಪರಮಾರ್ಥನ ಅರಿವು ಆಗುವದು ಎನ್ನುವದನ್ನು ತಿಳಿಸುವದೇ ಅಯಮಾತ್ಮಾ ಬ್ರಹ್ಮದ ತಿರುಳು. ನಾವು ವಸ್ತುವನ್ನು ಅರಿಯುವದು “ಜ್ಞಾತ್ರ, ಜ್ಞಾನ ಮತ್ತು ಜ್ಞೇಯಗಳ (ಅರಿತುಕೊಳ್ಳುವವ, ಅರಿವು, ವಿಷಯ-ವಸ್ತು) ಮೂಲಕ”. ಎಚ್ಚರದಲ್ಲಿರುವಾಗ ಆತನಿಗೆ ವೈಶ್ವಾನರ ಎನ್ನುವ ಅವಸ್ಥೆಯಲ್ಲಿರುತ್ತಾನೆ. ವೈಶ್ವಾನರ ಎನ್ನುವದಕ್ಕೆ ಚಾಂದೋಗ್ಯ ಉಪನಿಷತ್ತಿನಲ್ಲಿ ವಿವರಣೆ ಚನ್ನಾಗಿ ಬರುತ್ತದೆ. ಬ್ರಹ್ಮವನ್ನು ವಿರಾಟಪುರುಷ ಎನ್ನುವಕಲ್ಪನೆಯನ್ನು ಮಾಡಿಕೊಂಡರೆ ಅವನಿಗೆ ದ್ಯುಲೋಕವೇ ತಲೆ, ಸೂರ್ಯನೇ ಕಣ್ಣು, ವಾಯುವೇ ಪ್ರಾಣ, ಆಕಾಶವೇ ಶರೀರ, ನೀರು ಮೂತ್ರಪಿಂಡ, ಪೃಥಿವಿ ಪಾದ ಅಹವನೀಯಾಗ್ನಿಯೇ ಮುಖ ಹೀಗೆ ಸಪ್ತಾಂಗಗಳನ್ನು ಕಲ್ಪಿಸಿ ಇವೆಲ್ಲ ವಿರಾಟ ಆತ್ಮನಗುಣಗಳೆಂದೂ, ಈ ಜೀವನೂ ಅವನಿಂದಲೇ ಬಂದಿರುವನೆಂದು ವಿವರಿಸಬಹುದಾಗಿದೆ. . ಅವನಿಗೆ ಹತ್ತೊಂಬತ್ತು ಮುಖಗಳಿವೆ. ಅವು ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು, ಪಂಚಪ್ರಾಣಗಳು ಮತ್ತು ಮನಸ್ಸು ಬುದ್ಧಿ ಅಹಂಕಾರ ಚಿತ್ತ; ಹೀಗೆ ಆತ ಹತ್ತೊಂಬತ್ತು ಮುಖಗಳಿಂದ ಜಾಗ್ರತಪ್ರಪಂಚದಲ್ಲಿ ಕಾರ್ಯನಿವಹಿಸುವವನು. ಸುಖ, ದುಃಖ, ಕಷ್ಟ, ನಷ್ಟಗಳನ್ನು ಅನುಭವಿಸುವ ಸ್ಥೂಲಭೋಗಿ ಆತ. ಇಲ್ಲಿ ಹೇಳಿರುವ ಸಪ್ತಾಂಗ ಹತ್ತೊಂಬತ್ತು ಮುಖಗಳೆಂದರೆ ನಿಜವಾಗಿಯೂ ಅಸ್ತಿತ್ವದಲ್ಲಿರುವದಲ್ಲ; ಅವೆಲ್ಲವೂ ವೈಶ್ವಾನರ ಎನ್ನುವಾತನ ವಿಶೇಷಣಗಳು, ಆತ್ಮನ ಉಪಾಧಿಗಳು. ಕೃಷ್ಣ ಕಪ್ಪು ಎನ್ನುವಾಗ ಕಪ್ಪು ಆತನಿಗೆ ವಿಶೇಷಣವು, ಮಣ್ಣಿನ ಗಡಿಗೆ ಎನ್ನುವಾಗ ಗಡಿಗೆ ಮಣ್ಣಿಗೆ ಉಪಾಧಿಯು. (ವಿಶೇಷಣವೆಂದರೆ ವಸ್ತುವಿನ ಸ್ವರೂಪ, ಉಪಾಧಿಯೆಂದರೆ ಅದನ್ನು ಪರಿಚಯಿಸಲಿರುವ ಸಾಧನ) ಹಾಗಾದರೆ ಈ ಎಚ್ಚರದಲ್ಲಿರುವ ಪ್ರಪಂಚವನ್ನು ನೋಡಲು ಈ ಅಂಗಗಳು ತಾವೇ ಸಾಧ್ಯವಾಗುವದಿಲ್ಲ. ಎಚ್ಚರದಲ್ಲಿದ್ದಾಗ ನೋಡುವ ವಸ್ತು ನಿದ್ರೆಯಲ್ಲಿ ಕಾಣಿಸದು. ಅಂದರೆ ಈ ಎಲ್ಲ ಅಂಗ ಮತ್ತು ಮುಖಗಳು ತಾವಾಗಿಯೇ ನೋಡುವದಿಲ್ಲವೆಂದಾಯಿತು. ನೋಡುವ ಅರಿಯುವ ಪ್ರಮಾತೃಪ್ರಮೇಯಪ್ರಮಾಣಗಳ ಹಿಂದೆ ಯಾವುದೋ ವಸ್ತು ಸಾಕ್ಷಿಯಾಗಿದೆ ಎಂದಾಯಿತು. ಅದನ್ನೇ ಆತ್ಮನೆನ್ನುತಾರೆ. ಜಾಗ್ರತ ಪ್ರಪಂಚ ಆ ಆತ್ಮನಿಗೆ ಉಪಾಧಿಯಾಗುವದು ಈ ಕಾರಣದಿಂದಾಗಿ. ಶಬ್ದ,ಸ್ಪರ್ಶ ರಸ ಗಂಧಗಳ ಮೂಲಕ ವೈಶ್ವಾನರನೆನ್ನುವ ಜಾಗ್ರತಾವಸ್ಥೆಯಲ್ಲಿ ಪ್ರಪಂಚದ ಅನುಭವವನ್ನು ಆಧ್ಯಾತ್ಮಿಕ, ಆಧಿಬೌತಿಕ ಮತ್ತು ಆಧಿದೈವಿಕಗಳ (ನಮ್ಮೊಳಗಿನ ಇಂದ್ರಿಯಾಂತಃಕರಣಗಳ, ಹೊರಗಿನ ದ್ರಶ್ಯಗಳ ಮತ್ತು ದೈವಿಕವಸ್ತುವಿನ ಕುರಿತಾದ) ಗೋಚರಸ್ವರೂಪದಲ್ಲಿ ಅನುಭವಿಸುತ್ತೇವೆ. ಇದು ಆತ್ಮನ ಒಂದನೆಯ ಪಾದ ಅಥವಾ ಭಾಗ. ಎರಡನೆಯದಾದ ಸ್ವಪ್ನಾವಸ್ಥೆಯಲ್ಲಿಯೂ ಹೀಗೇ ಕಾಣಿಸುವನನ್ನು ತೈಜಸನು ಎನ್ನುತ್ತಾರೆ. ತೈಜಸನೆಂದರೆ ತೇಜಸ್ಸಿನಿಂದ ಎಂದರ್ಥ. ಎಚ್ಚರದಲ್ಲಿರುವಾಗ ಭೌತಿಕ ಪ್ರಪಂಚವನ್ನು ವಿರಾಟ್ ( ಬಗೆಬಗೆಯಾಗಿ ಹೊಳೆಯುತ್ತಿರುವವನು) ಎನ್ನುವ ಆತ್ಮನಿಗೆ ಉಪಾಧಿಯಾಗಿ ತೆಗೆದುಕೊಂಡಿರುತ್ತಾರೆ.ಸ್ವಪ್ನದಲ್ಲಿ ಹೊರಗಿನ ಪ್ರಪಂಚದ ಅಸ್ತಿತ್ವದ ಅರಿವಿರುವದಿಲ್ಲ. ಬಾಹ್ಯಪ್ರಪಂಚದಲ್ಲಿ ನಮ್ಮಂತೆ ಇತರರಿಗೂ ಜಗತ್ತು ಒಂದೇ ಬಗೆಯಾಗಿ ಕಾಣುತ್ತದೆ. ಮೂಡುವ ಸೂರ್ಯ, ಅರಳುವ ಪುಷ್ಪಗಳು, ಹಕ್ಕಿಯ ಚಿಲಿಪಿಲಿ ಇವೆಲ್ಲವೂ ನನಗೆ ಕಂಡಿರುವದೇ ನಿಮಗೂ ಕಂಡುಬರುತ್ತದೆ. ಆದರೆ ಸ್ವಪ್ನದಲ್ಲಿ ನನಗೆ ಕಂಡ ಕನಸು ನಿಮ್ಮ ಅರಿವಿಗೆ ಬರುವದಿಲ್ಲ. ಆದರೆ ನೋಡುವವನ ಅಂತಃಪ್ರಜ್ಞೆಯಮೂಲಕ ಆತ ಎಲ್ಲವನ್ನೂ ಅನುಭವಿಸಿರುತ್ತಾನೆ. ಕನಸಿನಲ್ಲಿ ವ್ಯಕ್ತಿ ಕೋಪಗೊಳ್ಳುತ್ತಾನೆ. ನೋವಿನ ಅನುಭವವಾಗುತ್ತದೆ. ಎತ್ತರದ ಶಿಖರದಿಂದ ಬಿದ್ದು ಆಸ್ಪತ್ರೆಗೆ ಸೇರಿದ ಇಲ್ಲವೇ ಯಾರೋ ಸನ್ಮಾನಮಾಡಿದ ಸುಖದ ಅನುಭವವಾಗುತ್ತದೆ. ಜಾಗ್ರತಾವಸ್ಥೆಯಲ್ಲ್ಲಿರುವ ಸಪ್ತಾಂಗಗಳು, ಹತ್ತೊಂಭತ್ತು ಮುಖಗಳು ಇರುತ್ತವೆ. ಅನುಭವಕ್ಕೆ ಇವು ಅತ್ಯಂತ ಮುಖ್ಯ. ನಾನು ಕನಸು ಕಂಡೆ ಎಂದು ನಮ್ಮ ಅರಿವಿಗೆ ಬರುವದು ಎಚ್ಚರದಸ್ಥಿತಿಯಲ್ಲಿ. ಅಲ್ಲಿಯವರೆಗೆ ನಾವು ಕನಸನ್ನೇ ನಿಜವೆಂದು ನಂಬುತ್ತೇವೆ. ಕನಸಿನಲ್ಲಿ ಜಾಗ್ರತ ಪ್ರಪಂಚದ ಅನುಭವ ಮರೆಯಾಗಿರುತ್ತದೆ. ಕನಸಿನಲ್ಲಿಯೂ ನಾವು ವಿಷಯಗಳನ್ನು ಅನುಭೋಗಿಸಿರುತ್ತೇವೆ. ಇವು ಹುಸಿತೋರಿಕೆಗಳೆಂದು ನಾವು ಕನಸಿನಲ್ಲಿ ಅರ್ಥಮಾಡಿಕೊಳ್ಳುವದಿಲ್ಲ. . ಸ್ವಪ್ನವು ಜಾಗ್ರತಾವಸ್ತೆಯ ಪ್ರತಿಕೃತಿಯಾಗಿರುತ್ತದೆ. ಇಲ್ಲಿಯೂ ಆಧ್ಯಾತ್ಮಿಕ, ಆಧಿಬೌತಿಕ ಆಧಿದೈವಿಕಗಳ ಮೂಲಕವೇ ಎಲ್ಲವನ್ನೂ ಅನುಭವಿಸುವದರಿಂದ ಇದಕ್ಕೂ ಸಾಕ್ಷಿರೂಪನಾದ ಆತ್ಮನಿದ್ದಾನೆ ಆತನ ತೇಜಸ್ಸಿನ ಮೂಲಕ ಅನುಭವಿಸುವ ಪ್ರಪಂಚವನ್ನು ಸೂಕ್ಷ್ಮಭೋಗಿ ಎಂದು ಕರೆಯುತ್ತೇವೆ. ಇದು ಆತ್ಮನ ಎರಡನೆಯ ಪಾದ. ಮೂರನೆಯ ಪಾದವಾದ ಸುಷುಪ್ತಿಯಲ್ಲಿ ಈ ಯಾವ ಭಾವವೂ ಇರುವದಿಲ್ಲ. ಆತ್ಮಸ್ವರೂಪಕ್ಕೆ ಉಪಾಧಿಯ ಹಂಗಿರುವದಿಲ್ಲ. ಆದರೆ ಎಚ್ಚರದಾಗ ನಾನು ಸುಖನಿದ್ರೆ ಮಾಡಿದೆ ಎನ್ನುವ ಅನುಭವ ಬರುತ್ತದೆ. ತನಿನಿದ್ರೆಯಲ್ಲಿ ಮೊದಲ ಎರಡು ಪಾದಗಳಿಲ್ಲಿರುವಂತೆ ಸಪ್ತಾಂಗಗಳಾಗಲೀ, ಅವಯವಗಳಾಗಲೀ ಇರುವದಿಲ್ಲ. ಆದರೂ ಅಲ್ಲಿ ಸುಖದ ಅನುಭವವಾಗಿದೆ ಎಂದರೆ ಇದು ಆತ್ಮನಿಗೆ ತೋರುವ ದೃಶ್ಯಗಳೇ ಆಗಿದೆ. ಆತ್ಮನು ಎಚ್ಚರದಲ್ಲಿ ನಿಃಶ್ವಾಸಾರೂಪದಿಂದ ಹೊರಬಿಟ್ಟ ಪ್ರಪಂಚವನ್ನು ಒಳಗೆಳೆದುಕೊಂಡು ಕನಸಿನಲ್ಲಿ ಪ್ರಪಂಚಾಭಾಸಸ್ವರೂಪದಿಂದ ಅದನ್ನು ಮತ್ತೆ ಹೊರಬಿಡುತ್ತಾನೆ. ಆದರೆ ಸುಷುಪ್ತಿಯಲ್ಲಿ ಅದೇ ಆತ್ಮವನ್ನು ಉಚ್ಛ್ವಾಸ ಸ್ವರೂಪದಿಂದ ಏಕೀಭೂತನಾಗಿರುತ್ತಾನೆ. ಜಾಗ್ರತ ಮತ್ತು ಸ್ವಪ್ನದ ಸುಖ ದುಃಖ ವಾಸನಾಪ್ರಪಂಚವೆಲ್ಲ ಇಲ್ಲಿ ಪ್ರವೇಶಿಸಲಾರವು. ಆತನ ಪ್ರಜ್ಞೆಯೆನ್ನುವದು ನೀರ್ಗಲ್ಲಿನಂತೆ. ನೀರಿನ ಗುಣವನ್ನು ಮೀರಿದ ನೀರ್ಗಲ್ಲು ಘನವಾಗಿ ಎಂತಹ ಹಡಗಿಗಾದರೂ ಅಪಾಯವನ್ನುಂಟುಮಾಡಬಹುದೋ ಅದೇ ರೀತಿ ಘನವಾಗಿ ಇರುತ್ತದೆ. ಇಲ್ಲಿ ಆತನಿಗೆ ಆನಂದಸ್ವರೂಪದ “ಆನಂದಭುಕ್” ಆಗಿರುತ್ತಾನೆ. ಬಾಹ್ಯಪ್ರಪಂಚದಲ್ಲಿ ವಿಷಯಗಳ ಕಾರಣ ಆನಂದ ದುಃಖಗಳನ್ನು ಅನುಭವಿಸಿದರೆ ಸುಷುಪ್ತಿಯಲ್ಲಿ ಅನುಭವಿಸುವ ಆನಂದಕ್ಕೆ ಯಾವ ಕಾರಣವೂ ಇರುವದಿಲ್ಲ. ಹಾಗಾಗಿ ಇಲ್ಲಿ ಆತ್ಮ ಪರಮಾತ್ಮನಲ್ಲಿ ಏಕೀಭೂತನಾಗಿರುತ್ತಾನೆ ಎನ್ನುತಾರೆ. ಈ ಸ್ವರೂಪವನ್ನು ಶ್ರುತಿಯಲ್ಲಿ “ಪ್ರಾಜ್ಞ” ಎನ್ನುವ ಪಾದದ ಹೆಸರಿನಿಂದ ಕರೆಯುತ್ತಾರೆ. ಯಾರು ವಿಷಯಗಳನ್ನು ಅರಿಯುತ್ತಾರೆಯೋ ಅವರು ಪ್ರಾಜ್ಞರು. ಅರಿವಿನ ಸ್ವರೂಪನೇ ಆಗಿರುವವನೂ ಸಹ ಪ್ರಾಜ್ಞನು. ಆತ್ಮನ ಈ ಅವಸ್ಥೆಯನ್ನೇ ಮೂರನೇಯ ಭಾಗವಾದ “ಪ್ರಾಜ್ಞ್” ನೆಂದು ಕರೆಯುತ್ತಾರೆ. ಇನ್ನು ನಾಲ್ಕನೆಯದಾದ ಪಾದವನ್ನು “ತುರೀಯಾವಸ್ಥೆ”ಯೆನ್ನುತ್ತಾರೆ. ತುರೀಯ ಅವಸ್ಥೆ ನಾಲ್ಕನೆಯ ಪಾದವೆಂದು ಹೇಳಿದರೂ ಇದು ನಾಲ್ಕನೆಯ ಅವಸ್ಥೆಯಲ್ಲ. ಮೊದಲ ಮೂರೂ ಅವಸ್ಥೆಗಳಿಗೂ ಓರ್ವ ಸಾಕ್ಷಿಯಾಗಿ ಇರುತ್ತಾನೆ ಆತನೇ ಎಲ್ಲವವನ್ನು ನೋಡುತ್ತಿರುತ್ತಾನೆ ಆತನಿಂದಲೇ ನಮ್ಮ ಅವಯವಗಳಿಗೆ ಅರ್ಥಬರುವದು ಎನ್ನುವದನ್ನು ನೋಡಿದಾಗ ಆ ಸಾಕ್ಷಿಯೇ ತುರೀಯುವೆನ್ನಬಹುದು. ಸಮುದ್ರ ಹೇಗೆ ಎಲ್ಲ ಅಲೆಗಳಿಗೆ ಸಾಕ್ಷಿಯೋ ಹಾಗೇ ಇದನ್ನು ಹೋಲಿಸಬಹುದು. ಇದು ಕನಸಿನಲ್ಲಿ ಕಂಡ ಅಂತಃಪ್ರಜ್ಞೆಯಾಗಲೀ, ಜಾಗ್ರತದಲ್ಲಿ ಕಂಡ ಬಹಿಃಪ್ರಜ್ಞೆಯಾಗಲೀ, ಸುಷುಪ್ತಿಯಲ್ಲಿನ ಉಭಯಪ್ರಜ್ಞೆಯಾಗಲೀ ಅಥವಾ ಸುಷುಪ್ತಿಯಲ್ಲಿನ ಪ್ರಜ್ಞಾನಘನವಾಗಲೀ ಅಲ್ಲ. ಏಕೆಂದರೆ ತುರೀಯದ ಅವಸ್ಥೆಗೆ ಸಿಲುಕಿದವ ಸ್ಪರ್ಶಮಣಿಯ ಸ್ಪರ್ಶಕ್ಕೆ ಸಿಕ್ಕ ಕಬ್ಬಿಣ ಬಂಗಾರವಾಗುವಂತೆ ಮತ್ತೆ ಹಿಂದಿನ ಮೂರು ಅವಸ್ಥೆಗಳಿಗೆ ಹಿಂತಿರುಗಲಾರ. ಅವನಲ್ಲಿ ವಿಷಯಗಳ ಕುರಿತಾದ ಜ್ಞಾತ್ರಾಜ್ಞಾನಾಜ್ಞೇಯಗಳ ಭಾವವಿರುವದಿಲ್ಲ. ಹಾಗೆಂತ ಅಜ್ಞಾನಿಯೂ ಅಲ್ಲ, ಆತ ಅದೃಶ್ಯನು. ದೃಶ್ಯಪ್ರಪಂಚವನ್ನು ನೋಡಬೇಕಾದರೆ ಅದು ನೋಡುವವನ ಹೊರಗಿರಬೇಕು. ತುರೀಯದಲ್ಲಿ ಹಾಗಿಲ್ಲ. ಇಲ್ಲಿ ದೃಶ್ಯವೂ ಇಲ್ಲ, ವ್ಯವಹಾರಕ್ಕೆ ಬೇಕಾದ ಉದಾಹರಣೆಗಳಮೂಲಕ ವಿವರಿಸಲಾಗದು. ವಿವರಿಸಲು ಲಕ್ಷಣಗಳಿಲ್ಲ. ಹಾಗಾಗಿ ಅಳತೆಗೆ ಸಿಗಲಾರದು. ಯಾವ ಇಂದ್ರಿಯಗಳಿಗೂ ಗೋಚರವಾಗದ ಈತ ಮನಸ್ಸಿಗೂ ಸಿಗದವನು. ಆತ ಜಿಜ್ಞಾಸುಗಳು ಆತನನ್ನು ಆತನನ್ನು “ಏಕಾತ್ಮಯಪ್ರತ್ಯಯಸಾರ” ಎನ್ನುವ ವಿಶೇಷಣಗಳಿಂದ ಕಂಡುಕೊಳ್ಳಬೇಕು. ಚೈತನ್ಯಸ್ವರೂಪನಾಗಿದ್ದಾನೆ ಹಾಗಾಗಿ ಆತ ಮರೆಯೂ ಇಲ್ಲದವ ಮತ್ತು ನಮಗೆ ಮರೆವೆಯೂ ಆಗದಂತಿರುವವ, ಯಾವ ಬೇಧವೂ ತನ್ನನ್ನು ಸೋಕದಂತಿರುವವನು ಆದರೆ ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳಿಗೆಲ್ಲ ಕಾರಣೀಕರ್ತನು. ರಾಗದ್ವೇಷಗಳಿಲ್ಲದ ಶಾಂತಸ್ವರೂಪನು. ರಾಗದ್ವೇಷಾದಿಗಳಿಲ್ಲದ ಶಿವ ಅಂದರೆ ಮಂಗಳಸ್ವರೂಪನು. ಆತನಿಗೆ ಎರಡಿಲ್ಲ, ಅವನೇ ತಾನೊಬ್ಬನೇ ಎಲ್ಲೆಲ್ಲಿಯೂ ಇರುವ ಅದ್ವೈತಸ್ವರೂಪನು. ಈ ಆತ್ಮವೇ ಬ್ರಹ್ಮ ಎನ್ನುವದು ಇಲ್ಲಿ ಕೊನೆಯದಾಗಿ ಶಿಷ್ಯನಿಗೆ ಅರ್ಥವಾಗುತ್ತಿದೆ. ಆತನನ್ನು “ಪ್ರಪಂಚೋಪಶಮನ”ನೆನ್ನುತ್ತಾರೆ. ಪ್ರಲಯದಲ್ಲಿ ನಿಷ್ಪ್ರಪಂಚನಾಗಿದ್ದುಕೊಂಡು ನಂತರ ತನ್ನಲೀಲಾಮಾತ್ರದಿಂದ ಈ ಪ್ರಪಂಚವನ್ನು ಸೃಷ್ಟಿಸುವನೆಂದು ಶ್ರುತಿಯಲ್ಲಿ ವಿವರಿಸಿರುವದು ಇವನನ್ನೇ. ಈ ಆತ್ಮನೇ ಬ್ರಹ್ಮ; ಈ ಆತ್ಮನನ್ನೇ ಅರಿತುಕೊಳ್ಳಬೇಕು. ಗಂಭೀರವಾದ ಕಂಠದಿಂದ ಗುರು ಶಿಷ್ಯನಲ್ಲಿ ಅನುಭವವಾಕ್ಯವನ್ನು ಉಸುರುವ ಕಾಲ ಈಗ. ಈ ಆತ್ಮನೇ ಅಧ್ಯಕ್ಷರವಾಗಿ ಎಂದರೆ ವಾಚಕವಾಗಿ ಓಂಕಾರವೆನಿಸುತ್ತನೆ. ಹೇಗೆ ಹಣತೆ, ಮಡಿಕೆ, ಕುಡಿಕೆಗಳೆಂದು ವಸ್ತುಬೇಧವನ್ನು ಕಲ್ಪಿಸಿನೋಡುತ್ತೇವೆಯೋ ಅದೇ ರೀತಿ ಪ್ರಪಂಚದಲ್ಲಿ ನಾಮರೂಪಾನುಬೇಧವಿರುವದು. ಅವಲ್ಲವೂ ಮಣ್ಣಿನ ವಿವಿಧರೂಪಗಳೆಂದು ಅರಿವಾದಾಗ ಇವೆಲ್ಲವೂ ವ್ಯಾವಹಾರಿಕ ಸತ್ಯವಾಗಿ ಮಾತ್ರ ಗೋಚರಿಸುವದು. ಈ ದೃಷ್ಟಿಯಿಂದ ಆತ್ಮನನ್ನೇ ವೈಶ್ವಾನರ, ತೈಜಸ, ಪ್ರಾಜ್ಞ ಎನ್ನುವ ಮೂರು ಹೆಸರಿನಿಂದ ಕರೆಯಬಹುದಾದ ವಸ್ತುವಾಗಿ ವಿಂಗಡಿಸಿದಂತೆ ಪ್ರಪಂಚವನ್ನೆಲ್ಲಾ ಅಕಾರ ಉಕಾರ, ಮಕಾರ ಎನ್ನುವ ಮೂರು ಅಭಿದಾನಮಾತ್ರೆಗಳನ್ನಾಗಿ (ಹೆಸರಿನಿಂದ) ವಿಂಗಡಿಸುವದಾಗಿದೆ. ಎಲ್ಲದರ ಅರ್ಥವೂ ಒಂದೇ. ಗೋಡೆಯ ಮೇಲೆ ನಿಂತವನೊಬ್ಬ “ಈ ಗೋಡೆ ಹತ್ತುಮಾರು ಆಳವಿದೆ ಎಂದರೆ ಕೆಳಗಡೆ ನಿಂತವ ಅದನ್ನೇ ಹತ್ತುಮಾರು ಎತ್ತರವಿದೆ” ಎನ್ನುತ್ತಾನೆ. ಇಲ್ಲಿ ಆಳ ಮತ್ತು ಎತ್ತರಕ್ಕೆ ನಿಜವಾಗಿಯೂ ಯಾವ ಅರ್ಥವಿರುವದಿಲ್ಲ. ಬಯಲಿನ ಸುತ್ತ ಇರುವ ಮನೆಗಳಲ್ಲಿ ವಾಸವಾಗಿರುವರಿಗೆ ಅದೇ ಬಯಲು ಪೂರ್ವ ಪಶ್ಚಿಮ ಉತ್ತರ ದಕ್ಷಿಣವಾಗಿ ಕಂಡರೆ ನಿರಪೇಕ್ಷದೃಷ್ಟಿಯಿಂದ ಈ ದಿಕ್ಕಿನ ಬೇಧಗಳಿಗೆ ಯಾವ ಅರ್ಥವೂ ಇರುವದಿಲ್ಲ. ಒಂದೇ ಪ್ರಪಂಚ ಅಭಿಧೇಯವಾಗಿ ಬ್ರಹ್ಮವಾದರೆ ಅಭಿದಾನವಾಗಿ ಓಂಕಾರವಾಗಿರುತ್ತದೆ. ಹೇಗೆ ಓಂಕಾರವೆನ್ನುವ ಅಕ್ಷರದಲ್ಲಿ ಅಕಾರ ಉಕಾರಗಳು ಮಕಾರದಲ್ಲಿ ಲಯವಾಗುವದೋ ಅದೇ ರೀತಿ ಪರಮಾತ್ಮನೇ ಧಾನ್ಯವನ್ನು ಕೊಳಗದಲ್ಲಿ ಅಳೆಯುವಂತೆ ತನ್ನ ಪ್ರಾಜ್ಞರೂಪದಲ್ಲಿ ವಿಸ್ವತೈಜಸರನ್ನೆಲ್ಲ ಅಳೆದುಸುರಿಯುತ್ತಿರುತ್ತಾನೆ. ಇದನ್ನು ಅರಿತುಕೊಂಡವನು ಜಗತ್ತೆಲ್ಲದರ ಸ್ವರೂಪವನ್ನು ಅರಿವುಮಾಡಿಕೊಳ್ಳುತ್ತಾನೆ. ಮತ್ತು ಈ ಜಗತ್ತೆಲ್ಲ ಅವನಲ್ಲಿಯೇ ಲಯವಾಗುತ್ತದೆ ಎಂದರೆ ಆತನೇ ಜಗತ್ಕಾರಣನಾದ ಪರಮಾತ್ಮನಾಗುತ್ತಾನೆ. ಹಾಗಾಗಿ ಪರಮಾತ್ಮಸ್ವರೂಪನನ್ನು ಯಾವ ಉಪಾಧಿಯ ಹಂಗೂ ಇಲ್ಲದ ಚತುರ್ಥ ಅಥವಾ ತುರೀಯ ಎಂದು ಕರೆಯುತ್ತಾರೆ. ರಜ್ಜುಸರ್ಪವನ್ನೇ ನಿಜವಾದ ಹಾವೆಂದು ಬಗೆದವನಿಗೆ ಅದು ಹಗ್ಗವೆಂದು ಅರಿವಿಗೆ ಬಂದೊಡನೆಯೇ ಮತ್ತೆ ಯಾವತ್ತೂ ಹಾವೆಂಬ ಬ್ರಾಂತಿಗೆ ಒಳಗಾಗುವದಿಲ್ಲವೂ, ಈ ಅದ್ವೈತ ತತ್ವವನ್ನು ಅರಿತ ಶಿಷ್ಯ ಮತ್ತೆ ಪ್ರಪಂಚದ ವಿಷಸುಖಕ್ಕೆ ಮರಳಾಗುವದಿಲ್ಲ. ಆತ “ಸಂವಿಶತ್ಯಾತ್ಮ ನಾSSತ್ಮಾನಮ್” ಆತ್ಮಸ್ವರೂಪದಿಂದ ಪರಮಾತ್ಮನನ್ನು ಆತ್ಯಂತಿಕವಾಗಿ ಒಂದಾಗುತ್ತಾನೆ. ಇದು ಅರಿವಾಗಲು ಶಿಷ್ಯನಲ್ಲಿ ವೈರಾಗ್ಯವೂ ಅಂತರ್ಮುಖತೆಯೂ ಅಗತ್ಯ ಎನ್ನುವದನ್ನು ಈ ಮಹಾವಾಕ್ಯ ವಿವರಿಸುತ್ತದೆ. ನಾರಾಯಣ ಯಾಜಿ

“ನೆಲ-ಮುಗಿಲು”
bottom of page