top of page

ಹೆಬ್ಬೆರಳು-ದ್ರೋಣ ನೆಲೆ

ನಿರಾಕರಿಸಿದರೂ ಕೂಡ ಅಂತರಂಗದಲ್ಲಿ ಶ್ರೀ ಗುರುವನ್ನು ನೆಲೆಗೊಳಿಸಿ ಒಳಗಿನ ಭಾವಕ್ಕೆ ಮಣ್ಣಿನ ಆಕಾರ ಕೊಟ್ಟು ಅದರೊಳಗೆ ಗುರುವಿನ ಪ್ರಾಣ ಪ್ರತಿಷ್ಠಾಪನೆ ಮಾಡಿ ಶ್ರೇಷ್ಠ ಬಿಲ್ವಿದ್ಯಾ ಪರಿಣಿತನಾದ ಅಮೂಲ್ಯ ರತ್ನ ಏಕಲವ್ಯ. ಇಚ್ಛಾಶಕ್ತಿಯಿಂದ ಸಾಟಿ ಇಲ್ಲದ ಬಿಲ್ವಿದ್ಯಾ ಕೌಶಲವನ್ನು ಹೊಂದುತ್ತಾನೆ. ಇದನ್ನು ಕಂಡು ಸಂತೋಷದಿಂದ ಆಶೀರ್ವದಿಸಿ ತಮ್ಮ ಗುರುತನದ ಹಿರಿಮೆಯನ್ನು, ಗರಿಮೆಯನ್ನು, ಘನತೆಯನ್ನು ಮೆರೆಯಬೇಕಾದ ಆಚಾರ್ಯರು ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಸ್ವೀಕರಿಸುವ ಮೂಲಕ ಕ್ರೂರಿ, ಕರುಣೆ ಇಲ್ಲದ ಸ್ವಾರ್ಥಿಯಾಗಿ ಕಾಣುತ್ತಾರೆ. ಏಕಲವ್ಯನ ಅಂತರಂಗದ ನೋವು ಅರ್ಥವಾಗದೆ ಹೋಯಿತು. ಶಾಪಾದಪಿ-ಶರಾದಪಿ ಆಗಿ ಗುರುತಿಸಿಕೊಂಡಿರುವ ದ್ರೋಣಾಚಾರ್ಯರು ಹೀಗೇಕೆ ಮಾಡಿದರು? ಕ್ಷತ್ರಿಯರಿಗೆ ಮಾತ್ರ ಗುರು ಎಂಬ ಬದ್ದತೆಯೇ? ಮಂತ್ರಾಸ್ತ್ರಕ್ಕೆ ಅನರ್ಹ ಎಂಬ ಕಾರಣವೇ? ಕೇವಲ ಅರ್ಜುನನಿಗಾಗಿಯೇ? ಇನ್ನೇನಾದರೂ ಕಾರಣ? ಮನದಲ್ಲಿ ಮೂಡಿದ ಚಿಂತನೆಗೆ ಏಕಲವ್ಯನಂತೆ, ಆಚಾರ್ಯ ದ್ರೋಣರ ನೆಲೆಯಿಂದಲೂ ಯೋಚಿಸುವುದು ಸೂಕ್ತ ಎನಿಸುತ್ತದೆ. ಭಾರದ್ವಾಜ ಮುನಿಗಳ ಮಗನಾದ ದ್ರೋಣ ಶಾಸ್ತ್ರಾಭ್ಯಾಸದ ಜೊತೆ ಶಸ್ತ್ರಾಭ್ಯಾಸವನ್ನು ಆರಂಭದಲ್ಲಿ ತನ್ನ ಚಿಕ್ಕಪ್ಪ ಅಗ್ನಿವೇಶ್ಯರಲ್ಲಿ ಪೂರೈಸಿ, ನಂತರ ಪರಶುರಾಮರಿಂದ ಧನುರ್ವೇದದ ಎಲ್ಲ ಮಜಲುಗಳನ್ನು ಅರಗಿಸಿಕೊಂಡರು. ಧನುರ್ವೇದವೆಂದರೆ ಯಜುರ್ವೇದದ ಉಪ ವೇದವೆಂದು ಕರೆಯುತ್ತಾರೆ. ಯಜ್ಞ ಸಂರಕ್ಷಣೆಯೇ ಇದರ ಮೂಲ ಆಶಯ. ಅದನ್ನು ಕಲಿಯುವುದು ಧರ್ಮರಕ್ಷಣೆಗಾಗಿ, ಸತ್ಪಾತ್ರರಿಗೆ ಕಲಿಸುವುದಕ್ಕಾಗಿ. ಅಪಾತ್ರರಿಗೆ ಕಲಿಸುವುದಿಲ್ಲವೆಂದು ಗುರು ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೊರಟು ನಿಂತ ದ್ರೋಣರನ್ನು ಪರಶುರಾಮರು ಆಶೀರ್ವಾದ ಮಾಡಿ ಕಳುಹಿಸಿದ್ದರು. ಕಾಲಾನಂತರದಲ್ಲಿ ಉದ್ಯೋಗ ಹುಡುಕುತ್ತಾ ಹೆಂಡತಿ ಕೃಪಿ, ಮಗ ಅಶ್ವತ್ಥಾಮರೊಡನೆ ಬಂದು ಸೇರಿದ್ದು ಹಸ್ತಿನಾವತಿಗೆ. ಪಾಂಡವ- ಕೌರವರಿಗೆ ಧನುರ್ವಿದ್ಯಾ ಗುರುವಾಗಿ ಕ್ಷತ್ರಿಯರ್ ಅಲ್ಲದವರಿಗೆ ಉನ್ನತ ಶಿಕ್ಷಣ ಮತ್ತು ಮಂತ್ರಾಸ್ತ್ರಗಳನ್ನು ಹೇಳಿಕೊಡುವುದಿಲ್ಲ ಎಂಬ ನೇಮಕ್ಕೆ ಬದ್ಧರಾದರು.ಕಾಲಧರ್ಮ ಕ್ಷತ್ತಿಯರಿಗೆ ಮಾತ್ರ ಸಂರಕ್ಷಣೆಯ ಅಧಿಕಾರ ಇತ್ತದ್ದೂ ಇರಬಹುದು. ಪ್ರಭುತ್ವದ ಕಟ್ಟಳೆ ಅಥವಾ ಆಶ್ರಯದಾತರಿಗೆ ತೋರಿಸಿದ ಗೌರವವೂ ಇರಬಹುದು. ಹಾಗಾಗಿಯೇ ಕಾಡಬೇಡನ ಮಗನಾದ ಏಕಲವ್ಯ-ದ್ರೋಣರನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೋರಿದರೂ ನಿರಾಕರಿಸಿದರು. ಗುರುವಿನಿಂದ ತಿರಸ್ಕರಿಸಲ್ಪಟ್ಟರೂ ಅವರನ್ನೇ ಸ್ವೀಕರಿಸಿ ಮಣ್ಣ ಮೂರ್ತಿಯನ್ನು ಮಾಡಿ ಶಬ್ದವೇದಿ ಅಂತಹ ಬಿಲ್ವಿದ್ಯೆಯನ್ನು ಕೂಡ ತನ್ನದಾಗಿಸಿಕೊಂಡ. ಶಿಷ್ಯರನ್ನು ಒಡಗೂಡಿ ಕಾಡಿಗೆ ಬಂದ ದ್ರೋಣಾಚಾರ್ಯರನ್ನು ಕಂಡು ನಮಸ್ಕರಿಸಿದಾಗ, ದ್ರೋಣರು ಆಶ್ಚರ್ಯ ಚಕಿತರಾಗಿ ಹೇಗೆ ಸಾಧ್ಯವಾಯಿತು? ಯಾರಿಂದ ಕಲಿತೆ? ಎಂದು ಕೇಳಿದಾಗ, ಮರದ ಕೆಳಗೆ ಪ್ರತಿಷ್ಠಾಪಿಸಿದ ಪುತ್ಥಳಿಯನ್ನು ತೋರಿಸುತ್ತ ಎಲ್ಲವೂ ತಮ್ಮ ಆಶೀರ್ವಾದ ನೀವೇ ನನ್ನ ಗುರು ಎನ್ನುತ್ತ ಕಾಲಿಗೆರಗಿದ. ದ್ರೋಣರಿಗೆ ಅಭಿಮಾನದಿಂದ ಹೃದಯತುಂಬಿ ಬಂದರೂ ಮನದಲ್ಲಿ ಸರಿ-ತಪ್ಪುಗಳ ತಾಕಲಾಟ ಶುರುವಾಯಿತು.ಆಚಾರ್ಯರ ದೃಷ್ಟಿಯಲ್ಲಿ ಆ ಕಾಲಕ್ಕೆ ಏಕಲವ್ಯ ಅಪಾತ್ರನಾಗಿದ್ದ.ಗುರುಗಳಿಗೆ ನೀಡಿದ ವಚನವನ್ನು ಉಳಿಸಿಕೊಳ್ಳಬೇಕಾಗಿತ್ತು. ಭಕ್ತಿ, ಶ್ರದ್ಧೆ, ಅರ್ಪಣಾ ಮನೋಭಾವದ ಏಕಲವ್ಯನ ಶಸ್ತ್ರಾಭ್ಯಾಸವನ್ನು ಮಾನವೀಯ ತುಡಿತದಿಂದ ನೋಡುವುದಕಿಂತ, ಗುರುವನ್ನು ವಂಚಿಸಿ ಪಡೆದ ವಿದ್ಯೆಯೆಂದು ದ್ರೋಣರು ಭಾವಿಸಿದ್ದರು.ಕಾಡಿನ ಬೇಟೆ ಅಥವಾ ಪ್ರಾಣಿಗಳ ಸಂರಕ್ಷಣೆಗೆ ಕೌಶಲ್ಯ ಪೂರ್ಣ ಶಸ್ತ್ರವಿದ್ಯೆಯ ಅಗತ್ಯತೆ ಇರಲಾರದೆಂದು ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು.ಕೇವಲ ಅರ್ಜುನನ ಉತ್ಕರ್ಷ ಕ್ಕೆ ಎನ್ನುವುದು ಸಮಂಜಸವಾಗಲಾರದು. ಮನಸ್ಸಿಗೆ ಹಿಡಿಸದ್ದಿದ್ದರೂ ಸಾವಧಾನವಾಗಿ ಆಲಿಸಿದ ನನ್ನ ಮಗ ಸುಜನ್ - ಚಿಕ್ಕಪ್ಪ, ಮತ್ತೊಂದು ಮುಖ ಸಮಾಜ. ಅದನ್ನು ನೋಡಬೇಕಲ್ಲವೇ?!. ಎಂದ. ✍️ ರಾಜೇಶ್ ನಾಯಕ, ಸೂರ್ವೆ. ನನ್ನ ಪ್ರೀತಿಯ ಶಿಷ್ಯ,ಶಿಕ್ಷಕ,ವಾಗ್ಮಿ,ಯಕ್ಷಗಾನ ಕಲಾವಿದ- ಮಾತುಗಾರ,ಬರಹಗಾರ,ನಿರೂಪಕ,ಅಂಕಣಕಾರ ರಾಜೇಶ ನಾಯಕ ಸೂರ್ವೆ ಅವರು ಬರೆದಿರುವ " ಹೆಬ್ಬೆರಳು- ದ್ರೋಣ ನೆಲೆ" ನಿಮ್ಮ ಓದು ಮತ್ತು ಸಹೃದಯ ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

ಹೆಬ್ಬೆರಳು-ದ್ರೋಣ ನೆಲೆ
bottom of page