top of page

ಹಾಸ್ಯಪ್ರಬಂಧ

ದಂತಾಸುರ ವಧೆ ಅರ್ಥಾತ್ ದಂತೋಪಾಖ್ಯಾನ ತಾರಕಾಸುರ , ನರಕಾಸುರ, ಮುರಕಾಸುರಾದಿಗಳ ಕಾಲ ಮುಗಿದುಹೋಗಿ ದೇವತೆಗಳೂ ಕೆಲಸವಿಲ್ಲದೆ ಕುಳಿತಿರುವಂತಹ ಕಲಿಕಾಲದಲ್ಲಿ ನಮಗೆ ದಂತಾಸುರ, ಕರ್ಣಾಸುರ, ನೇತ್ರಾಸುರ, ನಾಸಿಕಾಸುರ, ಶುಗರಾಸುರ, ರಕ್ತಾಸುರ ಕೊರೊನಾಸುರ ಮೊದಲಾದವರ ಕಾಟ ಜಾಸ್ತಿಯಾಗಿ " ಸಂಭವಾಮಿ ಯುಗೇಯುಗೇ" ಎಂದು ಮಾತು ಕೊಟ್ಟ ಶ್ರೀ ಕೃಷ್ಣ ಯಾವಾಗ ಬರುತ್ತಾನೋ ಎಂಬ ಚಿಂತೆಯಲ್ಲಿರುವದಂತೂ ನಿಜ. ಅವನು ಬರಬೇಕಾದರೆ ಧರ್ಮ ಹಾಳಾಗಬೇಕೆಂಬ ಕರಾರು ಇರುವದರಿಂದ ಮೊದಲು ಅಧರ್ಮ ಹೆಚ್ಚು ಮಾಡಬೇಕೆಂಬುದು ಕೆಲವರ ವಾದವಾಗಿದ್ದು ಆ ಕೆಲಸವನ್ನು ಮಾಡುವ ಸಾಕಷ್ಟು ಜನರು ತಯಾರಾಗಿದ್ದಾರೆನ್ನುವದೂ ಸುಳ್ಳಲ್ಲ. ನನ್ನ ಮಟ್ಟಿಗೆ ವೈಯಕ್ತಿಕವಾಗಿ ಸದ್ಯ ದಂತಾಸುರನ ಕಾಟ ಬಹಳವಾಗಿರುವದರಿಂದ ದಂತ- ವೇದನೆ ತೊಲಗಿಸಲು ಬಾಬಾ ರಾಮದೇವರ "ಪತಂಜಲಿ ದಂತಕಾಂತಿ"ಯನ್ನು ಬಳಸಿ ನೋಡಿದೆನಾದರೂ ದಂತಾಸುರ ದಂತಕಾಂತಿಗಿಂತ ಪ್ರಬಲನಾಗಿರುವದರಿಂದ ನಾನು ಬೇರೇನಾದರೂ ಅಸ್ತ್ರ ಕಂಡುಕೊಳ್ಳುವದು ಅನಿವಾರ್ಯವಾಯಿತು. ಹಲ್ಲು ಎಂದು ಹೇಳುವದಕ್ಕೂ ದಂತ ಎಂದು ಹೇಳುವದಕ್ಕೂ ವ್ಯತ್ಯಾಸ ಇದ್ದೇಇದೆ. ಕೆಲವೊಂದು ಶಬ್ದಗಳನ್ನು ಸಂಸ್ಕೃತ ಮೂಲದಲ್ಲಿ ಉಚ್ಚರಿಸಿದರೇ ಅದರ ವಜನ್ ಬೇರೆ. ಕನ್ನಡದಲ್ಲಿ ಹೇಳಲು ನಾಚುವ ಕೆಲವು ಶಬ್ದಗಳನ್ನೇ ನಾವು ಸಂಸ್ಕೃತ ದಲ್ಲಿ ಹೇಳಲು ಹಿಂಜರಿಯುವದಿಲ್ಲ. ( ಅವು ಲೈಂಗಿಕ ಶಾಸ್ತ್ರಕ್ಕೆ ಸಂಬಂಧಿಸಿದ್ದರಿಂದ ನಾನು ಇಲ್ಲಿ ಬಹಿರಂಗವಾಗಿ ಹೇಳಲು ಧೈರ್ಯ ಮಾಡುತ್ತಿಲ್ಲ. ಖಾಸಗಿಯಾಗಿ ನೀವು ಭೆಟ್ಟಿಯಾದರೆ ನೋಡೋಣ.) ಹಲ್ಲುಗಳು ನಾವು ಹುಟ್ಟಿದ ನಂತರ ಬಂದರೂ ಸಾಯುವತನಕ ಅವು ಎಲ್ಲವೂ ನಮ್ಮೊಂದಿಗಿರುತ್ತವೆಂದು ಹೇಳಲು ಬರುವದಿಲ್ಲ. ನನಗೆ ಆರಂಭದಲ್ಲಿ ಎಷ್ಟು ಹಲ್ಲು ಇತ್ತು ಎಂದು ನಾನು ಎಣಿಸಲು ಹೋಗಿಲ್ಲವಾದ್ದರಿಂದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರು ಹೇಳಿದಷ್ಟೇ ಇರಬೇಕು ಎಂಬ ಧೈರ್ಯದಿಂದ ಇಲ್ಲಿಯವರೆಗೆ ಜೀವನ ನಡೆಸಿಕೊಂಡು ಬಂದೆ. ಪುಣ್ಯಕ್ಕೆ ಎಂಬತ್ತು ವರ್ಷಕ್ಕೆ ಹತ್ತಿರ ಬಂದ ಮೇಲೂ ಐದಾರು ಹಲ್ಲುಗಳು ಉಳಿದಿವೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲೇ ಅವು ಒಂದೊಂದಾಗಿ ಅಲುಗಾಡಲು ಆರಂಭಿಸಿದ್ದರಿಂದ ಸಮಸ್ಯೆ ಉಂಟಾಗತೊಡಗಿತು. ಅವು ತಿಂಗಳುಗಟ್ಟಲೆ ಅಲುಗಾಡುತ್ತ ನನ್ನ ಆಹಾರ ಸೇವನೆಗೆ ಅಡ್ಡಿಯುಂಟು ಮಾಡುತ್ತಿದ್ದರೂ ನಾನೇನು ಅವನ್ನು ಕಿತ್ತೊಗೆಯುವ ಕೆಲಸಕ್ಕೆ ಹೋಗಲಿಲ್ಲ. " ನೀನಾಗಿ ಬಂದಿದ್ದೀ. ನೀನಾಗಿಯೇ ಹೋಗುವದಿದ್ದರೆ ಹೋಗು. ನಾನು ಬೀಳಿಸಿದೆನೆಂಬ ಆಪಾದನೆ ನನ್ನ ಮೇಲೆ ಬೇಡ" ಎಂದು ನಾನು ಆ ಹಲ್ಲಿಗೆ ಸ್ಪಷ್ಟವಾಗಿ ಸೂಚನೆ ನೀಡಿದೆ. ಇದರ ಪರಿಣಾಮವಾಗಿ " ನಾ ಕೊಡೆ , ನೀ ಬಿಡೆ" ಎಂಬಂತೆ ಹಲ್ಲು ಸಹ ಹಟಮಾರಿತನದಿಂದ ಅಲ್ಲೇ ಅಲುಗಾಡುತ್ತ ನಿಂತಿತೇ ಹೊರತು ಹೊರಹೋಗಲು ಸಿದ್ಧವಾಗಲಿಲ್ಲ. ನಾನೂ ಅಷ್ಟೇ, ನನ್ನ ಹೆಂಡತಿಯ ಮಾತಿಗೂ ಮೊದಲ ಸಲ ತಲೆಬಾಗಲಿಲ್ಲ. "ಡಾ. ಅಶೋಕಕುಮಾರರ ಹತ್ತಿರ ಹೋಗಿ ಎಲ್ಲ ಕೀಳಿಸಿಕೊಂಡು ಹೊಸ ಸೆಟ್ ಹಾಕಿಸಿಕೊಂಡು ಬರಬಾರದೇ? ಸುಮ್ಮನೇ ತ್ರಾಸು ತಗೋತೀರಿ" ಎಂಬ ಹೆಂಡತಿಯ ಮಾತು ಕಿವಿಯ ಮೇಲೆ ಬಿದ್ದರೂ ಕೇಳಿಸದೇ ಇದ್ದವರ ಹಾಗೆ ಉಳಿದೆ. ಕೊರೊನಾ ಜೋರಾಗಿದೆ. ಈಗ ಹೋಗೋದು ಸರಿಯಲ್ಲ ಎಂದು ಕೊರೋನಾದ ಮೇಲೆ ತಪ್ಪು ಹೊರಿಸಿಬಿಟ್ಟೆ. ಅದಕ್ಕೂ ಹಟ, ನನಗೂ ಹಟ. "ಈಗಾಗಲೇ ನಿನ್ನ ಇಪ್ಪತ್ತಕ್ಕೂ ಹೆಚ್ಚು ಸಹಪಾಠಿಗಳು/ ಸಹವಾಸಿಕರು/ ಸಹಜೀವಿಗಳು ಹೋಗಿದ್ದಾಗಿದೆ. ನೀನೂ ಬೇಕಿದ್ದರೆ ಹೋಗು. ನೀನಿಲ್ಲದೆಯೂ ನಾನು ಜೀವಿಸಬಲ್ಲೆ. ಆದರೆ ಹೋಗುವದಿದ್ದರೆ ನೀನಾಗಿ ಹೋಗು. ನನ್ನ ಮೇಲೆ ನಿನ್ನನ್ನು ಕೆಡಹಿದೆನೆಂಬ ಆರೋಪ ಬರುವದು ಬೇಡ" ಎಂದು ನಾನು ಕಡ್ಡಿ ಮುರಿದಂತೆ ಹೇಳಿದೆ. ‌‌‌ ಹಲ್ಲು ಇನ್ನೂ ಅಲುಗಾಡುತ್ತ ಅಲ್ಲೇ ಇದೆ. ನಾನೂ ಅದು ಬೀಳುವದಕ್ಕಾಗಿ ಕಾಯುತ್ತಿದ್ದೇನೆ. ಅದರ ಮೇಲೆ ಹಲ್ಲು ಮಸೆಯುವ ಪರಿಸ್ಥಿತಿಯೂ ಸದ್ಯ ನನಗಿಲ್ಲ. - ಎಲ್. ಎಸ್. ಶಾಸ್ತ್ರಿ

ಹಾಸ್ಯಪ್ರಬಂಧ
bottom of page