top of page

ಹತವೀರ್ಯ ತಲೆಮಾರು

ಅಂಕಣ ವಸಂತೋಕ್ತಿ – 4. *ಹತವೀರ್ಯ ಹಪಾಪಿ ತಲೆಮಾರಿನ ನಿರ್ಮಾಣ!* ಜನರಿಗೆ ಬಿಟ್ಟಿ ಕೊಡುವುದೆಂದರೆ ಎಷ್ಟು ಕೊಟ್ಟರೂ ತೆಗೆದುಕೊಳ್ಳುತ್ತಾರೆ. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಬಿಟ್ಟಿಗಾಗಿ ಮತ್ತು ಕ್ಷಣಿಕದ ಲಾಭಕ್ಕಾಗಿ ಹಪಹಪಿಸಿ ಸಾಯುತ್ತಾರೆ. ಬಿಟ್ಟಿ ಕೊಟ್ಟು ಜನರನ್ನು ದೈನೇಸಿಗಳನ್ನಾಗಿ ರೂಪಿಸಬೇಕೇ ಅಥವಾ ಅವರನ್ನು ಶಿಕ್ಷಣವಂತ ಆರೋಗ್ಯವಂತ ಸ್ವಾಭಿಮಾನಿ ಸ್ವತಂತ್ರ ಪ್ರಜೆಗಳನ್ನಾಗಿ ರೂಪಿಸಬೇಕೇ? ಆಯ್ಕೆ ನಮ್ಮದು. ಅಗತ್ಯ ಇದೆಯೋ ಇಲ್ಲವೋ – ನಂಗೂ ಉಂಟು, ನಿಂಗೂ ಉಂಟು, ಮಂಗ್ಯಾ ನಿಂಗೂ ಉಂಟು, ನಿಂಗ್ಯಾ ನಿಂಗೂ ಉಂಟು ಅಂತ ಕರೆಕರೆದು ಕೊಡಲು ಸರಕಾರ ಎಂಬುದೇನು ಧರ್ಮಛತ್ರವೇ! ಸರಕಾರ ಇರುವುದು ಆಡಳಿತ ನಿರ್ವಹಣೆಗೆ ಮತ್ತು ತಲೆಮಾರುಗಳ ನಂತರವೂ ದೇಶ ಸುಭದ್ರವಾಗಿ ಮುನ್ನಡೆಯಲು ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಹಾಗೂ ಮೂಲಸೌಕರ್ಯಗಳನ್ನು ಬೆಳೆಸುತ್ತ ಒಂದು ಸಂಪತ್ಸಮೃದ್ಧ ರಾಷ್ಟ್ರ ಕಟ್ಟುವುದಕ್ಕೆ. ಯಾವುದೇ ಅಭಿವೃದ್ಧಿಶೀಲ ಪ್ರಜಾಪ್ರಭುತ್ವ ದೇಶವು ಮೇಲ್ಮುಖವಾಗಿ ಚಲಿಸುವ ಧ್ಯೇಯ ಹೊಂದಿರಬೇಕು. ಅದಕ್ಕೆ ಬೇಕಾದ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣಕ್ಷೇತ್ರಕ್ಕೆ, ಆರೋಗ್ಯಕ್ಷೇತ್ರಕ್ಕೆ ಮತ್ತು ಇತರ ಮೂಲಭೂತ ಸೌಕರ್ಯಗಳ ಬೆಳವಣಿಗೆಗೆ ನಾವು ಎಷ್ಟು ಒತ್ತು ಕೊಡುತ್ತೇವೆ ಎಂಬುದರ ಆಧಾರದಲ್ಲಿ ನಮ್ಮ ಮೇಲ್ಮುಖ ಚಲನೆ ನಿಂತಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಾರದು. ಇದೊಂದು ಮೂಲತತ್ತ್ವ. ಮಾಡುವ ಖರ್ಚನ್ನು ಕೂಡ ಉತ್ಪಾದಕ ಕ್ಷೇತ್ರಗಳಿಗೆ ಮಾಡಬೇಕು. ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಭೌತಿಕ ಅಭಿವೃದ್ಧಿ ಆಗದಿದ್ದರೆ ಎಲ್ಲ ಕೆಲಸಗಳೂ ವ್ಯರ್ಥ. ಹಾಗೆಂದು ಜನರಿಗೆ ಸಹಾಯ/ ಆರ್ಥಿಕ ನೆರವು ಮಾಡಬಾರದೆಂದೇನಿಲ್ಲ. ಕ್ಷಾಮಡಾಮರಗಳ ಸಂದರ್ಭದಲ್ಲಿ ಸಹಾಯ ಮಾಡಬೇಕು. ಅಶಕ್ತರಿಗೆ, ದಿಕ್ಕಿಲ್ಲದವರಿಗೆ, ವೃದ್ಧರಿಗೆ, ಅನಾಥರಿಗೆ, ರೋಗಿಗಳಿಗೆ, ವಿಕಲಚೇತನರಿಗೆ ಸಹಾಯ ಮಾಡಬೇಕು. ಆದರೆ ಅದೊಂದು ದೊಡ್ಡ ಘೋಷಣೆಯಾಗಬೇಕಾಗಿಲ್ಲ. ಅಧಿಕಾರದಲ್ಲಿರುವ ಯಾರಾದರೂ ಆ ಕೆಲಸ ಮಾಡಲೇಬೇಕು. ಅದೊಂದು ಜವಾಬ್ದಾರಿ ಮತ್ತು ಬದ್ಧತೆ. ಅಭಿವೃದ್ಧಿ ಕೆಲಸಗಳ ಕಡೆಗೆ ಮತ್ತು ಆಡಳಿತದ ಕಡೆಗೆ ಲಕ್ಷ್ಯವೇ ಇಲ್ಲದೆ, ದಿನಬೆಳಗಾದರೆ ಬಿಟ್ಟಿಭಾಗ್ಯಗಳ ನಿರ್ವಹಣೆ ಬಗ್ಗೆಯೇ ತಲೆ ಕೆಡಿಸಿಕೊಳ್ಳುವುದಾದರೆ ಅದನ್ನು ಸರಕಾರ ಅನ್ನಲಾದೀತೇ? ಸರಕಾರದ ಹಣವನ್ನು (ಅಂದರೆ ಸಾರ್ವಜನಿಕ ಹಣವನ್ನು) ಮನಸೋ ಇಚ್ಛೆ ಹಂಚಲು ಅದಕ್ಕೊಂದು ಸರಕಾರ ಅನ್ನುವುದು ಬೇಕೇ? ಇರುವ ನಿಧಿ ಸಾಲದೆ ಒಂದಷ್ಟು ಸಾಲದ ಹೊಂಡವನ್ನೂ ಮಾಡುವುದಾದರೆ – ಆರ್ಥಿಕ ದುರ್ವಿನಿಯೋಗ ಮಾಡುವುದಾದರೆ - ಉತ್ತರದಾಯಿತ್ವವಿಲ್ಲದ ಒಂದು ಬೇಕಾಬಿಟ್ಟಿ ಕೂಟವನ್ನು ಸರಕಾರ ಅನ್ನಬಹುದೇ? ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದಿದ್ದರೆ ಅದೊಂದು ಸುಳ್ಳುಗಾರ ಪಕ್ಷ ಎಂದಾಗುವುದಿಲ್ಲವೇ? ಸುಳ್ಳರು ಯಾವ ನೈತಿಕತೆಯಿಂದ ಆಡಳಿತ ನಡೆಸಲಾದೀತು? ಜನರಿಗೆ ಹೇಗೆ ಮುಖ ತೋರಿಸುವರು? ಕಾಯಕವೇ ಕೈಲಾಸ ಎಂದು ದುಡಿಮೆಯ ಮಹತ್ತ್ವವನ್ನು ಜನರಿಗೆ ಹೇಳಿಕೊಡಬೇಕು. ಜನರಿಗೆ ಉದ್ಯೋಗ ನೀಡುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಆಗ ಸಂಪನ್ಮೂಲ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ದೇಶ ಮುಂದೆ ಬರುತ್ತದೆ. ಜನರ ಕೈಯಲ್ಲಿ ದುಡ್ಡುಕಾಸು ಓಡಾಡುತ್ತದೆ. ಕೊಳ್ಳುವ ಶಕ್ತಿ ಬರುತ್ತದೆ. ಬಡತನ ನಿಧಾನವಾಗಿ ಕಣ್ಮರೆಯಾಗುತ್ತದೆ. ಇದೀಗ ನಮ್ಮದು ಒಂದು ಬೇಡುವವರ - ಭಿಕ್ಷುಕರ ರಾಜ್ಯ ಎಂದು ನಿರ್ಲಜ್ಜವಾಗಿ ಜಗಜ್ಜಾಹೀರು ಮಾಡಲು ಹೊರಟಂತಾಯಿತು. ಅಂತಾರಾಷ್ಟ್ರೀಯವಾಗಿ ನಗೆಪಾಟಲಿಗೆ ಈಡಾಗುವಂತಾಯಿತು. ಇನ್ನು ಅಲ್ಲಿ ಇಲ್ಲಿ ಹೋಗಿ ಸಾಲ ಕೇಳಬೇಕಷ್ಟೆ! ಅಥವಾ ಎಲ್ಲ ಸಾಮಾನು ಸರಂಜಾಮುಗಳ ದರ ಹೆಚ್ಚಿಸಿ, ಉಳಿದವರ ತಲೆ ಹೊಡೆದು ಬದುಕನ್ನು ನರಕ ಮಾಡಿಕೊಳ್ಳಬೇಕಷ್ಟೆ. ನೀರಿಗೆ ಹಾರುವ ಮುನ್ನ ನೀರಿನ ಆಳ ತಿಳಿಯದಿದ್ದರೆ ಹೀಗೆಯೇ ಆಗುವುದು! ಡಾ.ವಸಂತಕುಮಾರ ಪೆರ್ಲ

ಹತವೀರ್ಯ ತಲೆಮಾರು
bottom of page