top of page

ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಗಳು..!!

ನಮ್ಮ ತಂದೆ ವೆಂಕಣ್ಣಾಚಾರ್ಯ ಕಟ್ಟಿಯವರು ತಮ್ಮ ವಿಶಿಷ್ಟ ವ್ಯಕ್ತಿತ್ವದ ‌ಮೂಲಕ ಅನೇಕರನ್ನು ಪ್ರಭಾವಿತ ಗೊಳಿಸಿದವರು. ಸ್ವಾತಂತ್ಯ ಹೋರಾಟಗಾರರಾಗಿ, ರಂಗಕರ್ಮಿಯಾಗಿ ಅವರ ಜೀವನ ಪಯಣ ಅತ್ಯಂತ ರೋಚಕ..! ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೊತ್ಸವ ಆಚರಿಸುತ್ತಿರುವ ಈ ಸಂದರ್ಭ ದಲ್ಲಿ ಅಪ್ಪ ಹೇಳುತ್ತಿದ್ದ ಕೆಲವು ರೋಚಕ ಘಟನೆಗಳು ನೆನಪಿಗೆ ಬರುತ್ತದೆ.... ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವೆಮಕನಮರಡಿ ಗ್ರಾಮದ ವೆಂಕಣ್ಣಾಚಾರ್ಯರು ೧೫ ವರ್ಷದ ಯುವಕರಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟದ ಕನಸು ಕಂಡವರು. ಇದಕ್ಕಾಗಿ ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಬಾಲಕ ವೆಂಕಣ್ಣನ ಕ್ರಾಂತಿಕಾರಿ ಚಟುವಟಿಕೆಗಳು ಬ್ರಿಟಿಷರ ನಿದ್ದೆ ಕೆಡಿಸಿದ್ದವು. ಅಪ್ಪನನ್ನು ಹಿಡಿದು ಕೊಟ್ಟವರಿಗೆ ಆಗ ಬ್ರಿಟಿಷ್ ಸರಕಾರ ಬಹುಮಾನ ಇಟ್ಟಿತ್ತು! ಒಮ್ಮೆ ವೆಂಕಣ್ಣನನ್ನು ಸೆರೆಹಿಡಿದ ಪೋಲಿಸರು ಅವರ ತಂದೆ ಅಂದರೆ ನಮ್ಮ ಅಜ್ಜ ಪಾಂಡುರಂಗಾಚಾರ್ಯರನ್ನು ಠಾಣೆಗೆ ಕರೆಸಿದರು. ಅಜ್ಜ ಆಗ ಕಂದಾಯ ಇಲಾಖೆಯಲ್ಲಿ ತಲಾಠಿಯಾಗಿ ಕೆಲಸ ಮಾಡುತ್ತಿದ್ದರು. ಠಾಣೆಯಲ್ಲಿ ಪೋಲಿಸ ಅಧಿಕಾರಿಗಳು ಗತ್ತಿನಿಂದ, "ಆಚಾರ್ಯರೆ, ನೀವು ಬ್ರಿಟಿಷ ಸರಕಾರದಲ್ಲಿ ಸೇವೆ ಮಾಡುತ್ತಿದ್ದರೆ ನಿಮ್ಮ ಮಗ ಅದೇ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾನೆ. ಆತನಿಗೆ ಬುದ್ದಿ ಹೇಳಿ ಬ್ರಿಟಿಷ ಸರಕಾರಕ್ಕೆ ಕ್ಷಮಾಪಣೆ ಪತ್ರ ಬರೆಸಿಕೊಡಿ ಎಂದು ಒತ್ತಡ ತಂದರು. ಆಗ ಅಜ್ಜ, " ನೀವೇನೂ ಕಾಳಜಿ ಮಾಡುವದು ಬೇಡ. ಮಗನಿಗೆ ಬುದ್ಧಿ ಹೇಳುತ್ತೇನೆ. ಆದರೆ ನೀವು ಯಾರೂ ಇರುವದು ಬೇಡ. ಮಗನ ಸಂಗಡ ಮಾತಾಡಲು ನನಗೆ ಪ್ರತ್ಯೇಕ ಅವಕಾಶ ಮಾಡಿಕೊಡಿ" ಎಂದು ಕೇಳಿದರು. ತಲಾಟಿಯಾಗಿದ್ದ ಅಜ್ಜನ ಮಾತಿಗೆ ಮನ್ನಣೆ ಕೊಟ್ಟು ಪೋಲಿಸ್ ಅಧಿಕಾರಿಗಳು ಅದರ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಇನ್ನು ಮುಂದಿನದು ಕಥೆಗೆ ವಿಶೇಷ ತಿರುವು!! ಅಪ್ಪನನ್ನು ಪಕ್ಕಕ್ಕೆ ಕರೆದುಕೊಂಡು ಹೋದ ಅಜ್ಜ ಪಾಂಡುರಂಗಾಚಾರ್ಯರು, " ವೆಂಕಾ.. ನನಗೆ ಒಟ್ಟು ಐವರು ಗಂಡು ಮಕ್ಕಳು. ನೀನೊಬ್ಬ ದೇಶಕ್ಕಾಗಿ ಸತ್ತರೆ ನಾನಂತೂ ದುಃಖ ಪಡುವದಿಲ್ಲ. ನೀನು ನನ್ನ ಮಗನೆ ಆಗಿದ್ದರೆ, ಸತ್ತರೂ ಬ್ರಿಟಿಷರಿಗೆ ಕ್ಷಮಾಪಣೆ ಕೇಳಬೇಡ.." ಎಂದು ಹೇಳಿದರು..!! ನಂತರ ಮನೆಗೆ ಬಂದು ತಲಾಟಿ ಹುದ್ದೆಗೆ ರಾಜೀನಾಮೆ ಬರೆದು ಕಳಿಸಿ ತಾವೂ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು..!! ಅವರೆಲ್ಲರ ಹೊರಾಟದ ಈ ಕಥೆಗಳೇ ಮುಂದಿನ ಪೀಳಿಗೆಗೆ ಟಾನಿಕ್ ಇದ್ದಂತೆ.. ನಮ್ಮ ಅಜ್ಜಿ ರುಕ್ಮಿಣಿಬಾಯಿ ಕಟ್ಟಿಯವರು ಸ್ವಾತಂತ್ರ್ಯ ಹೋರಾಟಗಾರರಿಗೆ ಬೇಕಾದ ರೊಟ್ಟಿ ಮಾಡಿಕೊಟ್ಟ ಅದನ್ನು ಯಾರಿಗೂ ಕಾಣದಂತೆ ರಾತ್ರಿ ಮನೆ ಕಂಪೌಂಡ ಮೇಲೆ ಇಡುತ್ತಿದ್ದರು! ಈ ರೀತಿ ವರ್ಷಗಟ್ಟಲೆ ಅವರು ನನ್ನ ಅಪ್ಪ ವೆಂಕಣ್ಣಾಚಾರ್ಯ ಮತ್ತು ಅವರ ಸಂಗಡಿಗರಿಗೆಲ್ಲ ಊಟದ ವ್ಯವಸ್ಥೆ ಮಾಡುತ್ತಿದ್ದರು..!! ಇದಲ್ಲವೆ ಎಲೆಮರೆಯ ಕಾಯಿಯಂಥ ನಿಸ್ವಾರ್ಥ ಸೇವೆ..!!? ಒಮ್ಮೆ ಯುಗಾದಿ ಹಬ್ಬದ ದಿನ ಓರ್ವ ಭಿಕ್ಷುಕ ಮನೆಯೆದುರು ನಿಂತಿದ್ದಾನೆ. ಮೈಯೆಲ್ಲ ಹೊಲಸು, ಹರಕು ಬಟ್ಟೆಯ ಭಿಕ್ಷುಕ, "ಅಮ್ಮಾ ತಾಯೆ.. ಹೊಟ್ಟೆ ಹಸಿದಿದೆ. ಏನಾದರೂ ಭಿಕ್ಷೆ ಹಾಕು.." ಎಂದು ಅಂಗಲಾಚಿದಾಗ, ಅಜ್ಜಿ ಅಂದು ಮಾಡಿದ್ದ ಹೋಳಿಗೆ -ಯನ್ನು ಭಿಕ್ಷುಕನಿಗೆ ನೀಡಿದ್ದರು. ಎಷ್ಟೊ ಹೊತ್ತಿನ ಮೇಲೆ ಹೊರಗೆ ಬಂದು ನೋಡಿದಾಗ ಭಿಕ್ಷುಕ ಇರಲಿಲ್ಲ. ಆದರೆ ಅಂಗಳದಲ್ಲಿ ಒಂದು ಚೀಟಿ ಕಾಣಿಸಿತು. ಅದರಲ್ಲಿ, "ಅಮ್ಮಾ ಬಹಳ ದಿನಗಳಾಯಿತು ನಿನ್ನನ್ನು ನೋಡಬೇಕು, ನಿನ್ನ ಕೈಯ ಅಡಿಗೆ ಊಟ ಮಾಡಬೇಕು ಎಂಬ ಆಸೆ ಇಂದು ನೆರವೇರಿತು.." ಅಂತ ಬರೆದಿತ್ತು..!! ನಮ್ಮ ಅಜ್ಜಿ ಕೊನೆಯವರೆಗೂ ಈ ಘಟನೆಯನ್ನು ಮೆಲುಕು ಹಾಕುತ್ತ, ಪೋಲಿಸರ ಕಣ್ಣು ತಪ್ಪಿಸಲು ಯುಗಾದಿ ಹಬ್ಬದ ದಿನ ನನ್ನ‌ ಮಗ ಭಿಕ್ಷುಕನಂತೆ ನಿರ್ಗತಿಕನಾಗಿ ನನ್ನ ಮುಂದೆ ಬರುವಂತಾಯಿತು.." ಎಂದು ಕಣ್ಣೀರು ಹಾಕುತ್ತಿದ್ದರು. ಆದರೂ ಎಲ್ಲ ದೇಶದ ಸ್ವಾತಂತ್ರ್ಯದ ಸಲುವಾಗಿ ಎಂದು ಹೇಳುವಾಗ ಅವಳ ಕಣ್ಣುಗಳಲ್ಲಿ ಹೆಮ್ಮೆಯ ಮಿಂಚು ಬೆಳಗುತ್ತಿತ್ತು..!ಈ ರೀತಿ ನನ್ನ ಕುಟುಂಬದ ಹಿರಿಯರೆಲ್ಲ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗ ವಹಿಸಿದ್ದು ನಮ್ಮ ಕಟ್ಟಿ ಕುಟುಂಬದವರೆಲ್ಲರಿಗೂ ಹೆಮ್ಮೆಯ ಸಂಗತಿ.! ಹಿರಿಯರ ತ್ಯಾಗ, ಬಲಿದಾನ ಗಳಿಂದ ಇಡೀ ದೇಶ ಇಂದು ಸ್ವಾತಂತ್ರ್ಯ ಸಂಗ್ರಾಮದ ಅಮೃತ ಮಹೋತ್ಸವದ ಖುಷಿಯಲ್ಲಿದೆ.‌ ಎಲ್ಲರಿಗೂ ಹಿರಿಯರ ಹೋರಾಟದ ರೋಚಕ ಕಥೆಗಳು ಪ್ರೇರಣೆ ನೀಡುವದರ ಜೊತೆಗೆ ನಮ್ಮೆಲ್ಲರಲ್ಲಿ ದೇಶಪ್ರೇಮದ ಕಿಚ್ಚು ಸದಾ ಜಾಗೃತವಾಗಿರಿಸಲಿ..!! ಭಾರತ ಮಾತಾಕಿ ಜೈ..! ಒಂದೇ ಮಾತರಂ.‌!! ಶ್ರೀರಂಗ ಕಟ್ಟಿ ಯಲ್ಲಾಪುರ.

ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಗಳು..!!
bottom of page