top of page

ಸ್ವಗ್ರಾಮದ ಸೊಬಗು

- ನಳಿನ ಡಿ. ಹಳ್ಳಿ ನೀಡುವ ಅನುಭವ ಅಪಾರ. ಎರಡು ವರ್ಷಗಳ ಬಾಲ್ಯವನ್ನು ಹಳ್ಳಿಯಲ್ಲಿ ಆತಂಕದಿಂದ ಹೆದರಿಸಿದ ಸಂದರ್ಭ ಬಂದಿತ್ತು. ಅದಕ್ಕೇನೇ ಕಾರಣಗಳಿರಲಿ, ಅನಿವಾರ್ಯವಾಗಿ ಅಲ್ಲಿ ಸುಂದರ ಬಾಲ್ಯವನ್ನು ಕಳೆಯಲಾರದೆ ದೂರದ ಪಶ್ಚಿಮಘಟ್ಟಗಳ ಕಾಡಿಗೆ ನಮ್ಮಪ್ಪ ನಮ್ಮನ್ನೆಲ್ಲಾ ಕರೆದುಕೊಂಡು ವರ್ಗಾವಣೆ ಮಾಡಿಸಿಕೊಂಡು ಹೋಗುವ ಮೊದಲು ನನಗೆ ಹಳ್ಳಿ ನನಗೆ ಬೆಟ್ಟದಷ್ಟು ಅನುಭವಗಳನ್ನು ಕೊಟ್ಟುಹೋಗಿತ್ತು. ಹಳ್ಳಿನ ಶ್ರಮದ ಬದುಕು, ವ್ಯವಸಾಯ, ರೈತರ ಜೀವನ ಕ್ರಮ, ವಿವಿಧ ಬೆಳೆಗಳು, ಸುಗ್ಗಿ, ಬೆಟ್ಟದ ಬೂತಪ್ಪನ ‘ಪರ’ದ ಮಹಿಮೆ, ನಮ್ಮಕುಲಧೈವಗಳಾದ ಲಕ್ಷ್ಮೀದೇವಿ ಲೋಕಮಾತೆಯರಿಗೆ ಕುರಿ ಹೊಡೆಯುವ ಹಬ್ಬಗಳು, ವಿಶೇಷವಾಗಿ ಉತ್ಸವಗಳಿಗೆಂದೇ ಬರುತ್ತಿದ್ದ ತಪ್ಪಡೆ ತಿಮ್ಮಜ್ಜ, ಆತ ಚಳಿ ಕಾಯಿಸಿಕೊಳ್ಳುತ್ತಾ, ಕೃಷ ದೇಹದಲ್ಲೇ ತನ್ನ ಮೊಮ್ಮಕ್ಕಳನ್ನು ಪಕ್ಕದಲ್ಲಿ ಮಲಗಿಸಿಕೊಂಡು ಬಡಿಯುತ್ತಿದ್ದ ತಿಮ್ಮಜ್ಜ, ಆತ ಸತ್ತ ಎಮ್ಮೆಗಳನ್ನು ಕುಟುಂಬ ಸಮೇತ ತಿನ್ನುತ್ತಾನೆಂಬ ವರ್ಣನೆಗಳನ್ನು ಹೇಳುತ್ತಿದ್ದ ಅದೇ ಹಟ್ಟಿಯ ಗೆಳತಿಯರು, ಹೀಗೆ ಅಲ್ಲಿ ಕಂಡ ಪರಪಂಚದಲ್ಲಿ ಎಷ್ಟೋಂದು ಜೀವಂತಿಕೆ ಇತ್ತು. ಎಷ್ಟೇ ಸಂಕಷ್ಟಗಳ ನಡುವೆಯೂ ಅಮ್ಮ ಅಡುಗೆ ಮಾಡಿಟ್ಟು ಹೊಲಕ್ಕೆ ಹೊರಟಿರುತ್ತಿದ್ದರು, ಅಪ್ಪ ಎಂದಿನಂತೆ ತಮ್ಮ ಅವಂತಿ ಗಾಡಿ ಏರಿ ಪೋಲೀಸ್ ಚಾಕರಿಗೆ ಹೋಗಿ ಸರುಹೊತ್ತಿನಲ್ಲಿ ಹಿಂದಿರುಗುತ್ತಿದ್ದರು. ಬೇಸಗೆ ರಜೆ ಬಂದದ್ದೇ ನಾನು ಹಳ್ಳಿ ಮಕ್ಕಳೊಡನೆ ಸೆಟ್ ಆಗಿರುತ್ತಿದ್ದೆ. ಆಗ ಐದು ಅಥವಾ ಆರನೇ ತರಗತಿಯಲ್ಲಿದ್ದೆ, ರಜೆಯಲ್ಲಿ ಆಡಿದ್ದೇ ಆಟ, ಹೊಡಿದ್ದೇ ಲಗ್ಗೆ. ಅಲ್ಲಿದ್ದ ಒಂದು ಕೆರೆಯ ಹೆಸರು ನೇರಳಕಟ್ಟೆ. ಬೇಸಗೆಯಲ್ಲಿ ನೀರಿರದೆ ಒಣಗುತ್ತಿದ್ದು, ಮಳೆಗಾಲದಲ್ಲಿ ತುಂಬಿಕೊಂಡಿರುತ್ತಿದ್ದ ನೇರಳಕಟ್ಟೆ ಏರಿಯ ಎಡಬದಿಗೆ ಇತ್ತು. ಅದರ ಸುತ್ತಲೂ ಬೇಲಿ ಮೆಣೆ, ದೊಡ್ಡ ದೈತ್ಯ ಮರಗಳು ಇದ್ದವು. ಅದರ ಪಕ್ಕದಲ್ಲೇ ನೇರಳೆ ಮರಗಳಿದ್ದವು. ಆದರೆ ಅದರ ಬಳಿ ಯಾರೂ ಸುಳಿಯಬಾರದೆಂದು ಎಲ್ರೂ ಹೇಳಿದರೂ ಸಹ, ಪಡ್ಡೆಗಳೊಡನೆ ನಾನೂ ಊರಿಂದ ರಜೆಗೆ ಬಂದಿದ್ದ ಅಕ್ಕನೂ ಒಮ್ಮೆ ನೇರಳೇ ಮರಗಳ ಮೇಲೆ ಕೆಳಗೆಲ್ಲಾ ನೇತಾಡಿ, ನೇರಳೇ ಹಣ್ಣುಗಳನ್ನು ಗೊಂಚಲಿನಿಂದ ಬಿಡಿಸಿಕೊಂಡು ಉದ್ದಲಂಗದ ಮಡಿಲು ತುಂಬಾ ಕಟ್ಟಿಕೊಂಡು ತಮ್ಮ ತಂಗಿಯರೊಂದಿಗೆ ಹಂಚಿಕೊಳ್ಳಲು ಹೊರಟಾಗ, ಬೀದಿಯಲ್ಲಿ ಇತರೆ ಗೆಳತೆಯರು ಇದಿರಾಗಿ, ನಮಗೂ ಕೊಡ್ರೆ ಅಂದಾಗ ಕೊಡದೆ ದಾರಿ ಇರುತ್ತಿರಲಿಲ್ಲ. ಆದರೆ ನಮ್ಮ ಜೊತೆಗಿರುತ್ತಿದ್ದ ನಮಗಿಂತ ದೊಡ್ಡ ಹುಡುಗಿಯರು ತಮ್ಮ ಸೊಂಟದಲ್ಲಿ ಅದ್ಯಾವ ರೀತಿಯಲ್ಲೋ ಸುತ್ತಿಟ್ಟುಕೊಂಡು ಹೋಗುತ್ತಿದ್ದರೂ ಅವರ ಹತ್ತಿರ ನೇರಳೇ ಹಣ್ಣು ಇದೇ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಳ್ಳಿಯವರ ಜಾಣತನ ಕಣ್ಣಲ್ಲಿ ಕಂಡರೆ ಬಾರದು ಎಂದರಿತು, ಪುಟ್ಟ ಕೈಗಳಲ್ಲಿ ಎರಡು ಹಿಡಿ ಕೊಟ್ಟು ಮುಂದೆಹೋಗುತ್ತಿದ್ದೆವು. ಇಂತದ್ದೊಂದು ದಿನ, ತಡರಾತ್ರಿ, ಮಂಚದ ಮೇಲಿಂದ ಎದ್ದು, ಅತ್ತಿಂದಿತ್ತ ಅಡ್ಡಾಡುತ್ತಾ ನಿದ್ದೆಯಲ್ಲೇ ಶತಾಯಗತಾಯ ತಿರುಗುತ್ತಿದ್ದೆನಂತೆ. ಅಪ್ಪಾ ಒಂದು ಸಲ ಗದರಿಸಿದ ನಂತರ ತೆಪ್ಪಗೆ ಎಂದಿನಂತೆ ಮಲಗಿದೆ ಎಂದು ಬೆಳಿಗ್ಗೆ ಮನೆಯವರೆಲ್ಲಾ ಹೇಳಿ ನಗುತ್ತಿದ್ದರು. ನೇರಳಕಟ್ಟೆಯ ನೇರಳೇ ಮರದ ಬಳಿ ಹೋಗಬೇಡಿ ಎನ್ನಲು ಕಾರಣ, ಓರ್ವ ಮುದುಕನನ್ನು ಕಡಿದು ಗೋಣಿಚೀಲದಲ್ಲಿ ತುಂಬಿ ಇದೇ ನೇರಳೆ ಮರದ ಮೇಲೆ ಇಟ್ಟಿದ್ದರೆಂದು ನಂತರ ನನಗೆ ತಿಳಿಯಿತು. ಹಳ್ಳಿಯಲ್ಲಿ ಹೆಚ್ಚು ಕಾಲ ಕಳೆದದ್ದು ಜೋಗಿರಾಳಿನಲ್ಲಿ. ಜೋಗಿರಾಳು ಎಂದರೆ ಅದೊಂದು ಗೋಮಾಳವೇ. ಎಲ್ಲರ ಮನೆಯ ಎಮ್ಮೆ, ದನ ಕಟ್ಟಿಕೊಂಡು ಸೌದೆ ಆಯಲು ಊರ ಹೊರಗಿನ ಜಮೀನಿನಾಚೆಯ ಬಯಲಿನಲ್ಲಿ ನಾವೆಲ್ಲಾ ಸೇರುತ್ತಿದ್ದವು. ನಮ್ಮ ಮನೆಯಲ್ಲಿದ್ದ ಎರಡು ಹಸುಗಳನ್ನು ಅಪ್ಪ ಸರತಿಗೆ ಹೊಡಿದಿರುತ್ತಿದ್ದರು, ಆದರೆ ಬೇರೆಯವರಿಗೆ ಸರತಿಗೆ ಕಳಿಸಲು ಆಗದೆ ಇದ್ದುದರಿಂದ ತಾವೇ ಹೊಡೆದುಕೊಂಡು ಬರುತ್ತಿದ್ದರು. ದನಗಳು ಎಲ್ಲಾದರೂ ಮೇಯುತ್ತಿದ್ದರೆ, ನಾವು ಜೋಗಿರಾಳಿನಲ್ಲಿ ಗೆಂಡುಗ ಎಂಬ ಗೆಡ್ಡೆಯನ್ನು ಬಗೆಯಲು ಹುಡುಕುತ್ತಿದ್ದೆವು. ಆಲೂಗಡ್ಡೆಗಿಂತಲೂ ಪುಟ್ಟದಾದ ಹೆಚ್ಚು ನೀರಿನಂಶವುಳ್ಳ ಗೆಡ್ಡೆಗಳವು, ಒಂದು ರೀತಿಯ ಎಲೆಗಳಿರುತ್ತಿದ್ದ ಪುಟ್ಟ ಗಿಡವನ್ನು ಗುರ್ತಿಸಿ ಅದರ ಬುಡದಲ್ಲಿ ಕೆರೆದಾಗ ಪುಟ್ಟ ಗಡ್ಡೆಗಳು ಪತ್ತೆಯಾಗುತ್ತಿದ್ದವು. ಅದನ್ನು ಹುಮ್ಮಸ್ಸಿನಿಂದ ನನಗೆ ಜಾಸ್ತಿ ಸಿಕ್ಕಿದೆ ಅಂತ ತಿನ್ನುತ್ತಿದ್ದೆವು. ಆದರೆ ಸದ್ಯ ಅದರಿಂದ್ಯಾವ ವ್ಯತಿರಿಕ್ತ ಪರಿಣಾಮಗಳಾಗುತ್ತಿರಲಿಲ್ಲ ಅನ್ನೋದೇ ಒಳ್ಳೆಯ ವಿಷಯವಾಗಿತ್ತು. ಗೆಡ್ಡೆಯನ್ನು ತೊಳೆಯದೇಯೇ ಹಾಗೆಯೇ ಒರೆಸಿ ಮಣ್ಣು ತೆಗೆದು ಕಡಿದು ತಿನ್ನುತ್ತಿದ್ದೆವು, ಅದರ ತುಂಬಾ ಸಿಹಿ ಮಿಶ್ರಿತ ನೀರು ತುಂಬಿರುತ್ತಿತ್ತು. ಜೊತೆಗೆ ಬಾಯಾರಿಕೆಯು ಕಡಿಮೆಯಾಗುತ್ತಿತ್ತು. ಸಣ್ಣಪುಟ್ಟ ಪುಳ್ಳೆಯನ್ನು ಮನೆಗೆ ಕೊಂಡೊಯ್ಯಲೇ ಬೇಕಾದ ಅನಿವಾರ್ಯತೆ ಇದ್ದ ಆ ಮಕ್ಕಳೆಲ್ಲಾ ಪುಳ್ಳೆ ಹಾಯ್ದುಕೊಂಡರೆ, ನಮ್ಮ ಮನೆಗೂ ಬೇಕು ಅಂತ ನಾನೂ ಎತ್ತಿಟ್ಟುಕೊಂಡು ಕಂತೆ ಕಟ್ಟುತ್ತಿದ್ದೆ, ಹಳ್ಳಿ ಕೆಲಗಳಲ್ಲಿ ಪಳಗಿದ್ದ ಅವರೆಲ್ಲಾ ದೊಡ್ಡ ತೆಕ್ಕೆ ಮಾಡಿಕೊಂಡಿದ್ದರೆ, ನನ್ನದು ಏನೇನೂ ಇಲ್ಲ. ಬಿಸಿಲಿನ ಝಳಕ್ಕೆ ಸುಸ್ತಾಗಿ ಮನೆಗೆ ಬಂದು ಸೇರಿದಾಗ, ‘ಇದೆಲ್ಲಾ ಗೊತ್ತಾದರೆ ಅಪ್ಪಾ ಸರಿಯಾಗಿ ಬೈಯುವ ಸಾಧ್ಯತೆ ಇತ್ತೆಂದು’ ಹೆದರಿಕೆಯಾಗುತ್ತಿತ್ತು. ಏನೇ ಮಾಡಿದರೂ ಅಪ್ಪನಿಗೆ ಗೊತ್ತಾಗದ ಹಾಗೆ ಮಾಡಬೇಕೆಂದು ನಮಗೆ ಅವ್ಯಕ್ತ ಭಯ ಇದ್ದೇ ಇತ್ತು. ನನ್ನ ಗೆಳತಿಯರು ಇತರೆ ಜಾತಿಯವರ ಹಟ್ಟಿಗಳಲ್ಲೂ ಇದ್ದರು, ಒಂದು ದಿನ ನಮ್ಮ ಹಟ್ಟಿಯಲ್ಲಿ ಕರೆಂಟಿತ್ತು, ಒಂದು ಲೈನ್ ಸಮಸ್ಯೆಯಿಂದ ಇತರೆಯವರ ಹಟ್ಟಿಯಲ್ಲಿ ಇರಲಿಲ್ಲ. (ಇಂದು ಹೆಚ್ಚುಕಡಿಮೆ ಎಲ್ಲಾ ಜನರು ಅತ್ತಿಂದಿತ್ತ ಮನೆ ಕಟ್ಟಿಕೊಂಡಿದ್ದಾರೆ, ಇಪ್ಪತ್ತು ವರ್ಷಗಳ ಹಿಂದೆ ಪರಿಸ್ಥಿತಿ ಇಂದಿನ ಹಾಗೆ ಇರಲಿಲ್ಲ.) ನಮ್ಮ ತಂದೆ ತಾಯಿ ನಮಗೆ ಜಾತಿಯ ಬಗ್ಗೆ ಕಲಿಸಿದ ನೆನಪುಗಳೂ ಇಲ್ಲ. ಜಾತಿ ಅಂದರೇನೆಂದು ಮೊದಲ ಬಾರಿಗೆ ಅರ್ಥವಾಗಿದ್ದು ಆ ದಿನ. ನಮ್ಮ ಹಟ್ಟಿಯಲ್ಲಿ ಎರಡು ಟಿವಿಗಳಿದ್ದವು, ಒಂದು ನಮ್ಮ ಮನೆಯದ್ದು. ಅಂದು ನಮ್ಮಜಾತಿಯವರೆಲ್ಲರೂ ನಮ್ಮ ಮನೆಗೆ ಬಂದು ಟಿವಿ ನೋಡುತ್ತಿದ್ದರು, ನನ್ನ ಶಾಲೆಯ ಕೆಲವು ಹುಡುಗ ಹುಡುಗಿಯರು ಬಾಗಿಲ ಹೊರಗೆ ನಿಂತು, ಕಿಟಕಿಯ ಮೇಲೆ ಆತುಕೊಂಡು ಟಿವಿ ನೋಡುತ್ತಿದ್ದರು, ಅವರಿಗೆ ನಾನು ಒಳಗೆ ಬನ್ನಿ ಎಂದು ಪರಿ ಪರಿಯಾಗಿ ಹೇಳಿದರೂ ಸಹ, ‘ಬರುತ್ತೇವೆ, ನೀನು ಹೋಗು’ ಅಂತ ಸುಮ್ಮನಾಗುತ್ತಿದ್ದರು. ಇನ್ನೊಂದು ಸಂದರ್ಭದಲ್ಲಿ ನಾನು ಲಿಂಗಾಯುತ ಗೆಳತಿಯರ ಮನೆಗೆ ಹೋದಾಗ ಜಾತಿ ಅನುಭವಕ್ಕೆ ಬಂದಿತ್ತು. ಪ್ರಮೀಳಾ ಎಂಬ ಗೆಳತಿ ಆರನೇ ತರಗತಿಯಲ್ಲಿದ್ದಳು, ಅವಳ ಮನೆಗೆ ಕರೆದೊಯ್ದು, ನಡುಮನೆಯಲ್ಲಿ ಕುಳ್ಳಿರಿಸಿ ಮಜ್ಜಿಗೆ ಕೊಟ್ಟಿದ್ದಳು. ಆಗ ಮನೆಯಲ್ಲಿ ಯಾರೂ ಇರಲಿಲ್ಲ, ‘ನೀನು ನಮ್ಮ ಮನೆಯೊಳಗೆ ಬಂದ ವಿಚಾರ ಯಾರಿಗೂ ಹೇಳಬೇಡ’ ಎಂದು ಹತ್ತಾರು ಬಾರಿ ಎಚ್ಚರಿಸಿದ್ದಳು. ನಮ್ಮ ಅಜ್ಜನ ಕಾಲಕ್ಕಿಂತಲೂ ಹಿಂದೆ ನೆಟ್ಟಿದ್ದ ಬಲಿಷ್ಟ ಹಲಸಿನ ಮರವೊಂದು ನಮ್ಮ ತಂದೆಯ ಜಮೀನಿನಲ್ಲಿತ್ತು. ಒಮ್ಮೆ ನಾನು ಆ ಮರ ಹತ್ತಿ, ಬಾರಿ ಗಾತ್ರದ ದೊಡ್ಡ ಹಲಸಿನಹಣ್ಣುಗಳನ್ನು ಕಿತ್ತು, ತಲೆ ಮೇಲೆ ಹೊತ್ತು ಮನೆಗೆ ಸಾಗಿಸಿದ್ದೆ. ಅಮ್ಮ ನನ್ನ ಸಾಹಸ ಕಂಡು ಅಚ್ಚರಿ ಪಡುತ್ತಿದ್ದರು. ನೀನು ಹುಡುಗಾ ಆಗಿದ್ದರೆ ಚೆನ್ನಾಗಿತ್ತು ಅಂತ ನಂಟರು ಹೇಳುತ್ತಿದ್ದರು. ಹಳಸಿನ ಹಣ್ಣುಗಳು ತಿಂದು ಬೀಜಗಳನ್ನು ಎತ್ತಿಟ್ಟಿರುತ್ತಿದ್ದಾಗ, ಹಲಸಿನ ಬೀಜ ಕೇಳಲು ಓರ್ವ ಗೆಳತಿ ಬಂದಿದ್ದಳು, ಮನೆಯ ಮುಂಬಾಗಿಲಿನಿಂದ ಒಳಗೆ ಬರಲು ಆಕೆಗೆ ಇಷ್ಟವಿಲ್ಲದ ಕಾರಣ, ಕೊಟ್ಟಿಗೆಯಲ್ಲಿ ಬಂದು ಹಲಸಿನ ಬೀಜ ಬೇಕೆಂದಳು. ಎಷ್ಟು ಕೊಡುತ್ತೀಯಾ? ಎಂದು ನೋಡುತ್ತಿದ್ದಳು, ‘ಅದಕ್ಕೇನು, ನಮ್ಮಮ್ಮ ಏನೂ ಹೇಳೋದಿಲ್ಲ, ಎಲ್ಲಾ ತಗೋ?’ ಅಂದಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಅವಳ ಉದ್ದಲಂಗದಲ್ಲಿ ಕಟ್ಟಿಕೊಂಡು ಬೇಲಿಹಿಂದಿನ ಹಾದಿಯಿಂದ ಬೂತಪ್ಪನ ಗುಡಿಯ ಹಿಂಬಾಗದ ಅವರ ಮನೆಯ ಹಾದಿ ಹಿಡಿದಳು. ನಮ್ಮೂರಿನ ಪ್ರಮುಖ ಅಟ್ರ್ಯಾಕ್ಷನ್ ಕಡ್ಲೆ ಮಿಠಾಯಿ ಮಾರಲು ಬರುವ ಸೈಕಲ್ ಸವಾರ, ಅವನ ಕೊಳೆ ಬಟ್ಟೆಗಳು, ಆತ ವಿಚಿತ್ರ ಧ್ವನಿಯಲ್ಲಿ ಮಕ್ಕಳನ್ನು ಆಕರ್ಷಿಸುತ್ತಿದ್ದ. ಅವನು ಗಂಟೆ ಬಡಿಯುತ್ತಾ, ಸಕ್ಕರೆ ಅಚ್ಚಿನ ಕಡ್ಲೆ ಮಿಠಾಯಿಯನ್ನು ದುಡ್ಡಿಗೆ, ಕಬ್ಬಿಣದ ಸಾಮಾನಿಗೆ ಮಾರುತ್ತಿದ್ದ. ಆತ ಗಲೀಜು ಅನ್ನಿಸಿದರೂ, ಆತನ ಕೈಯಿಂದ ನೀಡುವ ಮಿಠಾಯಿ ಆಸೆಗೆ ನಾವು ಆತನ ಗಾಡಿಯ ಹಿಂದೆ ಓಡುತ್ತಿದ್ದೆವು. ಮಿಲ್ ಮನೆಯ ಪಕ್ಕಕ್ಕಿದ್ದ ಗೂಡಂಗಡಿಯಲ್ಲಿ ನಮಗೆ ಬೋಟಿಗಳು ಸಿಗುತ್ತಿದ್ದವು. ರೂಬು .. ರೂಬು ಅನ್ನುತ್ತಾ ಚಾಟಿ ಹಿಡಿದುಕೊಂಡು ಹೊಡೆದುಕೊಳ್ಳುತ್ತಿದ್ದ ಗಂಡಸರು, ಅವರ ಹಿಂದೆ ರೂಬು ರೂಬು ಬಾರಿಸುವ ಹೆಂಗಸು, ಅವಳ ಕತ್ತಿನಲ್ಲಿ ಕಂಕುಳಲ್ಲಿ ನೇತಾಡುತ್ತಿದ್ದ ಮಕ್ಕಳು ನಮ್ಮ ಕುತೂಹಲ ಖನಿಗಳಾಗಿದ್ದರು. ಬಾಲ್ಯದಿಂದ ನಾವು ಭಾರಿ ಭಯಪಟ್ಟು ಕೇಳುತ್ತಿದ್ದುದು ಮಾಣಿಕ್ಕಮ್ಮನ ಕತೆ. ಆಕೆ ಗಂಡಸೂ ಅಲ್ಲ, ಹೆಂಗಸೂ ಅಲ್ಲವಂತೆ, ಆಕೆ ಒಂದು ಡ್ಯಾಮ್ ಕಟ್ಟಿಸುತ್ತಿದ್ದಾಳಂತೆ, ಅಲ್ಲಿಗೆ ಮಕ್ಕಳನ್ನು ಬಲಿಕೊಡಲು ಇಲ್ಲೆಲ್ಲಾ ಬಂದು ಹುಡುಕುತ್ತಿದ್ದಾಳಂತೆ ಹೀಗೆ, ಅವಳ ಕತೆ ಸಾಗುತ್ತಿತ್ತು. ಬಿರುಬಿಸಿಲು ನೆತ್ತಿಮೇಲೆ, ಮಕ್ಕಳ ಮನಸು ಬೀದಿಮೇಲೆ ಆಡಲು. ಕಾಲು ಬಿರಿದು, ರಕ್ತ ಚಿಮ್ಮಿದರೂ ಬೇಕಾದ ಆಟಗಳನ್ನಾಡಲು ಹಳ್ಳಿಯ ರಸ್ತೆಗಳಲ್ಲಿ ಸ್ವಾತಂತ್ರ್ಯವಿತ್ತು. ಎತ್ತಿನಗಾಡಿಗಳು, ಒಂದೋ ಎರಡೋ ಬೈಕ್ ಬಿಟ್ಟಾರೆ ಊರ ರಸ್ತೆ ನೆಮ್ಮದಿಯಾಗಿರುತ್ತಿತ್ತು. 00==00

ಸ್ವಗ್ರಾಮದ ಸೊಬಗು
bottom of page