ಸ್ಥಿತಪ್ರಜ್ಞ
ನೀನು ಹೊರಟಿದ್ದಂತು ಖರೆ ಯಾಕೆ ಹೊರಟೆ ಎಂದು ನಾನು ಕೇಳಲೇ ಇಲ್ಲ ಹೊರಟ ಬಸ್ಸಿನ ಹಿಂದೆ ಓಡಿದ ನೆನಪಿಲ್ಲ ತುರ್ತಿನಲ್ಲಿರುವವರನ್ನು ತಡೆಯುವುದಿಲ್ಲ ನಾನೆಂದೂ ದಾರಿಗಳು ನೂರಾರಿವೆ ಆಗಸದಲ್ಲಿ ಬಿತ್ತರಗೊಂಡ ಮೋಡಗಳು ಎಂಥದೋ ಗಾಳಿ ಬಂತೆಂದು ಹೊರಟಂತೆ ನಿಜದ ನಿಲುವಿನ ನಿಲುಗಡೆ ಇಲ್ಲದಂತೆ ಗೈರು ಹಾಜರಾಗಿವೆ! ದಾರಿ ನನ್ನದಾದರೆ ನನಗೆ ಮಾತ್ರ ಕಾಣುತ್ತದೆ ಮುಂದಿನ ಪ್ರಭಾವಲಯ ಇಟ್ಟ ಹೆಜ್ಜೆಗಳ ಬೆರಳುಗಳಿಗೆ ದೃಷ್ಟಿ ನೇರವಿರುತ್ತದಂತೆ ಲಂಗರು ಹಾಕಿದ ಹಡಗಿಗೆ ದಿಕ್ಸೂಚಿಗೆ ಅಂಟಿಕೊಳ್ಳುವ ಗರ್ಜಿಲ್ಲ ನಿನ್ನ ಹೆಜ್ಜೆಗಳು ಮೂಡುವ ಹಾದಿ ಖಂಡಿತಾ ನಿನ್ನದೇ.. ಅದು ನಿನ್ನ ಜೊತೆಗಿರುತ್ತದೆ ಸದಾ ಖಾಸಗಿತನದ ನೆರಳಂತೆ! ಹುಡುಕಾಟದ ಇರುವೆಗೆ ನಡೆದದ್ದೇ ದಾರಿ ನಿಂತದ್ದೇ ಮನೆ ರಸ್ತೆ ರಸ್ತೆಗಳ ನಡುವೆ ಅಲ್ಲಲ್ಲಿ ಮುರ್ಕಿ ಸರ್ಕಲ್ಲುಗಳ ಲಯಬದ್ಧ ನಿಲುಗಡೆ ಇದೆ. ಸದಾ ಆಚೀಚೆ ತಿರುಗಾಡುವವರು ತಮ್ಮದೇ ದಾರಿಗಳ ಹುಡುಕಾಟದಲ್ಲಿ ಕಳೆದು ಹೋದಂತಿದೆ ಯೋಚನೆಯೇ ಮಾಡಲಾಗದಂತ ತಿರುವುಗಳು ತಟಕ್ಕನೇ ಎದುರಾದರೆ ಅವರನ್ನು ದೇವರೇ ಕಾಪಾಡಲಿ. ಹಾದಿ ತೋರುವ ಅಂಬೇಡ್ಕರ್ ಪ್ರತಿಮೆ ಹಾಗೇ ಇದೆ ಬದುಕಿನ ದಾರಿಯ ತುಂಬ ಇರುವ ಮೈಲುಗಲ್ಲುಗಳು ಹದವರಿತ ನಡೆನುಡಿಗೆ ಜೀವಂತ ಸಾಕ್ಷಿ! ಫಾಲ್ಗುಣ ಗೌಡ, ಅಚವೆ ಫಾಲ್ಗುಣ ಗೌಡ ಇವರು ಮೂಲತಃ ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಅಚವೆಯವರು. ಪಿ.ಎಮ್. ಜ್ಯೂನಿಯರ್ ಅಂಕೋಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ. ಅವರ ಕವನ ಸಂಕಲನ ‘ಮಾಮೂಲಿ ಮಳೆಯಲ್ಲ’ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆಗೊಂಡಿದೆ. ಅದೇ ರೀತಿ ಅವರ ಪ್ರಬಂಧ ಸಂಕಲನ ‘ಅಶಾಂತ ಕಡಲು ಪ್ರಶಾಂತ ಮುಗಿಲು’ ಕೃತಿಯು ರಾಘವೇಂದ್ರ ಪ್ರಕಾಶನದಿಂದ ಪ್ರಕಟಣೆಗೊಂಡಿದೆ. ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಇವರ ಕೃತಿಗೆ ಬಹುಮಾನ ದೊರಕಿದೆ. ಗಂಭಿರವಾದ ವಿಚಾರಗಳ ನೆಲೆಯಲ್ಲಿ ಸ್ಥಿತ ಪ್ರಜ್ಞೆತೆಯನ್ನು ಕಂಡುಕೊಳ್ಳುವ ಅವರ ಪ್ರಸ್ತುತ ಕವನ ತಮ್ಮ ಓದಿಗಾಗಿ.