top of page

ಸುಡದ ದೀಪ

ದೀಪ ಸುಡುವುದೇ ಇಲ್ಲ ಎಂದೂ/ ಮುಟ್ಟದಾ ಹೊರತು/ ಯಾರಿಗೂ ಅದಕೇನೂ ಸುಡುವ ಹಂಬಲವಿಲ್ಲ! ಮೇಲೆ ಬಿದ್ದರೆ ಯಾರೋ,ಬಿಸಿ ತಪ್ಪೋದಿಲ್ಲ! ದೀಪ ಸುಡುವುದೇ ಇಲ್ಲ ಎಂದೂ...... ಉರಿದುಕೊಂಡರೆ ತಾನು ಲೋಕಕ್ಕೇ ಬೆಳಕು! ಆರಿಸಲಿಕೆ ಬಂದರೆ ಒಳಗಿದ್ದು ಹುಳುಕು! ನಂದಿ ಹೋಹುದು ಬತ್ತಿ ನಿಲ್ಲಲಾಗದೆ ನೆತ್ತಿ, ಏನ ಬಯಸದ ದೀಪ ನಂದಿಸುವ ಕೆಲಸ, ತರವಲ್ಲ,ಬೆಳಕಿರಲಿ ಕತ್ತಲೆಯ ಸುತ್ತಿ, ದೀಪ ಸುಡುವುದೇ ಇಲ್ಲ ಎಂದೂ..... ಹಚ್ಚಿಟ್ಟು ಹೋದವರೊ ಯಾರೆಂದೇ ಅರಿಯ! ಊದಿ ಹರಡಲುಬಹುದೇ ಕತ್ತಲೆಯ ಹುಳಿಯ? ಬೆಳಕಿನ ಸವಿಯಿರಲಿ ನಿಶೆ ಹುಳಿಯ ನೆಕ್ಕಿ, ನಡೆದಿರಲಿ ನರ ಬಾಳು ಕೆಲಸವನೆ ಹೆಕ್ಕಿ, ದೀಪ ಸುಡುವುದೇ ಇಲ್ಲ ಎಂದೂ...... ಲೋಕ ಬೆಳಗುವ 'ಬೆಳಕು', ಅಡಿ ಬೆಳಗದಲ್ಲ! ಉರಿವನಕ ತಳದಲ್ಲಿ ತಮವಿಹುದಲ್ಲ! ಮತ್ತೊಂದು ದೀವಿಗೆಯ ಉರಿಸುತ್ತ ಸನಿಹ, ಉರಿವ ದೀಪದ ಪಾದ ಬೆಳಗಬಹುದಲ್ಲ! ದೀಪ ಸುಡುವುದೇ ಇಲ್ಲ ಎಂದೂ...... ಗಣಪತಿ ಗೌಡ ಗಣಪತಿ ಗೌಡ ಅವರು ಅಂಕೋಲಾ ತಾಲೂಕಿನ ಹೊನ್ನಳ್ಳಿಯವರು.ಅಂಕೋಲೆಯ ಅವರ್ಸಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.ಕವನ,ಕತೆ, ವಿಮರ್ಶೆಯ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯು ಪರಿಚಿತರು.ಅವರ ಕವನ ನಿಮ್ಮ ಓದಿಗಾಗಿ .ಸಂಪಾದಕ

ಸುಡದ ದೀಪ
bottom of page