ಸುಗಮ ದಾಂಪತ್ಯಕ್ಕೆ ಸಲಹೆ
ದಾಂಪತ್ಯ ಸುಗಮವಾಗಲು ಜಗಳ ಮಾಡಿ ಗಂಡ ಹೆಂಡಂದಿರಿಗೊಂದು ಸಲಹೆ ************************************"( ಹರಟೆ) ಉತ್ತರ ಪ್ರದೇಶದ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡ ಮದುವೆಯಾಗಿ ಹದಿನೆಂಟು ತಿಂಗಳುಗಳಾದರೂ ಒಮ್ಮೆಯೂ ಜಗಳವಾಡಿಲ್ಲ, ಸಿಟ್ಟು ಮಾಡಿಲ್ಲ ಎಂದು ಕೋಪಿಸಿಕೊಂಡು ಡೈವೋರ್ಸ್ ಕೇಳಿ ಕೋರ್ಟಿಗೆ ಹೋಗಿದ್ದಳಂತೆ. ಆದರೆ ನ್ಯಾಯಾಲಯವು ಅವಳ ಬೇಡಿಕೆ ತಿರಸ್ಕರಿಸಿತಂತೆ. ಛೆ, ಛೆ, ಹಾಗೆ ತಿರಸ್ಕರಿಸಿದ್ದು ನನ್ನ ದೃಷ್ಟಿಯಿಂದ ಸರಿಯಲ್ಲ. ಅವಳ ಬೇಡಿಕೆಯಲ್ಲಿ ತಪ್ಪೇನಿಲ್ಲ ಎಂದು ನನ್ನ ಭಾವನೆ. ಒಂದು ದಿನವೂ, ಒಂದು ಸಲವೂ ಜಗಳ ಮಾಡಿಲ್ಲ ಎಂದಾದರೆ ಅದೆಂಥ ಸಂಸಾರ, ಅವನೆಂಥ ಗಂಡ? ಹೆಂಡತಿಯೊಂದಿಗೆ ಜಗಳ ಮಾಡುವುದು ಹಾಗಿರಲಿ, ಸಿಟ್ಟೂ ಮಾಡಲಾರದವ ಗಂಡನಾಗಲು ಯೋಗ್ಯನಲ್ಲ ಮತ್ತು ಹೆಂಡತಿಗೆ ಅದೊಂದು ನೀರಸ ದಾಂಪತ್ಯ ಎಂದು ಅನಿಸಿದ್ದರೆ ಅದು ಅವಳ ತಪ್ಪಲ್ಲವೇ ಅಲ್ಲ. "ಗಂಡ ಹೆಂಡಿರ ಜಗಳ ಉಂಡು ಮಲಗುವತನಕ" ಎನ್ನುವುದು ಬಹಳ ಸನಾತನವಾದ ಗಾದೆ. ಗಾದೆ ವೇದಕ್ಕೆ ಸಮ ಎನ್ನುತ್ತಾರೆ. ಅಂದರೆ ಗಾದೆಯನ್ನು ಅಲಕ್ಷಿಸುವುದು ವೇದವನ್ನೇ ಅಲಕ್ಷಿಸಿದಂತೆ. ಎಟಲೀಸ್ಟ್ ಆ ಗಾದೆಗಾದರೂ ನಾವು ಕಿಮ್ಮತ್ತು ಕೊಟ್ಟು ಉಂಡು ಮಲಗುವ- ತನಕವಾದರೂ ಜಗಳ ಮಾಡಬೇಕಾದ್ದು ನ್ಯಾಯ. ಇಲ್ಲವಾದರೆ ಮಲಗಿ ಏಳುವತನಕವಾದರೂ ಜಗಳ ಮಾಡಲಿ. ಒಟ್ಟಿನಲ್ಲಿ ಮದುವೆಯಾದ ನಂತರ ಗಂಡ ಹೆಂಡತಿ ಜಗಳವನ್ನೇ ಮಾಡದೇ ಇರೋದು ದಾಂಪತ್ಯ ಧರ್ಮಕ್ಕೆ ವಿರೋಧವಾದುದು ಎನ್ನುವುದು ನಮ್ಮಂಥವರ ಅನುಭವದಿಂದ ಹೇಳುವ ಮಾತು. ಅನುಭವಿಗಳು ಇದನ್ನು ಅಲ್ಲಗಳೆಯಲಾರರು ಎಂಬ ನಂಬಿಕೆ ನನ್ನದು. ವಾಸ್ತವವಾಗಿ ದಾಂಪತ್ಯದ ಸೊಗಸು ಸ್ವಾರಸ್ಯ ಇರುವುದೇ ಗಂಡ ಹೆಂಡತಿಯ ಜಗಳದಲ್ಲಿ. ದಿವಸಕ್ಕೊಮ್ಮೆಯಾದರೂ ಪರಸ್ಪರ ಬಡಿದಾಡಿಕೊಂಡರೆ ಪ್ರೀತಿ ಇನ್ನಷ್ಟು ಹೆಚ್ಚುತ್ತದೆನ್ನುವವರೂ ಇದ್ದಾರೆ. ಬಹಳ ಮಟ್ಟಿಗೆ ಅದು ನಿಜ. ಅದರಲ್ಲೂ ಬಯ್ಗಳಲ್ಲಿ ಅದೆಷ್ಟು ವೈವಿಧ್ಯತೆ ಮತ್ತು ಸ್ವಾರಸ್ಯ ಇದೆ ಎನ್ನುವುದನ್ನು ಬಲ್ಲವರೇ ಬಲ್ಲರು. ಹೆಂಡತಿ ಧಾರೆ ಧಾರೆಯಾಗಿ ಬಯ್ಯುತ್ತಿದ್ದರೆ ಕೆಲವು ಗಂಡಂದಿರು ಅದನ್ನು ಕೇಳುತ್ತ ಕೇಳುತ್ತ ಮೂಕಾನಂದ ಅನುಭವಿಸುತ್ತಿರುತ್ತಾರೆ. ಗಂಡ ಕೆಟ್ಟದ್ದಾಗಿ ಬಯ್ದಾಗಲೂ ಹೆಂಡತಿ ಆ ಸುಖವನ್ನು ಅನುಭವಿಸುತ್ತಾಳೆ. ಇದು ಪರಸ್ಪರ ತಿಳಿವಳಿಕೆ ಮತ್ತು ಹೊಂದಾಣಿಕೆ ಮೇಲೆ ಬರುವಂತಹದು. ನನಗನಿಸುವಂತೆ ೧೮ ತಿಂಗಳು ಜಗಳವೇ ಆಡದೆ ಆ ಹೆಂಡತಿಗೆ ಅದೆಷ್ಟು ಬೋರ್ ಆಗಿರಬೇಡ, ಪಾಪ! ಡೈವೋರ್ಸ್ ಕೇಳಿದ ಅವಳಿಗೆ ನನ್ನ ಬೆಂಬಲ ಇದ್ದೇಇದೆ ಮತ್ತು ಜಗಳವೇ ಆಡಲು ಬಾರದ ಆ ಗಂಡನ ಬಗ್ಗೆ ಅನುಕಂಪವೂ ಇದೆ. ಏನೇ ಇರಲಿ, ನಾನು ಹೊಸದಾಗಿ ಮದುವೆಯಾಗುವ ಗಂಡು ಹೆಣ್ಣಿಗೆ ನೀಡುವ ಅಮೂಲ್ಯ ಸಲಹೆ ಏನೆಂದರೆ ಮದುವೆಯಾಗುವ ಮೊದಲೇ ಜಗಳವೆಂಬ ವಿದ್ಯೆಯನ್ನು ಕಲಿತುಕೊಳ್ಳಿ.( ಅದು ನಮ್ಮ ಪ್ರಾಚೀನರು ಹೇಳಿದ ೬೪ ವಿದ್ಯೆಗಳಲ್ಲೊಂದು ಎನ್ನುವುದನ್ನು ಮರೆಯಬೇಡಿ) . ಎರಡನೆಯದಾಗಿ ಮದುವೆಯಾದ ನಂತರ ಪ್ರೀತಿಸುವ ಜತೆಗೆ ಜಗಳವನ್ನೂ ಆಡಲು ಮರೆಯಬೇಡಿ. ಜಗಳ ಎನ್ನುವುದು ಬಾಳಿಗೊಂದು ಇಂಧನವಿದ್ದ ಹಾಗೆ. ಬದುಕು ನೀರಸವಾಗಬಾರದು ಎಂದಿದ್ದರೆ ಆಗಾಗ ನೆನಪು ಮಾಡಿಕೊಂಡು ಜಗಳ ಮಾಡಿ. ಅದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. - ಎಲ್. ಎಸ್. ಶಾಸ್ತ್ರಿ ಹಿರಿಯ ಸಾಹಿತಿಗಳು ಅನುಭವಿಗಳು ಆದ ಶ್ರೀ ಎಲ್.ಎಸ್.ಶಾಸ್ತ್ರಿ ಅವರ ಸುಗಮ ದಾಂಪತ್ಯ ಜೀವನ ಕುರಿತಾದ ಲೇಖನ ನಿಮ್ಮ ಓದಿಗಾಗಿ. ಸಂಪಾದಕ