top of page

ಸಾಹಿತ್ಯ ಕ್ಷೇತ್ರದ ನನ್ನಆರು ದಶಕಗಳು

ಸಾಹಿತ್ಯಿಕ ವಾತಾವರಣ ಸೃಷ್ಟಿ ********* ನಾನು ಮತ್ತು ನನ್ನ ಸಮಕಾಲೀನ ಬರೆಹಗಾರರು ಬರೆಯಲು ಆರಂಭಿಸಿದ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿರಿಯರಾದ ಜಿ. ಆರ್. ಪಾಂಡೇಶ್ವರ, ಪ್ರೊ. ಬಿ. ಎಚ್. ಶ್ರೀಧರ್, ಗೌರೀಶ ಕಾಯ್ಕಿಣಿ, ಸು. ರಂ. ಯಕ್ಕುಂಡಿ , ಪ್ರಿ. ಎಲ್. ಟಿ. ಶರ್ಮಾ, ಡಾ. ಎಲ್. ಆರ್. ಹೆಗಡೆ, ಡಾ. ಕೆ. ಜಿ. ಶಾಸ್ತ್ರಿ, ಎಂ. ಅಕಬರ ಅಲಿ ಮೊದಲಾದವರು ನಮಗೆ ಮಾರ್ಗದರ್ಶಕರಾಗಿ ದೊರಕಿದ್ದರು. ಕಿರಿಯರನ್ನು ಪ್ರೋತ್ಸಾಹಿಸುವ ದೊಡ್ಡ ಗುಣ ಅವರಲ್ಲಿತ್ತು. ಅವರ ಭಾಷಣಗಳನ್ನು ಕೇಳುತ್ತ, ಅವರ ಪುಸ್ತಕ ಲೇಖನಗಳನ್ನು ಓದುತ್ತ ನಾವು ನಮ್ಮ ಸಾಹಿತ್ಯಾಸಕ್ತಿ ಬೆಳೆಸಿಕೊಂಡೆವು. ಓದುವ, ಬರೆಯುವ ಅಭಿರುಚಿ ನಮ್ಮಲ್ಲಿ ಉಂಟಾಗಲು ಅವರೇ ಕಾರಣ. ಆಗ ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮ ಸಭೆ ಸಮ್ಮೇಳನಗಳೊಂದನ್ನೂ ನಾವು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎರಡನೇ ಹಂತದಲ್ಲಿ ನನ್ನ ಹಿರಿಯ ಸಹೋದರ ಗಂಗಾಧರ ಶಾಸ್ತ್ರಿ, ಗೋಪಾಲಕೃಷ್ಣ ನಾಯಕ, ಗೋಪಾಲಕೃಷ್ಣ ಕೇರೀಮನೆ, ಭರತನಹಳ್ಳಿ ನಾ. ಸು. ಪಿ. ವಿ. ಶಾಸ್ತ್ರಿ ಕಿಬ್ಬಳ್ಳಿ ಮೊದಲಾದವರಿದ್ದರು. ಮೂರನೆಯ ಹಂತದಲ್ಲಿ ನಾನು, ಆರ್. ವಿ. ಭಂಡಾರಿ, ಜಿ. ಎಸ್. ಅವಧಾನಿ ಮೊದಲಾದವರು. ಕುಮಟಾ, ಅಂಕೋಲಾ, ಸಿರ್ಸಿ ಮೊದಲಾದ ಕಡೆ ಸಾಕಷ್ಟು ಸಲ ಒಟ್ಟಾಗಿ ಹೋಗುತ್ತಿದ್ದೆವು. ಅಲ್ಲಿಯವರು ನಮ್ಮ ಹೊನ್ನಾವರಕ್ಕೆ ಬರುತ್ತಿದ್ದರು. ಆಗೆಲ್ಲ ಪರಸ್ಪರ ಸೌಹಾರ್ದಯುತವಾದ ವಾತಾವರಣ ಇತ್ತು. ಗುಂಪುಗಾರಿಕೆ, ಜಾತೀಯತೆ ಇರಲಿಲ್ಲ. ೧೯೬೫ ರಲ್ಲಿ ಕಾರವಾರದಲ್ಲಿ ೪೫ ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಡೆಂಗೋಡ್ಲು ಶಂಕರ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದಾಗ ಕಸಾಪ ಜಿಲ್ಲಾ ಸಮಿತಿಗೆ ಎನ್. ಎಸ್. ಹೆಗಡೆ ಕುಂದರಗಿ ಅಧ್ಯಕ್ಷರು. ಜಿ. ಪಿ. ನಾಯಕರು ಮತ್ತು ನಾನು ಜಿಲ್ಲಾ ಗೌರವ ಕಾರ್ಯದರ್ಶಿಗಳು. ನಾಡಿನ ಹಲವು ಹಿರಿಯ ಸಾಹಿತಿಗಳಿಂದ ಕೂಡಿದ ಸಮ್ಮೇಳನ. ನನಗೆ ಆಗ ೨೧ ವರ್ಷ. (ಅದಕ್ಕಿಂತ ಮೊದಲು ವಿ. ಸೀ. ಅಧ್ಯಕ್ಷತೆಯಲ್ಲಿ ಕುಮಟಾದಲ್ಲಿ ಸಮ್ಮೇಳನ ನಡೆದಿತ್ತು.). ಇವೆಲ್ಲ ನಮ್ಮ ಸಾಹಿತ್ಯದ ಆಸಕ್ತಿಗೆ ನೀರೆರೆದು ಬೆಳೆಸಿದ ಸಂದರ್ಭಗಳು. ಮೊದಲೇ ಹೇಳಿದಂತೆ ನಮ್ಮ ಮನೆಗೆ ಅಂದಿನ ಎಲ್ಲ ಖ್ಯಾತ ಸಾಹಿತಿಗಳೂ ಆಗಾಗ ಬರುತ್ತಿದ್ದರು. ೧೯೬೧ ರಲ್ಲಿ ಶೃಂಗಾರ ಮಂಟಪ ಸಂಸ್ಥೆ ಸ್ಥಾಪನೆಯಾದ ನಂತರವಂತೂ ಶೃಂಗಾರ ಪತ್ರಿಕೆ, ನಾಟ್ಯಸಂಘ, ಪ್ರಕಾಶನ, ಯಕ್ಷಗಾನ ವೇದಿಕೆ, ಸಾಹಿತ್ಯ ವೇದಿಕೆ ಮೊದಲಾದ ಕವಲುಗಳಲ್ಲಿ ನಮ್ಮ ಚಟುವಟಿಕೆಗಳು ಹರಡಿಕೊಂಡವು. ದ. ರಾ. ಬೇಂದ್ರೆ, ಶಿವರಾಮ ಕಾರಂತ, ಅನಕೃ, ಬೀಚಿ, ಕೃಷ್ಣಮೂರ್ತಿ ಪುರಾಣಿಕ,‌ ಗೋಪಾಲಕೃಷ್ಣ ಅಡಿಗ, ಭಾರತೀಸುತ, ನಾ. ಡಿಸೋಜಾ ಮೊದಲಾದ ಸಾಹಿತಿಗಳನ್ನು, ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ರಾಜಗುರು, ಪಂ. ಚಂದ್ರಶೇಖರ ಪುರಾಣಿಕ, ಮಾಯಾರಾವ್ ಮೊದಲಾದ ಕಲಾವಿದರನ್ನು ಜಿಲ್ಲೆಗೆ ಕರೆಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಇದು ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಬೆಳೆಸುವ ದೃಷ್ಟಿಯಿಂದ ಬಹಳ ಮಹತ್ವದ ಬೆಳವಣಿಗೆಯೆನಿಸಿತು. ಅನಕೃಷ್ಣರಾಯರು ಹೊನ್ನಾವರಕ್ಕೆ ಬಂದಾಗ ಅವರಿಗೆ ನಮ್ಮ ಜಿಲ್ಲೆಯ ಯಕ್ಷಗಾನ ಕಲಾಪ್ರತಿಭೆಗಳನ್ನು ಪರಿಚಯಿಸುವ ಕಲಾಪ್ರದರ್ಶನವೇರ್ಪಡಿಸಿದ್ದರಿಂದ ಉತ್ತರ ಕನ್ನಡಕ್ಕೂ ರಾಜ್ಯ ಪ್ರಶಸ್ತಿ ರಾಷ್ಟ್ರಪ್ರಶಸ್ತಿಗಳು ದೊರಕಲಾರಂಭಿಸಿದವು. ಜಿಲ್ಲೆಗೆ ಕೆಲವರಿಂದ ಆಗುತ್ತಿದ್ದ ಅನ್ಯಾಯ ದೂರವಾಯಿತು. ‌ ಈ ಮೂಲಕ ನನಗೆ ಬೇಂದ್ರೆ, ಅನಕೃ, ಬೀಚಿ , ಕಾರಂತ, ಪುರಾಣಿಕ , ಅಡಿಗ , ಕಣವಿ, ಮೊದಲಾದ ಸಾಹಿತಿಗಳ ಸಂಪರ್ಕ ದೊರಕುವಂತಾಯಿತು. ನಾನೊಬ್ಬ ಬರೆಹಗಾರನಾಗುವದಕ್ಕೆ ಇವೆಲ್ಲ ಹಿನ್ನೆಲೆ ಕಾರಣವಾಯಿತು. ಈ ಹಿರಿಯ ಸಾಹಿತಿಗಳ ಒಡನಾಟದಲ್ಲಿ ಬಂದ ಕೆಲವು ಅನುಭವಗಳನ್ನು ಮುಂದಿನ ಭಾಗದಲ್ಲಿ ಹಂಚಿಕೊಳ್ಳುತ್ತೇನೆ. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬಂತೆ ಹಿರಿಯರೊಡನೆ ದೊರಕಿದ ಆ ಅನುಭವಗಳ ಸಿಹಿ ಸ್ವಾರಸ್ಯ ಅಪರೂಪದ್ದು. - ಎಲ್. ಎಸ್. ಶಾಸ್ತ್ರಿ

ಸಾಹಿತ್ಯ ಕ್ಷೇತ್ರದ ನನ್ನಆರು ದಶಕಗಳು
bottom of page