top of page

ಸಾಹಿತ್ಯದ ವ್ಯಾಖ್ಯೆಮೌನ ಯುಗದ ಸಾಹಿತ್ಯ

ಮನುಷ್ಯನ ಜೀವನದ ಗತಿ ಬದಲಾದಂತೆ ಸಾಹಿತ್ಯದ ಕುರಿತ ವ್ಯಾಖ್ಯೆ ಕೂಡ ಕಾಲಕಾಲಕ್ಕೆ ಬದಲಾಗುತ್ತಿರುವುದು ಚೋದ್ಯದ ಸಂಗತಿಯಾಗಿದೆ. ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಮೊದಲಾದವರ ಕಾಲದಲ್ಲಿ, ಅಂದರೆ ಹಳಗನ್ನಡ ಮತ್ತು ನಡುಗನ್ನಡದ ಕಾಲದಲ್ಲಿ ಸಾಹಿತ್ಯವು ದೀರ್ಘವಾಗಿರಬೇಕು, ಅದರ ವಸ್ತು ಉದಾತ್ತವಾಗಿರಬೇಕು, ಹೇಳುವ ಕ್ರಮ ಗಂಭೀರವಾಗಿರಬೇಕು, ಭಾಷೆ ನೆಲಮಟ್ಟದಿಂದ ಮೇಲಿರಬೇಕು, ಛಂದಸ್ಸನ್ನು ಒಳಗೊಂಡಿರಬೇಕು ಎಂಬಿತ್ಯಾದಿ ನಿಯಮಗಳಿದ್ದವು. ನವೋದಯದ ಕಾಲದಲ್ಲಿ ವಸ್ತು ವಿಷಯ, ಸ್ವರೂಪ, ಭಾಷೆ, ಶೈಲಿ ಎಲ್ಲವೂ ಬದಲಾಯಿತು. ನವ್ಯದ ಕಾಲದಲ್ಲಿ ವ್ಯಕ್ತಿಯ ಅಂತರಂಗ ಶೋಧನೆಯೇ ಮುಖ್ಯವಾಯಿತು. ಅದಕ್ಕೆ ತಕ್ಕಂತೆ ಹೇಳುವ ಕ್ರಮದಲ್ಲೂ ಬದಲಾವಣೆ ಬಂತು. ಬಂಡಾಯ ಸಮಾಜಮುಖಿ ಆಯಿತು. ಅದಕ್ಕೆ ಕಾವ್ಯದ ಭಾಷೆಯೂ ಬೇಡವಾಗಿ ಕೇವಲ ಗದ್ಯದಲ್ಲಿ ಮಾತಾಡಿತು. ಬಂಡಾಯೋತ್ತರದಲ್ಲಿ ಸಾಹಿತ್ಯದ ಸಮಾಜಮುಖತೆ ಎಷ್ಟು ಹೆಚ್ಚಾಯಿತೆಂದರೆ ಮಾಧ್ಯಮಕ್ಕೂ ಸಾಹಿತ್ಯಕ್ಕೂ ಅಂತರವೇ ಉಳಿಯಲಿಲ್ಲ. ಸಮಾಜಮುಖೀ ಸಾಹಿತ್ಯವು ಹಾದಿಬೀದಿಗಳಲ್ಲಿ ಗಲ್ಲಿ ಓಣಿಗಳಲ್ಲಿ ಓಡಾಡಿ ಜನಬದುಕಿನ ಸಹವರ್ತಿ ಆಯಿತು. ಇದೀಗ ಡಿಜಿಟಲ್ ಯುಗದಲ್ಲಿ (ಅಂದರೆ ಮೌನಯುಗದಲ್ಲಿ, ಪರಸ್ಪರ ಮಾತು-ಸಂವಹನ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ) ಅಪರೂಪವಾಗಿ 'ಮಾತಾಡುವ' ವಿಷಯಗಳೆಲ್ಲವೂ ಸಾಹಿತ್ಯ ಆಗುತ್ತಿರುವುದು ಚೋದ್ಯದ ಸಂಗತಿಯಾಗಿದೆ. ಆಧುನಿಕ ಸಮಾಜ ಜೀವನದಲ್ಲಿ ಪ್ರಜಾಪ್ರಭುತ್ವದಂತಹ ವ್ಯವಸ್ಥೆ, ಸಾರ್ವತ್ರಿಕ ಶಿಕ್ಷಣ ಮತ್ತು ವಿಪರೀತ ತಾಂತ್ರಿಕ ಆವಿಷ್ಕಾರಗಳಾಗಿ ವಿಜ್ಞಾನ ತಂತ್ರಜ್ಞಾನದ ಕೈ ಮೇಲಾಗಿರುವುದರಿಂದ ಹೀಗಾಗಿದೆ. ಇದು ಸಾರ್ವತ್ರಿಕ ಅಭಿವ್ಯಕ್ತಿಯ ಯುಗ. ಇದು ಈಗಿನ ನಮ್ಮ ಬದುಕಿನ ಕ್ರಮ. ಲೋಕಜೀವನವೇ ಹೀಗಿರಲಾಗಿ, ಸಾಹಿತ್ಯವು ಅದರಿಂದ ಹೊರತಾಗಿರಬೇಕೆಂದು ನಿರೀಕ್ಷಿಸುವಂತಿಲ್ಲ. ಪಾರಂಪರಿಕ ವ್ಯವಸ್ಥೆಯಲ್ಲಿ ಸಾಹಿತ್ಯವನ್ನ ಓದಿ, ಅರ್ಥೈಸಿಕೊಂಡು ಸಾಹಿತ್ಯ ಬರೆಯುತ್ತಿದ್ದವರಿಗೆ ಈ ಬೆಳವಣಿಗೆಯಿಂದ ಆಶ್ಚರ್ಯವಾಗಬಹುದು. ಆದರೆ ಇದು ಕಾಲದ ನಡೆ. ನದಿ ಹರಿಯುವ ಪ್ರಕ್ರಿಯೆ. ಮುಂದೆ ಮನುಷ್ಯ ಸಂಬಂಧಗಳು ಗೌಣವಾಗಿ, ಭಾವನೆಗಳು ವೈಯಕ್ತಿಕವಾಗಿ ವ್ಯಕ್ತವಾಗದೇ ಹೋಗಿ, ಸಂವಹನವು ತಾಂತ್ರಿಕ ಡಿಜಿಟಲ್ ರೂಪದಲ್ಲಿ ನಡೆಯಲಿಕ್ಕಿರುವುದರಿಂದ- ಆಗ ಮಾತಿನ ರೂಪದ ಅತಿ ಕಡಿಮೆ ಸಂವಹನವೇ 'ಸಾಹಿತ್ಯ' ಅನ್ನಿಸಿಕೊಳ್ಳಬಹುದು! ಬರೆದದ್ದೆಲ್ಲವೂ 'ವ್ಹಾವ್', 'ಗ್ರೇಟ್', 'ಅದ್ಭುತ' ಎಂದೆಲ್ಲ ಅನ್ನಿಸಿಕೊಳ್ಳಬಹುದು. ಬರೆದ ಎರಡು ಸಾಲು, ನಾಲ್ಕಕ್ಷರ ಶಿಲಾ ಶಾಸನಗಳಂತೆ ಜಗತ್ತಿನ ಅದ್ಭುತ ಸಾಹಿತ್ಯಗಳಾಗಿ ಉಳಿದುಕೊಳ್ಳಬಹುದು. ಆ ಲಕ್ಷಣಗಳನ್ನು ಈಗಿನ ತಾಂತ್ರಿಕ ಯುಗ ಮತ್ತು ಸಾಹಿತ್ಯಾಭಿವ್ಯಕ್ತಿಗಳು ತೋರಿಸಿಕೊಡುತ್ತಿವೆ. ಈ ಬೆಳವಣಿಗೆಯನ್ನು ನೋಡುತ್ತಿರುವುದೇ ಒಂದು ಚಂದ! -ಡಾ. ವಸಂತಕುಮಾರ ಪೆರ್ಲ

ಸಾಹಿತ್ಯದ ವ್ಯಾಖ್ಯೆಮೌನ ಯುಗದ ಸಾಹಿತ್ಯ
bottom of page