top of page

ಸಮುದ್ರ ಜಾನಪದ

ಡಾ. ಪೆರ್ಲರ ವಾರಾಂಕಣ ವಸಂತೋಕ್ತಿ – 12. ಸಮುದ್ರದ ಕುರಿತು ತಾನು ಹುಟ್ಟಿದಂದಿನಿಂದಲೂ ಮನುಷ್ಯ ಕುತೂಹಲಿಯಾಗಿದ್ದಾನೆ. ಆದರೆ ಅದರ ಒಡಲು ಅವನ ಕೈಗೆಟಕದೆ ನಿಗೂಢವಾಗಿರುವುದರಿಂದ ಹಲವು ಸಾವಿರ ವರ್ಷಗಳು ಕಳೆದರೂ ಸಮುದ್ರದ ಬಗ್ಗೆ ಅವನು ತಿಳಿದುಕೊಂಡಿರುವುದು ಅತ್ಯಲ್ಪ. ವಿಷ್ಣುವನ್ನು ಕ್ಷೀರಸಾಗರತನಯ ಎಂದು ಕರೆದರು. ಅಶ್ವತ್ಠದ ಎಲೆಯಲ್ಲಿ ಸಮುದ್ರದಲ್ಲಿ ಅವನು ತೇಲುತ್ತಿದ್ದಾನೆ ಎಂಬ ಕಲ್ಪನೆಯನ್ನು ನಮ್ಮ ಪೂರ್ವಿಕರು ಕೊಟ್ಟರು. ಸಮುದ್ರಮಥನದ ಕಥೆಯಂತೂ ಬಹು ಪ್ರಸಿದ್ಧ. ಮಂದರ ಪರ್ವತವನ್ನು ಕಡೆಗೋಲಾಗಿಸಿ ವಾಸುಕಿಯನ್ನು ಹಗ್ಗವಾಗಿಸಿ ಸರ್ಪದ ತಲೆಯ ಪಾರ್ಶ್ವದಲ್ಲಿ ರಕ್ಕಸರು ಮತ್ತು ಬಾಲದ ಕಡೆಗೆ ದೇವತೆಗಳು ನಿಂತು ಸಮುದ್ರವನ್ನು ಕಡೆಯಲಾಯಿತು. ಮೊದಲಿಗೆ ಹಾಲಾಹಲ ಬಂತು. ಅದು ಲೋಕವನ್ನು ಸುಡುತ್ತಿರಲಾಗಿ ಜೀವಜಾಲದ ರಕ್ಷಣೆಗಾಗಿ ಶಿವ ಅದನ್ನು ಕುಡಿದ. ವಿಷ ಹೊಟ್ಟೆಗೆ ಹೋಗುವ ಮುನ್ನವೇ - ಗಂಟಲಿಗೆ ಇಳಿಯುತ್ತಿದ್ದಂತೆ ಪಾರ್ವತಿ ಶಿವನ ಕುತ್ತಿಗೆಯನ್ನು ಅಮುಕಿ ಹಿಡಿದಳು. ವಿಷ ಹೊಟ್ಟೆಗಿಳಿಯದೆ ಗಂಟಲಲ್ಲೇ ಕರಗಿತು. ಹಾಗಾಗಿ ಶಿವ ನೀಲಕಂಠನಾದ. ಆಮೇಲೆ ಮಥನದ ಕ್ರಿಯಾ ಯಲ ಸಮುದ್ರದಿಂದ ಒಂದೊಂದಾಗಿ ಅಮೂಲ್ಯ ವಸ್ತುಗಳು ಎದ್ದು ಬಂದವು. ಲಕ್ಷ್ಮಿ, ನವರತ್ನಗಳು, ಧನ್ವಂತರಿ, ಐರಾವತ, ಪಾಂಚಜನ್ಯ, ಉಚ್ಛೈಶ್ರವಸ್ಸು, ಕೌಸ್ತುಭ, ವಜ್ರಾಯುಧ ಮತ್ತು ಕೊನೆಯಲ್ಲಿ ಅಮೃತ. ಓಷಧ ಎಂದರೆ ಸಮುದ್ರ. ಎಲ್ಲ ಔಷಧಿಗಳೂ ಸಮುದ್ರದಿಂದ ಲಭ್ಯವಾದವು. ಹಾಗಾಗಿ ಅದಕ್ಕೆ ಔಷಧ ಎಂಬ ಹೆಸರು. ಮನುಷ್ಯನ ಸ್ಮೃತಿಯಲ್ಲಿ ಸಮುದ್ರದ ಕುರಿತು ನೂರೆಂಟು ಕತೆಗಳಿವೆ. ಪುರಾಣಗಳ ರೂಪದಲ್ಲಿ, ಸಾಮತಿ- ದೃಷ್ಟಾಂತ- ಕತೆಗಳ ರೂಪದಲ್ಲಿ ಜ್ಞಾನವನ್ನು ಹಿಡಿದಿರಿಸಿಕೊಂಡ ಪರಂಪರೆ ನಮ್ಮದು. ಅಂದರೆ ಒಟ್ಟಿನಲ್ಲಿ ಸೃಷ್ಟಿಯ ಮೂಲವೇ ಜಲ ಅಥವಾ ಸಮುದ್ರ ಎಂಬುದು ತೀರ್ಮಾನದ ಮಾತು. ಭೂಮಿಯ ಮೂರು ಪಟ್ಟು ದೊಡ್ಡದಾಗಿರುವ ಸಮುದ್ರ ಮನುಷ್ಯನ ನಿರಂತರ ಕುತೂಹಲದ – ಅನ್ವೇಷಣೆಯ ಕೇಂದ್ರ. ಭೂಮಿಯ ಮೇಲಿರುವುದಕ್ಕಿಂತ ಹಲವು ಪಟ್ಟು ಹೆಚ್ಚು ಜೀವವೈವಿಧ್ಯಗಳಿರುವ ಕಡಲಿನ ಒಡಲು ಅನಲದ ಗಣಿಯೂ ಹೌದು. ಹಾಗಾಗಿ ಕಡಲಿಗೆ ವಡಬಾನಲ ಎಂಬ ಹೆಸರು ಅನ್ವರ್ಥಕವಾಗಿದೆ. ಮನುಷ್ಯನಿಗೆ ಆಹಾರದ ಪ್ರಮುಖ ಮೂಲ ಸಮುದ್ರವೇ ಆಗಿದೆ. ನಾಗರಿಕತೆಯ ಪೂರ್ವದಲ್ಲೇ ಮನುಷ್ಯ ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದಾನೆ. ಸಮುದ್ರದೊಂದಿಗಿನ ಅವನ ನಂಟು ಅಷ್ಟು ಹಳೆಯದು. ಸಮುದ್ರದಲ್ಲಿ ಸಾಗಲು ಅವನು ನಾನಾ ಬಗೆಯ ದೋಣಿಗಳನ್ನು ಆವಿಷ್ಕರಿಸಿಕೊಂಡಿದ್ದಾನೆ. ಸಮುದ್ರದಲ್ಲಿ ಸಿಗುವ ಸಾವಿರ ಬಗೆಯ ಮೀನುಗಳ ಬಗ್ಗೆ ಅವನಿಗೆ ಮಾಹಿತಿಯುಂಟು. ತಿಮಿಂಗಿಲದಂತಹ ಬೃಹತ್ ಜಲಚರ ಮನುಷ್ಯನೊಂದಿಗೆ ಮಿತ್ರತ್ವದಿಂದ ವರ್ತಿಸುವುದು ವಿಚಿತ್ರ ಅನಿಸಿದರೂ ಸತ್ಯ! ಸಮುದ್ರದಲ್ಲಿ ಹಾದಿತಪ್ಪಿದ ಮೀನುಗಾರರನ್ನು ಸುರಕ್ಷಿತವಾಗಿ ಅದು ದಡದ ವರೆಗೆ (ತಾನು ಮುಂದೆ ಹಾದಿ ತೋರಿಸುತ್ತ) ತಂದು ಬಿಟ್ಟ ಉದಾಹರಣೆಗಳುಂಟು. ಸಮುದ್ರದಲ್ಲಿ ತಿಮಿಂಗಿಲವು ಆಗೀಗೊಮ್ಮೆ ಮೀನುಗಾರರಿಗೆ ಕಾಣಿಸಿಕೊಂಡರೂ ಅವರಿಗೆ ಯಾವುದೇ ರೀತಿಯ ಹಾನಿಯನ್ನು ಅದು ಉಂಟುಮಾಡುವುದಿಲ್ಲ! ಸಸ್ಯಾಹಾರಿಯಾದ ತಿಮಿಂಗಿಲವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರು ಸಮುದ್ರದ ದೊಡ್ಡಪ್ಪ ಎಂದೇ ಸಂಬೋಧಿಸುವರು. ಸಮುದ್ರವಿಲ್ಲದೆ ಮಾರುತವಿಲ್ಲ. ಮಳೆಯಿಲ್ಲ, ಸಿಹಿನೀರಿಲ್ಲ ಮತ್ತು ಸಮುದ್ರದ ಉಪ್ಪಿಲ್ಲದೆ ಮನುಷ್ಯ ಆರೋಗ್ಯಪೂರ್ಣವಾಗಿ ಜೀವಿಸಲಾರ. ಹಾಗಾಗಿ ಜೀವಿಗಳ ಮೂಲಾಧಾರ ಸಮುದ್ರವೇ ಆಗಿದೆ. ಸಮುದ್ರದ ದಂಡೆಗೆ ಹೋದರೆ ಸ್ವಲ್ಪ ನೀರನ್ನು ಬೊಗಸೆಯಲ್ಲಿ ತೆಗೆದು ತಲೆಗೆ ಪ್ರೋಕ್ಷಿಸಿಕೊಳ್ಳಬೇಕೆಂಬುದು ಧಾರ್ಮಿಕ ನಂಬಿಕೆಯಾಗಿದೆ. ವರ್ಷಕ್ಕೊಮ್ಮೆ ಸಮುದ್ರಸ್ನಾನ ಮಾಡುವುದು ನಮ್ಮ ಧಾರ್ಮಿಕ ವಿಧಿಯೇ ಆಗಿದೆ. ಸಮುದ್ರದಿಂದ ಕುಡಿಯುವ ನೀರನ್ನು ಮತ್ತು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು ಇತ್ತೀಚೆಗಿನ ಜನಪದದ ಸಾಹಸವಾಗಿದೆ. ಸಮುದ್ರದ ನಲವತ್ತು ಸಾವಿರ ಅಡಿತಳದ ವರೆಗೆ ಸಾಗಿ ಸಂಶೋಧನೆ ನಡೆಸತಕ್ಕ ಅತ್ಯಾಧುನಿಕ ವಾಹನವನ್ನು ವಿಜ್ಞಾನಿಗಳು ಇತ್ತೀಚೆಗೆ ಸಂಶೋಧಿಸಿದ್ದಾರೆ. ಅಲ್ಲಿಗೆ ಸಮುದ್ರದ ಒಡಲನ್ನು ಪೂರ್ತಿಯಾಗಿ ನೋಡಿದಂತೆ ಆಗುತ್ತದೆ. ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗೆ ಅಂಜಬೇಕಾಗಿಲ್ಲ ಎಂಬುದನ್ನು ನಮ್ಮ ಬದುಕು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಸಮುದ್ರ ಜಾನಪದ ಎಂಬುದು ವಿಶೇಷ ಅಧ್ಯಯನದ ವಿಷಯ. ಅದು ಹೊಸ ಹೊಸ ವಸ್ತುವಿಷಯಗಳನ್ನು ಮೈಗೂಡಿಸಿಕೊಳ್ಳುತ್ತ ಬೇರೆ ಮಜಲುಗಳನ್ನು ಮುಟ್ಟುತ್ತಿದೆ. ಡಾ.ವಸಂತಕುಮಾರ ಪೆರ್ಲ ಆಲೋಚನೆ.ಕಾಂ ನ ಹೆಮ್ಮೆಯ ಅಂಕಣಕಾರ ನಾಮಾಂಕಿತ ಸಾಹಿತಿ ಡಾ.ವಸಂತಕುಮಾರ ಪೆರ್ಲ ಅವರ ' ಸಮುದ್ರ ಜಾನಪದ' ಎಂಬ ಅಂಕಣ ನಿಮ್ಮ ಓದಿಗಾಗಿ. 1989 ರಲ್ಲಿ ಸಮುದ್ರ ಜಾನಪದ ಎಂಬ ವಿಷಯದ ಬಗ್ಗೆ ಪೋಸ್ಟ ಡಾಕ್ಟರೇಟ ಮಾಡಲು ಸಿದ್ಧತೆ ನಡೆಸಿ ಡಾ.ಎಂ.ಚಿದಾನಂದ ಮೂರ್ತಿ ಅವರ ಜೊತೆ ಚರ್ಚೆ ಮಾಡಿದ್ದೆ ಆದರೆ ನಾನು ಮುಂದುವರಿಯಲು‌ಸಾಧ್ಯವಾಗಲಿಲ್ಲ. ಡಾ.ಪೆರ್ಲ ಅವರ ಲೇಖನ ಅದನ್ನು ಮತ್ತೆ ನೆನಪಿಸಿತು. ಸಂಪಾದಕ

ಸಮುದ್ರ ಜಾನಪದ
bottom of page