top of page

ಸಮಷ್ಟಿಯಲಿ ಕೆಲವರು
ಸಾಂಬಾರು ಬಟ್ಟಲಿನಲಿ ಕೊತ್ತಂಬರಿಯದೇ ಮೇಲುಗೈ ಏಳು ತಟ್ಟೆಗಳ ನಡುಮನೆಯಲ್ಲಿ ಸುತ್ತ ಪರಿವಾರದವರೊಂದಿಗೆ ಆಸೀನ ,ಘಮ್ಮೆನ್ನುವ ಘಮಲಿನ ಸಾಂಬಾರವಿರಲಿ, ಆವಸರದಲಿ ಅನ್ನಕ್ಕೊಂದು ತಿಳಿಸಾರೆ ಇರಲಿ ಮೆಣಸು ಕೊತ್ತಂಬರಿ ಇದ್ದರಾಯಿತು; ಜೀರಿಗೆ ಮೆಂತೆ ಇಂಗು ಸಾಸಿವೆ ಶಾಸ್ತ್ರಕ್ಕಷ್ಟೆ ಚಿಟಿಕೆಯಷ್ಟು; ಇಲ್ಲದಿದ್ದರೂ ನಡೆದೀತು! ಚಪ್ಪರಿಸಿ ಸವಿಯುವ ಕರಾವಳಿಗರ ಪಕ್ವಾನ್ನ ಮೀನ ಪಳದಿಗೂ ಕೊತ್ತಂಬರಿಯದೆ ರಾಜ ದರ್ಬಾರು! ಹಾಗಂತ ಕೊತ್ತಂಬರಿಯದ್ದೇನು ಅಬ್ಬರವಿಲ್ಲ ಕಾದ ಬಾಣಲೆಯಲಿ ಮೆಣಸಿನ ಜೊತೆಗೆ ಬೆರೆತು ಹುರಿದು ಕೆಂಪಾದರಾಯಿತು ಇನ್ನೂ ಹೆಚ್ಚೆಂದರೆ ಹುರಿದು ಕರಕಲಾದೀತು ಆದರೆ ಚಿಟಿಕೆಯಷ್ಟಿದ್ದರೂ ಸಾಸಿವೆಯ ಸದ್ದು ಕಡಿಮೆಯೇ? ಮೈ ಸುಡುತ್ತಲೆ ಚಟಪಟ ಸಿಡಿದು ಒಮ್ಮೊಮ್ಮೆ ಮೈಕೈ ಸುಡುವುದೂ ಉಂಟು! ಸಮಷ್ಟಿಯಲಿ ಕೆಲವರು ಕೊತ್ತಂಬರಿಯ ಹಾಗೆ ನಿತ್ಯವೂ ಸದ್ದಿಲ್ಲದೆ ಸಲ್ಲುವರು ಹಲವರು ಸಾಸಿವೆಯ ಹಾಗೆ ಒಗ್ಗರಣೆಗೆ ಚಿಟಿಕೆಯಷ್ಟು ಹಾಜರು ಗುಟುರು ಮಾತ್ರ ಅಬ್ಬರಿಸಿ ಹಾಕುವರು! ಸುವಿಧಾ ಹಡಿನಬಾಳ
bottom of page