top of page

ಶಿವ ಮತ್ತು ರುದ್ರ

ಶಿವ ನಮ್ಮ ಆರಾಧ್ಯ ದೇವರಲ್ಲಿ ಒಬ್ಬ. ಶಿವನನ್ನು ಆರಾಧಿಸುವವರಿಗೆ ಸದಾ ಯವ್ವನ, ಸಾಮರ್ಥ್ಯ, ಪೌರುಷ, ಆರೋಗ್ಯ, ಆಯುಸ್ಸು, ವೃದ್ಧಿ ಮತ್ತು ಸಂಪತ್ತು ಲಭಿಸುವುದೆಂದು ನಂಬಲಾಗಿದೆ. ಶಿವನ ಇನ್ನೊಂದು ಹೆಸರು ರುದ್ರ. ಶಿವ ಮತ್ತು ರುದ್ರ ಎಂಬುದು ’ಪುರುಷ’ನ ಎರಡು ಮುಖಗಳ ಸಂಕೇತವಾಗಿದೆ. ಶಿವ ಎಂದರೆ ’ಪುರುಷ’ನ ಶಾಂತ ಸ್ವಭಾವ; ಸುಂದರ ರೂಪ. ಶಿವ ಎಂದರೆ ಮಂಗಲಕರ. ಶಾಂತವಾಗಿರುವ ಶಿವನನ್ನು ಕುರಿತು ಏನನ್ನು ಅಪೇಕ್ಷಿಸಿ ನಾವು ತಪಸ್ಸು ಮಾಡುತ್ತೇವೋ ಅದನ್ನು ಕೊಟ್ಟುಬಿಡುತ್ತಾನಂತೆ. ಕೈಲಾಸ ಪರ್ವತದ ತುತ್ತತುದಿಯಲ್ಲಿ ಶಿವನಿದ್ದಾನೆ. ಕೈಲಾಸ ಶ್ರೇಷ್ಠತೆಯ ಉತ್ತುಂಗ. ಎತ್ತರದಲ್ಲಿರುವವರು ಏನನ್ನು ಕೊಟ್ಟರೂ ಅದು ಶ್ರೇಷ್ಠವೇ. ಅವನ ಸುತ್ತ ಇರುವ ಪರ್ವತಗಳು, ಆಚ್ಛಾದಿಸಿರುವ ಮಂಜು, ಕುತ್ತಿಗೆಯಲ್ಲಿರುವ ಸರ್ಪ, ತಲೆಯ ಮೇಲಿರುವ ಗಂಗೆ, ಚಂದ್ರ ಎಲ್ಲವೂ ಶಾಂತತೆಯನ್ನು ಪ್ರತಿನಿಧಿಸುವ ಸಂಕೇತಗಳು. ಶಿವ ಸದಾ ಶಾಂತಿಯ ಸಂಕೇತ. ಶಿವ ಎಂದರೆ ಸತ್ಯ. ಶಿವ ಎಂದರೆ ಸೌಂದರ್ಯ. ಹಾಗಾಗಿ ಅವನು ’ಸದಾಶಿವ’. ’ರುದ್ರ’ ಎಂದರೂ ಶಿವನೇ. ಶಾಂತವಾಗಿರುವಾಗ ಶಿವ; ರೌದ್ರಾವತಾರ ತಾಳಿದಾಗ (ಅಂದರೆ ಕೋಪಗೊಂಡಾಗ) ರುದ್ರ. ’ಪುರುಷ’ನ ರುಧಿರ (ರಕ್ತ) ರೂಪವೇ ರುದ್ರ. ಕೋಪಗೊಂಡಾಗ ತ್ರಿಣೇತ್ರನು ತೆರೆದ ಮೂರನೇ ಕಣ್ಣಿನಿಂದ ಮನ್ಮಥ ಸುಟ್ಟು ಬೂದಿಯಾಗಿ ಹೋದ. ಇಡೀ ಲೋಕವನ್ನೇ ಸುಟ್ಟು ಭಸ್ಮ ಮಾಡುವ ಅಗ್ನಿಗೋಲ ಶಿವನ ಮೂರನೇ ಕಣ್ಣು. ರುದ್ರನನ್ನು ಶಾಂತಗೊಳಿಸಬೇಕಾದರೆ ಅವನನ್ನು ಹಾಡಿ ಹೊಗಳುವುದೊಂದೇ ದಾರಿ. ’ರುದ್ರ’ ಎಂಬ ಮಂತ್ರವು ಅವನ ರೌದ್ರರೂಪವನ್ನು ವರ್ಣಿಸುತ್ತದೆ. ಆ ರೂಪದ ಅನಂತರದ ರೂಪ ಶಾಂತ; ಆಗ ಆತ ಬೇಡಿದ್ದನ್ನು ದಯಪಾಲಿಸುವ ಶಾಂತಮೂರ್ತಿ ಆಗುತ್ತಾನೆ. ಶಿವನ ಕೈಯಲ್ಲಿರುವ ತ್ರಿಶೂಲವು ಮೂರು ಲೋಕಗಳನ್ನು ಸಂಕೇತಿಸುತ್ತದೆ. ಚುಚ್ಚಿ ಎಳೆಯುವ ಆಯುಧಗಳಲ್ಲಿ ತ್ರಿಶೂಲಕ್ಕೆ ಸಮನಾದದ್ದು ಬೇರಾವುದೂ ಇಲ್ಲ. ಅದು ಶತ್ರುವಿನ ದೇಹದಲ್ಲಿ ಮೂರು ಆಳಗಾಯಗಳನ್ನು ಒಂದೇ ಬಾರಿಗೆ ಮಾಡುವುದು ಮತ್ತು ಎಳೆಯುವಾಗ ಅಷ್ಟು ಭಾಗ ಪೂರ್ತಿ ಹರಿದು ಕಿತ್ತು ಬರುವುದು. ಡಮರು ಎಚ್ಚರಿಸುವ ಸಲುವಾಗಿ ಇದೆ. ಮೊದಲು ಎಚ್ಚರಿಸುವುದು, ಆಗ ಶತ್ರು ತಪ್ಪಿಸಿಕೊಂಡರೆ ಉಳಿಯುವನು. ಇಲ್ಲದಿದ್ದರೆ ತ್ರಿಶೂಲ ತನ್ನ ಕೆಲಸ ಮಾಡುವುದು. ಶಿವನನ್ನು ಆರಾಧಿಸುವವರಿಗೆ ಅಜ್ಞಾನ ಕವಿದುಕೊಳ್ಳುವುದಿಲ್ಲ. ಅವರು ಸದಾ ಜಾಗೃತ ಮತ್ತು ಎಚ್ಚರದ ಸ್ಥಿತಿಯಲ್ಲಿರುತ್ತಾರೆ. ಶಿವತಾಂಡವದಲ್ಲಿ ಅಜ್ಞಾನ, ಮೌಢ್ಯ ಅಥವಾ ಕತ್ತಲು ಎಂಬ ರಕ್ಕಸನನ್ನು (ಅಪಸ್ಮರ) ತೊತ್ತಳ ತುಳಿದು ಶಿವ ನೃತ್ಯ ಮಾಡುತ್ತಿರುತ್ತಾನೆ. ಶಿವತಾಂಡವವೆಂದರೆ ಜ್ಞಾನದ ಪ್ರಕರ್ಷಸ್ಥಿತಿಯ ಲೀಲಾವಿನೋದವಾಗಿದೆ. ಅದು ಲಯವನ್ನು ಸಂಕೇತಿಸುವುದರ ಜೊತೆಜೊತೆಗೆ ಪುನಃಸೃಷ್ಟಿಯ ಸಂಕೇತವೂ ಆಗಿದೆ. ಶಿವನ ದೇವಸ್ಥಾನಗಳಿವೆಯೇ ಹೊರತು ರುದ್ರ ದೇವಸ್ಥಾನಗಳನ್ನು ಎಲ್ಲಿಯೂ ಕಾಣಲಾರೆವು. ಶಿವ ಎಂಬುದು ಪ್ರಕೃತಿಯ ’ಪುರುಷ’ ರೂಪವಾಗಿದೆ. ಪುರುಷನನ್ನು ಸುತ್ತುಬರುವ (ಪ್ರದಕ್ಷಿಣೆ) ಕ್ರಮವಿಲ್ಲ. ಅವನ ಏಕಾಗ್ರತೆಗೆ ಮತ್ತು ನೋಟಕ್ಕೆ (vision) ಅದು ಭಂಗ ಉಂಟುಮಾಡುತ್ತದೆ. ಹಾಗಾಗಿ ಅವನಿಗೆ ಅರ್ಧ ಪ್ರದಕ್ಷಿಣೆ. ಪ್ರದಕ್ಷಿಣಪಥದಲ್ಲಿ ಶಿವನ ಎಡಭಾಗದ ವರೆಗೆ ಸಾಗಿ, ಅನಂತರ ಮರಳಿ ಅಪ್ರದಕ್ಷಿಣೆಯಾಗಿ ಮುಂಭಾಗಕ್ಕೆ ಬಂದು ನಮಿಸಬೇಕು. ಅವನು ನಾಯಕನಾಗಿರುವುದರಿಂದ ಉಳಿದವರೆಲ್ಲ ಅವನ ಹಿಂಬಾಲಕರು. ಅವನು ’ಪಶುಪತಿ’ ಆಗಿರುವುದರಿಂದ ಅವನನ್ನು ಮುಂದಿಟ್ಟುಕೊಂಡೇ ಕೆಲಸಕಾರ್ಯಗಳು ಆಗಬೇಕು. ಅವನನ್ನು ಆರಾಧಿಸಿದರೆ ಭಯವಿಲ್ಲ. ಯಾಕೆಂದರೆ ಅವನು ಪಶುಗಳಿಗೆಲ್ಲ (ಜೀವಜಾಲ) ಪತಿ (ಯಜಮಾನ). ಶಿವನನ್ನು ಬಿಲ್ವಪತ್ರೆ ಮತ್ತು ಬಿಳಿಎಕ್ಕದಿಂದ ಅರ್ಚಿಸಿದರೆ ಅತ್ಯಂತ ಶ್ರೇಷ್ಠ ಎಂದು ಭಾವಿಸಲಾಗಿದೆ. ಭಗ್ನಗೊಂಡ ಬಿಲ್ವಪತ್ರೆಯನ್ನು ಸಮರ್ಪಿಸುವಂತಿಲ್ಲ. ಬಿಲ್ವಪತ್ರೆಯ ಮೂರು ದಳಗಳು ಶಿವನ ತ್ರಿಣೇತ್ರವನ್ನು (ಮೂರು ಕಣ್ಣುಗಳನ್ನು) ಪ್ರತಿನಿಧಿಸುವಂಥದು. ಎಕ್ಕದ ಹೊರಮೈಯ ಐದು ದಳಗಳು ಶಿವಪಂಚಾಕ್ಷರವನ್ನು ಮತ್ತು ಮಧ್ಯಭಾಗವು ಜಟಾಯುಕ್ತವಾದ ಶಿವನ ಶಿರಸ್ಸನ್ನು ಹೋಲುವಂತಿದೆ. ರುದ್ರಾಕ್ಷಿಯು ರುದ್ರನ ಅಕ್ಷಿ (ಕಣ್ಣು) ಯಂತೆಯೇ ಇದೆ. ಶಿವನ ಪ್ರಸಾದ ಭಸ್ಮ. ಭಸ್ಮವು ಅತ್ಯಂತ ಪವಿತ್ರ ಯಾಕೆಂದರೆ ಅದು ಪುನಃಸೃಷ್ಟಿಯ ಸಂಕೇತ. ಲಯವೆಂದರೆ ನಾಮಾವಶೇಷವೆಂದು ಅರ್ಥವಲ್ಲ. ಇರುವುದನ್ನು ಕಣ್ಮರೆ ಮಾಡಿ ಹೊಸ ಸೃಷ್ಟಿಯನ್ನು ಆರಂಭಿಸುವುದೆಂದು ಅರ್ಥ. ಭಸ್ಮವು ಪಾವಿತ್ರ್ಯದೊಂದಿಗೆ ನಿತ್ಯನೂತನತೆಯನ್ನು ಪ್ರತಿಮಿಸುತ್ತದೆ. ಭಸ್ಮವು ಹೊಸ ಸೃಷ್ಟಿಯ ಮೂಲಧನವೂ ಹೌದು. ಶಿವನ ಆಕೃತಿಯು ಭರತಖಂಡದ ಪ್ರತಿನಿಧೀಕರಣ. ಅವನ ಜಟೆಯಲ್ಲಿರುವ ಗಂಗೆ ಮತ್ತು ಚಂದ್ರ ಹಿಮಾಲಯವನ್ನು, ಉರದಲ್ಲಿರುವ ಉರಗವು (ಸೊಂಟ ಮತ್ತು ಕತ್ತಿನ ಭಾಗದಲ್ಲಿರುವ ಸರ್ಪವು) ವಿಂಧ್ಯ ಪರ್ವತಾವಳಿಯನ್ನು ಮತ್ತು ಪಾದಗಳು ಕನ್ಯಾಕುಮಾರಿಯನ್ನು ಸಂಕೇತಿಸುತ್ತವೆ. ಶಿವನೊಂದಿಗಿರುವ ನಂದಿಯು ಸರ್ವ ಪಶುಗಳ ಸಂಕೇತ. ಆದಕಾರಣವೇ ಆತ ನಂದೀಶ. ಶಿವ ಎಂದರೆ ಭಾರತದ ಶಾಂತ ಸ್ವಭಾವ. ಸಮೃದ್ಧತೆ. ಅಹಿಂಸಾ ಪ್ರವೃತ್ತಿ ಮತ್ತು ’ಪಶುಪತಿ’ಧರ್ಮ; ರುದ್ರ ಎಂದರೆ ಭಾರತದ ಅಗ್ನಿ ವೇಷ, ರೌದ್ರಾವತಾರ. ಶಿವ ಸರ್ವವ್ಯಾಪಿ; ಸರ್ವರೂಪಿ. -ಡಾ. ವಸಂತಕುಮಾರ ಪೆರ್ಲ.

ಶಿವ ಮತ್ತು ರುದ್ರ
bottom of page