top of page

ಶರಾವತಿ

ಮಧ್ಯಾಹ್ನ ಬಿಸಿಲಿಗೆ ಹೊರಟ
ಹೊನ್ನ ದಿಬ್ಬಣವ ಕೈ ಚಾಚಿ
ಬೊಗಸೆಯಲ್ಲಿ ಹಿಡಿದುಕೊಂಡೆ
ತಂಪು ತಂಪಿನ ಶರಾವತಿಯನ್ನು
ಮನದೊಳಗೆ ಅಪ್ಪಿಕೊಂಡೆ ಸಾವಿರ ಸಾವಿರ ಕಂಗಳು
ನಿತ್ಯವೂ ನಿನಗೆ ದೃಷ್ಟಿ ತಗುಲಬಹುದು
ತಟದಲ್ಲಿ ನಿಂತು
ಬಣ್ಣ ಬಣ್ಣದ ಮೀನಿನ ಮೈಮಾಟಕ್ಕೆ
ಚಿನ್ನದಂತೆ ಹೊಳೆಯುವ ನಿನ್ನ ಬಿನ್ನಾಣ ಕಂಡು
ಮತ್ತೆ ಮಗುವಂತೆ ಮುದ್ದಿಸಿಬಿಟ್ಟೆ.

ನೆರಳಿಗೆ ಹೊರಟ ಹಸಿರು ದಿಬ್ಬಣ
ನಯನ ಮನೋಹರ....
ಕಣ್ಣ ಕಾಡಿಗೆ ತೆಗೆದು
ಗಲ್ಲದ ಮೇಲೊಂದು ಬೊಟ್ಟು ಇಡುವೆ
ಲಗ್ಗೆಯಿಡುವ ಜನರ ಗುಂಪಿಗೆ ಭಯಬೇಡ ಇರುಳಿನಲ್ಲಿ ನಕ್ಷತ್ರಗಳು ಜಾರಿವೆ
ಸುರಸುಂದರಿಯ ಜಲಪಾತದ ಸೆರಗಲ್ಲಿ
ಕದ್ದು ಮುಚ್ಚಿ ಜಲಕ್ರೀಡೆಯಾಡಲು
ಪೈಪೋಟಿ ಶುರುವಾಗಿದೆ
ನಿತ್ಯವೂ ಲೂಟಿಮಾಡುವ
ತಾರೆಗಳ ಹೊಳಪಿನ ಖಜಾನೆ
ನಿನ್ನದೆ ಎನ್ನುವ ಶಂಕೆ ನನಗೆ ವಿಸ್ಮಯಗಳ ಸೃಷ್ಟಿಸುವ
ಈ ಜಲಧಾರೆ ನಮ್ಮ ಶರಾವತಿ. -ಎಂ.ಜಿ.ತಿಲೋತ್ತಮೆ ಎಂ . ಜಿ. ತಿಲೋತ್ತಮೆ ಇವರು ಮೂಲತಃ ಭಟ್ಕಳದವರು. ತಮ್ಮ ಬಿ. ಎ. ಪದವಿಯೊಂದಿಗೆ ಬಿ. ಎಡ್ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರಿನ ವಿದ್ಯಾರ್ಥಿ ನಿಲಯದಲ್ಲಿ ಕೆಲಸ ಮಾಡುತಿದ್ದಾರೆ. ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿರುವ ಇವರು ಕಾಲೇಜಿನಲ್ಲಿರುವಾಗಲೇ ಪತ್ರಿಕೆಗಳಲ್ಲಿ ಕವಿತೆ, ಕತೆ ಜೊತೆಗೆ ಕಾದಂಬರಿಯನ್ನು ಸಂಚಿಕೆಯ ರೂಪದಲ್ಲಿ ಬರೆಯುತ್ತಿದ್ದರು. ವಿದ್ಯಾರ್ಥಿಯಿದ್ದಾಗಲೇ "ನಾ ಅಬಲೆಯಲ್ಲ" ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಇವರಿಗೆ ೨೦೧೬ರಲ್ಲಿ "ಯುವ ಬರಹಗಾರ ಜಿಲ್ಲಾ ರಾಜ್ಯೋತ್ಸವ" ಪ್ರಶಸ್ತಿ ಲಭಿಸಿದೆ. ೨೦೧೯ರಲ್ಲಿ ಮೈಸೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಶರಣು ವಿಶ್ವವಚನ ಪೌಂಡೇಶನ್ ಇವರ ಆಶ್ರಯದಲ್ಲಿ ಜರುಗಿದ ಕವಿಗೋಷ್ಠಿಯ ಸ್ಪರ್ಧೆ ಯಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ. ಈಗ ಮತ್ತೊಂದು ಕವನ ಸಂಕಲನ ಬಿಡುಗಡೆಗೆ ಸಿದ್ಧತೆ ನಡೆಸಿರುವ ಇವರು ಅಕ್ಷರ ಪಯಣದಲ್ಲಿ ಭರವಸೆಯ ಹೆಜ್ಜೆಯೊಂದಿಗೆ ಮುಂದಡಿ ಇಡುತ್ತಿದ್ದಾರೆ.- ಸಂಪಾದಕ

ಶರಾವತಿ
bottom of page