top of page

ವಿ.ಸೀತಾರಾಮಯ್ಯ

ನನ್ನ ಪರಿಚಯ ಪ್ರಪಂಚ *****"************** ಆಚಾರ್ಯ ವಿ. ಸೀತಾರಾಮಯ್ಯನವರು ***********"******************** " ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆನು..." ಈ ಹಾಡನ್ನು ಹಾಡಿ ಭಾವಪರವಶರಾಗದ ಕನ್ನಡಿಗರು ಯಾರಿದ್ದಾರೆ. ಅದು ಮನೆಮನೆಯ ಹಾಡು. ಮನ ತುಂಬಿದ ಹಾಡು. ಹೃದಯ ಮಿಡಿದ ಹಾಡು. ಇಂತಹ ಹಾಡನ್ನು ಬರೆದ ಕವಿಯೂ ಅಂತಹ ಭಾವಜೀವಿಯೇ ಆಗಿರುವದು ಸಹಜ. ನಿಜ, ಹಾಗೇ ಇದ್ದರು ಆಚಾರ್ಯ ವಿ. ಸೀತಾರಾಮಯ್ಯನವರು. ಅವರಂತಹ ಒಬ್ಬ ಘನ ವಿದ್ವಾಂಸರು, ಶ್ರೇಷ್ಠ ಸಾಹಿತಿ ನಮ್ಮ ಹೊನ್ನಾವರದ ಕಾಲೇಜಿನ ಪ್ರಾಚಾರ್ಯರಾಗಿ ಬಂದದ್ದು ಆಕಸ್ಮಿಕವಾದರೂ‌ ಅದು ನಮ್ಮೂರ ಅದೃಷ್ಟವಿಶೇಷವೇ ಸರಿ. ೧೯೬೪ ರಿಂದ ೬೮ ರವರೆಗೆ ಅವರು ಹೊನ್ನಾವರ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಅದುವರೆಗೆ ಅವರ ಸಾಹಿತ್ಯವನ್ನು ಓದಿ ಸಂತೋಷ ಪಡೆದ ನಮ್ಮ ಜಿಲ್ಲೆಯ ಜನ, ಸಾಹಿತ್ಯಾಸಕ್ತರು ಅವರನ್ನು ಕಂಡು , ಒಡನಾಡಿ ಪುಳಕಿತರಾದದ್ದರಲ್ಲಿ ಆಶ್ಚರ್ಯವೇನಿಲ್ಲ. ತಲೆಯ ಮೇಲೆ ಮೈಸೂರು ಪೇಟಾ, ಶುಭ್ರ ಬಿಳಿ ಪಂಚೆ - ಅಂಗಿ, ಎಡಗೈಲ್ಲಿ ಎದೆಗವಚಿಕೊಂಡ ಪುಸ್ತಕ, ಬಲಗೈಯಲ್ಲೊಂದು ಛತ್ರಿ. ಸುಂದರವಾದ ವ್ಯಕ್ತಿ- ಸುಸಂಸ್ಕೃತ ವ್ಯಕ್ತಿತ್ವ. ಅವರನ್ನು ನೋಡುವದೇ ಒಂದು ಸುಖಾನುಭವ. ಮನೆಯಿಂದ ಸುಮಾರು‌ ಒಂದೂವರೆ ಕಿ. ಮೀ. ದೂರದ ಪ್ರಭಾತನಗರ ಗುಡ್ಡದ ಮೇಲಿದ್ದ ಕಾಲೇಜಿಗೆ ನಡೆದುಕೊಂಡೇ ಹೋಗುತ್ತಿದ್ದ ವಿ. ಸೀ. ಯವರು ಎರಡು ರೀತಿಯಲ್ಲಿ ನಮಗೆ ಹತ್ತಿರವಾದರು. ಒಂದು ಸಾಹಿತ್ಯಿಕ ಕಾರಣಕ್ಕಾಗಿ. ಇನ್ನೊಂದು ನಮ್ಮ ತಂದೆಯವರನ್ನೇ ಅವರು ತಮ್ಮ ಮನೆಯ ಯಾವುದೇ ಧಾರ್ಮಿಕ ಕೆಲಸಕ್ಕೆ ಪೌರೋಹಿತ್ಯಕ್ಕಾಗಿ ಕರೆಯುತ್ತಿದ್ದುದರಿಂದ. ನಮ್ಮ ಮನೆಗೂ ಬರುತ್ತಿದ್ದುದಿತ್ತು. ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ಹೋದಾಗೆಲ್ಲ ಚಾಮರಾಜಪೇಟೆಯಲ್ಲೇ‌ಇದ್ದ ಅವರ ಮನೆಗೆ ಹೋಗುತ್ತಿದ್ದೆ. ನಿವೃತ್ತರಾಗಿ ಅವರು ಬೆಂಗಳೂರಿನಲ್ಲಿ ನೆಲೆಸಿದ ನಂತರವೂ ಅವರ ಮನೆಗೆ ಹೋದಾಗೆಲ್ಲ ನನ್ನ ತಂದೆಯವರ ಬಗ್ಗೆ ಕೇಳುತ್ತಿದ್ದರಲ್ಲದೇ ತಂದೆಯವರ ಮೃದುಪಾದಗಳು ತಮ್ಮ ತಾಯಿಯ ಪಾದಗಳನ್ನು ನೆನಪಿಗೆ ತರುತ್ತಿದ್ದವೆಂದು ಭಾವಾತಿಶಯದಿಂದ ನೆನಪಿಸಿಕೊಳ್ಳುತ್ತಿದ್ದುದು‌ ಅವರ ಮನಸ್ಸು ಎಷ್ಟು ಕೋಮಲವಾದುದೆನ್ನುವದನ್ನು ತೋರಿಸುತ್ತಿತ್ತು. ವಿ. ಸೀ. ಯವರ ವಿದ್ವತ್ತಿನ ಆಳ ಅಗಲಗಳನ್ನು ಅಳೆಯುವದು ಅಸಾಧ್ಯ. ಬೆಂಗಳೂರಿನ ಐಬಿಎಚ್ ಪ್ರಕಟಿಸಿದ ಕವಿಕಾವ್ಯ ಪರಿಚಯ ಮಾಲಿಕೆ ಗ್ರಂಥಗಳಿಗೆ ಸಂಪಾದಕರಾಗಿ ಅವರು ಬರೆದ ದೀರ್ಘ ಪ್ರಸ್ತಾವನೆಗಳೇ ಸಾಕು ಅವರ ವಿದ್ವತ್ತನ್ನು ತಿಳಿಸಲು. ಕನ್ನಡ ಕಾವ್ಯಾಭ್ಯಾಸಿಗಳು ಅವಶ್ಯ ಓದಲೇಬೇಕಾದದ್ದು . * ವಿ.ಸೀ.ಯವರು ಜನಿಸಿದ್ದು ಬೆಂಗಳೂರು ಹತ್ತಿರದ ದೇವನಹಳ್ಳಿ ತಾಲೂಕಿನ ಬೂದಿಗೆರೆಯಲ್ಲಿ. ೧೮೯೯ ಅಕ್ಟೋಬರ್ ಎರಡರಂದು. ತಂದೆ ವೆಂಕಟರಾಮಯ್ಯ, ತಾಯಿ ದೊಡ್ಡ ವೆಂಕಟಮ್ಮ. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ. ಎ. ಮಾಡಿ ಮುಂಬಯಿಗೆ ಹೋಗಿ ಎಲ್.ಎಲ್ ಬಿ. ಪಾಸಾಗಿ ಬಂದು ೧೯೨೩ ರಿಂದ ೨೮ ರವರೆಗೆ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದು ನಂತರ ೨೮ ರಿಂದ ೫೦ ರವರೆಗೆ ಮೈಸೂರು ವಿ.ವಿ. ಪ್ರಾಧ್ಯಾಪಕರಾಗಿ, ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೫೮ ರಲ್ಲಿ ನಿವರತ್ತರಾದರು. ಎರಡು ವರ್ಷ ಆಕಾಶವಾಣಿಯಲ್ಲೂ ಅವರ ಸೇವೆ ಸಂದಿದೆ. ಪ್ರಬುದ್ಧ ಕರ್ನಾಟಕ, ಪರಿಷತ್ತಿನ ಕನ್ನಡ ನುಡಿ , ಪರಿಷತ್ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ‌. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕಾಲೇಜಿನ ಪ್ರಾಚಾರ್ಯರಾಗಿ ಬರುವದಕ್ಕಿಂತ ಬಹಳ ಮೊದಲೇ ಅವರು ೧೯೫೪ ರಲ್ಲಿ ಕುಮಟಾದಲ್ಲಿ ನಡೆದ‌ ೩೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವಿದ್ಯಾ ವಿನಯೇನ ಶೋಭತೇ ಎನ್ನುವದಕ್ಕೆ ಅವರನ್ನೇ ಉದಾಹರಣೆಯಾಗಿ ನೀಡಬಹುದಿತ್ತು. ಅವರ ಸಾಹಿತ್ಯದ ವ್ಯಾಪ್ತಿ ವೈವಿಧ್ಯತೆಗಳ ಬಗ್ಗೆ ವಿವರಿಸುವದು ಕಷ್ಟ. ಅದನ್ನು ನಾಳೆ ನೋಡೋಣ. - ಎಲ್. ಎಸ್. ಶಾಸ್ತ್ರಿ ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ ಅವರು ವಿ.ಸೀ. ಅವರ ಬಗೆಗೆ ಬರೆದ ಲೇಖನ. ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ

ವಿ.ಸೀತಾರಾಮಯ್ಯ
bottom of page