top of page

ವಿದ್ವತ್ತಿನ ಮೇರುಪರ್ವತಬಿ. ಎಚ್. ಶ್ರೀಧರ

ಮರೆಯಲಾಗದ ಮಹಾನುಭಾವರು -೮ ****""""**** ೧೯೫೧ ರಿಂದ ೧೯೬೨ ರವರೆಗೆ ಪ್ರೊ. ಬಿ. ಎಚ್. ಶ್ರೀಧರ ಅವರು ಕುಮಟಾದ ಕೆನರಾ ಕಾಲೇಜಿನಲ್ಲಿ ( ನಂತರ ಬಾಳಿಗಾ ಕಾಲೇಜು ಆಯಿತು) ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ನಾನು ಅವರ ಶಿಷ್ಯನಾಗಿದ್ದು ೧೯೬೧ ರಲ್ಲಿ. ಪಿಯುಸಿ ಮೊದಲ ವರ್ಷ. ಆದರೆ ಬಿ. ಎಚ್. ಶ್ರೀಧರರ ಪರಿಚಯ , ಒಡನಾಟ ಅದಕ್ಕಿಂತ ಹತ್ತು ವರ್ಷ ಹಿಂದಿನದು. ಅವರು ಹೊನ್ನಾವರದಲ್ಲಿನ ನಮ್ಮ ಮನೆಗೆ ( ದುರ್ಗಾಕೇರಿಯಲ್ಲಿದ್ದ ಲಕ್ಷ್ಮೀನಾರಾಯಣ ದೇವಸ್ಥಾನ) ಆಗಾಗ ಬರುತ್ತಿದ್ದರು. ನನ್ನ ತಂದೆ ಶಂಭು ಶಾಸ್ತ್ರಿ ಅವರೂ ಸಂಸ್ಕೃತ ವಿದ್ವಾಂಸರಾಗಿದ್ದರು. ಅಣ್ಣ ಬರೆಹಗಾರ. ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿದ್ದವು. ಆದ್ದರಿಂದ ನನ್ನ ಬಾಲ್ಯದ ಏಳೆಂಟು ವರ್ಷದವನಾಗಿದ್ದಾಗಿನಿಂದಲೇ ಅವರ ಒಬ್ಬ ಪ್ರೀತಿಯ ಹುಡುಗನಾಗಿ ಅವರನ್ನು ಹತ್ತಿರದಿಂದ ಕಾಣುವ , ಕೇಳುವ ಅವಕಾಶ ದೊರಕಿತ್ತು. ನಂತರ ಅವರ ಶಿಷ್ಯನೂ ಆದೆ. ಒಮ್ಮೆ ನಾನು ಏನೋ ಕೆಲಸಕ್ಕಾಗಿ ಮಂಗಳೂರಿಗೆ ಹೊರಟಾಗ " ಬಾರೊ ಇಲ್ಲಿ‌, ನಂಗೆ ಅಲ್ಲಿಂದ ಹೊಗೆಸೊಪ್ಪು ತೆಗೆದುಕೊಂಡು ಬಾ" ಎಂದಿದ್ದರು. ನಾನು ತಂದುಕೊಟ್ಟಿದ್ದೆ. ಅಷ್ಟರ ಮಟ್ಟಿಗೆ ಅವರೊಡನೆ ನನಗೆ ಸಲಿಗೆಯಿತ್ತು. ಆತ್ಮೀಯತೆಯಿತ್ತು. ನಮ್ಮ ಶೃಂಗಾರ, ಜನತಾ ಪತ್ರಿಕೆಗಳಿಗೆ ಕೇಳಿದಾಗೆಲ್ಲ ಲೇಖನ ಕೊಡುತ್ತಿದ್ದರು. ಮುಂದೆ ನಾನು ಕಲಬುರ್ಗಿಯ ನವಕಲ್ಯಾಣ ಪತ್ರಿಕೆ ಸೇರಿದಾಗಲೂ ಅವರಿಂದ ಹತ್ತು ಲೇಖನಗಳ ಒಂದು ವೈಚಾರಿಕ ಲೇಖನ ಮಾಲೆ ಯನ್ನೇ ತರಿಸಿಕೊಂಡಿದ್ದೆ. ಅವರ ಕಂಟಕಾರಿ ಮಹಾಕಾವ್ಯ ನಮ್ಮ ಪತ್ರಿಕೆಯಲ್ಲೇ ಪ್ರಕಟವಾಗಿತ್ತೆಂದು ನೆನಪು. ನನ್ನ ತಂದೆ ಮತ್ತು ಅವರ ನಡುವೆ ಯಾವಾಗಲೂ ಒಂದಿಲ್ಲೊಂದು ವಿಷಯವಾಗಿ ಚರ್ಚೆ ನಡೆದಿರುತ್ತಿತ್ತು. ವಿಶೇಷವಾಗಿ ಸಂಸ್ಕೃತ ಸಾಹಿತ್ಯದ ಬಗ್ಗೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದರೂ ಅವರ ಜೀವನದ ಬಹುಭಾಗ ಕಳೆದದ್ದು ಉತ್ತರ ಕನ್ನಡದಲ್ಲೆ. ೧೯೫೧ ರಿಂದ ೬೨ ಕುಮಟಾ, ೬೨ ರಿಂದ ೬೯ ರವರೆಗೆ ಸಿರ್ಸಿ ಕಾಲೇಜಿನಲ್ಲಿ ವೈಸ್ ಪ್ರನ್ಸಿಪಾಲ್, ೧೯೬೯ ರಿಂದ ೭೬ ರರವರೆಗೆ ಸಿದ್ದಾಪುರ ಕಾಲೇಜು ಪ್ರಿನ್ಸಿಪಾಲರಾಗಿ ಕೆಲಸ ಮಾಡಿದರು. ೧೯೧೮ ಎಪ್ರಿಲ್ ೨೪ ರಂದು ದ. ಕ. ದ ಬಿಜ್ಜೂರು ಹತ್ತಿರದ ಬವಲಾಡಿ ಸೀತಾರಾಮ ಹೆಬ್ಬಾರ - ನಾಗಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಅವರು ಮೈಸೂರಿನ ಯುವರಾಜ ಕಾಲೇಜು, ಮಹಾರಾಜಾ ಕಾಲೇಜುಗಳಲ್ಲಿ ಪದವಿ ಪಡೆದವರು. ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ಪಾಸಾದವರು. ಆದರೆ ಆರಂಭದ ವರ್ಷಗಳಲ್ಲಿ ಅವರು ಪುಣೆಯಲ್ಲಿ ಮಿಲಿಟರಿ ವಿಭಾಗದಲ್ಲಿ ಒಂದು ವರ್ಷ , ನಂತರ ಭಟಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಸ್ಕೂಲಿನ ಸಹಶಿಕ್ಷಕರಾಗಿ ನಾಲ್ಜು ವರ್ಷ(೪೩-೪೭) , ಕರ್ಮವೀರ ವಾರಪತ್ರಿಕೆಯ ಉಪಸಂಪಾದಕರಾಗಿ ನಾಲ್ಕು ವರ್ಷ (೪೭-೫೧) ಇಷ್ಟೆಲ್ಲ ಕಡೆ ಸುತ್ತಾಡಿ ನಂತರ ಕುಮಟಾ ಕೆನರಾ ಕಾಲೇಜು ಸೇರಿದರು. ಬವಲಾಡಿ ಹತ್ತಿರದ ಮೊಗೇರಿಯಲ್ಲಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದೂ ಶ್ರೀಧರರು ಹುಟ್ಟಿದ ವರ್ಷವೇ. ಇಬ್ಬರಲ್ಲೂ ಹತ್ತಿರದ ಒಡನಾಟವಿತ್ತಲ್ಲದೇ ರೂಪಸಾಮ್ಯವೂ‌ ಇತ್ತೆಂದು‌ ಆಗ ಅವರನ್ನು ನೋಡಿದವರು ಹೇಳುತ್ತಿದ್ದರು. (ಆದರೆ ಸಾಹಿತ್ಯ ಸೃಷ್ಟಿಯ ವಿಷಯದಲ್ಲಿ ಮಾತ್ರ ಇಬ್ಬರ ದಾರಿಯೂ ಭಿನ್ನವಾಗಿತ್ತು. ಅಡಿಗರೂ ಪ್ರಾಧ್ಯಾಪಕ ಪ್ರಾಚಾರ್ಯರಾದರು. ನವೋದಯದಿಂದ ನವ್ಯಕ್ಕೆ ದಾಟಿದರು. ) ೧೯೪೫ ರಲ್ಲಿ ಮೇಘನಾದ ಎಂಬ ಕವನ ಸಂಕಲನದೊಂದಿಗೆ ಆರಂಭವಾದ ಬಿ. ಎಚ್. ಶ್ರೀ ಅವರ ಸಾಹಿತ್ಯ ಯಾತ್ರೆ ೧೯೮೮ ರಲ್ಲಿ ಬರೆದ ಭಾರತೀಯ ಮೂರ್ತಿಶಿಲ್ಪ ಎಂಬ ಪುಸ್ತಕದ ತನಕ ಮುನ್ನಡೆಯಿತು‌ ಸುಮಾರು ೫೦ ಕೃತಿಗಳನ್ನು ಅವರು ನೀಡಿದರು. ಅವುಗಳಲ್ಲಿ ಹನ್ನೊಂದು ಕವನ ಸಂಕಲನಗಳಲ್ಲದೇ ನಾಟಕ, ವಿನೋದ ವಿಡಂಬನೆ, ಅನುವಾದ, ವಿಮರ್ಶೆ , ಇತಿಹಾಸ ಮೊದಲಾದ ಪ್ರಕಾರಗಳೂ ಇವೆ. ಆದರೆ ಮುಖ್ಯವಾಗಿ ಅವರು ರಚಿಸಿದ ಶಾಸ್ತ್ರ ಸಾಹಿತ್ಯದ ಸೂತ್ರ ಗ್ರಂಥಗಳು ಅವರ ಅಪೂರ್ವ ವಿದ್ವತ್ತಿಗೆ ಸಾಕ್ಷಿಯಾಗಿವೆ. ೧) ಕಾವ್ಯ ಸೂತ್ರ ೨) ಜ್ಞಾನ ಸೂತ್ರ ೩) ರಾಷ್ಟ್ರಸೂತ್ರ . ಇವು ಕಾವ್ಯ, ತತ್ವಜ್ಞಾನ ಮತ್ತು ರಾಜಕೀಯ ಸೂತ್ರಗಳಿಂದೊಡಗೂಡಿದ ವಿದ್ವತ್ಪೂರ್ಣ ಕೃತಿಗಳು. ಕಾವ್ಯಸೂತ್ರಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂ ಶ್ರೀ ಪ್ರಶಸ್ತಿಗಳು ದೊರಕಿದರೆ ರಾಷ್ಟ್ರಸೂತ್ರಕ್ಕೆ ರಾಜ್ಯಸರಕಾರದ ಅನುದಾನ ದೊರಕಿತು. ಜ್ಞಾನ ಸೂತ್ರ ಲೋಕಶಿಕ್ಷಣ ಟ್ರಸ್ಟ್ ಬಹುಮಾನಕ್ಕೆ ಪಾತ್ರವಾಯಿತು. ಕನ್ನಡದಲ್ಲಿ ಇಂತಹ ಗ್ರಂಥಗಳು ಕ್ವಚಿತ್ತಾಗಿಯೇ ಸಿಗುತ್ತವೆ. ಭಾರತೀಯ ನಾಗರಿಕತೆಗೆ ಮನುವಿನ ಕೊಡುಗೆ, ಸ್ವಾತಂತ್ರ್ಯ ಮೀಮಾಂಸೆ, ಹೊಸಗನ್ನಡ ಸಾಹಿತ್ಯ ಶೈಲಿ, ರಸಯಜ್ಞ, ಕಿನ್ನರಗೀತ, ಭಾರತೀಯ ರಾಜಧರ್ಮದ ಸತ್ವ ಮತ್ತು ಸ್ವರೂಪ, ಅಮೃತಬಿಂದು, ಮಾನಸ ದರ್ಪಣ, ನೌಕಾಗೀತ, ಟಿ. ಎಸ್. ಇಲಿಯಟ್, ಕವೀಂದ್ರ- ರವೀಂದ್ರ,‌ಮಂಜುಗೀತ, ಜಾತವೇದ, ವಿದೇಶದ ತಿಳುವಳಿಕೆಗಳು, ಭಾರತೀಯ ವಾಙ್ಮಯ, ಮೊದಲಾ ಕೃತಿಗಳಲ್ಲದೆ ಬೇಂದ್ರೆಯವರ ಕುರಿತಾಗಿಯೇ ಎರಡು ಕೃತಿಗಳನ್ನು ಅವರು ರಚಿಸಿದ್ದಾರೆ. (ಬೇಂದ್ರೆ-೫೬, ಹಾಗೂ "ಪಸರಿಪ ಕನ್ನಡಕ್ಕೊಡೆಯನೀಗ ದರಾಂಕಿತ ಬೇಂದ್ರೆ" ) ‌ ಸಿರ್ಸಿಯಲ್ಲಿ ಜರುಗಿದ ೫೫ ನೇ ಸಾಹಿತ್ಯ ಸಮ್ಮೇಳನದ ಪತ್ರಿಕಾಪ್ರದರ್ಶನ ಉದ್ಘಾಟನೆ, ಉತ್ತರ ಕನ್ನಡ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ( ಯಲ್ಲಾಪುರ ), ರಸಯಜ್ಞ ಕೃತಿಗೆ ದೇವರಾಜ ಬಹಾದೂರ ಬಹುಮಾನ, ನೌಕಾಗೀತಕ್ಕೆ ಕೇಂದ್ರ ಸರ್ಕಾರದ ರಕ್ಷಣಾ ಖಾತೆ ಬಹುಮಾನ, ಮನುಸ್ಮೃತಿ ಕವಿವಿ‌ ಪದವಿ ತರಗತಿ ಪಠ್ಯವಾದದ್ದು ಹೀಗೆ ಹಲವು ಬಗೆಯ ಗೌರವಗಳಿಗೆ ಪಾತ್ರರಾದ ಬಿ. ಎಚ್. ಶ್ರೀ ಅವರ ವಿದ್ವತ್ತು ಈ ಎಲ್ಲ ಪ್ರಶಸ್ತಿ ಬಹುಮಾನಗಳಿಗಿಂತಲೂ ದೊಡ್ಡದು. ಅವರ ಪತ್ನಿ ಶ್ರೀಮತಿ ರಮಾದೇವಿಯವರು, ಮಕ್ಕಳು ರಾಜಶೇಖರ, ಸುಮ, ಪ್ರತಿಭಾ, ರಾಜೇಶ್ವರಿ. ಅವರು ೧೯೯೦ ರಲ್ಲಿ ಹುಟ್ಟಿದ ದಿನಾಂಕದಂದೇ ನಿಧನ ಹೊಂದಿದರು. ಉತ್ತರ ಕನ್ನಡ ಜಿಲ್ಲೆಯ ಅಂದಿನ ನಮ್ಮಂತಹ ಯುವ ಪೀಳಿಗೆಯ ಬರೆಹಗಾರರಿಗೆ ಮಾರ್ಗದರ್ಶಕರಾಗಿದ್ದ ಬಿ. ಎಚ್. ಶ್ರೀಧರ ಅವರ ಆ ತೀಕ್ಷ್ಣ ಕಣ್ಣುಗಳು, ಅವರ ಆ ಗಾಂಭೀರ್ಯ, ಅವರ ಶಿಸ್ತು , ಅವರ ಅಸದೃಶ ವಿದ್ವತ್ತು ಎಲ್ಲವೂ ಮರೆಯಲಾಗದ್ದು. ಅವರಿಗೆ ಜನ್ಮದಿನದ ಈ ಸಂದರ್ಭದಲ್ಲಿ ನನ್ನ ಗೌರವಪೂರ್ವಕ ನಮನಗಳು. - ಎಲ್‌ ಎಸ್. ಶಾಸ್ತ್ರಿ

ವಿದ್ವತ್ತಿನ ಮೇರುಪರ್ವತಬಿ. ಎಚ್. ಶ್ರೀಧರ
bottom of page