top of page

ವಾಲ್ಮೀಕಿ ಮಹರ್ಷಿಗಳು

ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ || ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು ಸರಗೈಯ್ಯುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ (ಬುಧಕೌಶಿಕ)
ಬಂಧುಗಳೆ, ‘ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||’ ಎಂಬ ಶೋಕವೇ 24,000 ಶ್ಲೋಕಗಳನ್ನೊಳಗೊಂಡ ‘ರಾಮಾಯಣ’ (ರಾಮನ ಕಥೆ) ಎಂಬ ಮಹಾಕಾವ್ಯವಾಗಿ ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದದ್ದೊಂದು ಮಹತ್ಕಾರ್ಯವೇ ಸರಿ. ರತ್ನಾಕರನೆಂಬ ಬೇಡನೊಬ್ಬನು ನಾರದರ ಉಪದೇಶ (ಕೆಲವರು ಸಪ್ತರ್ಷಿಗಳ ಎಂದೂ ಹೇಳುತ್ತಾರೆ) ದಿಂದ ವಾಲ್ಮೀಕಿಯಾಗಿ ಮಾರ್ಪಟ್ಟು ಅವರಿಂದಲೇ ಕೇಳಿದ ರಾಮನ ಕಥೆಯು ಒಂದು ಮಹಾನ್ ತರಂಗಿಣಿಯಾಗಿ ಇಂದಿಗೂ ಪ್ರವಹಿಸುತ್ತಲೇ ಇರುವುದು ಈ ದೇಶದ ಸೌಭಾಗ್ಯ. ಆ ಕಥೆಯನ್ನು ಇಡಿಯಾಗಿಯೂ ಬಿಡಿಯಾಗಿಯೂ ನಾವೆಲ್ಲ ಓದಿದ್ದೇವೆ. ಯಾವ ಕಾಲಕ್ಕೂ ಯಾವ ದೇಶಕ್ಕೂ ಅನ್ವಯವಾಗಬಲ್ಲ ಸಾರ್ವಕಾಲಿಕ ಆದರ್ಶಗಳನ್ನು ಛಂದೋಬದ್ಧವಾಗಿ, ನವರಸಭರಿತವಾಗಿ ಸುಂದರವಾದ ಸಂಸ್ಕೃತ ಭಾಷೆಯಲ್ಲಿ ಕಟ್ಟಕೊಟ್ಟಿರುವ ಕವಿಯ ಜಾಣ್ಮೆ ಓದುಗರನ್ನು ಬೆರಗುಗೊಳಿಸುತ್ತದೆ. ನ್ಯಾಯ ಪರಿಪಾಲನೆ, ಭಕ್ತಿ, ಶೌರ್ಯ, ಪಿತೃವಾಕ್ಯ ಪರಿಪಾಲನೆ, ಭ್ರಾತೃಪ್ರೇಮ, ಪ್ರಜಾವಾತ್ಸಲ್ಯವೇ ಮುಂತಾದ ಸಾರ್ವಕಾಲಿಕ ಆದರ್ಶಗಳು, ತತ್ವಗಳು, ಜೀವನ ವಿಧಾನಗಳು ಎಲ್ಲವೂ ಮಹರ್ಷಿ ವಾಲ್ಮೀಕಿಯವರಿಂದ ರಾಮಾಯಣದಲ್ಲಿ ಪ್ರಸ್ತಾಪಿತವಾಗಿವೆ. ರಾಮಾಯಣ ಮತ್ತು ಮಹಾಭಾರತಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದರೆ ರಾಮಾಯಣದಲ್ಲೇ ಹೆಚ್ಚಿನ ಆದರ್ಶಗಳು ದೃಗ್ಗೋಚರವಾಗುತ್ತವೆ. ‘ಅಹಲ್ಯಾ ದ್ರೌಪದೀ ಸೀತಾ, ತಾರಾ ಮಂಡೋದರೀ ತಥಾ | ಪಂಚಕನ್ಯಾ ಸ್ಮರೇ ನಿತ್ಯಂ ಮಹಾ ಪಾತಕ ನಾಶನಮ್|| (ಇಲ್ಲಿ ‘ಪಂಚಕನ್ಯಾ’ ಎನ್ನುವುದು ‘ಪಂಚಕಂ ನಾ’ ಎಂದಾಗಬೇಕು. ಏಕೆಂದರೆ ಈ ಐವರೂ ಕನ್ಯೆಯರಲ್ಲ, ಮುತ್ತೈದೆಯರು. ಪಂಚಕಂ- ಈ ಐವರನ್ನು ನಾ- ಗಂಡುಸಾದವನು ನಿತ್ಯವೂ ಸ್ಮರಿಸಿದರೆ ದೋಷಗಳು ಪರಿಹಾರವಾಗುತ್ತವೆ ಎಂದು ಬನ್ನಂಜೆ ಗೋವಿಂದಾಚಾರ್ಯರು ವ್ಯಾಖ್ಯಾನಿಸಿದ್ದಾರೆ) ಈ ಐವರಲ್ಲಿ ನಾಲ್ವರು ರಾಮಾಯಣ ಕಾಲದವರು ಎಂಬುದೇ ವಿಶೇಷ. ಇಡೀ ಇಕ್ಷ್ವಾಕು ವಂಶವೇ ನ್ಯಾಯ ಪರಿಪಾಲನೆಗೆ ಹೆಸರಾಗಿದ್ದು, ಅದರಲ್ಲಿಯೂ ಶ್ರೀರಾಮನೆಂದರೆ ನ್ಯಾಯ; ನ್ಯಾಯವೆಂದರೆ ಶ್ರೀರಾಮ ಎಂದೇ ಖ್ಯಾತನಾದ ಮರ್ಯಾದಾ ಪುರುಷೋತ್ತಮನಂತೂ ತನ್ನ ನ್ಯಾಯದಾನಕ್ಕೆ ಅನ್ವರ್ಥಕನಾದವನು. ಪ್ರಜೆಗಳು ಸತ್ಯಪರರಾಗಿ, ನ್ಯಾಯಪರರಾಗಿ, ಸುಖ ನೆಮ್ಮದಿಯಿಂದ ಪರಸ್ಪರ ಅನ್ಯೋನ್ಯತೆಯಿಂದ ಜೀವಿಸುವುದೇ ‘ರಾಮರಾಜ್ಯ’ ಎಂಬ ಕಲ್ಪನೆ ಮೂಡಿರುವುದೇ ಶ್ರೀರಾಮಚಂದ್ರನ ನ್ಯಾಯ ಪರಿಪಾಲನೆಯಿಂದ ಎಂಬುದು ಉಲ್ಲೇಖನೀಯ. ತಂದೆ ದಶರಥನು ಮಾತೆ ಕೈಕೆಗೆ ಕೊಟ್ಟ ವಚನವನ್ನು ಹುಸಿಗೊಳಿಸಬಾರದೆಂಬ ಒಂದೇ ಒಂದು ಕಾರಣದಿಂದ ವನಾಗಮನವನ್ನು ಮಾಡಿದ ರಾಘವನ ಪಿತೃವಾಕ್ಯ ಪರಿಪಾಲನೆಯೂ ವಾಲ್ಮೀಕಿ ಮಹರ್ಷಿಗಳು ಲೋಕಮುಖಕ್ಕೆ ಕೊಟ್ಟ ಬಲುದೊಡ್ಡ ಕಾಣ್ಕೆಯಾಗಿದೆ. ಕಾಡಿಗೆ ಹೊರಟು ನಿಂತ ಪತಿಯೊಂದಿಗೆ ನಾರುಡೆಯುಟ್ಟು ಅವನ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆದ ಜಾನಕಿಯೂ ಅಸಾಮಾನ್ಯ ಸಾಧ್ವಿ ಶಿರೋಮಣಿಯೇ! ಅಣ್ಣನಿಲ್ಲದೆ ತಾನಿಲ್ಲವೆಂಬ ಭಾವವನ್ನು ಸದಾ ಜಾಗೃತವಾಗಿಟ್ಟುಕೊಂಡಿದ್ದ ಅನುಜ ಲಕ್ಷ್ಮಣ ಹಾಗೂ ಅಣ್ಣ ರಾಮಚಂದ್ರ ವನವಾಸದಿಂದ ಹಿಂತಿರುಗುವವರೆಗೆ ಅಯೋಧ್ಯಾನಗರಿಯನ್ನು ಪ್ರವೇಶಿಸದೆ ಅಣ್ಣನ ಪಾದುಕೆಗಳನ್ನೇ ಪೂಜಿಸಿದ ಭರತನ ಭ್ರಾತೃಪ್ರೇಮವೂ ಅಷ್ಟೇ ಅನುಕರಣೀಯವಾದದ್ದು. ‘ರಾಮನ ಬಂಟ ಹನೂಮಂತ...’ ಎಂದೇ ಲೋಕಪ್ರಸಿದ್ಧನಾದ ಆಂಜನೇಯ, ಪರಮ ಶಿವಭಕ್ತ ರಾವಣೇಶ್ವರರ ಭಕ್ತಿಯೂ ಅನರ್ಘ್ಯವಾದದ್ದು, ಅನುಕರಣೀಯವಾದದ್ದು. ರಾವಣನ ತಮ್ಮ ವಿಭೀಷಣನ ನ್ಯಾಯಪಕ್ಷಪಾತವೂ ನಗಣ್ಯವೇನಲ್ಲ. ಸ್ವತಃ ಶ್ರೀರಾಮಚಂದ್ರ, ಲಕ್ಷ್ಮಣ, ವಜ್ರಕಾಯ ಆಂಜನೇಯ, ರಾವಣ, ಇಂದ್ರಜಿತು ಮುಂತಾದವರ ಶೌರ್ಯವೂ ಮನನೀಯವಾದುದೇ ಆಗಿದೆ.
 ಎಷ್ಟು ಬಾರಿ ಓದಿದರೂ ಹೊಸತೇ ಆದ ಅರ್ಥವನ್ನು ಕೊಡುವ, ಯುಗಯುಗಗಳವರೆಗೂ ತನ್ನ ಪ್ರಸ್ತುತತೆಯನ್ನು ಕಾಪಿಟ್ಟುಕೊಳ್ಳುವ, ಗಾತ್ರ. ಗುಣಗಳೆರಡರಲ್ಲಿಯೂ ಬೃಹತ್ತಾದ, ಮಹತ್ತಾದ ಕಾವ್ಯವೇ ಮಹಾಕಾವ್ಯ ಎಂಬ ನೆಲೆಯಲ್ಲಿ ರಾಮಾಯಣ ಮತ್ತು ಮಹಾಭಾರತಗಳು ಇಂದಿಗೂ ಪ್ರಸ್ತುತವಾಗಿವೆ; ವಿಶ್ವದ ಅತ್ಯಂತ ಮಹತ್ವದ ಮಹಾಕಾವ್ಯಗಳೆನಿಸಿವೆ. ಅದರಲ್ಲಿಯೂ ವಾಲ್ಮೀಕಿ ಎಂಬ ಕೋಗಿಲೆಯು ಉಲಿದ ರಾಮಾಯಣವು ಗುಣಗಳ ಗಣಿ. ಅಂತಹ ಮಹಾಕಾವ್ಯವನ್ನು ವಿಶ್ವಕ್ಕೆ ನೀಡಿದ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಶುಭಾಶಯಗಳು.
- ಹುಳಗೋಳ ನಾಗಪತಿ ಹೆಗಡೆ

ವಾಲ್ಮೀಕಿ ಮಹರ್ಷಿಗಳು
bottom of page