ವರ್ತಮಾನದ ಜರೂರು
ವರ್ತಮಾನದ ಜರೂರು. +-+-+-+-+-+-+-+-+-+-+- ಭೂತಿಕ ಸೀರೆಯ ಸಾತ್ವಿಕ ನೆರೆ ಉಟ್ಟಡೆ ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ: ಈ ಮಾತು ಬಿದ್ದುದು ನೋಡಾ, 'ರಾಜಬೀದಿಯಲ್ಲಿ'. ಅಯ್ಯಾ, ಭೂತ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ, ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ. +-+-+-+-+- ಎಂಟೂವರೆ ನೂರು ವರ್ಷಗಳ ಹಿಂದೆ ರಚಿತವಾದ ಬಸವಣ್ಣನವರ ಈ ವಚನವು ಪ್ರಜಾಪ್ರಭುತ್ವದ (ರಾಜಬೀದಿ) ನೈಜ ತಾತ್ವಿಕತೆಯನ್ನು ತನ್ನ ಅಂತರಂಗದ ಕಾಳಜಿಯಾಗಿ ಪ್ರತಿಪಾದಿಸುತ್ತದೆ. ಇಲ್ಲಿ, ಅನುಕೂಲಾತ್ಮಕವಾಗಿ ವೇಷ ಬದಲಿಸಿ ನಾಟಕ ಮಾಡುವ ಪಾತ್ರಧಾರಿಗಳನ್ನು ಕೆಣಕಿ, ಎಚ್ಚರಿಕೆ ಕೊಡುವ ಕ್ರಾಂತಿಯ ಮಾರ್ಗ ಒಂದೆಡೆ ಇದ್ದರೆ, 'ಇದೆಲ್ಲ ಬೇಡ' - ಎಲ್ಲರೂ ಪ್ರೀತಿಯಿಂದ ಒಂದುಗೂಡಿ ಬದುಕುವ ಸುಖಕ್ಕಿಂತ ದೊಡ್ಡದು ಇನ್ನಾವುದೂ ಇಲ್ಲವೆನ್ನುವ, ಹಾಗೂ ಒಳಗೊಳ್ಳುವ ಸಂಸ್ಕೃತಿಯ ಪ್ರತಿಪಾದನೆಯೂ ಇದೆ. ಇಂಥ "ರಾಜಬೀದಿ"ಯಲ್ಲಿ (ಸಂವಿಧಾನಾತ್ಮಕ ತತ್ವಗಳನ್ನೊಳಗೊಂಡ ಪ್ರಜಾಪ್ರಭುತ್ವದ ಮಾರ್ಗ) ಪ್ರಜ್ಞಾಪೂರ್ವಕವಾದ ಹೆಜ್ಜೆಗಳನ್ನು ಹಾಕುವ ವಿವೇಕವನ್ನು ಎಲ್ಲ ನಾಗರಿಕರೂ (ಮೊದಲು ರಾಜಕಾರಣಿಗಳು) ತೋರಿದರೆ ಭೂತಗಳು ಆಡುವ ಅದಲು- ಬದಲು ಕಂಚೀ ಬದಲು ನಾಟಕವನ್ನು ಖಂಡಿತ ನಿಲ್ಲಿಸಬಹುದು. ಬಸವಣ್ಣನವರ ವಚನಗಳನ್ನು ತಮ್ಮ ಭಾಷಣಗಳಲ್ಲಿ ಚಂದ ರೀತಿಯಲ್ಲಿ ಪುಂಖಾನುಪುಂಖವಾಗಿ ಮಂಡಿಸುವ ವಿವಿಧ ಕ್ಷೇತ್ರಗಳ (ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳ) ಜನ, ಅವರ ಈ ಸಾಮಾಜಿಕ ಮತ್ತು ರಾಜಕೀಯ ತಾತ್ವಿಕತೆಯನ್ನು ನಡೆಯಲ್ಲಿ ತಂದುಕೊಂಡರೆ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಅಧಿಕಾರಕ್ಕಾಗಿ ದಿನಕ್ಕೊಂದು ವೇಷ ಬದಲಿಸುವ ವರ್ತಮಾನದ ಬಹುಕೃತ ವೇಷಧಾರಿಗಳಿಗೆ ಬಸವಣ್ಣನವರ ಈ ವಚನವು ವಿವೇಕದ ಮಾರ್ಗ ತೋರಲಿ ಎಂಬ ಆಶಯದಿಂದ ಇದನ್ನು ಇಲ್ಲಿ ಹಂಚಿಕೊಂಡಿರುವೆ. ವಂದನೆಗಳೊಂದಿಗೆ, ಬಸವರಾಜ ಸಾದರ.