ವಚನ ಪಿತಾಮಹ ಫ.ಗು.ಹಳಕಟ್ಟಿಯವರು
ರೆ. ಉತ್ತಂಗಿ ಚೆನ್ನಪ್ಪನವರು ನಮಗೆ ಸರ್ವಜ್ಞನ ವಚನಗಳನ್ನು ಉಳಿಸಿಕೊಟ್ಟರೆ ಫ. ಗು. ಹಳಕಟ್ಟಿಯವರು ನಮಗೆ ಶರಣರ ವಚನಗಳನ್ನು ಉಳಿಸಿಕೊಟ್ಟರು. ೧೨ ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಸಂದರ್ಭದಲ್ಲಿ ಬಿಜ್ಜಳನ ಸೈನಿಕರಿಂದ ಅನುಭವ ಮಂಟಪದ ಶಿವಶರಣರ ವಚನಗಳನ್ನು ರಕ್ಷಿಸಲು ಚೆನ್ನಬಸವಣ್ಣ , ಅಕ್ಕ ನಾಗಮ್ಮ ಮೊದಲಾದವರು ಆ ವಚನಗಳ ಕಟ್ಟುಗಳನ್ನು ಹೊತ್ತು ಉತ್ತರ ಕನ್ನಡ ಜಿಲ್ಲೆಯ ಉಳವಿಯತನಕವೂ ಬಂದುದು ಒಂದು ಘಟ್ಟ. ಮತ್ತೆ ನಾಲ್ಕಾರು ಶತಮಾನಗಳ ನಂತರ ಫಕೀರಪ್ಪ ಹಳಕಟ್ಟಿಯವರು ಚದುರಿಹೋಗಿದ್ದ ವಚನಗಳನ್ನೆಲ್ಲ ಸಂಗ್ರಹಿಸಿ, ಪರಿಷ್ಕರಿಸಿ ಮುದ್ರಿಸಿ ಕನ್ನಡಿಗರಿಗೆ ಒದಗಿಸಿದ್ದು ಎರಡನೇ ಹಂತ. ಹಾಗೆ ನಮಗೆ ಕೊನೆಗೂ ಉಳಿದದ್ದು ೧೨೬ ಜನ ಪುರುಷ ವಚನಕಾರರ ೧೩೦೭೯ ವಚನಗಳು, ಮತ್ತು ೩೩ ಮಹಿಳಾ ವಚನಕಾರ್ತಿಯರ ೧೧೦೪ ವಚನಗಳು. ಬಹಳ ಮಹತ್ವದ ಕೆಲಸ ಅದು. ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಧಾರವಾಡದ ನೇಕಾರ ಕುಟುಂಬದಲ್ಲಿ ೧೮೮೦ ರ ಜುಲೈ ೨ ರಂದು ಜನಿಸಿದರು. ತಾಯಿ ದಾನಮ್ಮ ಬೆಳಗಾವಿ ಜಿಲ್ಲೆಯ ಹೂಲಿಯವರು. ತಂದೆ ಸಹ ಶಾಲಾ ಶಿಕ್ಷಕರು ಮತ್ತು ಲೇಖಕರು. ಆಲೂರ ವೆಂಕಟರಾಯರ ಜೊತೆ ಮ್ಯಾಟ್ರಿಕ್ ಪರೀಕ್ಷೆ ಪಾಸಾದ ಹಳಕಟ್ಟಿಯವರು ಮುಂಬಯಿಯಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ೧೯೦೪ ರಲ್ಲಿ ಎಲ್.ಎಲ್. ಬಿ ಪಾಸುಮಾಡಿ ಬೆಳಗಾವಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದ ಅವರು ನಂತರ ಬಿಜಾಪುರದಲ್ಲಿ ಮುಂದುವರಿಸಿದರು. ಸರಕಾರ ಇವರನ್ನು ಸರಕಾರಿ ವಕೀಲರನ್ನಾಗಿ ನೇಮಿಸಿದರೂ ಅವರು ಅದನ್ನು ಬಿಟ್ಟು ಸ್ವತಂತ್ರ ಮರಾಗಿಯೇ ಉಳಿದರು. ಅವರಿಗೆ ವಚನ ಸಾಹಿತ್ಯ ಸಂಗ್ರಹದ ಕುರಿತಾಗಿಯೇ ಹೆಚ್ಚಿನ ಆಸಕ್ತಿ. ಆ ಅಮೂಲ್ಯ ಸಂಪತ್ತನ್ನು ಉಳಿಸಲು ಪ್ರತಿಜ್ಞಾಬದ್ಧರಾದ ಅವರು ಒಂದು ಮುದ್ರಣಾಲಯ ಹಾಕಿಕೊಳ್ಳಲು ತಮ್ಮ ಮನೆಯನ್ನೇ ಮಾರಿದರು. ಅವರು ಪತ್ರಕರ್ತರೂ ಆಗಿದ್ದರು. ತಮ್ಮ ಹಿತಚಿಂತಕ ಪ್ರೆಸ್ ನಲ್ಲಿ ವಚನ ಸಾಹಿತ್ಯ ಕೃತಿಗಳೊಡನೆ " ಶಿವಾನುಭವ " ಎಂಬ ಪತ್ರಿಕೆಯನ್ನೂ ಮುದ್ರಿಸುತ್ತಿದ್ದರು. ಅದರಲ್ಲಿ ಶರಣ ಸಾಹಿತ್ಯವನ್ನು ಪ್ರಕಟಿಸಿದ್ದಲ್ಲದೇ ಶಿವಾನುಭವ ಗ್ರಂಥಮಾಲೆ ಆರಂಭಿಸಿ ಸುಮಾರು ೧೬೨ ಗ್ರಂಥಗಳನ್ನು ಹೊರತಂದರೆಂದರೆ ಅವರ ಸಾಹಸ ಅರ್ಥವಾದೀತು. ಶರಣ ಸಾಹಿತ್ಯದಲ್ಲಿ ಅವರು ಸಾಕಷ್ಟು ಸಂಶೋಧನೆಗಳನ್ನೂ ಮಾಡಿದರು. ೧೯೨೦ ರ ವೇಳೆಗೆ ಅವರು ಸಾವಿರಕ್ಜೂ ಹೆಚ್ಚು ತಾಳೆಗರಿ ಗ್ರಂಥಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದರು. ಆರ್ಥಿಕ ಬಲವಿಲ್ಲದೆಯೂ ಅವರು ೨೫ ವರ್ಷ ಪತ್ರಿಕೆ ನಡೆಸಿದರು. ಬಸವಣ್ಣನವರ ವಚನಗಳನ್ನು ಮೊದಲು ಇಂಗ್ಲಿಷ ಭಾಷೆಗೆ ಅನುವಾದಿಸಿದ್ದು, ವಚನಗಳನ್ನು ಹಾಡಿಸಿ ಧ್ವನಿಮುದ್ರಣ ಮಾಡಿಸಿದ್ದು , ಕರ್ನಾಟಕ ಏಕೀಕರಣಕ್ಕಾಗಿ ನವಕರ್ನಾಟಕ ಎಂಬ ಪತ್ರಿಕೆ ಆರಂಭಿಸಿದ್ದು, ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಿದ್ದು, ಸಿದ್ಧೇಶ್ವರ ಅರ್ಬನ್ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದು ಇನ್ನೂ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ಹಳಕಟ್ಟಿಯವರ ಕಾರ್ಯಕ್ಷೇತ್ರ ಅದೆಷ್ಟು ವಿಸ್ತಾರವಾಗಿತ್ತೆಂಬುದನ್ನು ಸೂಚಿಸುತ್ತದೆ. ೧೯೫೬ ರಲ್ಲಿ ಕ. ವಿ. ವಿ. ಅವರಿಗೆ ಗೌರವ ಡಾಕ್ಟರೇಟ್ ಮನ್ನಣೆ ನೀಡಿತು. ಬಳ್ಳಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮುಂಬಯಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ೧೯೬೪ ರ ಜೂನ ೨೬ ರಂದು ಅವರು ನಿಧನರಾದರು. ಸರಕಾರಿ ವಕೀಲರಾಗಿ ಕೈತುಂಬ ದುಡಿದು ಸುಖವಾಗಿರಬಹುದಾಗಿದ್ದ ಅವರು ಸಮಾಜಕ್ಕಾಗಿ ತ್ಯಾಗ ಜೀವನ ನಡೆಸಿದರು. ನಾಡು ಅವರಿಗೆ ವಚನ ಪಿತಾಮಹ ಎಂದು ಗೌರವಿಸಿತು. ಬಿಎಂಶ್ರೀ ಅವರು ಹಳಕಟ್ಟಿಯವರನ್ನು ವಚನ ಗುಮ್ಮಟ ಎಂದು ಕರೆದರು. ಕನ್ನಡ ನಾಡುನುಡಿಗೆ ಸಾಹಿತ್ಯ ಸಮಾಜ ಶಿಕ್ಷಣಗಳಿಗೆ ಅಪಾರ ಸೇವೆ ಸಲ್ಲಿಸಿದ ಮರೆಯಲಾಗದ ಮತ್ತು ಮರೆಯಬಾರದ ಮಹಾನುಭಾವರವರು. - ಎಲ್. ಎಸ್. ಶಾಸ್ತ್ರಿ