top of page

ಲಿಂಗ ಜಾನಪದ

ಡಾ. ಪೆರ್ಲರ ಅಂಕಣ ವಸಂತೋಕ್ತಿ ; 23 ನಮ್ಮ ಜನಪದೀಯ ಬದುಕಿನಲ್ಲಿ ಸ್ತ್ರೀಯರ ಬಗೆಗಿನ ದೃಷ್ಟಿಕೋನ ಮತ್ತು ಶ್ರಮವಿಭಜನೆಯ ಕುರಿತ ಪರಿಕಲ್ಪನೆಯನ್ನು ಲಿಂಗಜಾನಪದ ಎಂದು ಕರೆದಿದ್ದೇನೆ. ಗ್ರಂಥಸಾಹಿತ್ಯದಲ್ಲಿ ಏನು ಉಲ್ಲೇಖವಾಗಿದೆ ಮತ್ತು ಹಿಂದಿನಿಂದಲೂ ಅದನ್ನು ನಾವು ಹೇಗೆ ವಿಶ್ಲೇಷಿಸುತ್ತ ಬಂದಿದ್ದೇವೆ ಎಂಬುದು ನಮ್ಮ ಅಧ್ಯಯನದ ವ್ಯಾಪ್ತಿಯಲ್ಲ. ಅದು ಶಿಷ್ಟಸಾಹಿತ್ಯಕ್ಕೆ ಸಂಬಂಧಿಸಿದ್ದಾಯಿತು. ಶಿಷ್ಟಸಾಹಿತ್ಯದಲ್ಲಿ ಉಲ್ಲೇಖವಾಗದ ಹಲವು ಸಂಗತಿಗಳು ಜನಪದ ಬದುಕಿನಲ್ಲಿವೆ. ಮತ್ತು ಅವು ಅನುಕ್ತವಾಗಿಯೇ ಉಳಿದು ಅರ್ಧಸತ್ಯ ಮಾತ್ರ ಜಗತ್ತಿಗೆ ಗೊತ್ತಾಗಿದೆ. ಜನಪದ ಬದುಕಿನಲ್ಲಿ ಮಹಿಳೆಯ ಸ್ಥಾನಗೌರವ ಏನು ಮತ್ತು ಆಕೆಯನ್ನು ಹೇಗೆ ನೋಡಲಾಗಿದೆ ಎಂಬುದು ನಮ್ಮ ಅಧ್ಯಯನದ ವಿಷಯ. ಜನಪದ ಸಾಹಿತ್ಯ ಹಾಗೂ ನಿತ್ಯಬದುಕಿನಲ್ಲಿ ಆಚರಣೆಯಲ್ಲಿರುವ ಕೆಲವು ಸಂಗತಿಗಳನ್ನು ನೋಡುವ ಮೂಲಕ ಆಕೆಯ ಸ್ಥಾನವನ್ನು ವಿವೇಚಿಸುವುದು ಲಿಂಗಜಾನಪದ ಅಧ್ಯಯನದ ವಿಷಯ ಆಗಬೇಕು. ಬುಡಕಟ್ಟು ಹಾಗೂ ಹಿಂದುಳಿದ ಹಲವು ಸಮುದಾಯಗಳಲ್ಲಿ ಮಹಿಳೆಗೆ ಪುರುಷನಷ್ಟೇ ಪ್ರಾಧಾನ್ಯ ನೀಡಲಾಗಿದೆ. ಮಾತೃಮೂಲೀಯ ಅಥವಾ ಅಳಿಯಕಟ್ಟು ಪದ್ಧತಿಯ ಕುಟುಂಬಗಳಲ್ಲಿ - ಅಧಿಕಾರವು ಮಹಿಳೆಯರಲ್ಲಿ ಹೆಚ್ಚು ಸುರಕ್ಷಿತ ಮತ್ತು ಮುಕ್ತ ಎಂಬ ಕಾರಣಕ್ಕಾಗಿ – ಮಹಿಳೆಗೆ ಪುರುಷನಿಗಿಂತ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ. ಮಾತೃಮೂಲೀಯ ಪದ್ಧತಿಯಲ್ಲಿ ಆಸ್ತಿಯ ಹಕ್ಕನ್ನು ಹೆಣ್ಣುಮಕ್ಕಳಿಗೆ ನೀಡಲಾಗಿದೆ. ಆಸ್ತಿಹಕ್ಕು ಎಂಬುದು ಆರ್ಥಿಕ ಸ್ವಾವಲಂಬನೆ ಮತ್ತು ಸ್ತ್ರೀ ಸಬಲೀಕರಣವಲ್ಲದೆ ಬೇರೇನಲ್ಲ. ಆಸ್ತಿಪಾಸ್ತಿ ಇಲ್ಲದಿರುವ ದುಡಿಯುವ ವರ್ಗದಲ್ಲಿ ಶ್ರಮವಿಭಜನೆಯ ಪದ್ಧತಿ ಕುತೂಹಲಕರವಾಗಿದೆ. ಪುರುಷನಿಗೆ ಸರಿಮಿಗಿಲಾಗಿ ದುಡಿಯುವ ಹೆಣ್ಣು ಆಧಿಕಾರಿಕವಾಗಿಯೇ ತನ್ನ ಹಕ್ಕು ಮತ್ತು ಸಮಾನತೆಯನ್ನು ಸ್ಥಾಪಿಸಿಕೊಂಡಿರುವುದು ನಮ್ಮ ಹಲವು ಸಮುದಾಯಗಳಲ್ಲಿ ಕಂಡುಬರುತ್ತದೆ. ಹಕ್ಕು ಮತ್ತು ಅಧಿಕಾರ ಯಾರೂ ಕೊಡುವಂಥದಲ್ಲ; ಅದು ಬದುಕಿನೊಂದಿಗೆ ಸಹಜವಾಗಿ ಇರುವಂಥದು ಎಂಬುದನ್ನು ನಮ್ಮ ಜನಪದ ಬದುಕು ತೋರಿಸಿಕೊಡುತ್ತದೆ. ಮೊಗವೀರ ಎಂಬ ಬೆಸ್ತ ಸಮುದಾಯದಲ್ಲಿ ಮಹಿಳೆ ಪುರುಷನಿಗಿಂತ ಹೆಚ್ಚು ಸ್ಥಾನಮಾನ ಮತ್ತು ಧ್ವನಿ (voice) ಹೊಂದಿರುವುದು ಕಂಡುಬರುತ್ತದೆ. ಅಲ್ಲಿ ಮಹಿಳೆ ನಿರ್ಧಾರಕ ಪಾತ್ರ ವಹಿಸುತ್ತಾಳೆ. ಕುಟುಂಬದಲ್ಲಿ ಆಕೆಯದೇ ಮೇಲುಗೈ. ಯಾಕೆಂದರೆ ಅಲ್ಲಿನ ಗಂಡಸು ದುಡಿಯುತ್ತ ಸದಾ ಕಾಲ ಹೊರಗಿರುವವನು. ಮೊಗವೀರರಿಗೆ ಸಮುದ್ರವೇ ಕರ್ಮಭೂಮಿ. ದೋಣಿಯಲ್ಲಿ ಪ್ರತಿನಿತ್ಯ ಕಡಲಿಗಿಳಿದು ಮೀನು ಹಿಡಿದರೆ ಮಾತ್ರ ಅವರ ಹೊಟ್ಟೆ ತುಂಬುವುದು. ಈ ಶ್ರಮಿಕ ವರ್ಗದ ಜನರ ಬದುಕು ಸದಾ ಆಪತ್ತಿನ ಅಲಗಿನಲ್ಲಿ ನಿಂತಿರುವುದನ್ನು ಎಲ್ಲರೂ ಬಲ್ಲರು. ಮೀನುಗಾರಿಕೆಗೆ ಒಂಬತ್ತು ತಿಂಗಳು ಮಾತ್ರ ಕಡಲಿಗಿಳಿಯಲು ಸಾಧ್ಯ. ಮುಂಗಾರು ಮತ್ತು ಮಳೆಗಾಲದ ಮೂರು ತಿಂಗಳ ಕಾಲ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಕಡಲಿಗಿಳಿಯುವಂತಿಲ್ಲ. ಒಂಬತ್ತು ತಿಂಗಳು ಪ್ರತಿನಿತ್ಯ ಕಡಲಿಗಿಳಿದು ಮೀನು ಹಿಡಿಯುವ ಮೊಗವೀರರಿಗೆ ಅವರವರ ಅದೃಷ್ಟದಂತೆ ಮೀನು ಒದಗಿ ಬರುವುದು. ಸುಮಾರು ಒಂದು ಶತಮಾನದ ಹಿಂದಿನ ವರೆಗೂ ಮೀನುಗಾರಿಕೆಯು ಸಾಂಪ್ರದಾಯಿಕವಾಗಿಯೇ ಇತ್ತು. ಚಿಕ್ಕ ಮತ್ತು ಮಾಧ್ಯಮಗಾತ್ರದ ದೋಣಿಗಳಲ್ಲಿ ಎಂಟು ಹತ್ತು ಮಂದಿ ತೆರಳಿ ಮೀನುಗಾರಿಕೆ ನಡೆಸುತ್ತಿದ್ದರು. ಕಳೆದ ಒಂದು ಶತಮಾನದಿಂದ ಈಚೆಗೆ ಮೀನುಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಹಾಗೂ ಪ್ರಗತಿ ಆಯಿತು. ಸುಸಜ್ಜಿತವಾದ ಆಧುನಿಕ ದೋಣಿಗಳಲ್ಲಿ ಮೂವತ್ತು-ನಲವತ್ತು ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿ ಮೂರ್ನಾಲ್ಕು ದಿನಗಳ ಕಾಲ ಕಡಲಲ್ಲೇ ಉಳಿದು, ರಂಪಣಿ ಮತ್ತು ಪರ್ಸೀನ್ ಬಲೆ ಬೀಸಿ ಒಂದೇ ಬಾರಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ಹಿಡಿದು ದಡಕ್ಕೆ ತಂದು ವ್ಯವಹಾರ ನಡೆಸುವ ಸ್ಥಿತಿಗೆ ಮೀನುಗಾರಿಕಾ ಉದ್ಯಮ ಇವತ್ತು ಬಂದು ನಿಂತಿದೆ. ಆದರೆ ಹಿಂದೆ ಬಡತನದ ದಿನಗಳು ದುರ್ಭರವಾಗಿದ್ದವು. ತಾಂತ್ರಿಕ ಪ್ರಗತಿ ಆಗಿರಲಿಲ್ಲ. ಕೇವಲ ರಟ್ಟೆಯ ಬಲದಲ್ಲಿ ಬದುಕು ಸಾಗಬೇಕಾಗಿತ್ತು. ಹೆಂಗಸರು ಕೂಡ ಮೈಮುರಿದು ದುಡಿದು ಹೊಟ್ಟೆ ಹೊರೆದುಕೊಳ್ಳುವುದು ಸಾಮಾನ್ಯವಾಗಿತ್ತು. ಬೇಸಿಗೆಯಲ್ಲಿ ಗಂಡಸರು ತರುತ್ತಿದ್ದ ಮೀನಿನಲ್ಲಿ ಮಾರಾಟವಾಗದೇ ಉಳಿದ ಮತ್ತು ಸಣ್ಣಪುಟ್ಟ ಹಾಗೂ ವಿಶಿಷ್ಟ ಮೀನುಗಳನ್ನು ಹೆಂಗಸರು ಬಿಸಿಲಲ್ಲಿ ಒಣಗಿಸಿ ಸಂಗ್ರಹಿಸಿಡುತ್ತಿದ್ದರು. ಮಳೆಗಾಲದ ಮೂರು ತಿಂಗಳು ಹೆಂಗಸರು ಅದನ್ನು ಬುಟ್ಟಿಯಲ್ಲಿ ಹೊತ್ತು ಊರೂರಿಗೆ ತೆರಳಿ ಮಾರುತ್ತಿದ್ದರು. ಮಳೆಗಾಲದ ಆ ಮೂರು ತಿಂಗಳು ಗಂಡಸರು ಕೆಲಸವಿಲ್ಲದೆ ದಿನದೂಡುವ ಸಂದರ್ಭದಲ್ಲಿ ಹೆಂಗಸರು ದುಡಿದು ಸಂಸಾರರಥವನ್ನು ಸಾಗಿಸುತ್ತಿದ್ದರು. ಹೊರಗೆ ಸಮಾಜದಲ್ಲಿ ಬೇರೆ ಬೇರೆ ರೀತಿಯ ಜನರೊಂದಿಗೆ ಬೆರೆತು ವ್ಯವಹಾರ ಮಾಡಬೇಕಾಗಿದ್ದುದರಿಂದ ಮೊಗವೀರ ಹೆಂಗಸರು ಕೈ ಬಾಯಿ ಜೋರಾಗಿ ತುಂಬ ಕಠಿಣವಾಗಿ ಇರುತ್ತಿದ್ದರು. ಅಂತಹ ಸಮುದಾಯಗಳಲ್ಲಿ ಸ್ತ್ರೀಸಮಾನತೆ ಸಹಜವಾಗಿಯೇ ಇತ್ತು. ಅಲ್ಲಿ ಮೇಲು - ಕೀಳು ಎಂಬ ಕಲ್ಪನೆಯೇ ಇರಲಿಲ್ಲ. ಮೀನುಗಾರ ಸಮುದಾಯದಲ್ಲಿ ಗಂಡಸರು ಕ್ಷಣಕ್ಷಣಕ್ಕೂ ಜೀವದ ಹಂಗುತೊರೆದು ದಿನಗಟ್ಟಲೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದುದರಿಂದ ಸಂಸಾರರಥವನ್ನು ಮಹಿಳೆಯರೇ ನಡೆಸಬೇಕಾದ ಅನಿವಾರ್ಯತೆ ಇತ್ತು. ಒಣಮೀನು ಮಾತ್ರವಲ್ಲ, ಗಂಡಸರು ಪ್ರತಿನಿತ್ಯ ಬಲೆಬೀಸಿ ತರುತ್ತಿದ್ದ ಹಸಿಮೀನನ್ನು ಕೂಡ ಮಹಿಳೆಯರೇ ಮಾರಾಟ ಮಾಡಬೇಕಾಗುತ್ತಿತ್ತು. ಹೆಂಗಸರ ಕೈಯಲ್ಲಿ ಹಣ ಓಡಾಡುತ್ತಿತ್ತು. ಗಂಡಸರಿಗೆ ಸಣ್ಣಪುಟ್ಟ ಖರ್ಚಿಗೆ ಕೂಡ ಹೆಂಗಸರೇ ಹಣ ಕೊಡುವ ಪರಿಸ್ಥಿತಿ ಇತ್ತು! ಸ್ತ್ರೀ-ಪುರುಷರ ನಡುವಣ ಇಂತಹ ವಿಶಿಷ್ಟ ಶ್ರಮವಿಭಜನೆಯ ಕುರಿತು ಸುಮಾರು ಮೂವತ್ತೆರಡು ವರ್ಷಗಳ ಹಿಂದೆ, ಅಂದರೆ 1991 ರಲ್ಲಿ, ‘ನನಗರ್ಧ – ನಿನಗರ್ಧ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ರೂಪಕವೊಂದನ್ನು ನಾನು ಮಂಗಳೂರು ಆಕಾಶವಾಣಿಗಾಗಿ ಸಿದ್ಧಪಡಿಸಿದೆ. ಹತ್ತಾರು ಮಂದಿ ಮೀನುಗಾರರನ್ನು ಸಂದರ್ಶಿಸಿ, ಅವರ ಜನಪದ ಹಾಡುಗಳನ್ನು ಧ್ವನಿಮುದ್ರಿಸಿ ತಯಾರಿಸಿದ ವಿಶಿಷ್ಟ ರೂಪಕವಾಗಿತ್ತು ಅದು. ಮಂಗಳೂರು ಕೇಂದ್ರದಿಂದ ಮಾತ್ರವೇ ಅಲ್ಲ, ಕರ್ನಾಟಕದ ಇತರ ಆಕಾಶವಾಣಿ ಕೇಂದ್ರಗಳಿಂದಲೂ ಹಲವು ಬಾರಿ ಪ್ರಸಾರವಾಗಿ ಲಕ್ಷಾಂತರ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು. ಸ್ತ್ರೀ ಸಮಾನತೆ ಮತ್ತು ಮಹಿಳಾ ವಿಮೋಚನೆ ಎಂಬ ಕೂಗು ಮತ್ತು ಅಧ್ಯಯನದ ನೆಪದಲ್ಲಿ ಕೂದಲುಸೀಳುವ ಪ್ರವೃತ್ತಿ ವಿದ್ಯಾವಂತರಲ್ಲೇ ಅಧಿಕ ಅನಿಸುತ್ತದೆ. ಅದೊಂದು ರೀತಿಯ ಫ್ಯಾಶನ್ ಎಂಬಂತಾಗಿದೆ. ಹಾಗೆ ನೋಡಿದರೆ ಹಳ್ಳಿಯ ಜನಪದರಲ್ಲಿ ಮತ್ತು ಹತ್ತಾರು ಬುಡಕಟ್ಟು ಸಮುದಾಯಗಳಲ್ಲಿ ಶ್ರಮವಿಭಜನೆಯ ತತ್ತ್ವ ಹಾಸುಹೊಕ್ಕಾಗಿದೆ ಮತ್ತು ಅಲ್ಲಿನ ಮಹಿಳೆಯರು ನಡೆನುಡಿಗಳಲ್ಲಿ ಜೋರಾಗಿದ್ದು ಸ್ತ್ರೀ ಸಮಾನತೆ ಮತ್ತು ಆರ್ಥಿಕ ಸ್ವಾವಲಂಬನೆ ಎಂಬುದು ಅವರಿಗೆ ಉಸಿರಾಟದಷ್ಟೇ ಸಹಜವಾಗಿದೆ. ಸ್ತ್ರೀ ಸಮಾನತೆ ಮತ್ತು ಆರ್ಥಿಕ ಸ್ವಾವಲಂಬನೆಯ ಅತ್ಯುತ್ತಮ ಉದಾಹರಣೆ ಎಂದರೆ ಮೊಗವೀರ ಸಮುದಾಯದಲ್ಲಿ ಇಂದಿಗೂ ಆಚರಣೆಯಲ್ಲಿರುವ ನನಗರ್ಧ-ನಿನಗರ್ಧ ಎಂಬ ತತ್ತ್ವ. ಈ ಮೂವತ್ತೆರಡು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಆ ತತ್ತ್ವ ಇನ್ನೂ ಹಾಗೆಯೇ ಉಳಿದಿದೆ. ಮಹಿಳಾ ಸ್ವಾವಲಂಬನೆ, ಸ್ವಉದ್ಯೋಗ, ಆರ್ಥಿಕ ಸಬಲತೆ, ಸ್ತ್ರೀಸಶಕ್ತೀಕರಣ ಮುಂತಾಡವುಗಳಿಗೆ ಒಳ್ಳೆಯ ಉದಾಹರಣೆಯೆಂದರೆ ಮೊಗವೀರ ಸಮುದಾಯದಲ್ಲಿರುವ ಈ ಪದ್ಧತಿ. ಲಿಂಗ ಸಮಾನತೆಗೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಬೇಕಿಲ್ಲ. ಲಿಂಗಜಾನಪದದ ಅಧ್ಯಯನದಲ್ಲಿ ಇಂತಹ ಹಲವಾರು ಸಂಗತಿಗಳಿವೆ. ಡಾ.ವಸಂತಕುಮಾರ ಪೆರ್ಲ ಸಂಶೋಧಕ ಹಾಗು‌ ಅಧ್ಯಯನಶೀಲ ಡಾ.ವಸಂತಕುಮಾರ ಪೆರ್ಲ ಅವರ "ಲಿಂಗ ಜಾನಪದ " ಎಂಬ ಅಂಕಣ ನಿಮ್ಮ ಓದು ಮತ್ತು ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ

ಲಿಂಗ ಜಾನಪದ
bottom of page