top of page

ರೆ.ಹರ್ಮನ್ ಮೊಗ್ಲಿಂಗ್

ಕನ್ನಡಕ್ಕೆ ಮೊದಲ ಪತ್ರಿಕೆ ಕೊಟ್ಟ ರೆ. ಹರ್ಮನ್ ಮೊಗ್ಲಿಂಗ್ ----------------------------------- ‌ ಕನ್ನಡ ನಾಡು ನುಡಿಗೆ ಕನ್ನಡಿಗರಷ್ಟೇ ಅಥವಾ ಕನ್ನಡಿಗರಿಗಿಂತ ಮಿಗಿಲಾದ ಸೇವೆ ಸಲ್ಲಿಸಿದ ಹಲವರಿದ್ದಾರೆ. ಅವರನ್ನು ನಾವಿಂದು ಸ್ಮರಿಸಿಕೊಳ್ಳಲೇಬೇಕು ಅಥವಾ ಅವರನ್ನೆಂದೂ ಮರೆಯಲೇಬಾರದು. ಲೂಯಿಸ್ ರೈಸ್, ಕಿಟೆಲ್ಕ ಮೊದಲಾದವರು ಅಂಥವರ ಸಾಲಿಗೆ ಸೇರುತ್ತಾರೆ. ಅವರಲ್ಲಿ ಮೊಗ್ಲಿಂಗ್ ಅವರೂ ಒಬ್ಬರು. ಮೊಗ್ಲಿಂಗ್ ಕನ್ನಡಕ್ಕೆ ಮೊದಲ ಪತ್ರಿಕೆ ಕೊಟ್ಟವರು. ‌ಅವರು " ಮಂಗಳೂರು ಸಮಾಚಾರ" ಪತ್ರಿಕೆಯನ್ನು ೧೮೪೩ ರಲ್ಲಿ ಆರಂಭಿಸಿದರು. ಅದೇ ಕನ್ನಡದ ಮೊದಲ ಪತ್ರಿಕೆ‌. ೧೮೪೩ ರ ಜುಲೈ ಒಂದರಂದು ಅವರು ಆ ಪತ್ರಿಕೆ ಆರಂಭಿಸಿದರು. ಇಂದು ಆದಿನವನ್ನೇ ಪತ್ರಿಕಾ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಮೊಗ್ಲಿಂಗ್ ಸಾಧನೆ ಅಷ್ಟಕ್ಕೇ ಮುಗಿಯುವದಿಲ್ಲ. ಮೂಲತಃ ಅವರೊಬ್ಬ ಸಾಹಿತಿ. ವಿದೇಶದ ಬಾಸೆಲ್ ಮಿಶನರಿಗಳು ಭಾರತ ಪ್ರವೇಶಿಸಿದ ಮೂಲ ಉದ್ದೇಶ ಬೇರೆಯಾಗಿರಬಹುದು. ಆದರೆ ಅವರಲ್ಲಿ ಹಲವರು‌ ಈ ದೇಶದ ಪ್ರಾದೇಶಿಕ , ಭಾಷಿಕ ಏಳ್ಗೆಗಾಗಿ ದುಡಿದದ್ದನ್ನು ನಾವು ಅಲ್ಲಗಳೆಯುವಂತಿಲ್ಲ. ಬಾಸೆಲ್ ಅನ್ನುವದು ಸ್ವಿಜರ್ಲ್ಯಾಂಡ್ ನ ಒಂದು ನಗರದ ಹೆಸರು. ಅಲ್ಲಿನ ಬಾಸೆಲ್ ಇವ್ಯಾಂಜಲಿಕಲ್ ಮಿಶನ್ ಎಂಬುದು ಒಂದು ಕ್ರೈಸ್ತ ಮತಪ್ರಚಾರ ಸಂಸ್ಥೆ. ಇವರೆಲ್ಲ ಜರ್ಮನ್ ಭಾಷಿಕರು. ಉಳಿದ ಐರೋಪ್ಯ ಮಿಶನರಿಗಳ ಪ್ರಮಾಣದಲ್ಲಿ ಇವರದು ಸಣ್ಣ ಗುಂಪು. ಆದರೆ ಅವರಲ್ಲಿ ಹೆಚ್ಚಿನವರು ಉತ್ತಮ ಅಕಾಡೆಮಿಕ್ ಹಿನ್ನೆಲೆ ಹೊಂದುದವರಾಗಿದ್ದರು. ಭಾರತಕ್ಕೆ ಬಂದ ಮೊದಲಲ್ಲಿ ಇವರು‌ ತಮ್ಮ ಮತಪ್ರಚಾರಕ್ಕೆ ಅನುಕೂಲವಾಗಲೆಂದೇ ಕನ್ನಡ ಭಾಷೆ ಕಲಿತು ಇಲ್ಲಿನ ಜನರೊಡನೆ ಬೆರೆತವರು. ಆದರೆ ಮುಂದೆ ಭಾರತೀಯ ಸಂಸ್ಕ್ರತಿ ಜನಜೀವನದ ಅಭ್ಯಾಸದಿಂದಾಗಿ‌ ಅವರ ಮಾನಸಿಕ, ವೈಚಾರಿಕ ಧೋರಣೆಯನ್ನೇ ಬದಲಿಸಿದ್ದು ವಿಶೇಷ. ನಂತರ ಅವರು ಮತಾಂತರಕ್ಕಿಂತ ಹೆಚ್ಚಾಗಿ ನಮ್ಮೊಡನೆ ಬೆರೆತು ನಮ್ಮ ನಾಡುನುಡಿ ಸಂಸ್ಕೃತಿಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದು ಗಮನಿಸಬೇಕಾದ ವಿಚಾರ. (ಹಾಗೆ ನೋಡಿದರೆ ಭಾರತದ ಮೊದಲ ಪತ್ರಿಕೆ ಹೊರತಂದವರೂ ವಿದೇಶೀಯರೇ. ) 1811. ಮೇ 29 ರಂದು ಹುಟ್ಟಿದ ಮೊಗ್ಲಿಂಗ್ ಶ್ರೀಮಂತ ಕುಟುಂಬದವರೇನೂ ಆಗಿರಲಿಲ್ಲ. ಆದರೆ ಅವರದು‌ ಸುಸಂಸ್ಕೃತ ಕುಟುಂಬ. ತಂದೆ ಶಿಕ್ಷಕ. ಹರ್ಮನ್ ಸಹ ಉತ್ತಮ ಶಿಕ್ಷಣ ಪಡೆದು ತಮ್ಮ ದೇಶದಲ್ಲೇ ಅತ್ಯುತ್ತಮ ಶಿಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮ್ಮ ಹದಿನೆಂಟನೇ ವಯಸ್ಸಿಗೇ ಸೆಮಿನರಿ ಶಿಕ್ಷಣ ಪದವಿ ಪಡೆದ ಅವರು ಧಾರ್ಮಿಕ ಶಿಕ್ಷಣದ ಸಂಗಡ ಸಾಹಿತ್ಯದ ಅಭ್ಯಾಸವನ್ನೂ ಮಾಡಿದರು. ವಿ. ವಿ. ಶಿಕ್ಷಣ ಮುಗಿದ ನಂತರ ಅವರು ಭಾರತಕ್ಕೆ ತೆರಳಿ ಮಿಶನರಿಯಾಗಿ ಕಾರ್ಯ ನಿರ್ವಹಿಸುವ ನಿರ್ಧಾರ ಮಾಡಿದರು. ೧೮೩೬ ರಲ್ಲಿ ಅವರು ತಮ್ಮ ೨೫ ನೇ ವಯಸ್ಸಿನಲ್ಲಿ ಭಾರತಕ್ಕೆ ಅಂದರೆ ಮುಂಬಯಿಗೆ ಬಂದಿಳಿದರು. ಭಾರತದ ಬಗ್ಗೆ ಮೊದಲೇ ಸಾಕಷ್ಟು ‌ಓದಿ ತಿಳಿದುಕೊಂಡಿದ್ದ‌ ಮೊಗ್ಲಿಂಗ್ ಈ ದೇಶವನ್ನೇ ಮುಂದೆ ಬಹಳ ಪ್ರೀತಿಸಿದರು ಮತ್ತು ಇಲ್ಲಿ ಬಹಳಷ್ಟು ಕೆಲಸವನ್ನೂ ಮಾಡಿದರು. ಆಗ ಅವರು ಮುಂಬಯಿ ನಗರವನ್ನು ವರ್ಣಿಸಿದ್ದು " ತೆಂಗಿನ ಮರಗಳ ಸಾಲಿನ ಹಿಂದೆ ಅಡಗಿರುವ ಬೃಹತ್ ನಗರ" ಎಂದು. ಮೊಗ್ಲಿಂಗ್ ಅವರ ಕಾರ್ಯಕ್ಷೇತ್ರ ಕರ್ನಾಟಕವೆಂದು‌ ಮೊದಲೇ ನಿಶ್ಚಿತವಾದ್ದರಿಂದ ಅವರು ಅಲ್ಲಿಂದ ಮಂಗಳೂರಿಗೆ ಹಡಗಿನಲ್ಲಿ ಬಂದು ನಂತರ ಧಾರವಾಡಕ್ಕೆ ಬಂದರು. ಅವರೊಡನೆ ಆಗ ಹೆಬಿಕ್ ಎಂಬ ಮಿಶನರಿಯೂ ಇದ್ದರು. ಅವರಿಬ್ಬರೂ ಗೋವಾ ಮಾರ್ಗವಾಗಿ ಪಶ್ಚಿಮ ಕರಾವಳಿ ಮೂಲಕ ಆಅಕಾಲ್ನಡಿಗೆಯಲ್ಲೇ ಧಾರವಾಡಕ್ಕೆ ಹೊರಟಿದ್ದರಿಂದ ಅವರಿಗೆ ಕನ್ನಡದೊಡನೆ ತುಳು ಕೊಂಕಣಿ ಜನಜೀವನದ ಸಂಪರ್ಕವೂ ಬಂತು. ಅಲ್ಲಿಂದ ಮೊಗ್ಲಿಂಗ್ ಧಾರವಾಡಕ್ಕೆ ಬಂದರೆ ಅವರೊಡನಿದ್ದ ಹೆಬಿಕ್ ಬೆಳಗಾವಿಗೆ ಬಂದರು. ಧಾರವಾಡಕ್ಕೆ ಅವರು ಬಂದ ಪ್ರಮುಖ ಉದ್ದೇಶವೇ ಕನ್ನಡ ಕಲಿಯುವದಾಗಿತ್ತು. ಕನ್ನಡ ಭಾಷೆಯೊಡನೆ ಅವರು ಹಳಗನ್ನಡ, ವ್ಯಾಕರಣ, ಸಾಹಿತ್ಯಗಳನ್ನೂ ಕಲಿತರು. ಗಮನಿಸಬೇಕಾದ ಸಂಗತಿಯೆಂದರೆ ಅವರು ಗದಗಿಗೆ ಹೋಗಿ ಅಲ್ಲಿ ಬ್ರಾಹ್ಮಣ ಶಿಕ್ಷಕರೊಬ್ಬರಿಂದ ಕನ್ನಡದ ಅಭ್ಯಾಸ ಮಾಡಿದರು. ಆಗ ಅವರನ್ನು ವಿಶೇಷವಾಗಿ ಆಕರ್ಷಿಸಿದ್ದು ದಾಸರ ಪದಗಳು. ಮುಂದೆ ಮೊಗ್ಲಿಂಗ್ ದಾಸರ ಪದಗಳ ಬಗ್ಗೆ ಹೆಚ್ಚಿನ ಅಧ್ಐನವನ್ನೂ ಮಾಡಿದರು. ಸಂಪಾದಿತ ಕೃತಿ ಹಿರತಂದರು. ಅವರಿಗೆ ಸಂಸ್ಕೃತ ಜ್ಞಾನವೂ ಇತ್ತು. ಗದಗ ಧಾರವಾಡಗಳು ಅವರಿಗೆ ಬಹಳ ಪ್ರಿಯವಾಗಿದ್ದವು. ೧೯೩೮ ರಲ್ಲಿ ಅವರನ್ನು ಮಂಗಳೂರಿಗೆ ಕಳಿಸಲಾಯಿತು. ಅವರಿಗಾಗಿ ಬಂಗಲೆಯನ್ನು ಕೊಟ್ಟಿದ್ದರೂ ಅವರು ಅದನ್ನು ಬಿಟ್ಟು ಹಳೇ ಮಂಗಳೂರಿನ ಬೊಕ್ಕಪಟ್ಣ ಎಂಬಲ್ಲಿ ಸಣ್ಣ ಮನೆಯೊಂದನ್ನು ಹಿಡಿದು ಜನಸಾಮಾನ್ಯರ ನಡುವೆಯೇ ಜೀವಿಸಬಯಸಿದರು. ಮುಂದೆ ಅವರಿಂದ ಕನ್ನಡಕ್ಕೆ ಅಪಾರವಾದ ಸೇವೆ ಲಭಿಸಿತು. ಮಂಗಳೂರಿಗೆ ಬಂದ ಮೊಗ್ಲಿಂಗ್ ತಮ್ಮ ಮನೆಯಲ್ಲೇ ಒಂದು ಶಾಲೆ ತೆಗೆದು ವಿದ್ಯಾದಾನ ಮಾಡಲಾರಂಭಿಸಿದರು.‌ ಸಂಗಡ‌ಇಲ್ಲಿಯ ಜನಜೀವನ , ಸಂಸ್ಕೃತಿಗಳನ್ನರಿಯಲು ಕರಾವಳಿಯ ಉದ್ದಗಲಕ್ಕೆ ಪ್ರವಾಸ ಮಾಡಿದರು. ಆಗಿನ ಸಂಯುಕ್ತ ದಕ್ಷಿಣ ಕನ್ನಡವನ್ನಲ್ಲದೆ ಕಾಸರಗೋಡು ಭಾಗದಲ್ಲೂ ಅಡ್ಡಾಡಿದರು. ಪ್ರಾಚೀನ ಹಸ್ತಪ್ರತಿಗಳನ್ನು ಹಾಗೂ ಹಳೆಯ‌ದಾಖಲೆಗಳನ್ನು ಸಂಗ್ರಹಿಸಿದರು. ಬಾರ್ಕೂರಿನಲ್ಲಿ ಅವರಿಗೆ ಒಂದು ಕನ್ನಡ ಭಾಷೆಯಲ್ಲಿರುವ ತುಳುನಾಡಿನ ಕತೆಯ ಹಸ್ತಪ್ರತಿಯೊಂದು ದೊರಕಿತ್ತು. ಫರಂಗಿಪೇಟೆ, ಬಂಟ್ವಾಳ, ಕಾರಿಂಜಾ, ಧರ್ಮಸ್ಥಳ, ಸುಬ್ರಹ್ಮಣ್ಯ, ಸುಳ್ಯ, ಆಡೂರು, ಮೊದಲಾದ ಪ್ರದೇಶಗಳಿಗೆ ಭೆಟ್ಟಿ ನೀಡಿದರು. ಮುಂದೆ ಅವರು ಕೆಲಕಾಲ ಕೊಡಗಿನಲ್ಲೂ ಇದ್ದರು. ಮೊಗ್ಲಿಂಗ್ ಭಾರತಕ್ಕೆ ಬಂದ ಉದ್ದೇಶ ಬೇರೆಯೇ ಆಗಿದ್ದರೂ ಅವರಿಗೆ ಮಿಶನರಿ ಕೆಲಸಕ್ಕಿಂತ ಕನ್ನಡದ ಕೆಲಸವೇ ಹೆಚ್ಚು ಪ್ರಿಯವಾಯಿತು. ಅವರು ಕನ್ನಡ ಭಾಷೆ ಸಾಹಿತ್ಯಗಳ ಕುರಿತು ಅಪಾರ ಪ್ರೇಮ ಬೆಳೆಸಿಕೊಂಡರು. ಇದರಿಂದ ಬಾಸೆಲ್ ಮಿಶನ್ ಸಂಸ್ಥೆಯ ಕೆಂಗಣ್ಣಿಗೂ ಗುರಿಯಾದರು. ನಮತರ ಅದರ ಸಂಬಂಧವನ್ನೂ ಕಡಿದುಕೊಂಡರು. ಅಚ್ಚರಿಯಾದರೂ ಸತ್ಯ ಎಂಬಂತೆ ಮೊಗ್ಲಿಂಗ್ ಹೊಸಗನ್ನಡ ಸಾಹಿತ್ಯದ ಹಲವು ಪ್ರಥಮಗಳಿಗೆ ಕಾರಣರಾದರು. ಕನ್ನಡದ ಪ್ರಥಮ ಪತ್ರಿಕೆಯಂತೂ ಅವರದೇ. ಅದಲ್ಲದೇ ಗದ್ಯ ( ಧಾರ್ಮಿಕ ) ಸಾಹಿತ್ಯ, ಗ್ರಂಥ ಸಂಪಾದನೆ, ದಾಸಸಾಹಿತ್ಯ ಸಂಗ್ರಹ, ಜಾನಪದ ಸಾಹಿತ್ಯ ಸಂಗ್ರಹ, ಕನ್ನಡ ಪಠ್ಯರಚನೆ, ಇವೆಲ್ಲ ಕ್ಷೇತ್ರಗಳಲ್ಲಿ ಮೊದಲ ಹೆಜ್ಜೆ ಇರಿಸಿದವರು ಮೊಗ್ಲಿಂಗ್. ವಿಶೇಷವೆಂದರೆ ಕನ್ನಡ ಭಾಷೆ ಸಾಹಿತ್ಯದ ಅವರ ಅಗಾಧ ಕೆಲಸಕ್ಕಾಗಿ ಜರ್ಮನಿಯ ಟ್ಯುಂಬಿಜೆನ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಅಂತಹ ಗೌರವ ಪಡೆದ ಮೊದಲಿಗರು ಮೊಗ್ಲಿಂಗ್. ಅದಾಗಿ ೩೮ ವರ್ಷಗಳ ನಂತರ ಕನ್ನಡ ಇಂಗ್ಲಿಷ ಶಬ್ದಕೋಶ ನಿರ್ಮಿಸಿದ ಕಿಟೆಲ್ ಅವರಿಗೆ ಈ ಡಾಕ್ಟರೇಟ್ ಗೌರವ ದೊರಕಿತು. ೧೮೫೫ ರಲ್ಲಿ ಮೊಗ್ಲಿಂಗ್ ಪೌಲಿನ್ ಎಂಬವರನ್ನು ಮದುವೆಯಾದರು. ಈ ಪೌಲಿನ್ ಮೊಗ್ಲಿಂಗರ ಅತ್ಯಂತ ಆತ್ಮೀಯ ಮಿತ್ರರಾಗಿದ್ದ ವೈಗ್ಲೆಯವರ ಪತ್ನಿ. ವೈಗ್ಲೆಯವರು ಅಕಸ್ಮಾತ್ ನಿಧನ ಹೊಂದಿದ್ದರಿಂದ ತನ್ನ ಗೆಳೆಯನ ಹೆಂಡತಿ ಮಕ್ಕಳಿಗೆ ಆಸರೆ ನೀಡಲೆಂದೇ ಪೌಲಿನ್ ರನ್ನು ಮದುವೆಯಾದರು. ಪೌಲಿನ್ ಸಹ ಸಾಹಿತ್ಯಾಸಕ್ತರಿದ್ದುದರಿಂದ ಅವರ ದಾಂಪತ್ಯ ಸುಖಮಯವಾಯಿತು. ಆಧುನಿಕ ಶಾಲಾ ಪಠ್ಯಕ್ರಮ ತಯಾರಿಸಿದ ಮೊದಲಿಗರು ಮೊಗ್ಲಿಂಗ್ ಮತ್ತು ವೈಗ್ಲೆ. ಇದರಲ್ಲಿ ಗಣಿತ, ಭೂಗೋಲ, ನಿಸರ್ಗ ಶಾಸ್ತ್ರ, ಇತಿಹಾಸಗಳೆಲ್ಲ ಸೇರಿದ್ದವು. ಮುಂದೆ ಅವರು ಬೋಧಕರ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಇಂದು ಅದನ್ನು ಕರ್ನಾಟಕ ಥಿಯಾಲಾಜಿಕಲ್ ಕಾಲೇಜು ಎಂದು ಕರೆಯಲಾಗುತ್ತಿದೆ. ತಮ್ಮ ಶಾಲಾ ಮಕ್ಕಳೊಂದಿಗೆ ಪ್ರವಾಸ ಮಾಡಿ ಅವರಿಗೂ ಆ ಮೂಲಕ ನಾಡಿನ ಪರಿಚಯ ಮಾಡಿಕೊಡುತ್ತಿದ್ದರು. ಪುಸ್ತಕಗಳ ಕೆಲಸಕ್ಕೆ ಅನುಕೂಲವಾಗಲೆಂದು ಮೊಗ್ಲಿಂಗ್ ಮಂಗಳೂರಿಗೆ ಮುದ್ರಣ ಯಂತ್ರ ವನ್ನೇ ತಂದರು. ಅದು ಅವರಿಗೆ ಪತ್ರಿಕೆ ಹೊರತರುವ ಕೆಲಸಕ್ಕೂ ನೆರವಾಯಿತು. ಮೊದಲು ಕಲ್ಲಚ್ಚಿನದಾಗಿದ್ದ ಮುದ್ರಣಯಂತ್ರವನ್ನು ಮಂಗಳೂರಿಗೆ ತಂದ ಮೊಗ್ಲಿಂಗ್ ನಂತರ ಆಧುನಿಕ ಮುದ್ರಣ ಯಂತ್ರವನ್ನೂ ಹಾಕಿಕೊಂಡರಲ್ಲದೆ ಕನ್ನಡದ ಹಳೆಯ‌ಲಿಪಿಯನ್ನು ಅಚ್ಚಿಗೆ ಅನುಕೂಲವಾಗುವಂತೆ ಪರಿಷ್ಕರಿಸಿದರು. ೧೮೫೭ ರಲ್ಲಿ ತಮ್ಮದೇ ಸಂಪಾದಕತ್ವದ " ರಾಜೇಂದರಮಾಮೆ " ಎಂಬ ಕೃತಿಯನ್ನು ಹೊಸ ಲಿಪಿಯಲ್ಲೇ ಮುದ್ರಿಸಿದರು. ೧೫೨ ಪುಟಗಳ ಈ ಪುಸ್ತಕದಲ್ಲಿ ಎಲ್ಲಿಯೂ ಒತ್ತಕ್ಷರಗಳನ್ನೇ ಬಳಸದಿರುವದು ಒಂದು ವಿಶೇಷ. ( 'ನಂತರದಲ್ಲಿ' ಎಂಬ ಶಬ್ದವನ್ನು ಆಗ 'ನಂತರದಲ್ ಲಿ' ಎಂದು ಬಳಸಲಾಗುತ್ತಿತ್ತು. ). ಅವರ ಒಂದು ಸಣ್ಣ ಕೃತಿ " ಈರಾರು ಪತ್ರಿಕೆ". ಇದು ಹನ್ನೆರಡು ಕಾಲ್ಪನಿಕ ಪತ್ರಗಳ ಕಥಾಸ್ವರೂಪದ ಕೃತಿ. ಆಧುನಿಕ ಕನ್ನಡ ಸಾಹಿತ್ಯದ ಒಂದು ಮಹತ್ವದ ಕೃತಿ ಇದು. ಇದು ಮತಾಂತರ ವಿಷಯಕ್ಕೆ ಸಂಬಂಧಿಸಿದ್ದು. ಆಗಿನ ಕನ್ನಡ ಗಾದೆ ಮಾತುಗಳು ಸಹ ಇದರಲ್ಲಿ ಬಳಕೆಯಾಗಿವೆ. " ಹೃದಯ ದರ್ಪಣ" ಎಂಬುದು ಅವರು ಹೆಬಿಕ್ ಜೊತೆಗೂಡಿ ರಚಿಸಿದ ಧಾರ್ಮಿಕ ಸಾಹಿತ್ಯ ಕೃತಿ. ಸಚಿತ್ರವಾಗಿದೆ. ಮುಂದೆ ದೇವ ವಿಚಾರಣೆ, ಜಾತಿ ವಿಚಾರಣೆ, ಮತ ವಿಚಾರಣೆ ಎಂಬ ಮೂರು ಕೃತಿಗಳು ಬಂದವು. ದೇವವಿಚಾರಣೆ ಸಂವಾದ ರೂಪದ್ದಾದರೆ ಉಳಿದೆರಡು ಪ್ರಬಂಧಗಳ ಮಾದರಿಯದು. ಯಾತ್ರಿಕನ ಸಂಚಾರ (ಅನುವಾದ), ಕ್ರೈಸ್ತ ಗೀತೆಗಳು , ಚಿಕ್ಕವನಾದ ಹೆನ್ರಿಯೂಅವನ ಬೋಯಿಯೂ ಅವರ ಇತರ ಕೃತಿಗಳು. ಅವರು ಕನ್ನಡಕ್ಕೆ ಮಾಡಿದ ಬಹಳ ದೊಡ್ಡ ಉಪಕಾರವೆಂದರೆ ಹಲವು ಅಮೂಲ್ಯ ಗ್ರಂಥಗಳನ್ನು ಸಂಪಾದಿಸಿದ್ದು. ಜೈಮಿನಿ ಭಾರತ, ತೊರವೆ ರಾಮಾಯಣ, ದಾಸರ ಒದಗಳು, ಬಸವ ಪುರಾಣ, ಚೆನ್ನಬಸವ ಪುರಾಣವು, ಕನಕದಾಸರ ಹರಿಭಕ್ತಿಸಾರ, ಕುಮಾರವ್ಯಾಸ ಭಾರತ ಮೊದಲಾದವು ಅವರ ಸಂಪಾದಿತ ಕೃತಿಗಳು. ವಿಶೇಷವೆಂದರೆ ಅವರು " ಮಂಗಳೂರು ಪಂಚಾಂಗ" ದ ಸಂಪಾದಕ ಮಂಡಳಿಯ ಸದಸ್ಯರಲ್ಲೊಬ್ಬರಾಗಿದ್ದರು. ೧೮೪೩ ರಲ್ಲಿ " ಕನ್ನಡದ ಮೊದಲ ಪತ್ರಿಕೆ " ಮಂಗಳೂರು ಸಮಾಚಾರ" , ೧೮೪೪ ರಲ್ಲಿ ಬಳ್ಳಾರಿಯಿಂದ " ಕಂನಡ ಸಮಾಚಾರ " , ೧೮೫೭ ರಲ್ಲಿ "ಕಂನಡ ವಾರ್ತಿಕ" ಪತ್ರಿಕೆಗಳನ್ನು ಹೊರತಂದು ಕನ್ನಡ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದರು. ಇವು ಹೆಚ್ಚು ಕಾಲ ನಡೆಯಲಿಲ್ಲವಾದರೂ ಕನ್ನಡ ಪತ್ರಿಕಾರಂಗದ ಈ ಮೊದಲ ಸಾಹಸಕ್ಕೆ ಮಹತ್ವ ಇದ್ದೇಇದೆ. ಈಗ ಕನ್ನಡ ಪತ್ರಿಕೋದ್ಯಮಕ್ಕೆ ೧೭೬ ವರ್ಷ. ೧೮೧೧ ರಲ್ಲಿ ಹುಟ್ಟಿದ ಅವರು ೧೮೮೧ ರಲ್ಲಿ ನಿಧನರಾದರು. ಆ ಕಾಲದಲ್ಲಿ ಮಿಶನರಿಗಳು ಭಾರತಕ್ಕೆ ಬರುತ್ತಿದ್ದುದು ಎಲ್ಲರಿಗೂ ತಿಳಿದಿರುವಂತೆ ಕ್ರೈಸ್ತ ಧರ್ಮದ ಪ್ರಚಾರ ಮತ್ತು ಮತಾಂತರಗಳಿಗಾಗಿ. ಹಾಗೆ ಅಸಂಖ್ಯಾತ ಜನ ಮಿಶನರಿಗಳು ಬಂದು ಆ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಾರೆ. ಆದರೆ ಮೊಗ್ಲಿಂಗ್ , ಕಿಟೆಲ್ ರಂತಹ ಕೆಲವರು ಮಾತ್ರ ಇಲ್ಲಿಯ ಭಾಷೆ, ಸಾಹಿತ್ಯ ಜನಜೀವನ ಸಂಸ್ಕ್ರತಿಗಳ ಪ್ರೀತಿಯನ್ನು ಬೆಳೆಸಿಕೊಂಡು ಕನ್ನಡಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದು ಗಮನಾರ್ಹ. ಅವರಿಗೆ ಕನ್ನಡ ಜನ ಕೃತಜ್ಞರಾಗಿರಲೇಬೇಕಾಗಿದೆ. - ಎಲ್. ಎಸ್. ಶಾಸ್ತ್ರಿ, ನಾಜಗಾರ

ರೆ.ಹರ್ಮನ್ ಮೊಗ್ಲಿಂಗ್
bottom of page