top of page

ರವಿ ಬೆಳಗೆರೆ ಎಂಬ ಸೋಜಿಗ

ರವಿ ಅವರನ್ನು ನಾನು ಹತ್ತಿರದಿಂದ ಕಂಡು ಒಡನಾಡಿದವ.೧೯೭೭ ನೇ ಇಸ್ವಿಯಲ್ಲಿ ನಾನು ಕನ್ನಡ ಎಂ.ಎ.ಅಂತಿಮ ವರ್ಷದಲ್ಲಿದ್ದಾಗ ರವಿ ಇತಿಹಾಸ ಎಂ.ಎ.ಪ್ರಥಮ ವರ್ಷಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಬಂದರು.ಗೆಳೆಯರ ಜೊತೆ ಇರುತ್ತಿದ್ದ ರವಿ ತುಂಬಾ ಲವಲವಿಕೆಯ ವ್ಯಕ್ತಿ. ಅಲ್ಲಿ ಲವ್ವು ,ರವಿಕೆ ಎಲ್ಲ ಇರುತ್ತಿತ್ತು ಎನ್ನುತ್ತಿದ್ದರು ಅವರ ಮಿತ್ರರು. ಕ.ವಿ.ವಿ.ಯೂನಿಯನ್ ಜಿಮಖಾನಾ ವಿಭಾಗದ ಆಶು ಭಾಷಣ,ಆಶು ಕವಿತೆ,ಸಿದ್ಧ ಭಾಷಣದಲ್ಲಿ ನಾನೆ ಮೊದಲಿಗನಾದಾಗ ರವಿ ಏನ್ರಿ ನಿಮ್ಮ ಪ್ರತಿಭೆ ಕಂಡ್ರೆ ಹೊಟ್ಟೆ ಕಿಚ್ಚಾಗುತ್ತೆ ಅಂತ ಅಭಿನಂದಿಸಿದ್ದರು.ಅದೆ ವರ್ಷ ಪ್ರೊ.ತೋಂಟದಾರ್ಯ ಮತ್ತು ಡಾ.ಎ.ಮುರಿಗೆಪ್ಪ ಅವರ ನಿರ್ದೇಶನದ ಪ್ರೊ.ತಾರಾನಾಥ( ಎಂಡ್ರೆ ಎಡಮೊವ್ ನ ಪ್ರೊ.ಟೆಹರಾನ್ ) ನಾಟಕದಲ್ಲಿ ರವಿ ಪ್ರೊ.ತಾರಾನಾಥ ಆಗಿ ಅದ್ಭುತ ಅಭಿನಯ ಮಾಡಿದ್ದರು.ನಾನು ಹೋಟೆಲ್ ಮಾಣಿಯ ಪಾತ್ರವನ್ನು ಮಾಡಿದ್ದೆ.ಆ ನಾಟಕದ ರಿಹರ್ಸಲ್ ಗೆ ಎರಡುವಾರ ಅವರ ಜೊತೆ ಸೇರಿದ್ದೆ.    ಎಂ.ಎ.ಪದವಿ ಮುಗಿಸಿ ನಾನು ಅಂಕೋಲಾ ಜಿ.ಸಿ.ಕಾಲೇಜಿನ ಅಧ್ಯಾಪಕನಾಗಿ ಸೇರಿದೆ.ರವಿ ಬಳ್ಳಾರಿ ಜಿಲ್ಲೆಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇರಿದ್ದರು.ಅವರು ಅಲ್ಲಿ ಬಹುಕಾಲ ಉಳಿಯದೆ ಪತ್ರಿಕೋದ್ಯಮಕ್ಕೆ ಬಂದರು. ಆ ಬಳಿಕ ನನಗೆ ಅವರಿಗೆ ಸಂಪರ್ಕ  ಸಾಧ್ಯವಾಗಲಿಲ್ಲ. ಪ್ರೊ.ಅಶೋಕ ಶೆಟ್ಟರ್,ಗೆಳೆಯ ಪ್ರಿ.ಬೀರಣ್ಣ ನಾಯಕ ಮೊಗಟಾ ಅವರ ಮೂಲಕ ರವಿಯ ಬಗ್ಗೆ ಕೇಳಿದ್ದೆ. ತದ ನಂತರ ನನ್ನ ವಿದ್ಯಾರ್ಥಿ ಮಿತ್ರ ಸಂದೀಪ ನಾಯಕ( ಮಯೂರ ಪತ್ರಿಕೆಯ ಸಂಪಾದಕ) ಅವರ ಹತ್ತಿರ ರವಿಯ ಯೋಗ ಕ್ಷೇಮ ಕೇಳಿದ್ದೆ. ಹಾಯ್ ಬೆಂಗಳೂರನ್ನು ಆಗೊಮ್ಮೆ ಈಗೊಮ್ಮೆ ಓದುತ್ತಿದ್ದೆ. ಇದು ಕವಿರಾಜ ಮಾರ್ಗವಲ್ಲ ಕಾಮರಾಜ ಮಾರ್ಗ ಎಂಬ ಅವರ ಕಾದಂಬರಿಯಲ್ಲಿ  ರಾಜಕಾರಣಿಗಳ ತೆವಲು,ತೀಟೆಯ ಅನಾವರಣವನ್ನು ಓದಿ ಮೆಚ್ಚಿಕೊಂಡಿದ್ದೆ.ರವಿಯ ಛಾತಿಯನ್ನು ಮೆಚ್ಚಿಕೊಂಡಿದ್ದೆ.   ರವಿ ಬೆಳಗೆರೆ ಕಾಲೇಜು ಲೆಕ್ಚರರ್ ಆಗಿದ್ದರೆ ಮಿತಿಗೆ ಒಳಪಡುತ್ತಿದ್ದರೊ ಏನೊ.ಆದರೆ ಅವರು ಪತ್ರಿಕೋದ್ಯಮಕ್ಕೆ ಬಂದು ತಮ್ಮ ಪ್ರತಿಭೆ,ಸೃಜನ ಶೀಲತೆ ಮತ್ತು ಕ್ರಿಯಾಶೀಲತೆಯ ಆಯಾಮಗಳನ್ನು ವಿಸ್ತರಿಸಿಕೊಂಡರು.ಕತೆ,ಕಾದಂಬರಿಗಳ ಬರವಣಿಗೆ,ಹಾಯ ಬೆಂಗಳೂರು ಮತ್ತು ಓ ಮನಸೆ ಪತ್ರಿಕೆಯ ಬರವಣಿಗೆಯ ಮೂಲಕ ಜನರ ಮನವನ್ನು ಗೆದ್ದರು.ಪತ್ರಿಕೋದ್ಯಮಕ್ಕೆ ಪಿ.ಲಂಕೇಶ ಹಾಕಿಕೊಟ್ಟ ಬುನಾದಿ ಅತ್ಯಂತ ಭದ್ರವಾದುದು ಅದರ ರೆಂಬೆ ಕೊಂಬೆಗಳಂತೆ ಉಳಿದ ಪತ್ರಕರ್ತರು ತಮ್ಮ ಸಾಧ್ಯತೆಗಳನ್ನು ಹೊರಚಾಚಿಕೊಂಡರು. ರವಿ ಬೆಳಗೆರೆಯವರು ಅದೆ ದಾರಿಯಲ್ಲಿ ನಡೆದು ತಮ್ಮದೆ ಆದ ಸತ್ತೆಯನ್ನು ಸ್ಥಾಪಿಸಿಕೊಂಡಿದ್ದು ನಿಜ.ರವಿ ತನ್ನ  ಸಹೋದ್ಯೋಗಿಗಳ ಹತ್ತಿರ ತಾನು ಎಡಪಂಥೀಯ ಎಂದು ಹೇಳಿಕೊಂಡಿದ್ದನ್ನು ಅವರ ಒಡನಾಡಿಗಳು ನೆನಪಿಸಿಕೊಂಡಿದ್ದಾರೆ.ಆದರೆ ರವಿಯವರ ಒಲವು ಬಲ ಪಂಥದ ಕಡೆಗೆ ಇದ್ದುದನ್ನು ಬಹಳ ಜನ ಓದುಗರು ಮನಗಂಡಿದ್ದಾರೆ.ಅದು ಏನೆ ಇರಲಿ ರವಿ ಒಬ್ಬ ದಿಟ್ಟ ಮತ್ತು ಜಾಣ ಪತ್ರಕರ್ತರಾಗಿದ್ದರು.ಒಬ್ನ ಬರಹಗಾರರಾಗಿಯು ಜನರ ಒಲವು ಮತ್ತು ನಿಗೂಢಗಳ ಬಗೆಗಿನ ಕುತೂಹಲವನ್ನು ಬರವಣಿಗೆಯಲ್ಲಿ ದುಡಿಸಿಕೊಂಡು ಜನಪ್ರಿಯತೆಯನ್ನು ಗಳಿಸಿದವರು. ಕ್ರೈಂ ಸ್ಟೋರಿ,ಪಾತಕಿಗಳ ಲೋಕ,ಸಿನೇಮಾ ಇವೆಲ್ಲವೂ ರವಿಯ ಜನಪ್ರಿಯತೆಯನ್ನು ಹೆಚ್ಚಿಸಿದೆ.      ಪ್ರಾರ್ಥನಾ ಶಾಲೆ ರವಿ ಬೆಳಗೆರೆ ಅವರ ವ್ಯಕ್ತಿತ್ವದ ಜನಪರ ಆಶಯಗಳ ಅಭಿವ್ಯಕ್ತಿಯೆ ಸರಿ.ಅದು ಅವರ ಬಹುದೊಡ್ಡ ಸಾಧನೆ‌.ರವಿಯವರು ಎಸಗಿದ ಎಲ್ಲ ತಪ್ಪುಗಳನ್ನು ಮುಚ್ಚಿ ಹಾಕಬಲ್ಲ ಶಕ್ತಿ ಪ್ರಾರ್ಥನೆಯಲ್ಲಿದೆ. ರವಿ ಬೆಳಗೆರೆ ಈಗ ನಮ್ಮ ನಡುವೆ ಇಲ್ಲ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರು ಬರೆದ ಕೃತಿಗಳು, ಸಂಪಾದಕೀಯಗಳು, ಮಾಡಿದ ಸಿನೇಮಾಗಳು,ಪ್ರಾರ್ಥನಾ ಶಿಕ್ಷಣ ಸಂಸ್ಥೆ ರವಿ ಬೆಳಗೆರೆಯವರ ಸಾಧನೆ ಮತ್ತು ನೆನಪುಗಳನ್ನು ಶಾಶ್ವತವಾಗಿ ಉಳಿಸುತ್ತದೆ.ಅವರ ಅಗಲುವಿಕೆ ನಿಜದ ಅರ್ಥದಲ್ಲಿ ತುಂಬಲಾರದ ನಷ್ಟ.ಸತ್ತು ಬದುಕಿರುವ ರವಿ ಬೆಳಗೆರೆ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ.                                ಡಾ.ಶ್ರೀಪಾದ ಶೆಟ್ಟಿ.

ರವಿ ಬೆಳಗೆರೆ ಎಂಬ ಸೋಜಿಗ
bottom of page