top of page

ಯುದ್ಧ

*ಯುದ್ಧ* ನಡೆಯುತ್ತಿದೆ ನಿರಂತರ ಯುದ್ಧ... ಇದು ಆದಿಮಾನವರ ಘರ್ಷಣೆಯಲ್ಲ... ಸುದಾಸ, ದೀವೊದಾಸರದಲ್ಲ... ಘಜನಿ , ಘೋರಿಗಳ ದಾಳಿಗಲ್ಲ... ಬ್ರಿಟಿಷರ ದೌಷ್ಟ್ಯಕ್ಕಲ್ಲ... ದೇಶ ದೇಶಗಳ ಗಡಿ ತಂಟೆಗಲ್ಲ... ಆಂತರಿಕ ಕಿತ್ತಾಟಕ್ಕಲ್ಲ... ನಡೆಯುತ್ತಿದೆ  ನಿರಂತರ ಯುದ್ಧ... ಧರ್ಮಗಳು ಸಾರುವ ಸತ್ಯದ ಪುನರ್ ವಿಮರ್ಶೆಗಲ್ಲ... ಜಗದ ಸಾಮರಸ್ಯದ ಸಾಕಾರಕ್ಕಲ್ಲ... ಪ್ರಕೃತಿ ಮಾತೆಯ ರಕ್ಷಣೆಗಲ್ಲ... ನೊಂದವರ ಕಣ್ಣಂಚಿನ ಹೊಳಪಿಗಲ್ಲ... ಅಳುವ ಕಂದಮ್ಮಗಳ ಹಸಿವು ನೀಗಲು ಅಲ್ಲ... ನಡೆಯುತ್ತಿದೆ ನಿರಂತರ ಯುದ್ಧ... ಧರ್ಮ ಧರ್ಮಗಳ ಮೇಲಾಟಕ್ಕಾಗಿ.. ಮೂಢನಂಬಿಕೆಗಳ ಮೌಢ್ಯಕ್ಕಾಗಿ.. 'ಕೃಷ್ಣ ವೇಷ'ವ ತೊಟ್ಟ ಶಕುನಿಯರ ಕಪಟ ದ್ಯೂತಕ್ಕಾಗಿ.. ಧನವಂತರ ದಾಹಕ್ಕಾಗಿ... ಎಂದೂ ಮುಗಿಯದ ಮಾನವನ ಸ್ವಾರ್ಥಕ್ಕಾಗಿ... *********************** *ನಡೆಯಬೇಕಿದೆ* ನಿರಂತರ ಯುದ್ಧ... ಜಡಮನಗಳ ಚೈತನ್ಯದ ಔನತ್ಯಕ್ಕಾಗಿ... ಸತ್ತ ನರಗಳ ಗೆಲುವಿನ ಠೇಂಕಾರಕ್ಕಾಗಿ.. ಭೂತಾಯಿಯ ಉಳಿವಿಗಾಗಿ... ಜೀವ ಜಗದ ಉಳಿವಿಗಾಗಿ... ದಾಹಗೊಂಡವರ ಸಮಾಧಿಯ ಮೇಲೆ ಭವಿಷ್ಯದ ನವನಾಡ ಕಟ್ಟುವಿಕೆಗಾಗಿ... ವಿಷ್ಣು ಆರ್.ನಾಯ್ಕ

ಯುದ್ಧ
bottom of page