ಮೋಡಗಳಾಚೆ
ಮೋಡಗಳು ಕವುಚಿಕೊಂಡಿವೆ ಆಗಸದ ತುಂಬ ಸೂರ್ಯನ ಪ್ರಖರ ಕಿರಣಗಳಾಗಲಿ ಚಂದ್ರನ ತಂಗದಿರಾಗಲಿ ಯಾವವೂ ನಿಮ್ಮ ತಲುಪುವುದೇ ಇಲ್ಲ ಮೋಡಗಳು ಕವುಚಿಕೊಂಡಿವೆ ಮಬ್ಬುಗತ್ತಲೆ ಕವಿದಿದೆ ಹೊರಗೆ ಹಗಲಲ್ಲೇ ಮನೆಯೊಳಗೆ ಹಚ್ಚಿದ ದೀಪ ಆಗೋ ಈಗೋ ಬಂದೇ ಬಿಡುವುದು ಮಳೆ ಎನ್ನುವಂತೆ ಬಿರುಗಾಳಿ ಪತರಗುಟ್ಟುವ ಬೆಳಕು ಸಂದಣಿಸಿದ ಮೋಡಗಳು ಹೊಡೆದ ಡಿಕ್ಕಿಗೆ ಫಳ್ ಫಳ್ ಮಿಂಚು ಒಮ್ಮೆಲೇ ಕತ್ತಲೆಲ್ಲ ಬೆತ್ತಲು ಒಬ್ಬರ ಮುಖ ಒಬ್ಬರು ದಿಟ್ಟಿಸಲು ಸಿಕ್ಕಿತು ಒಂದರೆಕ್ಷಣ ಅದೇ ಬದುಕು ಕಣಾ ಕವಿದ ಮೋಡ ಕರಗಲೇ ಬೇಕು ಮುಪ್ಪಿನೆಡೆಗೆ ಸಾಗಲೇ ಬೇಕು ತರುಣ ಮಳೆ ಸುರಿಯೆ ಧರೆ ತಣಿಯೆ ಬಿಸಿ ಮೈಯಲ್ಲಿ ಬೆವರು ಹರಿಯೆ ಇಳೆಯಲ್ಲಿ ಹಸಿರೊಡೆದು ಹೊಸ ಜೀವಕ್ಕೆ ಬಸಿರು ಮೋಡಗಳಾಚೆಗಿದೆ ನಿರಭ್ರ ಆಕಾಶ ಕೆಂಡದ ಮಳೆಗರೆದರೂ ಬೇಕೆನಿಸುವ ಸೂರ್ಯ ತಣ್ಣಗಿನ ಬೆಳದಿಂಗಳ ಸುರಿವ ಚಂದ್ರ ಅನಂತ ತಾರೆಗಳ ಚೆಂದದ ತೋಟ ಇರಲಿ ಸ್ವಲ್ಪವೇ ಸಹನೆ ಕವಿದ ಮೋಡ ಕರಗಿಯೇ ಕರಗುತ್ತದೆ ಮೋಡಗಳಾಚೆಗಿದೆ ಅನಂತ ಅವಕಾಶ -ಡಾ.ವಾಸುದೇವ ಶೆಟ್ಟಿ ಶ್ರೀ ವಾಸುದೇವ ಶೆಟ್ಟಿ ಇವರು ಮೂಲತಃ ಹೊನ್ನಾವರ ತಾಲೂಕಿನ ಜಲವಳ್ಳಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿ.ಎಚ.ಡಿ. ಮಾಡಿದ್ದಾರೆ. ಕನ್ನಡಪ್ರಭಾ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಕತೆ.ಕವಿತೆ, ಕಾದಂಬರಿ, ಪ್ರಬಂಧ, ವಿಮರ್ಷೆ ಹೀಗೆ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಅಪಾರ ಕೃಷಿ ಮಾಡಿರುವ ಇವರು ‘ಹೊಳೆಸಾಲು.ಕಾಂ’ ಎಂಬ ತಮ್ಮದೆ ಆದ ಬ್ಲಾಗನ್ನು ಅಂತರ್ಜಾಲದಲ್ಲಿ ಹೊಂದಿದ್ದು ದೊಡ್ಡ ಓದುಗ ಬಳಗ ಹೊಂದಿದ್ದಾರೆ. ಸಾಹಿತ್ಯಾಸಕ್ತರು ‘ holesaalu.com ’ ಎಂಬ ಅವರ ಬ್ಲಾಗನ್ನು ಅಂತರ್ಜಾಲದಲ್ಲಿ ಓದಬಹುದಾಗಿದೆ. - ಸಂಪಾದಕ.