top of page

ಮೂಷಿಕ ವಧಾ ಪ್ರಕರಣ

( ಗಣೇಶ ಚವತಿಯ ನಿಮಿತ್ತ) ಬೆಳಿಗ್ಗೆ ನಾನು ಏಳುವ ಮೊದಲೇ ನೆರೆಯಲ್ಲಿರುವ ಗಣೇಶನ ಗುಡಿಯಿಂದ " ಮೂಷಿಕ ವಾಹನ ಮೋದಕ ಹಸ್ತಾ...." ಎಂದು ಗಣೇಶನನ್ನು ಎಬ್ಬಿಸುವ ಕೆಲಸ ನಡೆದಿತ್ತಾದ್ದರಿಂದ ನಾನೂ ಏಳುವದು ಅನಿವಾರ್ಯವಾಗಿತ್ತು. ಕೈಲಾಸ ದಲ್ಲಿ ಈ ಗಣಪ ದಿನಾಲು ಎಷ್ಟು ಗಂಟೆಗೆ ಏಳುತ್ತಾನೆಂದು ಕೇಳೋಣವೆಂದರೆ ದೇವರುಗಳೆಲ್ಲ ಅನಿಮಿಷರು, ಅವರು ಮಲಗುವ ಪ್ರಶ್ನೆಯೇ ಇಲ್ಲ ಅಂದಾಗ ಎಬ್ಬಿಸುವ ಪ್ರಶ್ನೆಯೂ ಬರುವದಿಲ್ಲವಷ್ಟೆ. ಹಾಗಿರುವಾಗ ಭೂಲೋಕದಲ್ಲಿ ರುವ ಈ ದೇವರುಗಳನ್ನೆಲ್ಲ ನಿತ್ಯವೂ "ಎದ್ದೇಳು, ಬೆಳಗಾಯಿತು" ಎಂದು ಕೆಟ್ಟ ದನಿಯಲ್ಲಿ ಹಾಡಿ ಎಬ್ಬಿಸುವದನ್ನು ನೋಡಿದಾಗ ಅಥವಾ ಕೇಳಿದಾಗ ಭೂಲೋಕದಲ್ಲಿ ದೇವರುಗಳು ಮಲಗುತ್ತಾರೆನ್ನುವದಂತೂ ಖಾತ್ರಿಯಾಯಿತು. ಆದರೆ ಆ ದೇವರು ಬೇರೆ , ಈ ದೇವರು ಬೇರೆ ಹೇಗಾಗಲು ಸಾಧ್ಯ‌ ಎಂಬ ಜಿಜ್ಞಾಸೆ ತಲೆದೋರಿ‌ ಉಪನಿಷತ್ತುಗಳಲ್ಲೇನಾದರೂ ಇದಕ್ಕೆ ಉತ್ತರವಿದೆಯೇ ಎಂಬ ಬಗ್ಗೆ ಪಾವಗಡ ಪ್ರಕಾಶರಾವ್ ಅವರನ್ನು ಕೇಳದೇ ಬೇರೆ ದಾರಿಯಿಲ್ಲವೆನಿಸತೊಡಗಿತು. ಬಹುಶಃ ನಾನು ಗುಡಿಗೆ ಬರುತ್ತಿಲ್ಲವೆಂಬ ಸಿಟ್ಟಿನಿಂದಲೋ ಏನೋ, ಗಣೇಶ " ತಡಿ, ಇವನಿಗೆ ಚೆನ್ನಾಗಿ ಬುದ್ಧಿ ಕಲಿಸುತ್ತೇನೆ" ಎಂದುಕೊಂಡು ತನ್ನ ವಾಹನವಾದ ಮೂಷಿಕನಿಗೆ " ಹೋಗಿ ಆ ನಾಸ್ತಿಕ ಶಿಖಾಮಣಿಯ ಮನೆಯ ಮೇಲೆ ದಾಳಿ ನಡೆಸು" ಎಂದು ಆಜ್ಞೆ ಇತ್ತಿರಬಹುದೆಂಬ ಬಲವಾದ ಗುಮಾನಿ ನನಗಿದ್ದೇ ಇದೆ. ಅದರ ಪರಿಣಾಮವಾಗಿ ನನ್ನ ಮನೆಯೊಳಗೆ ಅದ್ಯಾವಾಗಲೋ ಒಳನುಗ್ಗಿದ ಇಲಿ ಅರ್ಥಾತ್ ಆ ಗಣಪ್ಪನಿಂದ ಕಳಿಸಲ್ಪಟ್ಟ ಮೂಷಿಕ ತನ್ನೊಡೆಯನ ಆಣತಿಯಂತೆ ನನ್ನ ಮನೆಯೊಳಗೆ ಹೊಕ್ಕು ತನ್ನ ಅವಾಂತರಗಳನ್ನು ಆರಂಭಿಸಿಯೇಬಿಟ್ಟಿತು. ಆತನ ವಾಹನವೇ ನೇರ ಬಂದಿರಲಿಕ್ಕಿಲ್ಲವಾದರೂ ಅದರ ಸಂತಾನದಲ್ಲೊಬ್ಬರನ್ನು ಕಳಿಸಿರಬೇಕೆಂಬ ಸಂದೇಹ ನನಗಿದ್ದೇ ಇದೆ. ಒಳಗೆ ಹೊಕ್ಕಿದ್ದೇ ತಡ, ಈ ಇಲಿರಾಯ ತನ್ನ "ಇಲಿಚೇಷ್ಟೆಗೆ" ತೊಡಗಿಯೇಬಿಟ್ಟಿತು. ನಿನ್ನೆ ಮೊನ್ನೆ ಎರಡುಮೂರು ಸಾವಿರ ಖರ್ಚು ಮಾಡಿ ಕಿಡಕಿಗೆ ಹಾಕಿಸಿದ್ದ ಪರದೆಗಳಲ್ಲೆಲ್ಲ ಹೊಸ ಕಿಂಡಿಗಳನ್ನು ಮಾಡಿ ಇನ್ನಷ್ಟು ಹೆಚ್ಚು ಗಾಳಿಬೆಳಕು ಸೊಳ್ಳೆಗಳು ಬರುವ ವ್ಯವಸ್ಥೆ ಮಾಡಿತು. ಬಟ್ಟೆಗಳನ್ನೆಲ್ಲ ಕಡಿದು ನನ್ನ ಮೇಲಿನ ಸಿಟ್ಟು ತೀರಿಸಿಕೊಳ್ಳತೊಡಗಿತು‌ ನನ್ನ ಹೆಂಡತಿಗೋ " ಧರ್ಮಸಂಕಟ"! ಗಣಪತಿಯ ವಾಹನವಾದ ಇಲಿಯನ್ನು ಹೊಡೆಯಬೇಕೋ ಬೇಡವೋ ಎಂಬ ಹೊಯ್ದಾಟ. ಹೊಡೆಯದಿದ್ದರೆ ಬೆಲೆ ಬಾಳುವ ವಸ್ತುಗಳೆಲ್ಲ ನಾಶವಾಗುವದನ್ನು ಕಣ್ಣಾರೆ ಕಾಣುವ ವೇದನೆ‌. ಹೊಡೆದರೆ ಆ ಗಣೇಶ ಶಾಪ ಕೊಡುತ್ತಾನೇನೋ ಎಂಬ ಹೆದರಿಕೆ. ಈ ತಾಕಲಾಟದಲ್ಲಿ ಬಿಪಿ ಹೆಚ್ಚಾಗಿ ವೈದ್ಯರ ಹತ್ತಿರ ಹೋಗಿ ೨೦೦-೩೦೦ ರೂ. ಖರ್ಚು ಮಾಡಿದ್ದೂ ಆಯಿತು. ನನ್ನ ಹೆಂಡತಿ ವೈದ್ಯರ ಬದಲು ಗಣೇಶನ ಗುಡಿಗೇ ಹೋಗಿ ಸೇವೆ ಮಾಡಿದರೆ ಒಳ್ಳೆಯದೆಂದು ತಾನೇ ಹೋಗಿ‌ ಡಬ್ಬಿಗೆ ನೂರು ರೂ. ಹಾಕಿ ಬೇಡಿಕೊಂಡಳು. ಆದರೆ ನಾನು ಬರಲಿಲ್ಲವೆಂಬ ಅಸಮಾಧಾನಕ್ಕೂ ಇರಬಹುದು, ಆತ ನನ್ನ ಹೆಂಡತಿಯ ಸೇವೆಗೆ ಮರುಳಾಗಲಿಲ್ಲ. ಇಲಿ ಇನ್ನೂ ಹೆಚ್ಚಿನ ಕಾಟ ಕೊಡಲು ಆರಂಭಿಸಿತು. ಕೊನೆಗೆ ಅನಿವಾರ್ಯವಾಗಿ "ದಂಡಂ ದಶಗುಣಂ ಭವೇತ್" ಎಂಬಂತೆ ಕೋಲು ಹಿಡಿದು ಇಲಿಯನ್ನು ಹೊಡೆದು ಹೊರಹಾಕಲು ಪ್ರಯತ್ನಿಸತೊಡಗಿದೆವು. ಇಬ್ಬರೂ ಒಂದೊಂದು ಕೋಲು ಹಿಡಿದು ಒಂದೊಂದು ಬದಿಗೆ ನಿಂತು ಮೂಷಿಕೋಚ್ಚಾಟನೆಯ ಮಹಾ ಸಾಹಸಕ್ಕೆ ತೊಡಗಿದೆವು. ಆದರೆ ಅದು ಎಷ್ಟೊಂದು ಚಮತ್ಕಾರಿಕವಾಗಿ ನಮ್ಮಿಂದ ತಪ್ಪಿಸಿಕೊಳ್ಳುತ್ತಿತ್ತೆಂದರೆ ನಮಗೆ ಅದು " ದೇವರ ಇಲಿಯೇ" ಇರಬೇಕೆಂಬ ಭಾವನೆ ಬೆಳೆಯುವಂತಾಯಿತು. ಎಷ್ಟು ಬೆವರಿಳಿಸಿದರೂ ಅದು ನಮ್ಮ ಕೋಲಿಗೆ ಸಿಗದೇ ತಪ್ಪಿಸಿಕೊಳ್ಳುತ್ತಿತ್ತು ಹೊರತು ಮನೆ ಬಿಟ್ಟು ಹೋಗಲು ಸಿದ್ಧವಿರಲಿಲ್ಲ. ಸತತ ಎರಡು ಮೂರು ದಿನ ನಮ್ಮ ಈ ಕದನ ಜಾರಿಯಲ್ಲಿತ್ತು. ಕೊನೆಗೆ ನಾವೇ ಬೇಸತ್ತು ತಾತ್ಕಾಲಿಕ ಕದನ ವಿರಾಮ ಸಾರಬೇಕಾಯಿತು. ಅದರೂ‌ ಇಲಿ ನಕ್ಸಲರಂತೆ ಸಣ್ಣದಾಗಿ ಕಾಡುತ್ತಲೇ ಇತ್ತು. ಅಷ್ಟರಲ್ಕಿ ನಮ್ಮ ಮನೆಗೆ ಬಂದ ಆಪದ್ಬಾಂಧವನೊಬ್ಬ ಇನ್ನೊಂದು ಉಪಾಯ ಹೇಳಿದ -" ಯಾಕೆ ಅಷ್ಟು ತ್ರಾಸು ತಗೊಳ್ತೀರಿ? ತಿಂಡಿಯಲ್ಲಿ ಏನಾದರೂ ಒಂದಿಷ್ಟು ಇಲಿಮದ್ದು ಹಾಕಿಟ್ಟುಬಿಡಿ. ಅದು ತಿಂದು ತನ್ನಷ್ಟಕ್ಕೆ ಸಾಯುತ್ತದೆ..‌ " " ಛೆ .. ಛೆ..‌ ಅದನ್ನು ಕೊಲ್ಲುವ ವಿಚಾರ ನಮಗಿಲ್ಲಯ್ಯ. ಅದು ಮನೆಯಿಂದ ಹೊರಗೆ ಹೋದರೆ ಸಾಕು. ಗಣಪತಿಯ ವಾಹನ ಕೊಂದ ಪಾಪ ಯಾರಿಗೆ ಬೇಕು ಹೇಳು?" ಎಂದು ನಾನೂ ಬಹಳ ಪಾಪ ಪುಣ್ಯದ ಪ್ರಜ್ಞೆ ಇಟ್ಟುಕೊಂಡವನ ಹಾಗೆ ಕೇಳಿದೆ. ಆದರೆ ಆತ ಹೇಳಿಕೇಳಿ ಹರಿಕಥಾ ವಿದ್ವಾಂಸ ಶ್ರೀನಿವಾಸಾಚಾರ್ಯರ ಪುತ್ರ. ಅವನೆಂದ - " ಕೊಲ್ಲುವವರು ಯಾರು, ಕಾಯುವವರು ಯಾರು? ಎಲ್ಲ ಭ್ರಮೆ. ಎಲ್ಲವನ್ನೂ ನನಗೆ ಬಿಟ್ಟು ನೀವು ನಿಶ್ಚಿಂತೆಯಿಂದ ನಿಮ್ಮ ಕರ್ಮ ಮಾಡಿರಿ. ಫಲಾಫಲ ನಿರೀಕ್ಷಿಸಬೇಡಿ ಎಂದು ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ಅದರ ಪೂರ್ವಕೃತ ಪಾಪದ ಫಲವಾಗಿ ಅದು ಈ ಜನ್ಮದಲ್ಲಿ ಇಲಿಯಾಗಿ ಹುಟ್ಟಿದೆ. ನಿಮ್ಮ ಕೈಯಲ್ಲೇ ಅದರ ಸಾವು ಬರೆದಿದ್ದರೆ ಅದನ್ನು ತಪ್ಪಿಸಲು ನೀನ್ಯಾರು , ನಾನ್ಯಾರು? ನಿನ್ನ ಕೈಯಿಂದ ಸತ್ತು ಮುಕ್ತಿ ಪಡೆಯಲೆಂದೇ ಅದು ನಿಮ್ಮ ಮನೆಗೆ ಬಂದಿರಬಹುದು. ಏನೂ ಯೋಚಿಸಬೇಡ. ಅದೂ ನೀನು ನಿನ್ನ ಕೈಯಿಂದ ಕೊಲ್ಲುತ್ತಿಲ್ಲವಲ್ಲ. ತಿಂಡಿಯಲ್ಲಿರುವ ವಿಷ ತಿಂದು ಸತ್ತರೆ ಆ ಪಾಪ ನಿನಗೆ ಬರುವದಿಲ್ಲ .‌‌‌‌" ಇತ್ಯಾದಿ ಕುರುಕ್ಷೇತ್ರೋಪದೇಶ ಮಾಡಿ ಆತ ನಮ್ಮನ್ನು ಜಿಹಾದ್ ಗೆ ಪ್ರೇರೇಪಿಸಿದ. ಆಹಾ! ಕೆಲವೊಂದು ಉಪದೇಶಗಳು ಹೇಗೆ ನಮ್ಮ ಆಪತ್ಕಾಲದಲ್ಲಿ ನೆರವಿಗೆ ಬಂದು ಕಾಪಾಡುತ್ತವೆ ನೋಡಿ. ಏನೇ ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡುವದಿರಲಿ, ನಮಗೆ ಅದಕ್ಕೊಂದು ಕಾರ್ಯಕಾರಣ ಬೇಕಾಗುತ್ತದೆ. ಸಮರ್ಥನೆಗೆ ಆಧಾರಗಳೂ ಬೇಕಾಗುತ್ತವೆ. ಶ್ರೀಕೃಷ್ಣ ದ್ವಾಪರಾಯುಗದಲ್ಲಿ ಅರ್ಜುನನಿಗೆ ಮಾಡಿದ ಉಪದೇಶ ನಮಗೆ ಈ ಕೆಟ್ಟ ಕಲಿಯುಗದಲ್ಲೂ ಉಪಯೋಗಕ್ಕೆ ಬರುತ್ತವಲ್ಲ , ಅದೇ ಒಂದು ಚೋದ್ಯ! ಅಂತೂ ಬಿಲ್ಲುಬಾಣ ಚೆಲ್ಲಿ ನಿರಾಶರಾಗಿ ಕುಳಿತಿದ್ದ ನಾವು ತಿರುಗಿ ಉತ್ಸಾಹದಿಂದ ಇಲಿಪಾಷಾಣ ತಂದು ಭಜಿಯೊಳಗೆ ಹಾಕಿ ಮೂಲೆಯಲ್ಲಿಟ್ಟು ಆ ದೇವರ ಮೇಲೇ ಭಾರ ಹಾಕಿ ಹಾಯಾಗಿ ನಿದ್ದೆ ಮಾಡಿದೆವು. ಮರುದಿನ ಇಲಿಯ ಓಡಾಟವಂತೂ‌ ಇರಲಿಲ್ಲ. ಅದು ಭಜಿ ತಿಂದು ಸತ್ತಿರಬಹುದು ಬಿಡು ಎಂದು ನಿರಾಳವಾಗಿದ್ದೆವು. ಆದರೆ ಅದು ಸಾವಿನಲ್ಲೂ ತನ್ನ ಸಿಟ್ಟು ತೀರಿಸಿಕೊಳ್ಳಬಹುದೆಂದು ನಾವು ಊಹಿಸಿರಲಿಲ್ಲ. ಎರಡನೇ ದಿನದಿಂದ ಮನೆಯಲ್ಲಿ ಕೆಟ್ಟ ವಾಸನೆ ಹರಡಿಕೊಳ್ಳತೊಡಗಿತು. ಇಲಿ ಸತ್ತಿದ್ದೇನೋ ಖಾತ್ರಿಯಾಯಿತು. ಆದರೆ ಅದು ಎಲ್ಲಿ ಸತ್ತುಬಿದ್ದಿದೆ ಎನ್ನುವದೇ ತಿಳಿಯುತ್ತಿರಲಿಲ್ಲ. ಹೆಣ ಹುಡುಕುವ ಕೆಲಸ ನಮ್ಮದಾಯಿತು. ದುರ್ವಾಸನೆ ಮಾತ್ರ ಹೆಚ್ಚುತ್ತಲೇಇತ್ತು. ಮನೆಯಲ್ಲಿರೋದೇ ಕಷ್ಟವಾಯಿತು. ಊಟ ತಿಂಡಿ ಸೇರದಂತಾಯಿತು. ಇಲಿಯಂಥಾ ಒಂದು ಯ:ಕಶ್ಚಿತ ಪ್ರಾಣಿ ಮಹಾ ಬುದ್ಧಿವಂತರೆಂದು ಭಾವಿಸಿಕೊಂಡ ಮನುಷ್ಯರನ್ನು ಇಷ್ಟು ಕಾಡುವದೆಂದರೇನು. ಇದೂ ನಮ್ಮ ಪೂರ್ವಜನ್ಮಕೃತ ಪಾಪದ ಫಲವೇ ಇರಬಹುದೆನಿಸತೊಡಗಿತು. " ನೋಡಿ, ನಾನು ಹೇಳಿದರೆ ನೀವೆಲ್ಲಿ ಕೇಳುತ್ತೀರಿ? ದಿನಾಲು ಒಂದು ಸಲವಾದರೂ ಆ ಗಣೇಶನ ಗುಡಿಗೆ ಹೋಗಿ ಕೈ ಮುಗಿದು ಬನ್ನಿ ಎಂದು ಸಾವಿರ ಸಲ ಹೇಳಿದ್ದೇನೆ... ಅವನಿಗೆ ಸಿಟ್ಟು ಬಂದರೆ ಬಿಡುತ್ತಾನೆಯೇ? ಇನ್ನೂ ಏನೇನು ಕಾಟ ಕೊಡುತ್ತಾನೆಯೋ ಯಾರಿಗೆ ಗೊತ್ತು? ಹೋಗಲಿ , ಆ ಗಣಪತಿ ಪಂಡಿತರನ್ನು ಕರೆಸಿ ಒಂದು ಸತ್ಯಗಣಪತಿವ್ರತವನ್ನಾದರೂ ಮಾಡಿಸಿ" - ನನ್ನ ಹೆಂಡತಿಯ ಪ್ರವಚನ ಆರಂಭವಾಗಿತ್ತು. ಸುಮ್ಮನೆ ಕೇಳಿಸಿಕೊಳ್ಳದೇ ಗತಿಯಿರಲಿಲ್ಲ. ಮತ್ತೆರಡು ದಿನ ನಮ್ಮನ್ನು ಕಾಡಿಸಿದ ಇಲಿಯ ಪ್ರೇತಾತ್ಮ ಮನೆಬಿಟ್ಟು ಹೋದ ನಂತರವೇ ನಾವು ನೆಮ್ಮದಿಯಿಂದ ಉಸಿರಾಡಿದ್ದು. ಅಂದಿನಿಂದ ನಾನು ಬೇಗ ಎದ್ದು ಗಣಪತಿ ಗುಡಿಗೆ ಹೋಗಿ ಜೋರಾಗಿ ಗಂಟೆ ಬಡಿದು ಅವನನ್ನು ಎಬ್ಬಿಸತೊಡಗಿದೆ. - ಎಲ್. ಎಸ್. ಶಾಸ್ತ್ರಿ, ಬೆಳಗಾವಿ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ. ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು. ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು. - ಸಂಪಾದಕ.

ಮೂಷಿಕ ವಧಾ ಪ್ರಕರಣ
bottom of page