
ಮಾಧ್ಯಮಕ್ಕೂ ಒಂದು ಧರ್ಮವಿದೆಯಲ್ಲ…
ಒಂದು ಕಾಲವಿತ್ತು. ಮನೆ ಮಂದಿಯೆಲ್ಲ ಬೆಳಿಗ್ಗೆ ಎದ್ದು ರೇಡಿಯೋ ದಲ್ಲಿ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ ಒಂದನ್ನು ಕೇಳಿಕೊಂಡು ತಮ್ಮ ಸುತ್ತಮುತ್ತಲಿನ ಸಮಾಚಾರವನ್ನು ತಿಳಿದುಕೊಳ್ಳುತ್ತಿದ್ದರು. ಎಷ್ಟೋ ಮಂದಿಗೆ "ನಮಸ್ಕಾರ ಪ್ರದೇಶ ಸಮಾಚಾರಕ್ಕೆ ಸ್ವಾಗತ , ಓದುತ್ತಿರುವವರು ... " ಎಂಬುದೇ ಬೆಳಗಿನ ಸುಪ್ರಭಾತವಾಗಿತ್ತು. ಆಗ ಬರುತ್ತಿದ್ದ ನ್ಯೂಸ್ ಇಂದಿನಂತೆ ಇಡೀ ದಿನ ಕೊರೆಯುವ ಸುದ್ದಿಯಾಗಿರಲಿಲ್ಲ. ಪೂರ್ತಿ ದಿನದ ಸುದ್ದಿಯನ್ನು ಅರ್ಧಗಂಟೆಯಲ್ಲೇ ಹೇಳಿ ಜೊತೆಗೆ ಅಂದಿನ ಹವಾ ವರ್ತಮಾನವನ್ನೂ ಹೇಳುತ್ತಿದ್ದರು. ಇದ್ಯಾವುದೂ ಆಡಂಬರವಾಗಿರಲಿಲ್ಲ. ಮತ್ತೂ ಬರೀ ಶ್ರವಣ ಮಾಧ್ಯಮವಾದ್ದರಿಂದ ಬೇಡದ ಚಿತ್ರಗಳನ್ನೂ ನೋಡುವ ಗೋಜು ಇರಲಿಲ್ಲ. ಒಂದು ರೀತಿಯ ಶಾಂತ, ಸೌಮ್ಯವಾಗಿರುತ್ತಿತ್ತು ಆಗಿನ ವಾರ್ತಾ ಸಮಾಚಾರ. ಆಡಂಬರದ ಗೊಡವೆಯಿಲ್ಲ, ಅತಿಯಾದ ವಿಶ್ಲೇಷಣೆಯಿಲ್ಲ. ಎಲ್ಲ ಸುದ್ದಿಗಳಿಗೂ ನ್ಯಾಯ ಸಿಗುತ್ತಿತ್ತು. ಹೀಗಾಗಿ ಇದನ್ನು ಒಂದು ರೀತಿಯ ತಂಪಾದ ಐಸ್ ಕ್ರೀಮ್ ತಿಂದಂತೆ ಎಂದು ಹೇಳಬಹುದು. ಇದರ ನಂತರ ದ್ರಶ್ಯ ಮಾಧ್ಯಮ ಬಂದ ಬಳಿಕವೂ ಸುದ್ದಿ ಸಮಾಚಾರವನ್ನು ಹಳೆಯ ರೇಡಿಯೋ ಮಾದರಿಯಲ್ಲಿಯೇ ನಡೆಸಲಾಗುತ್ತಿತ್ತು. ಆಗೆಲ್ಲ ಈಗೀನ ರೀತಿಯ ಖಾಸಗೀ ಸುದ್ದಿ ವಾಹಿನಿಗಳ ಹೊಡೆತವಿರಲಿಲ್ಲ. ೨೪ x ೭ ಸುದ್ದಿ ನೀಡುತ್ತೇವೆ ಎಂಬ ಮಾರ್ಕೆಟಿಂಗ್ ಸಹ ಇರಲಿಲ್ಲ. ಇದ್ದುದು ಒಂದೇ ದೂರದರ್ಶನ ವಾಹಿನಿ. ಅದರಲ್ಲೇ ಎಲ್ಲವೂ. ಬೆಳಗ್ಗಿನ ವಾರ್ತೆಯಿಂದ ಹಿಡಿದು ಸಂಜೆಯ ಮನರಂಜನಾ ಕಾರ್ಯಕ್ರಮದವರೆಗೆ ಎಲ್ಲ ಕಾರ್ಯಕ್ರಮಗಳೂ ಒಂದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದವು. ಈ ಸಂಪ್ರದಾಯಕ್ಕೆ ಸ್ವಲ್ಪ ಹೊಸ ರೂಪ ಕೊಟ್ಟಿದ್ದು ಉದಯ ಟಿ.ವಿ. ದೇಶ-ವಿದೇಶಗಳ ಸುದ್ದಿಯನ್ನೂ , ಸಿನಿಮಾ-ಚಿತ್ರರಂಗದ ಸುದ್ದಿಯನ್ನೂ ಅವರು ನೀಡಲಾರಂಭಿಸಿದರು. ಆದರೆ ಅವರೂ ಎಲ್ಲಿಯೂ ಅತಿರೇಕವಾಗುವಂತೆ ಮಾಡಲಿಲ್ಲ. ಆ ವಾಹಿನಿಯಲ್ಲಿ ಸುದ್ದಿ ಕೇಳಿದವರಿಗೆ ಸುದ್ದಿಗೆ ಯಾವ ಅಭಿಪ್ರಾಯ ಬೇಕಾದರೂ ವ್ಯಕ್ತಪಡಿಸಬಹುದಾದ ಸ್ವಾತಂತ್ರ್ಯವಿತ್ತು. ಜೊತೆಗೆ ಸುದ್ದಿಯನ್ನು ತಾನೇ ವಿಶ್ಲೇಷಿಸಿ ಅದಕ್ಕೊಂದು ನಿರ್ಣಯ ನೀಡಬಹುದಾದ ಅವಕಾಶವಿತ್ತು. ಓಟಿನಲ್ಲಿ ಇಲ್ಲಿಯೂ ಲೋಪದೋಷಗಳಿರಲಿಲ್ಲ. ಎಲ್ಲವೂ ಸುಸೂತ್ರವಾಗೇ ಇತ್ತು. ಆದರೆ ಯಾವಾಗ ಕಾಲ ಮುಂದುವರಿದು ಖಾಸಗೀ ಸುದ್ದಿವಾಹಿನಿಗಳು ಅಸ್ತಿತ್ವಕ್ಕೆ ಬಂದವೋ ಅಲ್ಲಿಂದ ಶುರುವಾಯಿತು ನೋಡಿ,ಸುದ್ದಿಗಳು ತಮ್ಮ ಪ್ರಾಮುಖ್ಯವನ್ನೇ ಕಳೆದುಕೊಂಡವು. ಮೊದಮೊದಲು ಇವೂ ಸಹ ಅರ್ಧಗಂಟೆಯ ಪ್ರೈಮ್ ಟೈಮ್ ನಲ್ಲಿ ಎಲ್ಲ ಸುದ್ದಿಗಳನ್ನೂ ಚುಟುಕಾಗಿ ಹೇಳಿ ಎಲ್ಲ ಸಮಾಚಾರಗಳಿಗೂ ನ್ಯಾಯ ಒದಗಿಸುತ್ತಿದ್ದರು. ಆದರೆ ಎಲ್ಲಿಗೆ ೨೪*೭ ನ ಪರಿಕಲ್ಪನೆಯ ಪ್ರವೇಶವಾಯಿತೋ ಅಲ್ಲಿಗೆ ವಾರ್ತೆ ಎಂಬ ಸಮಾಚಾರ ಬಿತ್ತರ ಹಳ್ಳ ಹಿಡಿಯಿತು. ಈಗಂತೂ ಗುಂಡಿ ತೋಡಿ ಮುಚ್ಚುವ ಸ್ಥಿತಿಗೆ ಬಂದು ತಲುಪಿದ್ದಾರೆ. ಆಗಲೇ ಹೇಳಿದಂತೆ ಒಂದು ಸುದ್ದಿಯ ಮೇಲೆ ಸರಿ ತಪ್ಪುಗಳನ್ನು ನಿರ್ಧರಿಸುವ ಅಧಿಕಾರವಾದರೂ ನಮ್ಮ (ವೀಕ್ಷಕನ) ವಿವೇಚನೆಯಲ್ಲಿರುತ್ತಿತ್ತು. ಆದರೆ ಈಗ ಹಾಗಿಲ್ಲ. ಒಂದು ಸುದ್ದಿಯನ್ನು ಇಟ್ಟುಕೊಂಡು ಅದರ ತಲೆ ಬುಡವನ್ನೆಲ್ಲಾ ಅಲುಗಾಡಿಸಿ , ಏನನ್ನು ಹೇಳಬೇಕೋ ಅದನ್ನು ಹೇಳದೇ , ಬೇಡದಿರುವ ಭಾಗವನ್ನು ಅಲಂಕರಿಸಿ ಕೊನೆಗೆ ಅದರ ಮೇಲೆ ತೀರ್ಪನ್ನೂ ಸುದ್ದಿ ವಾಹಿನಿಗಳೇ ನೀಡುತ್ತಿದೆ. ಅನ್ನವನ್ನು ಕಲಸಿ ಬಾಯಲ್ಲಿಟ್ಟು ಜಗಿದೂ ಕೊಟ್ಟಂತಾಗಿದೆ ಇದು. ಇದನ್ನು ನುಂಗುವುದು ಬಿಡುವುದು ನಮಗೆ ಬಿಟ್ಟ ವಿಚಾರವೇ ಆದರೂ ಹೆಚ್ಚಿನ ಜನ ಅವರಿಗರಿವಿಲ್ಲದಂತೆ ನುಂಗಿಬಿಡುತ್ತಾರೆ. ಇಂದಿನ ದಿನಮಾನದಲ್ಲಿ ವಾರ್ತೆ ಎಂಬುದನ್ನು ವಾರ್ತೆಯಾಗೆ ನೋಡುವವರು ಕಡಿಮೆ. ಎಲ್ಲರಿಗೂ ಅವರವರ ಕೆಲಸ-ಕಾರ್ಯಗಳಿರುತ್ತದೆ. ಹೀಗಾಗಿ ಅಕಸ್ಮಾತ್ ನೋಡುವವರಿದ್ದರೂ ಈ ಸುದ್ದಿ ವಾಹಿನಿಗಳ ಎಡಬಿಡಂಗಿತನದಿಂದ ಅವರೂ ನೋಡುವುದನ್ನು ನಿಲ್ಲಿಸಿದ್ದಾರೆ. ನೀವೇನಾದರೂ ಇಂದಿನ ಪ್ರಮುಖ ಸುದ್ದಿ ಏನಿದೆ ಅಂತ ನೋಡಿಬಿಡೋಣ ಅಂತ ಯಾವುದೊ ನ್ಯೂಸ್ ಚಾನೆಲ್ ಹಾಕಿದಿರಿ ಎಂದುಕೊಳ್ಳೋಣ. ಆ ಸಮಯದಲ್ಲಿ ಅಲ್ಲಿ ಬೇರಾವುದೋ ಸುದ್ದಿ ಪ್ರಸಾರವಾಗುತ್ತಿರುತ್ತದೆ. ಹಾಗಂತ ಅದು ನಿಜವಾಗಿಯೂ ಸುದ್ದಿಯೇ ಆಗಿರುವುದಿಲ್ಲ. ಕೇವಲ ಊಹಾಪೋಹಗಳನ್ನೇ ಸರಕಾಗಿಸಿಕೊಂಡು , ಇದು ಹೀಗಾದರೆ ಹೀಗೆ, ಅದರಿಂದ ಹೀಗಾಗುತ್ತದೆ ಅದರ ಪರಿಣಾಮವಾಗಿ ಇಂತವರಿಗೆ ತೊಂದರೆಯಾಗುತ್ತದೆ ಎಂದು ಗಾಳಿಯ ಗೋಪರವನ್ನೇ ಕಟ್ಟಿಬಿಡುತ್ತಾರೆ. ಇದನ್ನೆಲ್ಲಾ ನೋಡುವಾಗ ಇದೊಂದು ಕಲ್ಪನೆ ಎಂಬುದನ್ನೇ ಮರೆತು ಅದು ನಿಜ ಎಂದು ಭಾವಿಸುತ್ತೀರಿ. ಏಕೆಂದರೆ ನಿಮ್ಮ ನಿರ್ಣಯಾ ಸಾಮರ್ಥ್ಯವನ್ನು ಅವರಿಗೆ ಬಿಟ್ಟುಕೊಟ್ಟಿದ್ದೀರಲ್ಲ. ಇದನ್ನು ನೀವು ನಂಬುವುದೂ ಅಲ್ಲದೇ ನಿಮ್ಮ ಮಾತಿನ ನಡುವಲ್ಲಿ ಇತರರಿಗೂ ಹೇಳುತ್ತೀರಿ. ಇದರಿಂದ ಮಾಧ್ಯಮದವರಿಗೆ ಈ ರೀತಿಯ ಸುದ್ದಿಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತದೆ. ಅವರೂ ಇಂತಹುದೇ ಕಪೋಲಕಲ್ಪಿತ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಾರೆ. ಮಾಡಲಿ ಬಿಡಿ , ಹೀಗೆ ಮಾಡುವುದರಿಂದ ಏನಾಗುತ್ತದೆ ಎನ್ನುತ್ತೀರೇನು? ಇಲ್ಲಿಯೇ ಇರುವುದು ಸಮಸ್ಯೆ. ಜನ ಇಂತಹ ಸುದ್ದಿಗಳಿಗೆ ಮನೆ ಹಾಕಿದ ಬಳಿಕ ಉಳಿದ ನಿಜವಾದ ಪ್ರಮುಖ ಸುದ್ದಿಗಳಿಗೆ ಜಾಗವೇ ಇಲ್ಲವಾಗುತ್ತದೆ. ಆ ಸುದ್ದಿಗಳು ಎಲ್ಲೋ ಮೂಲೆಯಲ್ಲಿ ಸೇರಿಕೊಳ್ಳುತ್ತದೆ. ಸಮಾಜದಲ್ಲಿ ಸುಳ್ಳು ಸುದ್ದಿಗಳೇ ಕಿವಿಯಿಂದ ಕಿವಿಗೆ ತಲುಪಿ ಅದೇ ದೊಡ್ಡ ವಿಷಯವಾಗುತ್ತದೆ. ಸಮಾಜದ ಸ್ವಾಸ್ಥ್ಯ ಹಾಳಾಗಲು ಇಂತಹ ಕಲ್ಪಿತ ಸುದ್ದಿಗಳೇ ಸಾಕಲ್ಲವೇ.? ಇತ್ತೀಚಿನ ಸಮಾಚಾರಗಳನ್ನೇ ಗಮನಿಸಿ. ಈಗಂತೂ ಬೆಳಗಿಂದ ಸಂಜೆಯವರೆಗೂ ಡ್ರಗ್ಸ ನದ್ದೇ ಸುದ್ದಿ. ಅದೂ ಒಂದು ಸುದ್ದಿಯಾಗಬೇಕಿತ್ತೇ ವಿನಃ, ಸುದ್ದಿಯೇ ಅದಾಗಬಾರದಿತ್ತು. ಆಕೆ ಮಲಗಿದ್ದು ಎಲ್ಲಿ? ರಾತ್ರಿ ಅಲ್ಲಿ ನಡೆದಿದ್ದಾದರೂ ಏನು? ಅವಳು ಸೀರೆ ಬದಲಿಸದಿರಲು ಕಾರಣವೇನು? ಇಂತಹ ಮಾಲುಗಳನ್ನು ಇಟ್ಟುಕೊಂಡು ಇಂದಿನ ನ್ಯೂಸ್ ಚಾನೆಲ್ ಗಳು ಅರ್ಧರ್ಧ ಗಂಟೆ, ಒಂದು ಗಂಟೆ ಸ್ಪೆಷಲ್ ಎಪಿಸೋಡ್ ಗಳನ್ನು ಮಾಡುತ್ತಿದೆ. ಯಾರೋ ಡ್ರಗ್ಸ ವಿಚಾರದಲ್ಲಿ ಸಿಕ್ಕಿಬಿದ್ದಿದ್ದಾರೆ,ವಿಚಾರಣೆ ನಡೆಯುತ್ತಿದೆ, ಆರೋಪ ಸಾಬೀತಾದರೆ ಶಿಕ್ಷೆಯಾಗುತ್ತದೆ. ಇದಕ್ಕೂ ತಮಾಷೆ ಎನಿಸುವುದು ಆ ಅಧಿಕಾರಿಗಳು ಕೇಳಿದ ಪ್ರಶ್ನೆಗಳು, ಅದಕ್ಕೆ ಆರೋಪಿಗಳು ನೀಡಿದ ಉತ್ತರಗಳು ಇವೆಲ್ಲವೂ ಈ ಮಾಧ್ಯಮದವರಿಗೆ ಎಲ್ಲಿಂದ ಸಿಗುತ್ತದೆ. ಒಮ್ಮೆ ನೀವೇ ಯೋಚಿಸಿ ನೋಡಿ. ಯಾವುದೇ ವಿಚಾರಣೆಯಲ್ಲಿ ಆ ರೀತಿಯ ಸಂಗತಿಗಳನ್ನು ಹೊರಹಾಕುವುದೇ ಇಲ್ಲ. ಆದರೆ ಇವರುಗಳು ಈ ಸುದ್ದಿಯನ್ನು ಪ್ರೈಮ್ ಟೈಮ್ ನಲ್ಲಿ ಇಟ್ಟುಕೊಂಡು ಮುಕ್ಕಾಲು ಗಂಟೆ ಕೊರೆಯುತ್ತಾರೆ. ಇದೆಲ್ಲ ನೂರಕ್ಕೆ ನೂರು ಬೋಗಸ್. ಇದು ಹಾಗಿರಲಿ ಇದಕ್ಕಿಂತ ಚೂರು ಹಿಂದೆ ಹೋಗಿ. ಇಡೀ ದಿನ ಡಿಜೆ ಹಳ್ಳಿ,ಕೆಜಿ ಹಳ್ಳಿ. ಗಲಭೆ ನಡೆದಿದೆ. ಅದರ ಕುರಿತು ತನಿಖೆಯಾಗುತ್ತಲೇ ಇದೆ. ಆರೋಪಿಗಳನ್ನು ಬಂಧಿಸುವ ಕೆಲಸ ಪ್ರಗತಿಯಲ್ಲಿಯೇ ಇದೆ. ಆದರೆ ಪೊಲೀಸರು,ನ್ಯಾಯಾಲಯಕ್ಕಿಂತ ಮೊದಲೇ ನಮ್ಮ ಮಾಧ್ಯಮದವರು ತೀರ್ಪನ್ನೂ ನೀಡಿಯಾಗಿದೆ. ಈಗ ಅದರ ಕಥೆಯೇ ಇಲ್ಲ.ಅದಕ್ಕಿಂತಲೂ ಹಿಂದೆ ದಿನವಿಡೀ ಡ್ರೋಣ್ ನದ್ದೇ ಪ್ರತಾಪ. ಎಲ್ಲ ಚಾನೆಲ್ ಗಳೂ ಯಾರ್ಯಾರನ್ನೋ ಕೂರಿಸಿಕೊಂಡು ಡಿಬೇಟ್ ನಡೆಸಿದ್ದೇ ನಡೆಸಿದ್ದು, ಆತನನ್ನು ಜರೆದಿದ್ದೇ ಜರೆದಿದ್ದು. ಇದೆಲ್ಲಾ ಅವಶ್ಯಕತೆ ಇತ್ತಾ ಎಂಬುದು ಪ್ರಶ್ನೆ! ಇದಕ್ಕಿಂತಲೂ ಮತ್ತೆ ಚೂರು ಹಿಂದಕ್ಕೆ ಹೋದರೆ ಶಾಲಾ ಮಕ್ಕಳ ಪೀಸ್, ಆನ್ಲೈನ್ ಶಿಕ್ಷಣದ ಕುರಿತಾದ ಸುದ್ದಿಗಳು. ಈಗಲೂ ಇದೊಂದು ಜ್ವಲಂತ ಸಮಸ್ಯೆ . ಯಾರೊಬ್ಬರೂ ಈ ಕುರಿತು ತುಟಿ ಬಿಚ್ಚದಿರುವುದು ಬಹಳ ವಿಚಿತ್ರ. ಹೀಗೆ ಹೇಳುತ್ತಾ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕಿಂತಲೂ ಬಹಳ ಬೇಸರ ಎನಿಸುವುದು ಈ ಮಾಧ್ಯಮಗಳು ಒಂದು ಕೋಮಿನ ಪರವಾಗಿ ಮಾತನಾಡಿದಾಗ. ಅದರಲ್ಲೂ ತಪ್ಪು ಮಾಡಿದವರ ಪರವಾಗಿ ನಿಂತಾಗ. ಮಾಧ್ಯಮಕ್ಕೆ ಅದರದೇ ಆದ ಒಂದು ಧರ್ಮವಿದೆ. ಅದು ಬಲಪಂಥೀಯವೂ ಆಗಬಾರದು, ಎಡಪಂಥೀಯವೂ ಆಗಬಾರದು. ಯಾವಾಗಲೂ ಅಷ್ಟೇ ಯಾವುದೇ ಮಾಧ್ಯಮ ಒಂದು ರಾಜಕೀಯ ಪಕ್ಷದ ಪರವಾಗಿಯೂ ಇರಬಾರದು. ಒಂದು ಧರ್ಮದ ಪರವಾಗಿಯೂ ಇರಬಾರದು. ಭಾರತದ ದುರ್ದೈವ ಏನೆಂದರೆ ಇತ್ತೀಚಿನ ಬೆಳವಣಿಗೆ ಒಂದರಲ್ಲಿ ಒಂದು ನ್ಯೂಸ್ ಚಾನೆಲ್ ಅನ್ನು ಅದು ನಿಜವನ್ನು ಬಿತ್ತರಿಸಿತು ಎಂಬ ಕಾರಣಕ್ಕೆ ಆ ಚಾನೆಲ್ ಅನ್ನೇ ಒಂದು ಸರ್ವಿಸ್ ಪ್ರೊವೈಡರ್ ನಿಂದ ತೆಗೆಯಲಾಯಿತು. ಹೀಗೆಯೇ ಆದರೆ ಮಾಧ್ಯಮ ಧರ್ಮದ ಪಾಲನೆ ಕಷ್ಟಸಾಧ್ಯ. ಈಗಾಗಲೇ ಭಾರತದಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ತನ್ನ ದಕ್ಷತೆಯನ್ನು ಕಳೆದುಕೊಂಡು ದಿನೇ ದಿನೇ ಕೊಳೆತು ನಾರುತ್ತಲೇ ಇದೆ. ನಂಬಿಕೆಯಿರುವುದು ನ್ಯಾಯಾಂಗದಲ್ಲಿ ಮಾತ್ರ. ಮಾಧ್ಯಮವೂ ಇದೆ ರೀತಿ ಕತ್ತೆಯಾಗುತ್ತ ಬಂದರೆ ಮುಂದೊಂದು ದಿನ ನಡೆಯದಿರುವ ಘಟನೆಗಳೂ ನಡೆಯುವಂತೆ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಶ್ನಿಸುವ ಗೋಜಿಗೇ ಹಲವು ಮಾಧ್ಯಮಗಳು ಹೋಗದಿರುವುದು ವಿಪರ್ಯಾಸ. ಇದಕ್ಕೆ ಉತ್ತರಕನ್ನಡವೇ ಜ್ವಲಂತ ಉದಾಹರಣೆ. ಯಾವೊಬ್ಬ ಅಧಿಕಾರಿಯನ್ನಾಗಲಿ, ರಾಜಕಾರಣಿಯನ್ನಾಗಲಿ ಪತ್ರಿಕೆಗಳು ಪ್ರಶ್ನಿಸಿದ್ದನ್ನು ನಾನಂತೂ ಕಂಡೆ ಇಲ್ಲ. ಇದನ್ನೆಲ್ಲಾ ಗಮನಿಸಿದರೆ ಉತ್ತರಕನ್ನಡದಲ್ಲಿ ಸಂವಿಧಾನದ ನಾಲ್ಕನೇ ಅಂಗ ಸತ್ತೇ ಹೋಗಿದೆಯೇನೋ ಎಂದೆನಿಸುವುದು ಸುಳ್ಳಲ್ಲ. ರಸ್ತೆಗಳಾಗದೆ ಟೋಲ್ ವಸೂಲಿ ನಡೆಯುತ್ತಿದೆ, ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಬೇಕೆಂಬ ಕೂಗು ಬಹಳ ಹಿಂದಿನಿಂದಲೇ ಕೇಳಿ ಬರುತ್ತಿದೆ, ಅಕ್ರಮ ದಂಧೆಗಳು ಎಗ್ಗಿಲ್ಲದೆ ಬೆಳೆಯುತ್ತಿದೆ , ರೈಲು ಮಾರ್ಗದಿಂದ ಅಪಾರ ಹಾನಿಯಾಗುತ್ತದೆ, ವಿದ್ಯುತ್ ವ್ಯತ್ಯಯವಂತೂ ಹೇಳತೀರದಂತೆ ಸಾಗಿದೆ. ಜಿಲ್ಲೆಯ ೪೦% ಕ್ಕಿಂತ ಹೆಚ್ಚಿನ ಹಳ್ಳಿಗಳಿಗೆ ನೆಟ್ ವರ್ಕ್ ಸೌಲಭ್ಯವಿಲ್ಲ, ಶಾಸಕರಂತೂ ನಯಾಪೈಸೆ ಕೆಲಸ ಮಾಡುತ್ತಿಲ್ಲ...... ಹೀಗೆ. ಇನ್ನು ಮುಂದಾದರೂ ಪ್ರಶ್ನಿಸುವ ಕೆಲಸ ನಡೆಯಲಿ ಎಂದು ಆಶಿಸೋಣ. ಭಾರತವನ್ನು ಒಂದು ಒಳ್ಳೆಯ ದಿಶೆಯತ್ತ ಮುನ್ನಡೆಸುವಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ವದ್ದು. ಅದಕ್ಕೆ ಕಡಿಮೆ ಸಮಯದಲ್ಲಿ ಕೋಟ್ಯಂತರ ಮನಸುಗಳನ್ನು ಮುಟ್ಟುವ ತಾಕತ್ತಿದೆ. ಹೀಗಾಗಿ ಮಾಧ್ಯಮ ಧರ್ಮ ಬದಲಾಗಲೇ ಬೇಕಾದ ಅನಿವಾರ್ಯತೆ ನಿಚ್ಚಳವಾಗಿದೆ. ಹಾಗೆಯೇ ಆಗಲಿ... ಭಾರತ ವಿಶ್ವಗುರುವಾಗಲಿ.... ಬನ್ನಿ ಬದಲಾಗೋಣ..... ಬದಲಾಯಿಸೋಣ...... - ಹರ್ಷ ಹೆಗಡೆ ಕೊಂಡದಕುಳಿ
